ಕಾರ್ಖಾನೆಗಳ ಮಾಲೀಕರೇ ಸರ್ಕಾರದ ಧಣಿಗಳಾಗಿದ್ದರೂ ಕೂಲಿ ಕಾರ್ಮಿಕರ ಕರುಣಾಜನಕ ಕಥೆ, ವ್ಯಥೆ ಕಾಣಲಾರದಷ್ಟು ವ್ಯವಸ್ಥೆ ಕುರುಡಾಗಿದೆ ಎಂದರೆ ತಪ್ಪಾಗಲಾರದು.
ಅಣ್ಣಾಸಾಬ ತೆಲಸಂಗ
ಅಥಣಿ(ಡಿ.10): ಸಕ್ಕರೆ ಕಾರ್ಖಾನೆಗಳು ಆರಂಭವಾಗುತ್ತಿದ್ದಂತೆಯೇ ನೆರೆಯ ಮಹಾರಾಷ್ಟ್ರ ಮತ್ತು ಗಡಿ ಭಾಗದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ತಮ್ಮ ಕುಟುಂಬ ಸಮೇತ ಬರುತ್ತಾರೆ. ಇಂತಹ ನೂರಾರು ಕುಟುಂಬಗಳಲ್ಲಿನ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ಇಲ್ಲದೆ ಸಂಕಷ್ಟದ ಬದುಕು ಸಾಗಿಸುವ ಸನ್ನಿವೇಶಗಳು ಸಾಮಾನ್ಯ. ಕಾರ್ಖಾನೆಗಳ ಮಾಲೀಕರೇ ಸರ್ಕಾರದ ಧಣಿಗಳಾಗಿದ್ದರೂ ಕೂಲಿ ಕಾರ್ಮಿಕರ ಕರುಣಾಜನಕ ಕಥೆ, ವ್ಯಥೆ ಕಾಣಲಾರದಷ್ಟು ವ್ಯವಸ್ಥೆ ಕುರುಡಾಗಿದೆ ಎಂದರೆ ತಪ್ಪಾಗಲಾರದು.
ಮಕ್ಕಳಿಲ್ಲ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ:
ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಕಬೇಕೆಂಬುದು ಸರ್ಕಾರದ ಆಶಯವಾಗಿದೆ. ಅದಕ್ಕಾಗಿ ಶಿಕ್ಷಣ ಇಲಾಖೆಯಲ್ಲಿ ಅನೇಕ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿದೆ. ಆದರೆ ಇತ್ತೀಚಿಗೆ ತಾಲೂಕಿನಲ್ಲಿ ಆರಂಭಗೊಂಡಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಕಟಾವು ಮಾಡಲು ಬಂದ ಕೂಲಿ ಕಾರ್ಮಿಕರ ನೂರಾರು ಮಕ್ಕಳು ನಿಜವಾಗಲೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೊರೆಯುವ ಚಳಿಯಲ್ಲಿ ಮತ್ತು ಕಲುಷಿತ ನೀರಿನಿಂದ ಅನೇಕ ಮಕ್ಕಳು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಬ್ಬಿನ ಗದ್ದೆಯಲ್ಲಿಯೇ ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಹಿರಿಯರ ರಾಜಿಯ ಮೂಲಕವೇ ಬಗೆಹರಿಯುತ್ತವೆ ಎನ್ನುವ ಮಾತುಗಳು ಸಾಮಾನ್ಯ.
ಸಾಲ ನೀಡಲು ಬ್ಯಾಂಕ್‌ಗಳ ನಿರಾಕರಣೆ: ಸಂಕಷ್ಟದಲ್ಲಿ ಅನ್ನದಾತ..!
ಮಕ್ಕಳ ನಿತ್ಯ ಜೀವನ:
ನಿತ್ಯ ಸಾವಿರಾರು ರುಪಾಯಿ ಗಳಿಕೆಗಾಗಿ ದುಡಿಯುವ ಕೂಲಿ ಕಾರ್ಮಿಕರ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುವುದೇ ಇಲ್ಲ. ಈ ಕೂಲಿ ಕಾರ್ಮಿಕರು ವಲಸೆ ಬಂದಿರುವುದರಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ತಮ್ಮ ಮಕ್ಕಳನ್ನು ಚಿಕ್ಕ ಗುಡಿಸಲುಗಳಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಇನ್ನೂ ಕೆಲವರು ತಮ್ಮೊಡನೆ ಕೆಲಸಕ್ಕೆ ಕರೆದುಕೊಂಡು ಹೋಗಿ ಅಡುಗೆ ತಯಾರಿಗೆ ಕಟ್ಟಿಗೆ ಆಯುವುದು, ಸಗಣಿ ಸಂಗ್ರಹಿಸಿ ಕುಳ್ಳು ತಯಾರಿಸುವುದು, ಹಸುಗೂಸುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳಿಗೆ ನೀಡಿರುವುದು ಸಾಮಾನ್ಯವಾಗಿದೆ.
ಸರ್ಕಾರ ಮಕ್ಕಳ ಶ್ರೇಯೊಭಿವೃದ್ಧಿಗಾಗಿ ನಾನಾ ಕಾಯ್ದೆಗಳು, ನಿಯಮಗಳನ್ನು ಜಾರಿಗೊಳಿಸಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ, ಮಾನವ ಹಕ್ಕುಗಳ ಉಲ್ಲಂಘನೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸಂವಿಧಾನದ ಮೂಲ ಹಕ್ಕುಗಳು ಇವೆಲ್ಲವು ಕಾಗದದಲ್ಲಿನ ಕಾಯ್ದೆಗಳಾಗಿವೆ. ಇಲ್ಲಿನ ಕೂಲಿ ಕಾರ್ಮಿಕರ ಬದುಕಿನಲ್ಲಿ ಯಾವ ಕಾಯ್ದೆಗಳು ಕಣ್ತೆರೆದು ನೋಡುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಬಾಲ್ಯದಲ್ಲಿಯೇ ಶಿಕ್ಷಣದಿಂದ ವಂಚಿತರಾಗಿ ಮುಂದೆ ಅವರು ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುವ ಅನಿವಾರ್ಯತೆ ಎದುರಾಗುತ್ತಿದೆ.
ನಿರ್ಲಕ್ಷ್ಯ ಮನೋಭಾವನೆ :
ಅಥಣಿ ತಾಲೂಕಿನ ಕೊಕಟನೂರು ರೇಣುಕಾ ಸಕ್ಕರೆ ಕಾರ್ಖಾನೆ, ಹಲ್ಯಾಳದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ, ಕೆಂಪವಾಡ ಸಕ್ಕರೆ ಕಾರ್ಖಾನೆ, ಉಗಾರ ಸಕ್ಕರೆ ಕಾರ್ಖಾನೆ, ಕಾಗವಾಡ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಹಂಗಾಮಿನ ಸಕ್ಕರೆ ತಯಾರಿಕೆ ಕಾರ್ಯವನ್ನು ಆರಂಭಿಸಿವೆ. ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದ ಗಡಿ ಜಿಲ್ಲೆಯ ವಿವಿಧ ಭಾಗಗಳಿಂದ ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರ ತಂಡಗಳು ಕುಟುಂಬ ಸಮೇತ ತಾಲೂಕಿಗೆ ಆಗಮಿಸಿವೆ. ಕಾರ್ಖಾನೆಯ ಆವರಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೊರವಲಯದಲ್ಲಿ ಚಿಕ್ಕ ಗುಡಿಸಲಗಳನ್ನು ಹಾಕಿಕೊಂಡು ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುವುದು ಒಂದೆಡೆಯಾದರೇ, ಅವರ ಮಕ್ಕಳು ಶೈಕ್ಷಣಿಕ ಜೀವನದಿಂದ ವಂಚಿತರಾಗುತ್ತಿದ್ದಾರೆ. ತಾಲೂಕಿನಲ್ಲಿ ಕಾರ್ಖಾನೆಗಳು ಕಾರ್ಯಾರಂಭ ನಡೆಸಿ ಎರಡು ತಿಂಗಳು ಗತಿಸಿದರೂ, ಕಾರ್ಖಾನೆ ಆಡಳಿತ ಮಂಡಳಿಯಾಗಲಿ, ಶಿಕ್ಷಣ ಇಲಾಖೆಗಾಗಲಿ ಈ ಶಿಕ್ಷಣ ವಂಚಿತ ಮಕ್ಕಳ ಬಗೆಗೆ ಕಾಳಜಿಯಿಲ್ಲ. ವಲಸೆ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ಸಲುವಾಗಿಯೇ ಪ್ರತಿವರ್ಷ ಅಲ್ಲಲ್ಲಿ ಟೆಂಟ್ ಶಾಲೆಗಳನ್ನು ಪ್ರಾರಂಭಿಸುತ್ತಿದ್ದರು. ಆದರೆ ಪ್ರಸ್ತುತ ವರ್ಷ ಇಲಾಖೆಯು ಟೆಂಟ್ ಶಾಲೆಗಳನ್ನು ಪ್ರಾರಂಭಿಸದೇ ಇರುವುದರಿಂದ ಮಕ್ಕಳ ಶೈಕ್ಷಣಿಕ ಜೀವನ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಸಕ್ಕರೆ ಕಾರ್ಖಾನೆಯ ಸಂಬಂಧಿಸಿದವರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣ ಎನ್ನಬಹುದು.
ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ
ಅಥಣಿ ತಾಲೂಕಿನ ಹಲ್ಯಾಳ, ಕೊಕಟನೂರು, ಕೆಂಪವಾಡ ಮತ್ತು ಕಾಗವಾಡ ಸಕ್ಕರೆ ಕಾರ್ಖಾನೆಗಳ ಆವರಣದ ಬಳಿ ಚಿಕ್ಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬೀಡಾರ ಹೂಡಿರುವ ಕಬ್ಬು ಕಟಾವು ಕಾರ್ಮಿಕರ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಿದೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ತಾಲೂಕಾ ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಟೆಂಟ್ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಬೇಕಿದೆ. ಅದರ ಜೊತೆಗೆ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ತಮ್ಮ ಜೀವನೋಪಾಯಕ್ಕೆ ಗಡಿ ಗ್ರಾಮದ ಅನೇಕ ಗ್ರಾಮಗಳಿಂದ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡಲು ಕುಟುಂಬ ಸಮೇತ ಬಂದಿದ್ದಾರೆ. ಪ್ರತಿ ವರ್ಷ ಟೆಂಟ್ ಶಾಲೆಗಳನ್ನು ಆರಂಭಿಸಿ ಈ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಕೈ ಬಿಟ್ಟಿರುವ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದು ಅಗತ್ಯವಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವುದು ಅಗತ್ಯ ಅಂತ ಅಥಣಿ ಹಸಿರು ಸೇನೆ ರೈತ ಸಂಘ ಅಧ್ಯಕ್ಷ ಮಹಾದೇವ ಮಡಿವಾಳ ಹೇಳಿದ್ದಾರೆ.
ಕಬ್ಬು ಕಟಾವು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಚ್ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಇಲಾಖೆಯ ಸಿಬ್ಬಂದಿಯಿಂದ ಸರ್ವೆ ಕಾರ್ಯ ನಡೆಸಿ ಅಗತ್ಯವಿರುವ ಸ್ಥಳಗಳಲ್ಲಿ ಅಂದರೆ ನಮ್ಮ ತಾಲೂಕಿನಲ್ಲಿ 12 ಟೆಂಚ್ ಶಾಲೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಮಕ್ಕಳ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಜಾಗೃತಿ ಮೂಡಿಸಲಾಗುವುದು ಅಂತ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ತಿಳಿಸಿದ್ದಾರೆ.