ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಉತ್ಪಾದಿಸಲಾಗುವ ಈ ಸಾಂಪ್ರದಾಯಿಕ ಸಾಣಿಕಟ್ಟಾ ಉಪ್ಪಿನ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಮೂರು ವರ್ಷದಿಂದ ಈವರೆಗೆ ಸುಮಾರು 8 ರಿಂದ 9 ಸಾವಿರ ಟನ್ ಉಪ್ಪಿನ ಉತ್ಪಾದನೆ ಕುಂಠಿತವಾಗಿದೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಸೆ.30): ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದಲ್ಲಿರುವ ನೂರಾರು ಎಕರೆಗಟ್ಟಲೆ ಪ್ರದೇಶದಲ್ಲಿ ಸುಮಾರು 100 ವರ್ಷಗಳಿಂದ ಸಾಂಪ್ರದಾಯಿಕ ಉಪ್ಪು ತಯಾರಿಸಲಾಗುತ್ತಿದೆ. ಔಷಧಿ ಗುಣಗಳನ್ನು ಹೊಂದಿರುವ ಈ ಉಪ್ಪಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಉತ್ಪಾದಿಸಲಾಗುವ ಈ ಸಾಂಪ್ರದಾಯಿಕ ಸಾಣಿಕಟ್ಟಾ ಉಪ್ಪಿನ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಮೂರು ವರ್ಷದಿಂದ ಈವರೆಗೆ ಸುಮಾರು 8 ರಿಂದ 9 ಸಾವಿರ ಟನ್ ಉಪ್ಪಿನ ಉತ್ಪಾದನೆ ಕುಂಠಿತವಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಸಾಂಪ್ರದಾಯಿಕ ಉಪ್ಪು ಉತ್ಪಾದಿಸಲಾಗುತ್ತಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಸ್ಥಳದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ನೀರನ್ನು ಆವಿಗೊಳಿಸುವ ಮೂಲಕ ಉಪ್ಪು ಉತ್ಪಾದಿಸಲಾಗುತ್ತಿದ್ದು, ಪರಿಶುದ್ಧವಾದ ನೈಸರ್ಗಿಕ ಉಪ್ಪನ್ನು ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗೆ ಒದಗಿಸುತ್ತಾ ಬರಲಾಗುತ್ತಿದೆ. ಗೋಕರ್ಣ ಸಾಣಿಕಟ್ಟಾ ಉಪ್ಪು ಶೇ. 100ರಷ್ಟು ನೈಸರ್ಗಿಕವಾಗಿ ತಯಾರಾಗುವ ಉಪ್ಪು. 565 ಎಕರೆ ಪ್ರದೇಶದಲ್ಲಿ ಉಪ್ಪು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 42 ಎಕರೆ ಪ್ರದೇಶದಲ್ಲಿ ಉಪ್ಪು ಸಂಗ್ರಹಿಸಲಾಗುತ್ತದೆ. ಸುಮಾರು 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸಂಗ್ರಹವಾಗುವ 2.5 ಡಿಗ್ರಿ ಸೆಲ್ಸಿಯಸ್ ಹೊಂದಿರುವ ಸಮುದ್ರದ ನೀರು ಉಪ್ಪು ತಯಾರಾಗುವಾಗ 17-29 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತದೆ. ನೀರಿನ ಈ ಸಾಂದ್ರತೆಯ ಮೇಲೆ ಉಪ್ಪು ತಯಾರಾಗುತ್ತದೆ.
ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ: ಟ್ರೈನ್ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ, ಸಚಿವ ಹೆಬ್ಬಾರ್
ಗಾಳಿ ಮತ್ತು ಸೂರ್ಯನ ಪ್ರಕಾಶಕ್ಕೆ ನೀರು ಆವಿಯಾಗುತ್ತಾ ಹೋದಂತೆ ಒಂದೂವರೆ ಇಂಚು ಪದರದ ರೂಪದಲ್ಲಿ ನೀರು ಉಪ್ಪಾಗಿ ಪರಿವರ್ತತೆಯಾಗುತ್ತಾ ಹರಿಯುತ್ತದೆ. ಇದು ಒಂದು ಕಂಡೆನ್ಸರ್‌ನಿಂದ ಇನ್ನೊಂದು ಕಂಡೆನ್ಸರ್‌ಗೆ ಬದಲಾಗಿ ದಪ್ಪ ಪದರದಲ್ಲಿ ಈ ನೈಸರ್ಗಿಕ ಉಪ್ಪು ಉತ್ಪನ್ನವಾಗುತ್ತದೆ. ಪ್ರತೀವರ್ಷ 10-12 ಸಾವಿರ ಟನ್‌ಗಳಷ್ಟು ಉಪ್ಪು ಉತ್ಪನ್ನವಾಗುತ್ತಿದ್ದ ಕಾರಣ ಸಾಣಿಕಟ್ಟಾದಿಂದ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಗೂ ಉಪ್ಪು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಇಷ್ಟು ವರ್ಷಗಳ ಕಾಲ ಎದುರಾಗದ ಉಪ್ಪು ಉತ್ಪಾದನೆ ಸಮಸ್ಯೆ ಕಳೆದ ಮೂರು ವರ್ಷಗಳಿಂದ ಈ ಸ್ಥಳದಲ್ಲಿ ಕಾಣಿಸತೊಡಗಿದೆ.
ಕಳೆದ 3 ವರ್ಷಗಳಿಂದ ಪ್ರಕೃತಿ ವಿಕೋಪದ ಕಾರಣ ಉಪ್ಪು ಉತ್ಪಾದನೆಯಲ್ಲಿ ನಿಧಾನವಾಗಿ ಇಳಿಕೆಯಾಗುತ್ತಾ ಬಂದಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ಟನ್ ಉಪ್ಪಿನ ಉತ್ಪಾದನೆ ಕುಂಠಿತವಾಗಿದೆ. ಕಳೆದ ವರ್ಷ ಮಳೆ ಪ್ರಮಾಣ ಸಾಕಷ್ಟು ಇದ್ದದ್ದರಿಂದ ಕೇವಲ 3 ಸಾವಿರ ಟನ್ ಉಪ್ಪು ಮಾತ್ರ ಉತ್ಪಾದನೆ ಮಾಡಲು ಸಾಧ್ಯವಾಗಿತ್ತು. ಈ ಸಮಸ್ಯೆಯಿಂದಾಗಿ ಮಾರುಕಟ್ಟೆಯಿಂದ ಮಾರುಕಟ್ಟೆಯಲ್ಲಿ ಸಾಣಿಕಟ್ಟಾ ಉಪ್ಪು ಲಭ್ಯವಾಗದಂತಾಗಿದ್ದು, ಕೆಲವೆಡೆ ಇದರ ಬೆಲೆಯೂ ಹೆಚ್ಚಳವಾಗಿದ್ದರಿಂದ ಇದರ ಪರಿಣಾಮ ಜನರ ಮೇಲೆ ನೇರವಾಗಿ ಬೀಳುತ್ತಿದೆ ಅಂತ ಸ್ಥಳೀಯ ಪ್ರವೀಣ್ ತಿಳಿಸಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ: ನನಸಾಗುವತ್ತ ಉತ್ತರಕನ್ನಡ ಜನರ ಬಹುವರ್ಷಗಳ ಕನಸು
ಅಂದಹಾಗೆ, ಉತ್ತರಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಉಪ್ಪಿನ ಅವಶ್ಯಕತೆ ತಿಂಗಳಿಗೆ ಇರೋದು ಕೇವಲ 300 ಟನ್. ಆದರೆ, ಸದ್ಯಕ್ಕೆ ಉಪ್ಪು ಬೆಳೆಗಾರರ ಸೊಸೈಟಿಯಲ್ಲಿ 1,700 ಟನ್ ಉಪ್ಪು ಸಂಗ್ರಹವಿದೆ. ಉಪ್ಪು ಬೆಳೆಗಾರರ ಸಂಘದ ಅಧ್ಯಕ್ಷರು ಹೇಳುವಂತೆ, ಜನವರಿಯಲ್ಲಿ ಹೊಸ ಉಪ್ಪುಗಳು ಬರೋದ್ರಿಂದ ಉಪ್ಪಿನ ಕೊರತೆ ನೀಗುತ್ತದೆ. ಖಾಯಂ ಸಗಟು ವ್ಯಾಪಾರಿಗಳ ಬೇಡಿಕೆಯನ್ವಯ ಸದ್ಯ ಶೇ. 30 ರಷ್ಟು ಪೂರೈಸಲಾಗುತ್ತಿದೆ. ಕೆಲವು ಅಂಗಡಿಯವರು ಕೂಡಾ ಉಪ್ಪುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಸರಿಯಲ್ಲ. ಅವಶ್ಯಕತೆ ಎಷ್ಟಿದೆಯೋ ಅಷ್ಟಕ್ಕೂ ಖರೀದಿಸಿದಲ್ಲಿ ಸಾಕಾಗುತ್ತದೆ. ಈ ನೈಸರ್ಗಿಕ ಉಪ್ಪಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದ್ದು, ಇದು ಪ್ರಮುಖ ಔಷಧಿಯಾಗಿದೆ. ಇದರಿಂದಲೇ ಜನರು ಇದಕ್ಕೆ ಆದ್ಯತೆ ನೀಡ್ತಾರೆ. ಸದ್ಯಕ್ಕೆ ಉಪ್ಪಿನ ಕೊರತೆಯಿದೆ ಎಂದು ಸಂಘದ ವತಿಯಿಂದ ಇದರ ಬೆಲೆ ದುಪ್ಪಟ್ಟು ಮಾಡುವುದಿಲ್ಲ. ಜನರ ಬೇಡಿಕೆಯನ್ನು ಎಂದಿನ ಬೆಲೆಯಲ್ಲೇ ಪೂರೈಸುತ್ತೇವೆ ಅಂತಾರೆ ಗೋಕರ್ಣ ನಾಗರಬೈಲ್ ಸೊಸೈಟಿಯ ಉಪ್ಪು ಬೆಳೆಗಾರರ ಸಂಘದ ಅಧ್ಯಕ್ಷ ಅರುಣ್ ನಾಡಕರ್ಣಿ ಹೇಳಿದ್ದಾರೆ.
ಒಟ್ಟಿನಲ್ಲಿ ಹವಾಮಾನ್ಯ ವೈಪರೀತ್ಯದಿಂದಾಗಿ ಗೋಕರ್ಣ ಸಾಣಿಕಟ್ಟಾ ಉಪ್ಪು ಉತ್ಪಾದನೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಷ್ಟು ಉಪ್ಪು ಲಭ್ಯವಾಗದಂತಾಗಿದೆ. ಇದನ್ನೇ ಲಾಭವನ್ನಾಗಿಸುವ ದೃಷ್ಠಿಯಿಂದ ಕೆಲವು ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಉಪ್ಪು ಮಾರಾಟ ಮಾಡುತ್ತಿದ್ದಾರೆ. ಆದರೆ, ಉಪ್ಪು ಬೆಳೆಗಾರರ ಸಂಘವೇ ಜನರಿಗೆ ಆಶ್ವಾಸನೆ ನೀಡಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.