ಯುವಕರೆಲ್ಲರೂ ಸ್ತ್ರೀಯರ ರಕ್ಷಣೆಗೆ ನಿಲ್ಲಲಿ : ಡಿಕೆಶಿ

By Kannadaprabha NewsFirst Published Dec 9, 2019, 7:51 AM IST
Highlights

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಿ ಆಂದೋಲನ ನಡೆಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು [ಡಿ.09]: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಗಳು ನಡು ದಾರಿಯಲ್ಲೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸಂತ್ರಸ್ತೆಗೆ ರಕ್ಷಣೆ ನೀಡಲು ವಿಫಲವಾಗಿದೆ. ಇದು ಮಾನವೀಯತೆ ಹಾಗೂ ಭಾರತದ ಗೌರವದ ಪ್ರಶ್ನೆಯಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ದೊಡ್ಡ ಮಟ್ಟದ ಆಂದೋಲನ ನಡೆಯಬೇಕು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ಯಾಚಾರ ಸಂತ್ರಸ್ತೆಗೆ ರಕ್ಷಣೆ ನೀಡಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಕೇವಲ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ. ಪ್ರಕರಣವನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಈ ಮೊದಲೇ ಸಂತ್ರಸ್ತೆಯ ಸಂಬಂಧಿಕರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಹೀಗಿದ್ದರೂ ನ್ಯಾಯಾಲಯಕ್ಕೆ ಹೋಗುತ್ತಿರುವ ಸಂತ್ರಸ್ತೆಗೆ ಸೂಕ್ತ ರಕ್ಷಣೆ ನೀಡುವುದಿಲ್ಲ ಎಂದರೆ ಏನನ್ನಬೇಕು ಎಂದು ಪ್ರಶ್ನಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಕರಣವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಸಾವನ್ನಪ್ಪಿದ ಸಂತ್ರಸ್ತೆಗೆ ಬೆಂಬಲವಾಗಿ ನಿಲ್ಲಬೇಕು. ಯಾವುದೇ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯಾಗಬೇಕು. ದೇಶಾದ್ಯಂತ ಮಹಿಳೆಯರಿಗೆ ಸೂಕ್ತ ಸುರಕ್ಷತೆಯ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಯುವಕರೆಲ್ಲರೂ ಆಂದೋಲನ ಸೃಷ್ಟಿಸಬೇಕು. ಪ್ರತಿಯೊಬ್ಬರೂ ಇದಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

click me!