ಚಿತ್ರದುರ್ಗ: ಬರಗಾಲಕ್ಕೆ ತತ್ತರಿಸಿದ ಅನ್ನದಾತ, ಬೋರ್‌ವೆಲ್‌ ಬತ್ತಿದ ಪರಿಣಾಮ ಕೈಕೊಟ್ಟ ಬೆಳೆ..!

By Girish GoudarFirst Published Mar 17, 2024, 10:00 PM IST
Highlights

ಒಟ್ಟಾರೆ ಈ ಬಾರಿ ಮಳೆ ಬಾರದೇ ರೈತರು ಕಂಗಾಲಾಗಿದ್ದು, ಇತ್ತೀಚೆಗೆ ಬೋರ್‌ವೆಲ್‌ಗಳು ಕೈ ಕೊಟ್ಟಿದ್ದು, ಇನ್ನಾದ್ರು ಸರ್ಕಾರ ರೈತರಿಗೆ ಬರಗಾಲ ಎಂದು ಘೋಷಿಸಿರೋ ಬರ ಪರಿಹಾರವಾದ್ರು ಶೀಘ್ರ ಬಿಡುಗಡೆ ಮಾಡಿ ರೈತರ ಪ್ರಾಣ ಉಳಿಸಬೇಕಿದೆ.
 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಮಾ.17): ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವ ಹಿನ್ನೆಲೆ, ಅಂತರ್ಜಲ ಕುಸಿತದಿಂದ ಕಂಗಾಲಾದ ಅನ್ನದಾತರು. ಬೋರ್ ವೆಲ್ ಗಳು ಬತ್ತಿದ ಪರಿಣಾಮ ಕೈಕೊಟ್ಟ ಬೆಳೆಗಳು, ಬರಕ್ಕೆ ಬೆದರಿ ಬೆಂಡಾದ ಕೋಟೆನಾಡಿನ ರೈತರು. 

ಎಸ್ ವೀಕ್ಷಕರೇ, ಕಳೆದೊಂದು ವರ್ಷದಿಂದಲೂ ಬಯಲುಸೀಮೆ, ಬರಪೀಡಿತ ಪ್ರದೇಶ ಎಂದು ಕುಖ್ಯಾತಿ ಪಡೆದಿರೋ ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡ್ತಿದೆ. ಇದ್ರಿಂದಾಗಿ ರೈತರು ಕಷ್ಟಪಟ್ಟು ಕೊರೆಸಿದ ಬೋರ್ ವೆಲ್ ಗಳು ಕೂಡ ಸದ್ಯ ವಿನಾಶದ ಅಂಚಿಗೆ ತಲುಪಿದ್ದು, ರೈತರು ದಿಕ್ಕು ತೋಚದೇ ಕಂಗಾಲಾಗಿ ಹೋಗಿದ್ದಾರೆ. ಬೋರ್ ವೆಲ್ ಗಳು ಬತ್ತಿರುವ ಪರಿಣಾಮ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಅಡಿಕೆ, ತೆಂಗು, ಬಾಳೆ ಬೆಳೆಯೂ ಕೂಡ ಒಣಗುತ್ತಿದ್ದು ಬೆಳೆಯೂ ಬಾರದೇ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. 

ಚಿತ್ರದುರ್ಗ: ಬಿಸಿಲಿನ ತಾಪದಿಂದ ಹೂವಿನ ಬೆಳೆ ರಕ್ಷಿಸಲು ಸೀರೆಗಳ ಮೊರೆ ಹೋದ ರೈತ!

ಇತ್ತ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳು ಎಂದು ಕಾಟಾಚಾರಕ್ಕೆ ಗುರುತಿಸಿದ್ದರೂ ಕೂಡ,ಅತ್ತ ಬರಕ್ಕೆ ತತ್ತರಿಸಿರೋ ರೈತರಿಗೆ ಬರ ಪರಿಹಾರವೂ ಸಿಗದೇ ಇರುವುದು ಶೋಚನೀಯ ಸಂಗತಿ. ಇದ್ರಿಂದಾಗಿ ಬೇಸರಗೊಂಡಿರೋ ರೈತರು, ಈ ರೀತಿಯ ಬರಗಾಲವನ್ನು ರೈತರು ಸುಮಾರು ವರ್ಷಗಳ ಹಿಂದೆ ಕಂಡಿದ್ದರು. ಆದ್ರೆ ಈ ವರ್ಷ ಹಿಂಗಾರು, ಮುಂಗಾರು ಯಾವುದೇ ಸಂದರ್ಭದಲ್ಲಿಯೂ ಮಳೆ ಬಾರದೇ ಇರುವುದು ರೈತರಿಗೆ ಸಾಕಷ್ಟು ನೋವು ತಂದಿತು. ಇನ್ನೂ ಇತ್ತೀಚೆಗೆ ಬಿಸಿಲಿನ ತಾಪ ಕೂಡ ಹೆಚ್ಚಳವಾಗಿ ಬೋರ್ ವೆಲ್ ಗಳು ಬತ್ತಿರುವುದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇನ್ನಾದ್ರು ಸರ್ಕಾರ ರೈತರ ಕಷ್ಟವನ್ನು ಕಣ್ಣು ತೆರೆದು ನೋಡಲಿ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2020-21 ರತ್ತಿ ರಾಜ್ಯದಲ್ಲಿ ಮಾತ್ರವಲ್ಲದೇ ಕೋಟೆನಾಡಿನಲ್ಲಿಯೂ ಸಾಕಷ್ಟು ಮಳೆ ಆಗಿದ್ದ ಪರಿಣಾಮ, ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರು. ಆದ ಕಾರಣ ಈ ಬಾರಿ ತಮ್ಮ ಜಮೀನುಗಳಲ್ಲಿ ಸಾಲ ಸೂಲ ಮಾಡಿ ವಿವಿಧ ಬೆಳೆಗಳನ್ನು ಹಾಕಿದ್ದರು. ಆದ್ರೆ ಈ ಬಾರಿ ಮಳೆರಾಯ ಯಾವ ಸಮಯದಲ್ಲಿಯೂ ಬಾರದೇ ಇರುವುದು ರೈತರನ್ನು ಕಷ್ಟದ ಕೂಪಕ್ಕೆ ತಳ್ಳಿದಂತಿದೆ. ಅದ್ರಲ್ಲೂ ಜಿಲ್ಲೆಯ ಬಹುತೇಕ ಕಡೆ ರೈತರು ಅಡಿಕೆ ಬೆಳೆಯ ಮೇಲೆ ಆಸೆ ಬಿದ್ದು, ಸಾಕಷ್ಟು ಖರ್ಚು ಮಾಡಿ ಅಡಿಕೆ ಬೆಳೆ ಹಾಕಿದರು. ಬೇರೆ ಬೆಳೆಗಳಿಗೆ ನೀರಿನ ಪ್ರಮಾಣ ಕಡಿಮೆ ಇದ್ದರೂ ಹೇಗೋ ನಡೆಯುತ್ತದೆ. ಆದ್ರೆ ಅಡಿಕೆ ಬೆಳೆಗೆ ನೀರೇ ಜೀವಾಳ. ನೀರಿಲ್ಲ ಅಂದ್ರೆ ಅಡಿಕೆ ಗಿಡಗಳು ಬೇಗ ಒಣಗಿ ಹೋಗುತ್ತವೆ. ಅದೇ ರೀತಿ ಈ ವರ್ಷ ಸುಮಾರು ೬೦% ರಷ್ಟು ಅಡಿಕೆ, ತೆಂಗು ಬೆಳೆ ನೀರಿನ ಅಭಾವದಿಂದ ಒಣಗಿದ್ದು, ಸಾಲ ಮಾಡಿದ್ದ ರೈತ ಇತ್ತ ಬೆಳೆಯೂ ಸಿಗದೇ, ಪರಿಹಾರ ದೊರಕದೇ ಇರುವುದು ತುಂಬಾ ಕಷ್ಟವಾಗ್ತಿದೆ ಅಂತಾರೆ ಅನ್ನದಾತರು.

ಒಟ್ಟಾರೆ ಈ ಬಾರಿ ಮಳೆ ಬಾರದೇ ರೈತರು ಕಂಗಾಲಾಗಿದ್ದು, ಇತ್ತೀಚೆಗೆ ಬೋರ್‌ವೆಲ್‌ಗಳು ಕೈ ಕೊಟ್ಟಿದ್ದು, ಇನ್ನಾದ್ರು ಸರ್ಕಾರ ರೈತರಿಗೆ ಬರಗಾಲ ಎಂದು ಘೋಷಿಸಿರೋ ಬರ ಪರಿಹಾರವಾದ್ರು ಶೀಘ್ರ ಬಿಡುಗಡೆ ಮಾಡಿ ರೈತರ ಪ್ರಾಣ ಉಳಿಸಬೇಕಿದೆ.

click me!