ಮುಂಗಾರು ಮಳೆ ಕೊರತೆ: ಮಳೆಗಾಲದಲ್ಲೇ ಕೃಷಿ ಹೊಂಡ ಖಾಲಿ ಖಾಲಿ, ಸಂಕಷ್ಟದಲ್ಲಿ ಅನ್ನದಾತ..!

By Kannadaprabha NewsFirst Published Sep 22, 2023, 11:00 PM IST
Highlights

ಸರ್ಕಾರಿ ಯೋಜನೆಯಡಿ ತಾಲೂಕಿನಲ್ಲಿ 2150 ರೈತರು ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಮಳೆಯಾದ ಸಂದರ್ಭದಲ್ಲಿ ಕೃಷಿಹೊಂಡದಲ್ಲಿ ನೀರು ತುಂಬಿಕೊಳ್ಳುತ್ತದೆ. ಮಳೆ ಕೊರತೆಯಾದಾಗ ರೈತರು ಈ ನೀರನ್ನು ಪಂಪ್‌ಸೆಟ್‌ ಮೂಲಕ ಹೊಲಕ್ಕೆ ಹಾಯಿಸಿ ಬೆಳೆ ಉಳಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಗೋವಿನಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಶೇಂಗಾ, ಅಲಸಂದಿ ಮುಂತಾದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ.

ಎಸ್.ಜಿ. ತೆಗ್ಗಿನಮನಿ

ನರಗುಂದ(ಸೆ.22): ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ತಾಲೂಕಿನ ಬಹುತೇಕ ಕೃಷಿಹೊಂಡಗಳು ಖಾಲಿಯಾಗಿವೆ. ಅನಾವೃಷ್ಟಿಯಿಂದ ಈ ಬಾರಿ ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಈ ಹಿಂದೆ ಮೂರು ವರ್ಷ ಸತತ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿಯೂ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಉತ್ತಮ ಮಳೆಯಾದರೆ ರೈತರು ನೆಮ್ಮದಿಯಿಂದ ಇರುತ್ತಾರೆ. ಆದರೆ ಅತಿಯಾದ ಮಳೆ ಅಥವಾ ಕೊರತೆಯಾದರೆ ಕೃಷಿ ನಂಬಿ ಜೀವನ ಮಾಡುವವರು ಕಷ್ಟಕ್ಕೆ ಸಿಲುಕುತ್ತಾರೆ.

ಸರ್ಕಾರಿ ಯೋಜನೆಯಡಿ ತಾಲೂಕಿನಲ್ಲಿ 2150 ರೈತರು ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಮಳೆಯಾದ ಸಂದರ್ಭದಲ್ಲಿ ಕೃಷಿಹೊಂಡದಲ್ಲಿ ನೀರು ತುಂಬಿಕೊಳ್ಳುತ್ತದೆ. ಮಳೆ ಕೊರತೆಯಾದಾಗ ರೈತರು ಈ ನೀರನ್ನು ಪಂಪ್‌ಸೆಟ್‌ ಮೂಲಕ ಹೊಲಕ್ಕೆ ಹಾಯಿಸಿ ಬೆಳೆ ಉಳಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಗೋವಿನಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಶೇಂಗಾ, ಅಲಸಂದಿ ಮುಂತಾದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ.

ಎಣ್ಣೆ ಪ್ರಿಯಕರ ಗಮನಕ್ಕೆ: ಗಣೇಶ ಹಬ್ಬದ ನಿಮಿತ್ತ ಮದ್ಯ ಮಾರಾಟ ನಿಷೇಧ

ಬಾರದ ಜಲಾಶಯದ ನೀರು:

ಮಲಪ್ರಭಾ ಜಲಾಶಯದಲ್ಲಿ ಕಾಲವೆಗಳಿಗೆ 40 ದಿವಸ ನೀರು ಪೂರೈಕೆ ಮಾಡುವಷ್ಟು ನೀರಿದೆ. ಹೀಗಾಗಿ ಕಾಲುವೆಗಳಿಗೆ ಹರಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಜಾನುವಾರು ಮತ್ತು ಕುರಿ, ಮೇಕೆಗಳಿಗೂ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನವಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆಗೆ ಸದ್ಯ ನೀರಿನ ತೊಂದರೆ ಇಲ್ಲ. ರೈತರು ಕೃಷಿ ಹೊಂಡ ತುಂಬಿಕೊಳ್ಳಲು ಮನವಿ ನೀಡಿದ್ದಾರೆ. ಮೇಲಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದ್ದಾರೆ.  

ಮಳೆಯಿಲ್ಲದೆ ಕೃಷಿಹೊಂಡಗಳು ಬತ್ತಿವೆ. ಅವುಗಳನ್ನು ತುಂಬಿಸಲು ಕಾಲುವೆಗೆ ನೀರು ಹರಿಸಬೇಕೆಂದು ಈಗಾಗಲೇ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುರ್ಲಗೇರಿ ಗ್ರಾಮದ ರೈತ ಯಲ್ಲಪ್ಪ ಚಲವಣ್ಣವರ ತಿಳಿಸಿದ್ದಾರೆ. 

click me!