ತೆರಿಗೆ ಭಾರಿ ಏರಿಕೆ: ಕಾಂಗ್ರೆಸ್‌ನಿಂದ ಹೋರಾಟದ ಎಚ್ಚರಿಕೆ

Kannadaprabha News   | Asianet News
Published : Jun 17, 2020, 09:03 AM ISTUpdated : Jun 17, 2020, 09:09 AM IST
ತೆರಿಗೆ ಭಾರಿ ಏರಿಕೆ: ಕಾಂಗ್ರೆಸ್‌ನಿಂದ ಹೋರಾಟದ ಎಚ್ಚರಿಕೆ

ಸಾರಾಂಶ

ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಘನತ್ಯಾಜ್ಯ ವಿಲೇವಾರಿ ಕರವನ್ನು ವರ್ಷಕ್ಕೆ ಕನಿಷ್ಠ 600 ರು.ಗಳಷ್ಟುಭಾರೀ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯನ್ನು ಕೂಡಲೆ ನಿಲ್ಲಿಸಿ, ಮೊದಲಿನಷ್ಟೆ180 ರು. ಕರ ಸಂಗ್ರಹ ಮಾಡಬೇಕು. ಇಲ್ಲದಿದ್ದರೆ ಪಾಲಿಕೆಯ ಒಳಗೂ, ಹೊರಗೂ ತೀವ್ರ ಹೋರಾಟ ನಡೆಸುವುದಾಗಿ ಪಾಲಿಕೆಯ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು(ಜೂ.17): ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಘನತ್ಯಾಜ್ಯ ವಿಲೇವಾರಿ ಕರವನ್ನು ವರ್ಷಕ್ಕೆ ಕನಿಷ್ಠ 600 ರು.ಗಳಷ್ಟುಭಾರೀ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯನ್ನು ಕೂಡಲೆ ನಿಲ್ಲಿಸಿ, ಮೊದಲಿನಷ್ಟೆ180 ರು. ಕರ ಸಂಗ್ರಹ ಮಾಡಬೇಕು. ಇಲ್ಲದಿದ್ದರೆ ಪಾಲಿಕೆಯ ಒಳಗೂ, ಹೊರಗೂ ತೀವ್ರ ಹೋರಾಟ ನಡೆಸುವುದಾಗಿ ಪಾಲಿಕೆಯ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್‌ ರವೂಫ್‌, ಲಾಕ್‌ಡೌನ್‌ನಿಂದಾಗಿ ಜನರು ಉದ್ಯೋಗ, ಆದಾಯವಿಲ್ಲದೆ ತೀವ್ರ ಬವಣೆಪಡುತ್ತಿದ್ದಾರೆ. ಇಂಥ ಸಮಯದಲ್ಲೇ ಘನತ್ಯಾಜ್ಯ ವಿಲೇವಾರಿ ಕರವನ್ನು ಶೇ.230ರಷ್ಟುಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಉಳ್ಳಾಲದಲ್ಲಿ ಹೆಚ್ಚಿದ ಕಡಲ್ಕೊರೆತ: ಮನೆ ಸಮುದ್ರಪಾಲು, ಇಲ್ಲಿವೆ ಫೋಟೋಸ್

ತ್ಯಾಜ್ಯ ಸಂಗ್ರಹ ಗುತ್ತಿಗೆ ಪಡೆದ ಆಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ಗೆ ನೀಡುವಷ್ಟುಹಣ ಪಾಲಿಕೆಯ ಬಜೆಟ್‌ನಲ್ಲಿ ಇರಲಿಲ್ಲ. ಹಾಗಾಗಿ ಘನತ್ಯಾಜ್ಯ ವಿಲೇವಾರಿ ಕರದಿಂದ ಈ ಪೇಮೆಂಟ್‌ ಮಾಡುವಂತೆ 2013-14ರಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಆಂಟನಿ ವೇಸ್ಟ್‌ ಕಂಪೆನಿ ಸರಿಯಾಗಿ ತ್ಯಾಜ್ಯ ಸಂಗ್ರಹ ಮಾಡದಿದ್ದುದರಿಂದ ಕಾರ್ಯಗತ ಮಾಡಿರಲಿಲ್ಲ. 2015-16ರಲ್ಲಿ ತ್ಯಾಜ್ಯ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಕರವನ್ನು ತಿಂಗಳಿಗೆ ಕನಿಷ್ಠ 30 ರು. ನಿಗದಿಪಡಿಸಿದ್ದೆವು. ವಿರೋಧದ ಬಳಿಕ 15 ರು.ಗೆ (ವಾರ್ಷಿಕ 180 ರು.) ಇಳಿಸಿದ್ದೆವು. ಇದೀಗ ಏಕಾಏಕಿ ತಿಂಗಳಿಗೆ 60 ರು. ನಿಗದಿ ಮಾಡಿದ್ದು ಅವೈಜ್ಞಾನಿಕ ಎಂದು ಅವರು ರವೂಫ್‌ ಆರೋಪಿಸಿದರು.

ಕೌನ್ಸಿಲ್‌ ಸಭೆ ಆಗಲಿ: ಕಾರ್ಪೊರೇಟರ್‌ ಶಶಿಧರ ಹೆಗ್ಡೆ ಮಾತನಾಡಿ, ತ್ಯಾಜ್ಯ ತೆರಿಗೆ ಸೇರಿದಂತೆ ನೀರಿನ ಕರವನ್ನೂ ಏರಿಕೆ ಮಾಡಬಾರದು. ಕರವನ್ನು ಇಂತಿಷ್ಟೇ ಸಂಗ್ರಹಿಸಬೇಕು ಎನ್ನುವ ಸರ್ಕಾರ ಮಾರ್ಗಸೂಚಿ ಇಲ್ಲ. ಸ್ಥಳೀಯಾಡಳಿತಕ್ಕೆ ಅದರ ಅಧಿಕಾರ ನೀಡಲಾಗಿದೆ. ಜನರಿಗೆ ಹೊರೆಯಾಗುವಷ್ಟುಕರ ಏರಿಸಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈ ಕುರಿತು ಚರ್ಚಿಸಲು ಪಾಲಿಕೆ ಕೌನ್ಸಿಲ್‌ ಸಭೆಯನ್ನೇ ಕರೆಯುತ್ತಿಲ್ಲ ಎಂದು ಆರೋಪಿಸಿದರು.

ಹೆಬ್ಬಾವಿನ ಮರಿ ರಕ್ಷಿಸಿದ ಪೇಜಾವರ ಶ್ರೀ

ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್‌ ಪಿಂಟೊ, ಎಸಿ ವಿನಯರಾಜ್‌, ಪ್ರವೀಣ್‌ ಚಂದ್ರ ಆಳ್ವ, ಭಾಸ್ಕ ಕೆ., ನವೀನ್‌ ಡಿಸೋಜಾ, ಅನಿಲ್‌ ಕುಮಾರ್‌, ಅಶ್ರಫ್‌, ಸಂಶುದ್ದೀನ್‌, ಝೀನತ್‌ ಮತ್ತಿತರರಿದ್ದರು.

ಪರಿಷ್ಕೃತ ಕರ ಎಷ್ಟು?

500 ಚದರ ಅಡಿಯ ಮನೆ ಇದ್ದರೆ ತಿಂಗಳಿಗೆ 50 ರು., 500 ಚ.ಅಡಿಯಿಂದ 1000 ಚ.ಅಡಿ ವಿಸ್ತೀರ್ಣದ ಮನೆಗೆ 75 ರು., 1001ರಿಂದ 1500 ಚ.ಅಡಿ ವಿಸ್ತೀರ್ಣಕ್ಕೆ 100 ರು., 1501ರಿಂದ 2000 ಚ.ಅಡಿ ವಿಸ್ತೀರ್ಣಕ್ಕೆ 125 ರು., 2001ರಿಂದ 3000 ಚ.ಅಡಿ ವಿಸ್ತೀರ್ಣಕ್ಕೆ 150 ರು., 3001 ಚ.ಅಡಿ ವಿಸ್ತೀರ್ಣಕ್ಕಿಂತ ಹೆಚ್ಚಿದ್ದರೆ ಪ್ರತಿ ಸಾವಿರ ಚ.ಅಡಿ ವಿಸ್ತೀರ್ಣಕ್ಕೆ ಶೇ.10ರಷ್ಟುಹೆಚ್ಚುವರಿ ಶುಲ್ಕವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ವಸತಿ ರಹಿತ ಆಸ್ತಿ 500 ಚ.ಅಡಿಗಿಂತ ಕಡಿಮೆ ವಿಸ್ತೀರ್ಣವಿದ್ದರೆ 250 ರು., ಕೈಗಾರಿಕಾ ಪ್ರದೇಶಗಳಿಗೆ ಕನಿಷ್ಠ 500 ರು. (ವಿಸ್ತೀರ್ಣ ಹೆಚ್ಚಿದಂತೆ ಶುಲ್ಕವೂ ಏರಿಕೆ) ನಿಗದಿಪಡಿಸಲಾಗಿದೆ.

PREV
click me!

Recommended Stories

ನಾಳೆ ಬೆಂಗಳೂರಿನ ಹಲೆವೆಡೆ ಪವರ್ ಕಟ್, ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ