ರಾಜ್ಯದಲ್ಲಿ ಮುಂಜಾಗ್ರತ ಕ್ರಮವಾಗಿ ಬರಗಾಲ ಘೋಷಣೆ ಮಾಡಿ, ಜನ ಜಾನುವಾರುಗಳು, ಬೆಳೆದು ನಿಂತಿರುವ ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಮೈಸೂರು : ರಾಜ್ಯದಲ್ಲಿ ಮುಂಜಾಗ್ರತ ಕ್ರಮವಾಗಿ ಬರಗಾಲ ಘೋಷಣೆ ಮಾಡಿ, ಜನ ಜಾನುವಾರುಗಳು, ಬೆಳೆದು ನಿಂತಿರುವ ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಛಾಯೆ ಮೂಡುತ್ತಿದೆ. ಜಲಾಶಯಗಳು ಖಾಲಿಯಾಗುತ್ತಿವೆ. ಕೆರೆಕಟ್ಟೆಗಳು ಒಣಗುತ್ತಿವೆ. ಕುಡಿಯುವ ನೀರಿಗೂ ಬರಗಾಲದ ಭೀತಿ ಕಾಣುತ್ತಿದೆ. ಹೀಗಾಗಿ, ರೈತರನ್ನು ಉಳಿಸಲು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ತಕ್ಷಣ ಕ್ರಮ ವಹಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಿ
ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಅಕ್ಕಿ, ರಾಗಿ, ಜೋಳ, ಸಿರಿಧಾನ್ಯಗಳನ್ನು ಖರೀದಿಸಿ. ಎಂಎಸ್‌ಪಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಖರೀದಿಸಬೇಕು. ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮಾದರಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಕಾಲಕ್ಕೆ ತೆರೆಯುವಂತಾಗಬೇಕು. ಖರೀದಿಸಿದ ಉತ್ಪನ್ನಗಳಿಗೆ ಒಂದು ವಾರದಲ್ಲಿ ರೈತರಿಗೆ ಹಣ ಪಾವತಿ ಮಾಡುವಂತಾಗಬೇಕು ಎಂದು ಅವರು ಆಗ್ರಹಿಸಿದರು.
ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಜೂಜಾಟು, ಕುದುರೆ ರೇಸ್, ಕ್ಯಾಸಿನೂಗಳಿಗೆ ಇಲ್ಲದ ಜಿಎಸ್‌ಟಿ ರೈತರಿಗೆ ಯಾಕೆ? ಕೃಷಿ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಭೂಮಿ ಮೌಲ್ಯದ ಶೇ.75 ರಷ್ಟುಸಾಲ ನೀಡುವಂತೆ ನೀತಿ ರೂಪಿಸಬೇಕು. ಕೃಷಿ ಸಾಲಕ್ಕೆ ಸಿಬಿಲ್ ನೀತಿ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು ಸಾಗಾಣಿಕೆ ಸುಲಿಗೆ ತಪ್ಪಿಸಲು ಅತ್ಯವಶ್ಯಕ. ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿ ತರಬೇಕು. ಎಲ್ಲಾ ಕೃಷಿ ಉತ್ಪನ್ನ ಬೆಳೆಗಳಿಗೂ ಪಸಲ್ ಬಿಮಾ ಬೆಳೆ ವಿಮೆ ಜಾರಿ ಮಾಡಬೇಕು. ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ವಾಣಿಜ್ಯ ಬೆಳೆ ಅಡಿಕೆಗೆ ಬೆಳೆ ವಿಮೆ ಜಾರಿ ಮಾಡಿರುವಂತೆ ಕಬ್ಬು, ಬಾಳೆಗೂ ಬೆಳೆ ವಿಮೆ ಜಾರಿ ಮಾಡಬೇಕು. ಅತಿವೃಷ್ಟಿ- ಅನಾವೃಷ್ಟಿ, ಆಕಸ್ಮಿಕ ಬೆಂಕಿ, ಪ್ರವಾಹ ಹಾನಿ, ಬೆಳೆ ನಾಶ ಪರಿಹಾರ ಮಾನದಂಡ ಬದಲಾಯಿಸಬೇಕು. ಪ್ರತಿಯೊಂದು ರೈತ ಕುಟುಂಬಕ್ಕೂ ಕೃಷಿ ಕಾರ್ಮಿಕರಿಗೂ ತೆಲಂಗಾಣ ಮಾದರಿಯಲ್ಲಿ 5 ಲಕ್ಷ ಜೀವವಿಮೆ ಯೋಜನೆ ಜಾರಿಗೆ ತರಬೇಕು ಎಂದರು.
ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಗೋ ಹತ್ಯೆ ನಿಷೇಧ ಕಾನೂನು ಉಳಿಸಲಿ ಸುಪ್ರೀಂಕೋರ್ಚ್ ತೀರ್ಪು ಗೌರವಿಸಲಿ ಕೆಲವು ತಿದ್ದುಪಡಿಗಳನ್ನು ಮಾಡಲಿ. ಕಾಡಂಚಿದಲ್ಲಿ ರೈತರಿಗೆ ಪ್ರಾಣಿಗಳ ಹಾವಳಿ, ಪ್ರಾಣ ಹಾನಿ ತಪ್ಪಿಸಲು ಕಾಡಿನ ಒಳಗೆ ಇರುವ ಎಲ್ಲಾ ಮೋಜಿನ ತಾಣಗಳು, ರೆಸಾರ್ಚ್‌ಗಳನ್ನ ಮುಚ್ಚಿಸಬೇಕು. ಕಾಡಿನ ಒಳಗೆ ಗಣಿಗಾರಿಕೆ ನಿಲ್ಲಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ನಿರಂತರ 12 ಗಂಟೆಗಳ ವಿದ್ಯುತ್ ನೀಡಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಗಂಭೀರವಾಗಿ ಗಮನ ಹರಿಸುವಂತೆ ಅವರು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಮಲಮ್ಮ, ಮಹದೇವಸ್ವಾಮಿ ಇದ್ದರು.
ಕೇಂದ್ರ ಸರ್ಕಾರವು ವಿಶ್ವ ವ್ಯಾಪಾರ ಒಪ್ಪಂದ ನೀತಿಯಿಂದ ಮಲೇಶಿಯಾದಿಂದ ಪಾಮ್ ಆಯಿಲ್ ಹಾಗೂ ಚೀನಾದಿಂದ ರೇಷ್ಮೆ ಆಮದು ಮಾಡಿಕೊಂಡು ಸುಂಕವನ್ನ ವಿನಾಯಿತಿಗೂಳಿಸಿದ ಪರಿಣಾಮ ತೆಂಗು ಬೆಳೆಯುವ ರೈತರ ಪಾಲಿಗೆ ಸಂಕಷ್ಟವನ್ನುಂಟು ಮಾಡಿದೆ. ಇದರಿಂದ ಕೊಬ್ಬರಿ ಬೆಲೆ, ರೇಷ್ಮೆ ಗೂಡು ಬೆಲೆ ಅರ್ಧದಷ್ಟುಕುಸಿತವಾಗಿದೆ. ಕೂಡಲೇ ತೆಂಗು ಬೆಳೆ, ರೇಷ್ಮೆ ಬೆಳೆ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.
- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ