ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಾಸ್ ಆಗಿದೆ. ಈ ದೋಸ್ತಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ಮುಂದುವರೆಯಲಿರುವುದು ಕಾಂಗ್ರೆಸ್ ಪಾಳಯವನ್ನು ಚಿಂತೆಗೀಡು ಮಾಡಿದೆ
ಎಂ.ಅಫ್ರೋಜ್ ಖಾನ್
ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಾಸ್ ಆಗಿದೆ. ಈ ದೋಸ್ತಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ಮುಂದುವರೆಯಲಿರುವುದು ಕಾಂಗ್ರೆಸ್ ಪಾಳಯವನ್ನು ಚಿಂತೆಗೀಡು ಮಾಡಿದೆ.
ವಿಧಾನ ಪರಿಷತ್‌ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಸೋಲಿಸಿರಬಹುದು. ಆದರೆ, ಈಗಳು ಶಿಕ್ಷಕರು ಮತ್ತು ಪದವೀಧರ ವರ್ಗಕ್ಕಷ್ಟೇ ಸೀಮಿತವಾಗಿತ್ತು. ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಿ ಆದ ಸೋಲನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಸಹ ಸಂಸತ್ ಸಮರದ ಫಲಿತಾಂಶ ಕೊಟ್ಟ ಆಘಾತದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊರ ಬರಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಮೇಲೂ ಬೀರುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸದೆ ಹೋಗಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕ ಇತ್ತು. ಆದರೀಗ ಕಾಂಗ್ರೆಸ್ ನ ಭದ್ರಕೋಟೆಯನ್ನು 26 ವರ್ಷಗಳ ತರುವಾಯ ಜೆಡಿಎಸ್ ಸಹಕಾರದಿಂದ ಭೇದಿಸಿ, ಕಮಲ ಅರಳಿಸುವಲ್ಲಿ ಬಿಜೆಪಿ ಪಕ್ಷ ಯಶಸ್ವಿಯಾಗಿದೆ. ಈ ದೋಸ್ತಿಯಲ್ಲಿಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಿ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಚರ್ಚೆಗಳು ಆರಂಭಗೊಂಡಿವೆ.
ಕೈ ಪಾಳಯದಲ್ಲಿ ಆತಂಕ :
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಹಣಾಹಣಿ ನಡೆಯುತ್ತಿತ್ತು. ಇಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಂತಹ ಪ್ರಬಲ ನಾಯಕರಿದ್ದರೂ ಸಹ ಬಿಜೆಪಿ ಪಕ್ಷ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿತ್ತು. ಈಗ ಲೋಕಸಭಾ ಚುನಾವಣೆ ಗೆಲುವು ಹಾಗೂ ಜೆಡಿಎಸ್ ಬೆಂಬಲ ಬಿಜೆಪಿಗೆ ಬಲ ತಂದುಕೊಟ್ಟಿದೆ.
ಹೀಗಾಗಿ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಬಿಜೆಪಿ - ಜೆಡಿಎಸ್ ಪಕ್ಷ ಸ್ಥಾನ ಹಂಚಿಕೆ ಮಾಡಿಕೊಂಡು ಕಣಕ್ಕಿಳಿಯುವುದು ಗ್ಯಾರಂಟಿಯಾಗಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಪ್ರಬಲ ಪೈಪೋಟಿಯನ್ನೇ ಎದುರಿಸಬೇಕಾಗುತ್ತದೆ.
‘ಲೋಕ’ ಸೋಲಿಗೆ ಠಕ್ಕರ್ ಕೊಡಲು ತಂತ್ರ:
ಈಗ ಲೋಕಸಭಾ ಚುನಾವಣೆ ಸೋಲಿನಿಂದ ಸಹೋದರರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಕೆರಳಿ ಕೆಂಡವಾಗಿದ್ದಾರೆ. ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ, ಜಿಪಂ - ತಾಪಂ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಿತ್ರ ಪಕ್ಷಗಳ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ತವಕ ಪಡುತ್ತಿದ್ದಾರೆ. ಇದಕ್ಕಾಗಿ ಭಾರೀ ಕಾರ್ಯತಂತ್ರವನ್ನೇ ರೂಪಿಸುವ ಸಾಧ್ಯತೆಗಳಿವೆ.
ಹಾಗೊಂದು ವೇಳೆ ಕೇಂದ್ರ ಸರ್ಕಾರದಲ್ಲಿ ನೂತನ ಸಂಸದರಾದ ಎಚ್ .ಡಿ.ಕುಮಾರಸ್ವಾಮಿ ಹಾಗೂ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಸಚಿವ ಸ್ಥಾನಗಳು ಲಭಿಸಿದರೆ ಉಭಯ ಪಕ್ಷಗಳಿಗೆ ಹೆಚ್ಚಿನ ಶಕ್ತಿ ತುಂಬಿದಂತಾಗಲಿದ್ದು, ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಇಮ್ಮಡಿಗೊಳ್ಳಲಿದೆ. ಇದರ ಜೊತೆಗೆ ಡಾ.ಸಿ.ಎನ್ .ಮಂಜುನಾಥ್ ರವರ ವರ್ಚಸ್ಸನ್ನು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಳಸಿಕೊಳ್ಳಲು ಮಿತ್ರ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.
ಪಕ್ಷ ಸಂಘಟನೆಯ ಬಲವರ್ಧನೆ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ - ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲ್ಲುವುದು ಮತ್ತು ಅಧಿಕಾರ ಹಿಡಿಯುವುದೂ ಮುಖ್ಯವಾಗುತ್ತದೆ. ಸ್ಥಳೀಯ ನಾಯಕತ್ವ ಬೆಳೆಸುವುದಕ್ಕೆ ಈ ಚುನಾವಣೆ ಮೂರು ಪಕ್ಷಗಳಿಗೆ ಮಹತ್ವದ್ದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದು ಒಂದು ವರ್ಷ ಕಳೆದಿದೆ. ಅವರ ಸರ್ಕಾರದ ಬಗ್ಗೆ ಜನರ ನಾಡಿಮಿಡಿತ ಏನೆಂದು ಅರಿಯಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ಅಗ್ನಿಪರೀಕ್ಷೆ . ಸ್ಥಳೀಯ ಸಂಸ್ಥೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಮೂಲಕ ಜನ ನಮ್ಮ ಪರವಾಗಿದ್ದಾರೆಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಮೂರು ಪಕ್ಷಗಳಿಗೂ ಇದೆ.
------------------
ಜಿಪಂ 28, ತಾಪಂ 81 ಕ್ಷೇತ್ರಗಳು
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಹೆಚ್ಚಳ ಮಾಡಿದರೆ, 81 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಯಥಾಸ್ಥಿತಿ ಉಳಿಸಿದೆ.
ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 22 ರಿಂದ 28ಕ್ಕೆ ಏರಿಕೆಯಾಗಲಿದೆ. ಇನ್ನು ಕ್ಷೇತ್ರ ಪುನರ್ ವಿಂಗಡಣೆಯಲ್ಲಿ 16 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿತ್ತು. ಆದರೀಗ 5 ತಾಲೂಕುಗಳಿಂದ 81 ತಾಲೂಕು ಪಂಚಾಯಿತಿಗಳ ಕ್ಷೇತ್ರಗಳನ್ನು ಉಳಿಸಿಕೊಳ್ಳಲಾಗಿದೆ.
ಈ ಮೊದಲು ರಾಜ್ಯ ಚುನಾವಣಾ ಆಯೋಗದ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ 2 ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾದರೆ, 16 ತಾಪಂ ಕ್ಷೇತ್ರಗಳ ಸಂಖ್ಯೆ ಕಡಿತಗೊಳಿಸಿತ್ತು. ಅಲ್ಲದೆ, ಆಯೋಗ ಕ್ಷೇತ್ರಗಳ ಕರಡು ಮೀಸಲಾತಿಯನ್ನು ಪ್ರಕಟಿಸಿತ್ತು.
ಜಿಪಂ ಮತ್ತು ತಾಪಂ ಚುನಾವಣೆಗೆ ಪೂರಕವಾಗಿ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕ್ಷೇತ್ರದ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಮಾಡಿತ್ತು. ಆದರೆ, ಈ ಪುನರ್ ವಿಂಗಡಣೆ ಕಾರ್ಯ ಸರಿಯಾಗಿ ನಡೆದಿಲ್ಲ ಎಂದು ರಾಜ್ಯ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿತ್ತು.
ಅಲ್ಲದೆ, ಕಾನೂನು ತಿದ್ದುಪಡಿ ಮಾಡುವ ಮೂಲಕ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿತು.
ಈಗಾಗಲೇ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಒಟ್ಟಾರೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ವಾರ್ಡ್‌ಗಳ ಮೀಸಲಾತಿ ಮಾತ್ರ ಅಂತಿಮಗೊಂಡಿಲ್ಲ. ಈಗ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಇದೆ.
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ
- ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಡಿಕೆ ಸಹೋದರರಿಗೆ ಪ್ರತಿ ಚುನಾವಣೆಯೂ ಪ್ರತಿಷ್ಠೆಯ ವಿಷಯ. ಒಂದೊಮ್ಮೆ ಹಿನ್ನಡೆ ಉಂಟಾದರೆ ಬೇರೆ ಸಂದೇಶ ಹೋಗಲಿದೆ. ಭವಿಷ್ಯದ ರಾಜಕೀಯ ಸವಾಲಾಗಿದೆ. ಈ ಕಾರಣಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಕಾಂಗ್ರೆಸ್ ಪಾಲಿಗೆ ಅತಿಮುಖ್ಯವಾಗಿದೆ.
-ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿಗೆ ಲೋಕಸಭಾ ಚುನಾವಣೆ ಗೆಲುವು ಹೊಸ ಚೈತನ್ಯ ತಂದುಕೊಟ್ಟಿದೆ. ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಲು ಜಿಪಂ - ತಾಪಂ ಚುನಾವಣೆ ಅತಿ ಮುಖ್ಯ. ಹಾಗೆಯೇ ಬಿಜೆಪಿ ನಾಯಕರಿಗೆ ಸ್ವಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಗಲಿದೆ.
-ಇನ್ನು ಜಿಲ್ಲೆಯಲ್ಲಿ ದಳಪತಿಗಳು ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸುವರ್ಣಾವಕಾಶ. ಬಿಜೆಪಿ ಹಾಗೂ ಕಾಂಗ್ರೆಸ್‌ನಂತೆಯೆ ತನ್ನದೇ ಆದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಗೆಲ್ಲಿಸಿಕೊಂಡು ತನ್ನ ಸಾಮರ್ಥ್ಯ ಸಾಬೀತು ಪಡಿಸುವುದಕ್ಕೆ ಸುಸಮಯ.
ಈ ಎಲ್ಲಾ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ.