ಪುತ್ರಿ ಆಕೆಯ ಗೆಳೆಯನ ಜೊತೆಗೆ ಸೇರಿಕೊಂಡು ಹತ್ಯೆ ಮಾಡಿ ಸ್ನಾನದ ಮನೆಯಲ್ಲಿ ಬೆಂಕಿ ಹಚ್ಚಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು [ಆ.19]: ಬಟ್ಟೆವ್ಯಾಪಾರಿಯನ್ನು ಕೊಂದು ಮನೆಯ ಸ್ನಾನದ ಕೋಣೆಯಲ್ಲಿ ಶವಕ್ಕೆ ಬೆಂಕಿ ಇಟ್ಟಿದ್ದ ಪ್ರಕರಣ ಭಾನುವಾರ ಬೆಳಗ್ಗೆ ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿ ನಡೆದಿದೆ. ರಾಜಾಜಿನಗರದ 5ನೇ ಬ್ಲಾಕ್ ನಿವಾಸಿ ಜೈಕುಮಾರ್ (43) ಕೊಲೆಯಾದವರು.
ಪ್ರಕರಣದ ಸಂಬಂಧ ಮನೆಯಲ್ಲಿದ್ದ ಜೈರಾಮ್ ಅಪ್ರಾಪ್ತ ಪುತ್ರಿ ಹಾಗೂ ಆಕೆಯ ಸ್ನೇಹಿತನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕುತ್ತಿಗೆ ಭಾಗದಲ್ಲಿ ಕೊಯ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಜೈಕುಮಾರ್ ಮೂಲತಃ ಪಾಂಡಿಚೇರಿಯವರಾಗಿದ್ದು, ಹಲವು ವರ್ಷಗಳಿಂದ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಪತ್ನಿ ಪೂಜಾದೇವಿ ಹಾಗೂ 9ನೇ ತರಗತಿ ವ್ಯಾಸಂಗ ಮಾಡುವ ಪುತ್ರಿ, ಪುತ್ರನ ಜತೆ ನೆಲೆಸಿದ್ದರು. ಇವರ ಮನೆಯಲ್ಲಿ ಭಾಮೈದ ಕೂಡ ಇದ್ದರು. ಭಾಷ್ಯಂ ವೃತ್ತದಲ್ಲಿಯೇ ಬಟ್ಟೆಮಳಿಗೆ ಹೊಂದಿದ್ದಾರೆ. ಜೈರಾಮ್ ಪತ್ನಿ ಪೂಜಾದೇವಿ, ಪುತ್ರ ಹಾಗೂ ಪೂಜಾದೇವಿಯ ಸಹೋದರ ಕಾರ್ಯಕ್ರಮದ ನಿಮಿತ್ತ ಶನಿವಾರ ಬೆಳಗಿನ ಜಾವ ಪಾಂಡಿಚೇರಿಗೆ ಹೋಗಿದ್ದಾರೆ. ಮನೆಯಲ್ಲಿ ಜೈರಾಮ್ ಹಾಗೂ ಪುತ್ರಿ ಮಾತ್ರ ಇದ್ದರು.
ಶೌಚಾಲಯದಲ್ಲಿ ಬೆಂಕಿ: ಭಾನುವಾರ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೇ ಜೈಕುಮಾರ್ ಅವರು ನೆಲೆಸಿರುವ ನಾಲ್ಕನೇ ಮಹಡಿಯಲ್ಲಿರುವ ಮನೆಯ ಶೌಚಾಲಯದಿಂದ ದಟ್ಟವಾದ ಹೊಗೆ ಬರುತ್ತಿತ್ತು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದರು. ಶೌಚಾಲಯದಲ್ಲಿ ಬೆಂಕಿ ನಂದಿಸುವಾಗ ಬೆಂಕಿಯಲ್ಲಿ ಉರಿಯುತ್ತಿದ್ದ ಶವ ಪತ್ತೆಯಾಗಿದೆ. ಈ ಬಗ್ಗೆ ಅಗ್ನಿಶಾಮದ ದಳ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ, ಶವವನ್ನು ಬೆಡ್‌ರೂಮ್‌ನಿಂದ ಶೌಚಾಲಯಕ್ಕೆ ಎಳೆದೊಯ್ದಿದ್ದು, ನೆಲಕ್ಕೆ ರಕ್ತ ಅಂಟಿವೆ. ಸ್ಥಳದಲ್ಲಿ ಖಾಲಿ ಮೂರು ಬಾಟಲಿಗಳು ಸಿಕ್ಕಿವೆ. ಗೋಡೆಯೆಲ್ಲಾ ರಕ್ತದ ಕಲೆಗಳು ಆಗಿವೆ. ಬೆಂಕಿ ಉರಿಯುತ್ತಿದ್ದ ವೇಳೆ ಮನೆಯಲ್ಲಿ ಜೈರಾಮ್ ಅವರ ಪುತ್ರಿ ಹಾಗೂ ಆಕೆಯ ಸ್ನೇಹಿತ ಇದ್ದ ಎನ್ನಲಾಗುತ್ತಿದೆ. ಇವರಿಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪಾಂಡಿಚೇರಿಗೆ ಹೋಗಿರುವ ಮೃತನ ಪತ್ನಿ ಮತ್ತು ಆಕೆಯ ಸಹೋದರ ಆಗಮಿಸಿದ ಬಳಿಕ ಇನ್ನಷ್ಟುಮಾಹಿತಿ ಗೊತ್ತಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪುತ್ರಿಯ ಗೆಳೆಯನಿಂದ ಕೊಲೆ?
ಪೊಲೀಸ್ ಮೂಲಗಳ ಪ್ರಕಾರ ಜೈಕುಮಾರ್ ಅವರ ಪುತ್ರಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಗೆಳೆಯನೊಬ್ಬನಿದ್ದ. ಹೀಗಾಗಿ ಶನಿವಾರ ರಾತ್ರಿ ಆಕೆ ಮತ್ತು ಆಕೆಯ ಸ್ನೇಹಿತ ಹಾಗೂ ಇತರರ ಜತೆ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ. ಅದನ್ನು ಕಂಡ ಜೈಕುಮಾರ್ ಪುತ್ರಿಗೆ ಥಳಿಸಿದ್ದಾರೆ ಎನ್ನಲಾಗುತ್ತಿದೆ. ಅದೇ ವಿಚಾರಕ್ಕೆ ಜೈಕುಮಾರ್ ಅವರ ಕೊಲೆ ನಡೆದಿದೆ ಎನ್ನಲಾಗಿದೆ. ಜೈಕುಮಾರ್ ಅವರ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ ಇರಿದ ಗುರುತುಗಳಿವೆ. ಬಳಿಕ ಭಾನುವಾರ ಬೆಳಗ್ಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಕುಮಾರ್ ಅವರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಪತ್ತೆಯಾಗಿದ್ದು, ಮನೆಯ ಬೆಡ್‌ರೂಂ ಮತ್ತು ಕೆಳ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಜತೆಗೆ ಇತರೆ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ. ಜೈಕುಮಾರ್ ಅವರ ಪುತ್ರಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
-ಶಶಿಕುಮಾರ್, ಉತ್ತರ ವಿಭಾಗದ ಡಿಸಿಪಿ.