Dharwad News: ಭರವಸೆಯ ಬೆಳಕಾದ ಗ್ರಾಹಕರ ಆಯೋಗ!

By Kannadaprabha News  |  First Published Dec 23, 2022, 8:09 AM IST
  • ಭರವಸೆ ಬೆಳಕಾದ ಗ್ರಾಹಕರ ಆಯೋಗ!
  • ವಸ್ತು ಖರೀದಿಸಿ ಮೋಸಕ್ಕೊಳಗಾದವರಿಂದ ಆಯೋಗಕ್ಕೆ ದೂರು
  • ಆರು ತಿಂಗಳಲ್ಲಿ 201 ಪ್ರಕರಣ ಇತ್ಯರ್ಥ, ಗ್ರಾಹಕರಿಗೆ .15.41 ಕೋಟಿ ಪರಿಹಾರ
  • ನ್ಯಾಯಾಧೀಶರಾದ ಈಶಪ್ಪ ಭೂತೆ, ಸದಸ್ಯರಿಬ್ಬರ ಪ್ರಯತ್ನದಿಂದ ಗ್ರಾಹಕರಿಗೆ ನ್ಯಾಯ

ಬಸವರಾಜ ಹಿರೇಮಠ

ಧಾರವಾಡ (ಡಿ.23) : ಸಾಮಾನ್ಯವಾಗಿ ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಈ ವರೆಗೂ ಜಾಗೃತಿ ಕಡಿಮೆ. ತಾವು ಖರೀದಿಸಿದ ವಸ್ತುವಿನ ಗುಣಮಟ್ಟಅಥವಾ ಸೇವೆಯಲ್ಲಿ ಅತೃಪ್ತಿ ಉಂಟಾದಲ್ಲಿ ಗ್ರಾಹಕರಿಗಾಗಿಯೇ ಒಂದು ನ್ಯಾಯಾಲಯವಿದ್ದು, ಅಲ್ಲಿ ವಸ್ತುವಿನ ಗುಣಮಟ್ಟಅಥವಾ ಸೇವೆಯನ್ನು ಪ್ರಶ್ನಿಸುವ ಮತ್ತು ಪರಿಹಾರ ಪಡೆಯುವ ಮನೋಭಾವ ಗ್ರಾಹಕರಿಗೆ ಅಷ್ಟುಪ್ರಮಾಣದಲ್ಲಿ ಇನ್ನೂ ಬಂದಿಲ್ಲ.

Tap to resize

Latest Videos

ಈ ಮೊದಲಿದ್ದ ಗ್ರಾಹಕರ ಸಂರಕ್ಷಣಾ ಕಾಯ್ದೆ ತಿದ್ದುಪಡಿ ತಂದು 2019ರಲ್ಲಿ ನೂತನ ಕಾಯ್ದೆ ಫಲವಾಗಿ ಇತ್ತೀಚಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಗ್ರಾಹಕರ ಹಕ್ಕುಗಳ ವಿಷಯದಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬಂದಿದೆ. ಆಯೋಗವು ಗ್ರಾಹಕರಿಗೆ ಅಕ್ಷರಶಃ ಭರವಸೆಯ ಬೆಳಕಾಗಿದೆ. ಮೋಸ ಹೋದ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿ ನ್ಯಾಯದ ಜತೆಗೆ ಪರಿಹಾರವನ್ನು ಪಡೆಯಬಹುದು ಎಂಬುದನ್ನು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ತೋರಿಸಿಕೊಟ್ಟಿದ್ದಾರೆ. ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ 21ರ ವರೆಗೆ ಒಟ್ಟು 243 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನವೆಂಬರ್‌ ಅಂತ್ಯದ ವರೆಗೆ 201 ಪ್ರಕರಣಗಳನ್ನು ಇತ್ಯರ್ಥಪಡಿಸಿ .15.41 ಕೋಟಿಗಳ ಪರಿಹಾರವನ್ನು ಗ್ರಾಹಕರಿಗೆ ಕೊಡಿಸಿದ್ದು ವ್ಯವಸ್ಥೆಯ ಸುಧಾರಣೆಗೆ ಹಿಡಿದ ಕನ್ನಡಿ.

ಹಣ ಪಡೆದು ಮನೆ ಕಟ್ಟಿಕೊಡದ ಬಿಲ್ಡರ್; ಬಡ್ಡಿ ಸಮೇತ ಪರಿಹಾರ, ದಂಡ ಕೊಡಲು ಆದೇಶಿಸಿದ ಕೋರ್ಟ್

ಪ್ರಸ್ತುತ ಗ್ರಾಹಕನ ಅವಶ್ಯಕತೆ ಮತ್ತು ಅಭಿಲಾಷೆ ಪೂರೈಸಲು ನಾ ಮುಂದು ತಾ ಮುಂದು ಎಂದು ಹತ್ತಾರು ಕಂಪನಿಗಳು ಪೈಪೋಟಿಗೆ ಬಿದ್ದಿವೆ. ಕಡಿಮೆ ದರದ ಆಸೆ ಹುಟ್ಟಿಸಿ ಗ್ರಾಹಕರನ್ನು ಸೆಳೆದು ವಂಚಿಸುವ ಕೆಲಸ ನಡೆದಿದೆ. ಆದರೆ, ವಂಚನೆಗೊಳಗಾದ ಬಹುತೇಕ ಗ್ರಾಹಕರಿಗೆ ಪರಿಹಾರ ಪಡೆಯುವ ಮಾರ್ಗ ಗೊತ್ತಿರಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಕೋಟ್ಯಂತರ ರುಪಾಯಿ ಪರಿಹಾರ ಕೊಡಿಸಿ ಗ್ರಾಹಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಏಪ್ರಿಲ್‌ನಿಂದ ಡಿ. 21ರ ವರೆಗೆ ಆಯೋಗದಲ್ಲಿ ಬ್ಯಾಂಕ್‌, ಬೆಳೆ ವಿಮೆ, ಬಿಲ್ಡ​ರ್‍ಸ್, ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಂಚನೆಗೊಳಗಾದ ಕುರಿತು ಒಟ್ಟು 243 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನವೆಂಬರ್‌ ಅಂತ್ಯಕ್ಕೆ 201 ಪ್ರಕರಣಗಳನ್ನು ಇತ್ಯರ್ಥಗೊಳಿಸಿ .15,41,30,500 ಪರಿಹಾರ ಕೊಡಿಸಿದೆ. ಇದಲ್ಲದೆ ಮೋಸವಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಗ್ರಾಹಕರಿಗೆ ಚಾಟಿ ಏಟು ಸಹ ಬೀಸಿದೆ.

ಆಯೋಗದ ವ್ಯಾಪ್ತಿ ಏನು?

ದೂರುಗಳನ್ನು ಪಡೆದುಕೊಳ್ಳುವ ಅಧಿಕಾರ ವ್ಯಾಪ್ತಿ ಪರಿಗಣನೆಯು ಸರಕು ಮೌಲ್ಯದ ಮೇಲೆ ಅವಲಂಬಿತವಾಗಿದೆ. .50 ಲಕ್ಷ ಮೀರದ ಪ್ರಕರಣಗಳನ್ನು ಜಿಲ್ಲಾ ಗ್ರಾಹಕರ ಆಯೋಗ ವಿಲೆವಾರಿಗೊಳಿದರೆ, .50 ಲಕ್ಷದಿಂದ .1 ಕೋಟಿ ವರೆಗಿನ ಸರಕು ಮತ್ತು ಸೇವಾ ಸಂಬಂಧಿತ ದೂರುಗಳನ್ನು ರಾಜ್ಯ ಆಯೋಗ ಹಾಗೂ .1 ಕೋಟಿಗಿಂತ ಮೀರಿದ ಸರಕು ಮೌಲ್ಯವುಳ್ಳ ಪ್ರಕರಣಗಳನ್ನು ರಾಷ್ಟ್ರೀಯ ಗ್ರಾಹಕರ ಆಯೋಗ ಪರಿಗಣಿಸುತ್ತದೆ. ಗ್ರಾಹಕರು ತಮ್ಮ ದೂರನ್ನು ಎರಡು ವರ್ಷಗಳ ನಿಗದಿತ ಅವಧಿಯಲ್ಲಿ ಕಾಯಿದೆ ಅನ್ವಯ ಸಂಬಂಧಿಸಿದ ಜಿಲ್ಲಾ ಆಯೋಗದಲ್ಲಿ ದೂರು ದಾಖಲಿಸಬೇಕು. ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಿ ಮಾರ್ಗದರ್ಶನ ನೀಡಿರುವ ಆಯೋಗ, ವಕೀಲರನ್ನು ನೇಮಿಸಿಕೊಳ್ಳಲು ಗ್ರಾಹಕರಿಗೆ ಒತ್ತಾಯಿಸದೆ, ಸ್ವತಃ ವಾದ ಮಂಡಿಸಲು ಸಹ ಅವಕಾಶ ನೀಡಲಿದೆ ಎನ್ನುವುದು ಗಮನಾರ್ಹ.

ಇ ಕಾಮರ್ಸ್‌ಗೆ ಕೇಂದ್ರದ ಮೂಗುದಾರ: ಹಣ ಕೊಟ್ಟು ರಿವ್ಯೂ ಬರೆಸಿದರೆ ‘ಪೇಯ್ಡ್‌’ ನಮೂದು ಕಡ್ಡಾಯ

ಗ್ರಾಹಕರಿಗಾಗಿ ಶ್ರಮಿಸುತ್ತಿದೆ ಆಯೋಗ:

ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಆಯೋಗ ಶ್ರಮಿಸುತ್ತಿದೆ. ಗ್ರಾಹಕರು ಮೋಸ ಹೋದಲ್ಲಿ ದೂರು ನೀಡಿ ನ್ಯಾಯ ಪಡೆದುಕೊಳ್ಳಲು ಈ ವ್ಯವಸ್ಥೆ ತರಲಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಯೋಗದಿಂದ ನಡೆಯುತ್ತಿದೆ. ಮಾ. 15ರಂದು ವಿಶ್ವ ಮಟ್ಟದಲ್ಲಿ ಹಾಗೂ ಡಿ. 24ರಂದು ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ದಿನ ಆಚರಿಸಲಾಗುತ್ತಿದ್ದು, ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿ ಗ್ರಾಹಕರು ಅದರ ಪ್ರಯೋಜನ ಪಡೆಯಬೇಕು.

ಈಶಪ್ಪ ಭೂತೆ, ಗ್ರಾಹಕರ ಆಯೋಗದ ಅಧ್ಯಕ್ಷರು

click me!