ಸೋಮರಡ್ಡಿ ಅಳವಂಡಿ
ಕೊಪ್ಪಳ(ಏ.15): ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ವಹಿವಾಟು ನಡೆಸಲು ಯಾವುದೇ ನಿರ್ಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದರೂ ಸಹ ಅನ್ನದಾತರು ತಾವು ಬೆಳೆದ ಬೆಳೆಯನ್ನು ರಾತೋರಾತ್ರಿ ಕದ್ದು ಮುಚ್ಚಿ ಮಾರುವ ದಯನೀಯ ಸ್ಥಿತಿಗೆ ತಲುಪಿದ್ದಾರೆ.
ಕೊಪ್ಪಳ ಸೇರಿದಂತೆ ಬಹುತೇಕ ಭಾಗದಲ್ಲಿ ರೈತರು ತಮ್ಮ ಕೃಷಿ ಉತ್ಪನ್ನವನ್ನು ಮಧ್ಯ ರಾತ್ರಿಯ ವೇಳೆ ಮಾರಾಟ ಮಾಡುವ ಮಾಡುತ್ತಿದ್ದಾರೆ. ಹಲವಾರು ರೈತರು ಬೆಲೆ, ಮಾರ್ಕೆಟ್ ಇಲ್ಲದೇ ತಮ್ಮ ಫಸಲನ್ನು ಹೊಲದಲ್ಲೇ ನಾಶ ಮಾಡಿದ್ದು, ಇನ್ನು ಕೆಲವರು ಸಿಕ್ಕಷ್ಟು ಪುಡಿಗಾಸಿಗೆ ಅಗ್ಗಕ್ಕೆ ಮುಗ್ಗು ಎನ್ನುವಂತೆ ದಲ್ಲಾಳಿಗಳು, ವ್ಯಾಪಾರಸ್ಥರಿಗೆ ಮಾರಿ ಸಿಕ್ಕಷ್ಟುಹಣ ಪಡೆದುಕೊಳ್ಳುತ್ತಿದ್ದಾರೆ.
ಮಧ್ಯರಾತ್ರಿ ಮಾರುಕಟ್ಟೆ:
ಕೊಪ್ಪಳದಲ್ಲಿ ಮಧ್ಯರಾತ್ರಿ 1 ಗಂಟೆಗೆ ತರಕಾರಿ ಮಾರುಕಟ್ಟೆ ಆರಂಭವಾಗುತ್ತದೆ. ಮುಂಜಾನೆ 6 ಗಂಟೆಯ ಹೊತ್ತಿಗೆ ಎಲ್ಲವೂ ಕ್ಲೋಸ್. 6ರ ನಂತರ ಪೊಲೀಸರು ಬಂದರೆ ಬೆತ್ತದ ರುಚಿ ನೋಡಬೇಕಾಗುತ್ತದೆ ಎಂಬ ಭಯದಿಂದ ಅಷ್ಟರೊಳಗೆ ರೈತರು ತರಕಾರಿ ಮಾರಿ ತಮ್ಮ ಊರು ಸೇರಿಕೊಳ್ಳುತ್ತಾರೆ. ಸಾಮಾನ್ಯವಾಗಿ ಮುಂಜಾನೆ ತರಕಾರಿ ಮಾರುಕಟ್ಟೆಯಲ್ಲಿ ಹರಾಜು (ಸವಾಲ್) ನಡೆಯುತ್ತದೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನಜಂಗುಳಿ ನಿಯಂತ್ರಿಸಲು, ಜನ ಸೇರದಂತೆ ನಿಯಂತ್ರಿಸಲು ಹರಾಜು ನಿಲ್ಲಿಸಲಾಗಿದೆ. ಆದ್ದರಿಂದ ರಾತ್ರಿಯೇ ಈ ಪ್ರಕ್ರಿಯೆ ನಡೆಯುತ್ತದೆ. ರೈತರೂ ಕದ್ದುಮುಚ್ಚಿ ತರಕಾರಿ ತರುತ್ತಾರೆ. ವ್ಯಾಪಾರಸ್ಥರೂ ಅದೇ ಮಾದರಿಯಲ್ಲಿ ಖರೀದಿಸುತ್ತಾರೆ.
ಪೊಲೀಸರ ಕಣ್ತಪ್ಪಿಸಿ ಜನರ ಓಡಾಟ: ಗಂಗಾವತಿಯಲ್ಲಿ ದ್ರೋಣ್ ಕಣ್ಗಾವಲು
ಕೊಪ್ಪಳ ತರಕಾರಿ ಮಾರುಕಟ್ಟೆಯಲ್ಲಿ ಕನ್ನಡಪ್ರಭ ನಡೆಸಿದ ರಿಯಾಲಿಟಿ ಚಕ್ ವೇಳೆಯಲ್ಲಿ ರೈತರ ಕರುಣಾಜನಕ ಸ್ಥಿತಿ ಎಂಥವರ ಕರುಳು ಚುರ್ ಎನ್ನುವಂತಿದೆ. ರಾತ್ರಿ 2 ಗಂಟೆಯ ವೇಳೆಗೆ ಬಂದಿದ್ದ ಟಣಕನಕಲ್ ಗ್ರಾಮದ ಹನುಮಂತಪ್ಪ ಅವರು 20 ಬುಟ್ಟಿ ಟೊಮ್ಯಾಟೊ ತಂದಿದ್ದರು. ಪ್ರಾರಂಭದಲ್ಲಿ 30 ರುಪಾಯಿಗೆ ಬುಟ್ಟಿಮಾರಾಟವಾದವು. ಅದಾದ ಮೇಲೆ ಬೆಳಗಾಗುತ್ತಿದ್ದಂತೆ ಪೊಲೀಸರು ಬಂದಾಗ 10ರಿಂದ 20 ರುಪಾಯಿಗೆ ಬುಟ್ಟಿಯಂತೆ ಮಾರಾಟ ಮಾಡಿದರು. ಕೇಳಿದರೆ ಏನ್ ಮಾಡುವುದು ಸರ್, ತಂದಿದ್ದೇವೆ, ಹ್ಯಾಂಗೋ ಕೊಟ್ಟು ಹೋಗಬೇಕು ಎನ್ನುತ್ತಾರೆ.
ಬಿಡಿಗಾಸಿಗೆ ಬದನೆಕಾಯಿ:
ಡೊಂಬರಳ್ಳಿ ಗ್ರಾಮದಿಂದ ಜೀವಂತಗೌಡ ಅವರು 10 ಬುಟ್ಟಿ ಬದನೆಕಾಯಿ ತಂದಿದ್ದರು. ಕೇವಲ 40 ರುಪಾಯಿಗೆ ಬುಟ್ಟಿ ಮಾರಾಟವಾದವು. ಇವರು ಬಂದಿದ್ದೇ ಮಧ್ಯರಾತ್ರಿ 12 ಗಂಟೆಗೆ. ದಿನಾವೂ ಹೀಗೆ ಸಾರ್, ಬೆವರು ಸುರಿಸಿ ಬೆಳೆದಿದ್ದರೂ ಮಧ್ಯರಾತ್ರಿಯ ವೇಳೆ ಕಳ್ಳತನ ಮಾಡಿದವರಂತೆ ಮಾರಿಕೊಂಡು ಹೋಗಬೇಕು. ಇನ್ನು ಹೋಗುವಾಗ ಪೊಲೀಸರ ಕೈಗೆ ಸಿಕ್ಕರೇ ಸಮಸ್ಯೆ ಬೇರೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಹೀಗೆ, ಮಧ್ಯರಾತ್ರಿ ನಡೆಯುವ ತರಕಾರಿ ಕರುಣಾಜನಕ ಕತೆಗಳು ಒಂದಲ್ಲ, ಎರಡಲ್ಲ. ಅಲ್ಲಿಗೆ ಬಂದಿದ್ದ ರೈತರ ಆಕ್ರೋಶವೊಂದೇ, ನಾವೇನು ಕಳ್ಳತನ ಮಾಡಿ ತಂದಿಲ್ಲ, ಬೆವರು ಸುರಿಸಿ ಬೆಳೆದಿದ್ದನ್ನು ಈ ರೀತಿ ಕಳ್ಳತನದಿಂದ ಮಾರಾಟ ಯಾಕೆ ಮಾಡಬೇಕು? ಮಧ್ಯರಾತ್ರಿ ಮಾರಾಟ ಮಾಡುವುದನ್ನು ಬಿಡಿಸಿ, ಹಗಲು ವೇಳೆ ಸವಾಲು ಮಾಡುವಂತಾಗಬೇಕು ಎನ್ನುವ ಆಗ್ರಹ ಬಲವಾಗಿ ಕೇಳಿಬಂದಿತು.