ಹಾವೇರಿ: ಶಾಸಕರ ನಡೆ, ನುಡಿ ನೋಡಿದರೆ ಮೈ ಉರಿಯುತ್ತ, ದೊಡ್ಡರಂಗೇಗೌಡ

By Kannadaprabha News  |  First Published Jan 8, 2023, 1:30 AM IST

ಅಧಿಕಾರ ಖರೀದಿಸಿದವರಿಂದ ಜನಪರ ಚರ್ಚೆ ಹೇಗೆ ಸಾಧ್ಯ?: ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ ಅಸಮಾಧಾನ


ಕೆ.ಎಂ.ಮಂಜುನಾಥ್‌

ಹಾವೇರಿ(ಜ.08): ಭ್ರಷ್ಟತೆಯೇ ವ್ಯವಸ್ಥೆಯಾಗುತ್ತಿರುವಾಗ ಮೌಲ್ಯಗಳನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ ಬೇಸರದ ನುಡಿಗಳನ್ನು ಹೊರಹಾಕಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶನಿವಾರ ಜರುಗಿದ ‘ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಥನ’ ಕಾರ್ಯಕ್ರಮದಲ್ಲಿ ಸಂಸದೀಯ ವ್ಯವಸ್ಥೆಯಲ್ಲಿ ಗುಣಮಟ್ಟಕುಸಿಯುತ್ತಿದೆಯಲ್ಲಾ ಎಂದು ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮ್ಮೇಳನದ ಅಧ್ಯಕ್ಷರು, ಹಣದಿಂದ ಅಧಿಕಾರ ಖರೀದಿಸಿ ವಿಧಾನಮಂಡಲ ಪ್ರವೇಶಿಸುವ ಜನರೇ ಹೆಚ್ಚುತ್ತಿರುವ ಈ ದಿನಮಾನಗಳಲ್ಲಿ ಜನಪರವಾದ ಚರ್ಚೆಗಳು ನಡೆಯಲು ಅದ್ಹೇಗೆ ಸಾಧ್ಯ ಎಂದು ಕೇಳಿದರು.
ಪ್ರಜಾಪ್ರಭುತ್ವದ ಮೌಲ್ಯಗಳು ದಿನೇದಿನೇ ಅರ್ಥವನ್ನು ಕಳೆದುಕೊಳ್ಳುತ್ತಿವೆ. ದುಡ್ಡು ಕೊಟ್ಟು ಅಧಿಕಾರ ಹಿಡಿಯುತ್ತಿರುವವರಿಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸುವವರಿಲ್ಲ. ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದೊಡ್ಡಿದೆ ಎಂದರು.

Tap to resize

Latest Videos

undefined

ಆರು ವರ್ಷ ಪರಿಷತ್‌ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಶಾಸಕರ ನಡೆ, ನುಡಿ, ವರ್ತನೆಗಳನ್ನು ನೋಡಿದರೆ ಮೈ ಉರಿಯುತ್ತದೆ. ಪಂಚೆ ಮೇಲೆ ಕಟ್ಟಿತೋಳೇರಿಸಿಕೊಂಡು ಶಾಸಕರು ಸದನದಲ್ಲಿ ವರ್ತಿಸುತ್ತಾರೆ ಎಂದಾದರೆ ನಮ್ಮ ಸಂಸದೀಯ ವ್ಯವಸ್ಥೆ ಏನಾಗಿದೆ ಎಂಬುದನ್ನು ಜನರೇ ಊಹಿಸಿಕೊಳ್ಳಿ ಎಂದು ಸದನ ವ್ಯವಸ್ಥೆಯಲ್ಲಾಗುತ್ತಿರುವ ಬೆಳವಣಿಗೆಗಳ ಬೆಳಕು ಚೆಲ್ಲಿದರು. ಇದು ನಮ್ಮ ರಾಜ್ಯ-ದೇಶದ ಪರಿಸ್ಥಿತಿಯಷ್ಟೇ ಅಲ್ಲ. ಎಲ್ಲ ದೇಶಗಳಲ್ಲೂ ಆಕ್ರಮಿಸಿಕೊಂಡಿದೆ. ವಿಶ್ವವ್ಯಾಪಿಯಾಗಿರುವ ಸಿಡುಬು ರೋಗವಿದು ಎಂದು ವ್ಯಾಖ್ಯಾನಿಸಿದರಲ್ಲದೆ, ಜನರಲ್ಲಿ ಅರಿವು ಮೂಡುವುದರಿಂದ ಮಾತ್ರ ಈ ಸಿಡಿಬು ರೋಗ ವಾಸಿಗೊಳಿಸಲು ಸಾಧ್ಯ ಎಂದು ತಿಳಿಸಿದರು.

Kannada Sahitya Sammelana: ಹೊಸ ತಂತ್ರಜ್ಞಾನದ ಹೆಚ್ಚು ವೈಭವೀಕರಣ ಬೇಡ: ಡಾ.ಬಿ.ಕೆ.ರವಿ

ಯುವಕರು ಹಿರಿಯ ಕವಿಗಳನ್ನು ಓದಿ

ಇಂದಿನ ಯುವ ಲೇಖಕರಿಗೆ ನಿಮ್ಮ ಕಿವಿಮಾತು ಏನು ಎಂದು ಬುಕ್ಕಾಪಟ್ನ ವಾಸು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರೊ.ದೊಡ್ಡರಂಗೇಗೌಡರು, ಕಿವಿಮಾತು ಯಾರು ಬೇಕಾದರೂ ಹೇಳಬಹುದು. ಆದರೆ, ಕೇಳಿಸಿಕೊಳ್ಳುವವರು ಬೇಕಲ್ಲ ಎನ್ನುತ್ತಲೇ ಮಾತಿಗಿಳಿದರಲ್ಲದೆ, ಇಂದಿನ ಯುವ ಲೇಖಕರು ಹಾಗೂ ಲೇಖಕರಾಗಬಯಸುವವರು ಹಿರಿಯ ಲೇಖಕರು, ಕವಿಗಳನ್ನು ಹೆಚ್ಚು ಹೆಚ್ಚು ಓದಬೇಕು. ಇದರಿಂದ ಪದಗಳ ವ್ಯಾಪ್ತಿ ವಿಸ್ತರಿಸುತ್ತದೆ. ಅರಿವಿನ ಪರದೆ ಗರಿಗೆದರಿಕೊಳ್ಳುತ್ತದೆ. ಕುವೆಂಪು, ಬೇಂದ್ರೆ, ಕಾರಂತ, ಕೆಎಸ್‌ನ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಓದುವಿನಿಂದ ಲೇಖಕನಾಗುವ ಅಥವಾ ಏನಾದರೂ ಹೊಸತನ್ನು ಬರೆಯಬೇಕು ಎಂದು ಹಂಬಲಿಸುವ ಯುವಕರಿಗೆ ಹೆಚ್ಚು ಪದಕೋಶ ದಕ್ಕುತ್ತದೆ ಎಂದು ತಿಳಿಸಿದರಲ್ಲದೆ, ಅಧ್ಯಯನ ಅಂತರಂಗದ ಹಸಿವಿದ್ದಾಗ ಮಾತ್ರ ಈ ಓದಿನ ಕಡೆ ವಾಲಲು ಸಾಧ್ಯ ಎಂದರು.

ಡಾ. ತಲಕಾಡು ಚಿಕ್ಕರಂಗೇಗೌಡ ಅವರು ಕಾರ್ಯಕ್ರಮ ನಿರ್ವಹಿಸಿದರು.
*ಸುಂಕಮ್ಮ ಜಿ. ಸಂಕಣ್ಣನವರ: ಸಹಜ ಸಾಹಿತ್ಯಕ್ಕೂ ಸಿನಿಮಾ ಸಾಹಿತ್ಯಕ್ಕೂ ಏನು ವ್ಯತ್ಯಾಸ?
ಪ್ರೊ.ದೊಡ್ಡರಂಗೇಗೌಡ: ಸಿನಿಮಾಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬರೆಯುತ್ತೇವೆ. ಸಹಜವಾಗಿ ಸಾಹಿತ್ಯ ಬರೆಯುವಾಗ ಮುಕ್ತ ಸ್ವಾತಂತ್ರ್ಯ ಇರುತ್ತದೆ. ನಿರ್ಬಂಧಗಳಿರುವುದಿಲ್ಲ.
*ಸುಂಕಮ್ಮ ಜಿ.ಸಂಕಣ್ಣನವರ: ನಿಮ್ಮ ಸಾಹಿತ್ಯ ಕೃಷಿ ಯಶಸ್ವಿ ಮುಂದೆ ಪತ್ನಿ ರಾಜೇಶ್ವರಿಗೌಡ ಪಾತ್ರ?
ಪ್ರೊ.ದೊಡ್ಡರಂಗೇಗೌಡ: ಹೌದು ಅವರೇ ನನ್ನ ಶಕ್ತಿ. ನನಗೆ ಪ್ರೇರಣೆ. ಮಾರ್ಗದರ್ಶಿ ಎಲ್ಲವೂ.
*ಮಾಲತೇಶ ಅಲಗೂರು: ಮತ್ತೊಮ್ಮೆ ಗೋಕಾಕ್‌ ಚಳುವಳಿಯ ಆಗಬೇಕಿದೆಯೇ?
ಪ್ರೊ.ದೊಡ್ಡರಂಗೇಗೌಡ: ಖಂಡಿತ ಚಳುವಳಿ ಆಗಬೇಕಿದೆ. ಇದಕ್ಕೆ ಪೋಷಕರೇ ಹೊಣೆ.
*ಇ-ಸಾಹಿತ್ಯದಿಂದ ಪುಸ್ತಕ ಸಂಸ್ಕೃತಿ ಮರೆಯಾಗಬಹುದಾ?
ಪ್ರೊ.ದೊಡ್ಡರಂಗೇಗೌಡ: ಹಾಗೇನಿಲ್ಲ. ನಮ್ಮ ಕನ್ನಡದ ಪುಸ್ತಕಗಳು ವಿದೇಶದಲ್ಲಿ ಹೆಸರು ಮಾಡುತ್ತಿವೆ.
*ಡಾ. ಶಾರದಾ ಮುಳ್ಳೂರು: ನೀವು ಅನುವಾದ ಸಾಹಿತ್ಯದ ಕಡೆ ವಾಲಿದ್ದು ಏಕೆ?
ಪ್ರೊ.ದೊಡ್ಡರಂಗೇಗೌಡ; ಅನಾಯಾಸವಾಗಿ ಬಂದ ಅವಕಾಶಗಳಷ್ಟೇ. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಪರಿಭಾಷೆ ಇದೆ. ಲೇಖಕರು ಕನ್ನಡದ ಆಚೆಗೂ ಬೆಳೆಯಬೇಕು.
*ಚಿಕ್ಕರಂಗೇಗೌಡ: ಕವಿಗಳ ದೀರ್ಘಾಯುಷ್ಯದ ಗುಟ್ಟೇನು?
ಕವಿ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಬರೆದುಕೊಂಡು ಬಿಡುತ್ತೇನೆ. ಮನಸ್ಸು ತೃಪ್ತ ಆರೋಗ್ಯಕರವಾಗಿರುತ್ತದೆ. ಒಳಗಿಟ್ಟುಕೊಂಡರೆ ಕುದಿಯುತ್ತದೆ. ಹೊರ ಹಾಕಿದ ಮೇಲೆ ನಿರಮ್ಮಳ. ಇದುವೇ ಕವಿಯ ಆರೋಗ್ಯದ ಗುಟ್ಟು.

click me!