ಬಸವರಾಜ ಹಿರೇಮಠ
ಧಾರವಾಡ (ಸೆ.12) : ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಸೋಯಾಬೀನ್ ನೀರಲ್ಲಿ ನಿಂತು ಕೊಳೆಯುತ್ತಿದೆ. ಚೆಂದಾಗಿ ಬೆಳೆದಿದ್ದ ಗೋವಿನಜೋಳ ಜವುಳು ಹತ್ತುತ್ತಿದೆ. ಎಷ್ಟುನೀರಿದ್ದರೂ ಧಕ್ಕಿಸಿಕೊಳ್ಳುತ್ತಿದ್ದ ಕಬ್ಬು ಆಕಾರದಲ್ಲಿ ದೊಡ್ಡದಾಗಿ ಬೆಳೆದರೂ, ಗಣಕಿಯಲ್ಲಿ ಸೊರಗಿದೆ. ಹಾಗೆಯೇ ಸಾಕಷ್ಟುಪ್ರಮಾಣದಲ್ಲಿ ಬೆಳೆದ ತರಕಾರಿಯೂ ಅತಿಯಾದ ಮಳೆಯಿಂದ ಕೊಳೆಯುತ್ತಿದೆ...! ಇದು ಕಲಘಟಗಿ ತಾಲೂಕಿನ ಪ್ರಸ್ತುತ ಬೆಳೆಯ ಆರೋಗ್ಯದ ಸ್ಥಿತಿ. ಕಲಘಟಗಿ ತಾಲೂಕಿನಾದ್ಯಂತ ಪ್ರವಾಹ ಸೃಷ್ಟಿಯಾಗದೇ ಇದ್ದರೂ ನಿರಂತರ ಮಳೆಯಿಂದ ಸಂಪೂರ್ಣ ಬೆಳೆಹಾನಿಯಾಗಿದೆ. ಜತೆಜತೆಗೆ ನೂರಾರು ಮನೆಗಳು ಬಿದ್ದಿವೆ. ರಸ್ತೆ-ಸೇತುವೆ ಹಾಳಾಗಿವೆ. ರೈತರ, ಜನರ ಬದುಕು ಮೂರಾಬಟ್ಟೆಯಾಗಿದ್ದು, ಮುಂಗಾರು ಅನಿರೀಕ್ಷಿತ ಹಾನಿ ತಂದೊಡ್ಡಿದೆ.
ಧಾರವಾಡ: ಶೀಘ್ರದಲ್ಲೇ IIT Campus ಉದ್ಘಾಟನೆ - ಪ್ರಲ್ಹಾದ್ ಜೋಶಿ
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಶೇ. 40ರಷ್ಟುಬೆಳೆಹಾನಿಯಾಗಿತ್ತು. ಜತೆಗೆ ಸೋಯಾ ಇತರ ಬೆಳೆಗಳಿಗೆ ವಿವಿಧ ರೋಗಗಳು ಬಂದಿದ್ದವು. ಮಧ್ಯದಲ್ಲಿ ತುಸು ದಿನಗಳ ಕಾಲ ಬಿದ್ದ ಬಿಸಿಲಿನಿಂದ ಬೆಳೆಗಳು ಚೇತರಿಸಿಕೊಳ್ಳುವ ಹೊತ್ತಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೈ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ರೈತರಿಗೆ ಉಂಟಾಗಿದೆ. ಇನ್ನೊಂದು ವಾರದಲ್ಲಿ ಸೋಯಾ ಕೊಯ್ಲು ಮಾಡಬೇಕಿತ್ತು. ಮಳೆಯಿಂದ ಸೋಯಾ ಬೆಳೆ ಸಂಪೂರ್ಣ ನೀರಲ್ಲಿ ನಿಂತು ಕೊಳೆಯುವ ಹಂತಕ್ಕೆ ಬಂದಿದ್ದು, ರೈತರು ಮಮ್ಮುಲ ಮರಗುತ್ತಿದ್ದಾರೆ. ಪ್ರತಿ ಎಕರೆಗೆ .8ರಿಂದ .10 ಸಾವಿರ ಖರ್ಚು ಮಾಡಿದ್ದು ಶೇ. 25ರಷ್ಟುಮಾತ್ರ ಸೋಯಾ ಬೆಳೆ ಉಳಿದಿದೆ.
ಬಿಸಿಲಿಗೆ ಮೊರೆ: ಗೋವಿನಜೋಳದ ಸ್ಥಿತಿ ಬೇರಿಲ್ಲ. ನಿರಂತರವಾಗಿ ನೀರು ನಿಂತು ಬೆಳೆಯು ಜವಳು ಹಿಡಿದ ಸ್ಥಿತಿಯಲ್ಲಿವೆ. ಕಬ್ಬು ಉತ್ತಮವಾಗಿ ಬೆಳೆದರೂ ರಸ ಹಿಡಿಯದೇ ಬೆಂಡರಿಯುತ್ತಿವೆ. ತೋಟಗಾರಿಕೆ ಬೆಳೆಗಳಿಗೂ ಅತಿಯಾದ ಮಳೆಯಿಂದ ರೋಗಗಳು ಬಿದ್ದು ಆ ರೈತರು ಸಹ ಮಮ್ಮಲ ಮರಗುವಂತಾಗಿದೆ. ಈಗಲೇ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿದರೆ ಉತ್ತಮ. ಇಲ್ಲದೇ ಹೋದಲ್ಲಿ ಬೆಳೆಗಳೂ ಪೂರ್ತಿ ಹಾಳಾಗಲಿವೆ ಎಂದು ತಾಲೂಕಿನ ಮಡಕಿಹೊನ್ನಿಹಳ್ಳಿ, ಬೆಲವಂತರ, ಸಂಗೇದವರಕೊಪ್ಪ, ರಾಮನಾಳ, ಹಿರೇಹೊನ್ನಿಹಳ್ಳಿ, ದುಮ್ಮಾಡ, ಗಂಜಿಗಟ್ಟಿ, ಮಿಶ್ರಿಕೋಟಿ ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಮಹಾಮಳೆಗೆ ಬರೀ ಬೆಳೆ ಹಾನಿ ಮಾತ್ರವಲ್ಲದೇ ಸಾಕಷ್ಟುರೈತರ ಮನೆಗಳು ನೆಲಕ್ಕೆ ಉರುಳಿವೆ. ಮನೆಯಲ್ಲಿನ ದವಸ-ಧಾನ್ಯ ಹಾಳಾಗಿದೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಹೊಲಗಳಿಗೆ ಹೋಗಿ ಬರುವ ಸ್ಥಿತಿ ಕಲಘಟಗಿಯಲ್ಲಿಲ್ಲ. ಸಂಪೂರ್ಣ ಹೊಲಗಳಲ್ಲಿ ನೀರು ಇರುವುದರಿಂದ ಯಾವ ಚಟುವಟಿಕೆ ಮಾಡಲಾಗುತ್ತಿಲ್ಲ. ಇಷ್ಟಾಗಿಯೂ ಅತಿವೃಷ್ಟಿಯ ಪಟ್ಟಿಗೆ ಕಲಘಟಗಿ ತಾಲೂಕು ಸೇರಿಸಿಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಕೂಡಲೇ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ತಾಲೂಕನ್ನು ಸಹ ಅತಿವೃಷ್ಟಿಯ ಪಟ್ಟಿಯಲ್ಲಿ ಸೇರಿಸಬೇಕೆಂದು ತಾಲೂಕು ಮುಖಂಡರು ಆಗ್ರಹಿಸುತ್ತಾರೆ.
Dharwad Floods: ಕಾಳಜಿ ಕೇಂದ್ರಕ್ಕೆ 1050 ಜನರ ಸ್ಥಳಾಂತರ
ನಮ್ಮ ಶ್ರಮ ಹೊರತುಪಡಿಸಿ ಒಂದು ಎಕರೆ ಸೋಯಾ ಬೆಳೆಗೆ . 8ರಿಂದ .10 ಸಾವಿರ ವೆಚ್ಚ ಮಾಡಲಾಗಿದೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸೋಯಾ ಎರಡು ದೊಡ್ಡ ಮಳೆಗೆ ಸಿಕ್ಕು ಶೇ.25ರಷ್ಟುಮಾತ್ರ ಬೆಳೆ ಬದುಕುಳಿದಿದೆ. ಕೂಡಲೇ ಮಳೆ ತಗ್ಗಿದರೆ ಕೈಗೆ ಬರಬಹುದು. ಲಾಭವಿಲ್ಲದೇ ಹೋದರೂ ಖರ್ಚಾದರೂ ತೆಗೆಯಬಹುದು. ಇಲ್ಲದೇ ಹೋದಲ್ಲಿ ರೈತರು ತುಂಬ ನಷ್ಟಅನುಭವಿಸುತ್ತಾರೆ.
ಸಿದ್ರಾಮಯ್ಯ ಪಟದಯ್ಯನವರ, ಮಡಕಿಹೊನ್ನಿಹಳ್ಳಿ ರೈತ
ಇನ್ನೆಂಟು ದಿನಗಳಲ್ಲಿ ಸೋಯಾ ಪೀಕಿನ ಹಣ ಎಣಿಸುತ್ತಿದ್ದೆ. ಆ ಹಣದಲ್ಲಿ ಹೊಟ್ಟೆತುಂಬಿಸಿಕೊಳ್ಳಬೇಕಾದ ನಾನು ಬೆಳೆ ಹಾನಿಯಿಂದಾಗಿ ಮತ್ತೆ ಸಾಲ ಸೋಲ ಮಾಡಿ ಕುಟುಂಬ ನಡೆಸಬೇಕಾದ ಸ್ಥಿತಿ ಬಂದಿದೆ. ಹೊಲದಲ್ಲಿ ಕಾಲಿಡಲಾಗದಷ್ಟುನೀರು ನಿಂತಿದೆ. ಕಣ್ಮುಂದೆ ಬೆಳೆದು ನಿಂತ ಬೆಳೆ ಕೊಳೆಯುತ್ತಿದ್ದು ಸಂಕಟ ಆಗುತ್ತಿದೆ. ಸರ್ಕಾರದಿಂದ ಬೆಳೆ ಪರಿಹಾರದ ಮೂಲಕ ರೈತರಿಗೆ ಸಹಕಾರ ಒದಗಿಸಬೇಕಿದೆ.
ಕಲ್ಮೇಶ ಗಡಾದ, ಕಲಘಟಗಿ ರೈತ