ಈ ಬಾರಿ ಬರಗಾಲ ಬಿದ್ದಿದ್ದರಿಂದ ಜಲಮೂಲಗಳು ಬರಿದಾಗಿ ಜನ, ಜಾನುವಾರುಗಳು ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ. ಇದರ ಮಧ್ಯೆ ಮತ್ಸೋದ್ಯಮಕ್ಕೂ ನೀರಿನ ಕೊರತೆ ಉಂಟಾಗಿ ಈ ಉದ್ಯಮ ಕೂಡ ಮಕಾಡೆ ಮಲಗಿಕೊಂಡಿದೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.
ಶಶಿಕಾಂತ ಮೆಂಡೆಗಾರ
ವಿಜಯಪುರ(ಮಾ.16): ಮತ್ಸೋದ್ಯಮ ರೈತರಿಗೆ ಉತ್ತಮ ಉಪಕೃಷಿಯಲ್ಲಿ ಒಂದು. ತಮ್ಮಲ್ಲಿ ಇರುವ ಜಲಮೂಲಗಳಲ್ಲೇ ಮೀನು ಉತ್ಪಾದನೆ ಮಾಡಿ ರೈತರು ಆದಾಯ ಪಡೆಯುತ್ತಿದ್ದಾರೆ. ಆದರೆ, ಈ ಬಾರಿ ಬರಗಾಲ ಬಿದ್ದಿದ್ದರಿಂದ ಜಲಮೂಲಗಳು ಬರಿದಾಗಿ ಜನ, ಜಾನುವಾರುಗಳು ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ. ಇದರ ಮಧ್ಯೆ ಮತ್ಸೋದ್ಯಮಕ್ಕೂ ನೀರಿನ ಕೊರತೆ ಉಂಟಾಗಿ ಈ ಉದ್ಯಮ ಕೂಡ ಮಕಾಡೆ ಮಲಗಿಕೊಂಡಿದೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.
undefined
ಹೌದು, ಮುಂಗಾರು ಹಾಗೂ ಹಿಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ. ಇದ್ದ ನದಿಗಳು ಬತ್ತಿಹೋಗಿದ್ದು, ಕೆರೆಗಳು ಖಾಲಿಯಾಗಿವೆ. ಇನ್ನು ರೈತರ ಜಮೀನುಗಳಲ್ಲಿರುವ ಬೋರ್‌ವೆಲ್‌ಗಳು ಬಂದ್ ಆಗಿದ್ದರಿಂದ ಮೀನುಗಾರಿಕೆಯೇ ನಿಂತು ಹೋದಂತಾಗಿದೆ. ಜಿಲ್ಲಾದ್ಯಂತ ಇರುವ ನದಿಗಳು ಹಾಗೂ ಕೆರೆಗಳು ಸೇರಿ ಅನೇಕ ರೈತರು ಕೃಷಿಹೊಂಡ ನಿರ್ಮಿಸಿಕೊಂಡು ಉಪಕೃಷಿ ಎನಿಸಿಕೊಂಡಿರುವ ಮೀನು ಉತ್ಪಾದನೆಯ ಕೃಷಿ ಮಾಡುತ್ತಿದ್ದರು. ಆದರೆ, ಈ ಬಾರಿ ಬರಗಾಲ ಎಲ್ಲದಕ್ಕೂ ಹೊಡೆತ ನೀಡಿದೆ.
ವಿಜಯಪುರ: ಭೀಕರ ಬರಕ್ಕೆ ಬಾಯ್ದೆರೆದ ಜಲಮೂಲಗಳು..!
ಮೂರುಪಟ್ಟು ಮೀನುಮರಿ ಉತ್ಪಾದನೆ ಕುಸಿತ:
ಸರಿಯಾಗಿ ಮಳೆ ಬಾರದ್ದರಿಂದ ಮೀನು ಮರಿಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಈ ಬಾರಿ ಅತೀ ಕಡಿಮೆ ಮೀನು ಮರಿಗಳು ಉತ್ಪಾದನೆಯಾಗಿವೆ. ನಾರಾಯಣಪುರ ಮತ್ತು ಭೂತನಾಳ ಮೀನುಮರಿ ಪಾಲನಾ ಕೇಂದ್ರಗಳಲ್ಲಿ ಕಳೆದ ವರ್ಷಕ್ಕಿಂತ ಅರ್ಧದಷ್ಟು ಕಡಿಮೆ ಪ್ರಮಾಣದಲ್ಲಿ ಮೀನು ಮರಿಗಳ ಉತ್ಪಾದನೆಯಾಗಿದ್ದು, ಇಳುವರಿಯಲ್ಲೂ ಅರ್ಧಕ್ಕರ್ಧ ಕಡಿಮೆ ಆಗಿದೆ. ನೀರಿನ ಅಭಾವದಿಂದ ಹಿಂದೆಂದಿಗಿಂತ ಈ ಬಾರಿ ಮೀನುಕೃಷಿಗೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಪಾಲನಾ ಕೇಂದ್ರಗಳ ಮುಖ್ಯಸ್ಥರಾದ ಸಿದ್ದಪ್ಪ ಸುರಗಿಹಳ್ಳಿ ಹಾಗೂ ಡಾ.ವಿಜಯಕುಮಾರ ಎಸ್.
2,45,920 ಮೀನುಮರಿಗಳ ಉತ್ಪಾದನೆ:
2021-22ರಲ್ಲಿ 106.399, 2022-23ರಲ್ಲಿ 61.09, 2023-24ರಲ್ಲಿ 30.98 ಮೀನುಮರಿಗಳು ನಾರಾಯಣಪುರ ಮೀನುಮರಿ ಪಾಲನಾ ಕೇಂದ್ರದಲ್ಲಿ ಮಾರಾಟವಾಗಿವೆ. ಕಳೆದ ಹತ್ತು ವರ್ಷದ ಅಂಕಿಸಂಖ್ಯೆಗಳನ್ನು ಗಮಿಸಿದಾಗಲೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಕುಸಿತವಾಗಿರುವುದು ಕಂಡುಬಂದಿದೆ. ಇದರಂತೆ ಭೂತನಾಳ ಮೀನುಮರಿ ಪಾಲನಾ ಕೇಂದ್ರದಲ್ಲೂ ಕಳೆದ ವರ್ಷ 354879 ಮೀನುಮರಿ ಉತ್ಪಾದಿಸಲಾಗಿದ್ದರೆ, ಈ ಬಾರಿ ಕೇವಲ 245920 ಮೀನುಮರಿಗಳನ್ನು ಉತ್ಪಾದಿಸಲಾಗಿದೆ.
ಜಿಲ್ಲೆಯಲ್ಲಿ 195 ಕೆರೆಗಳಲ್ಲಿ ವಾರ್ಷಿಕ ಮೀನು ಬಿತ್ತನೆ ಗುರಿ ಹೊಂದಲಾಗಿತ್ತು. ಕೆರೆಗಳಲ್ಲಿ ನೀರು ಇಲ್ಲದಿರುವುದರಿಂದ ಇದರಲ್ಲಿ ಕೇವಲ 67 ಕೆರೆಗಳಲ್ಲಿ ಮಾತ್ರ ಮೀನುಮರಿಗಳ ಬಿತ್ತನೆ ಆಗಿದೆ. ಜಿಲ್ಲೆಯಲ್ಲಿ 66 ಖಾಸಗಿ ಕೊಳ್ಳಗಳ ವಾರ್ಷಿಕ ಗುರಿ ಹೊಂದಿದ್ದು, ಕೊಳಗಳಲ್ಲೂ ನೀರಿಲ್ಲದ ಕಾರಣ ಕೇವಲ 40 ಕೊಳ್ಳಗಳಲ್ಲಿ ಮಾತ್ರ ಮೀನುಮರಿ ಬಿತ್ತನೆ ಮಾಡಲಾಗಿದೆ.ಒಳನಾಡು ಮೀನುಗಾರಿಕೆಯಿಂದ ವಾರ್ಷಿಕವಾಗಿ 46240 ಟನ್ ಮೀನು ಉತ್ಪಾದನೆ ಗುರಿ ಹೊಂದಲಾಗಿದ್ದು, ಕೇವಲ 27635 ಟನ್‌ನಷ್ಟು ಮಾತ್ರ ಮೀನು ಉತ್ಪಾದನೆಯಾಗಿರುವುದು ಕಂಡುಬಂದಿದೆ.
ರೈತರು ಉತ್ಪಾದಿಸುವ ಮೀನುಕೃಷಿ ತಳಿಗಳು
ಕಟ್ಲಾ, ರೋಹೂ, ಮೃಗಾಲ್, ಸಾಮಾನ್ಯಗೆಂಡೆ, ತಿಲಾಪಿಯಾ, ರೂಪಚಂದ್, ಸುರಗಿ, ಹಾವು ಮೀನು, ಗೊಂಧಳಿ ತಳಿಯ ಮೀನುಗಳಲ್ಲಿ ಈ ಭಾಗದಲ್ಲಿ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ.
ಎಲ್ಲೆಲ್ಲಿ ಮೀನುಗಾರಿಕೆ?
ಜಲಾಶಯಗಳಲ್ಲಿ, ಕೆರೆಗಳಲ್ಲಿ, ಬಯೋಫ್ಲಾಕ್, ಸೆಮಿ ಬಯೋಫ್ಲಾಕ್, ಕೃಷಿಹೊಂಡಗಳು, ಬಾವಿಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿ ಮೀನು ಉತ್ಪಾದಿಸಲಾಗುತ್ತದೆ. ಆದರೆ ಭೀಕರ ಬರ ತಾಂಡವವಾಡುತ್ತಿರುವುದರಿಂದ ಜಲ ಮೂಲಗಳೆಲ್ಲ ಬತ್ತಿಹೋಗಿದ್ದು, ಬಹುತೇಕ ಕಡೆಗಳಲ್ಲಿ ಮೀನುಕೃಷಿ ನಿಂತುಹೋಗಿದೆ.
ಮಳೆ ಅಭಾವದಿಂದ ಮೀನುಮರಿಗಳಿಗೆ ಬೇಡಿಕೆ ಕುಸಿತವಾಗಿದೆ. ಕಳೆದ ಐದು ವರ್ಷದಲ್ಲೇ ಈ ಬಾರಿ ಕನಿಷ್ಠ ಉತ್ಪಾದನೆ ಮಾಡಿದ್ದೇವೆ. ಮುಂಬರುವ ಮಳೆ ಚೆನ್ನಾಗಿ ಆದರೆ ಮತ್ತೆ ರೈತರಿಗೆ ಅನುಕೂಲವಾಗುವಂತೆ ಹೆಚ್ಚು ಮೀನುಮರಿಗಳನ್ನು ಉತ್ಪಾದಿಸಿ ಕೊಡಲಾಗುವುದು ಎಂದು ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ಮುಖ್ಯಸ್ಥ ಡಾ. ವಿಜಯಕುಮಾರ ಎಸ್ ತಿಳಿಸಿದ್ದಾರೆ.
2045ಕ್ಕೆ ಭಾರತ ವಿಶ್ವದ ನಂ.1 ರಾಷ್ಟ್ರದ ಗುರಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬರಗಾಲ ಮತ್ತು ಈ ಬಾರಿ ಅತಿಯಾದ ಉಷ್ಣಾಂಶದಿಂದ ಜಲಾಶಯಗಳಲ್ಲಿ ಹಾಗೂ ಕೆರೆಗಳಲ್ಲಿ ನೀರು ಕಡಿಮೆ ಆಗಿದೆ. ಸರಿಯಾಗಿ ಮೀನು ಉತ್ಪಾದನೆ ಆಗದಿರುವುದರಿಂದ ಮೀನುಗಾರರು ಸಹ ಪರದಾಡುತ್ತಿದ್ದಾರೆ. ಪ್ರತಿಬಾರಿಗೆ ಹೋಲಿಸಿದರೆ ಈ ಸಲ ಮೀನು ಉತ್ಪಾದನೆಗೆ ಸಮಸ್ಯೆ ಆಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಇರ್ಫಾನ್ ಬಾಂಗಿ ತಿಳಿಸಿದ್ದಾರೆ.
ಅರ್ಧ ಎಕರೆಯಲ್ಲಿ ಸೆಮಿ ಬಯೋಫ್ಲಾಕ್ ಹೊಂಡ ತೆಗೆದು ಕಳೆದ ಮೂರು ವರ್ಷಗಳಿಂದ ಮೀನುಕೃಷಿ ಮಾಡುತ್ತಿದ್ದೇವೆ. ಆದರೆ, ಈ ಬಾರಿ ಬರಗಾಲದ ಹಿನ್ನೆಲೆ ನೀರಿನ ಪ್ರಮಾಣ ಕಡಿಮೆ ಆಗಿದ್ದರಿಂದ ನಮ್ಮಲ್ಲಿರುವ ಎರಡು ಬೋರ್‌ವೆಲ್ ಬತ್ತಿಹೋಗಿದ್ದು, ಇದೀಗ ನೀರಿನ ಕೊರತೆಯಾಗಿದೆ. ಇದರಿಂದಾಗಿ ಸಧ್ಯಕ್ಕೆ ಮೀನುಕೃಷಿ ಸ್ಥಗಿತಗೊಳಿಸಿದ್ದೇವೆ ಎಂದು ಮೀನು ಕೃಷಿಕ ವಿರೇಶ ಕವಟಗಿ ತಿಳಿಸಿದ್ದಾರೆ.