Uttara Kannada; ಆರ್.ವಿ. ದೇಶ್‌ಪಾಂಡೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ

By Suvarna News  |  First Published Jul 25, 2022, 9:14 PM IST

ಪರಿಸರ ಸೂಕ್ಷ್ಮ ವಲಯ ರಕ್ಷಣೆಗಾಗಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಅನ್ವಯ ಉತ್ತರಕನ್ನಡ ಜಿಲ್ಲೆಯ ಹಲವು ವ್ಯಾಪ್ತಿಗಳನ್ನು ಕೂಡಾ ಸೇರಿಸಿ ಕರಡು ಅಧಿಸೂಚನೆ ಹೊರಡಿಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.  


ವರದಿ:  ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್

ಉತ್ತರಕನ್ನಡ (ಜು.25): ಪರಿಸರ ಸೂಕ್ಷ್ಮ ವಲಯ ರಕ್ಷಣೆಗಾಗಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಅನ್ವಯ ಉತ್ತರಕನ್ನಡ ಜಿಲ್ಲೆಯ ಹಲವು ವ್ಯಾಪ್ತಿಗಳನ್ನು ಕೂಡಾ ಸೇರಿಸಿ ಕರಡು ಅಧಿಸೂಚನೆ ಹೊರಡಿಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ. ದೇಶ್‌ಪಾಂಡೆ ನೇತೃತ್ವದಲ್ಲಿ ಇಂದು ಜಿಲ್ಲೆಯ‌‌ ಜೊಯಿಡಾದಲ್ಲಿ ಪ್ರತಿಭಟನೆ ನಡೆದಿದ್ದು, ಅವೈಜ್ಞಾನಿಕವಾಗಿರುವ ವರದಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳಬಾರದು ಎಂದು ಒತ್ತಾಯಿಸಲಾಗಿದೆ.  ಕೇಂದ್ರ ಸರಕಾರವು ಕಸ್ತೂರಿ ರಂಗನ್ ವರದಿಯ ಅನ್ವಯ ಕರ್ನಾಟಕ‌ ರಾಜ್ಯ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56,825ಚದರ ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಅಲ್ಲದೇ, ಈ ಸಂಬಂಧ ಕರಡು ಅಧಿಸೂಚನೆ ಕೂಡಾ ಹೊರಡಿಸಲಾಗಿದೆ.‌ ಕರ್ನಾಟಕ ರಾಜ್ಯದ 10 ಜಿಲ್ಲೆಗಳ 1572 ಗ್ರಾಮಗಳನ್ನು ಅಂದ್ರೆ ಸುಮಾರು 206681 ಚದರ‌ ಕಿ.ಮೀ. ಪ್ರದೇಶ ಈ ಯೋಜನೆಯ ಒಳಪಡಲಿದೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಗ್ರಾಮಗಳು ಸೇರ್ಪಡೆಗೊಂಡಿದೆ.

Tap to resize

Latest Videos

ಇದರಿಂದ ಆಕ್ರೋಶಗೊಂಡಿರುವ ಜಿಲ್ಲೆಯ ಜನರು ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯನ್ವಯ ಯೋಜನೆ ಜಾರಿಗೊಳ್ಳಬಾರದು ಎಂದು ಹೋರಾಟ ಪ್ರಾರಂಭಿಸಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶ್‌ಪಾಂಡೆ ನೇತೃತ್ವದಲ್ಲಿ ಇಂದು ಹಳಯಾಳ- ಜೊಯಿಡಾ ಕ್ಷೇತ್ರದ ಜನರಿಂದ ಜಿಲ್ಲೆಯ ಜೊಯಿಡಾದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಭಾರಿ ಪ್ರತಿಭಟನೆ ನಡೆದಿದ್ದು, ಕಸ್ತೂರಿ ರಂಗನ್‌ಗೆ ಜನರು ಧಿಕ್ಕಾರ ಕೂಗಿದ್ದಾರೆ.

ಜೊಯಿಡಾದ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ವಿವಿಧ ಘೋಷಣೆಗಳೊಂದಿಗೆ ತಹಶೀಲ್ದಾರ್ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿದ್ದು, ಬಳಿಕ ತಹಶೀಲ್ದಾರ್ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಈ ನಿಲುವಿನಿಂದಾಗಿ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುವುದಲ್ಲದೇ, ತಲೆತಲಾಂತರಗಳಿಂದ ವಾಸಿಸುತ್ತಿರುವ ಮಾನವರ ಹಕ್ಕುಗಳಿಗೆ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ.ದೇಶ್‌ಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಪ್ರತಿಭಟನಾಕಾರರು ಹೇಳೋ ಪ್ರಕಾರ, ಉತ್ತರಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಲಭ್ಯ ಒದಗಿಸುವುದು ಅಗತ್ಯ. ಸರಕಾರ ಈ ಬಗ್ಗೆ ಚಿಂತಿಸಿ ಅಭಿವೃದ್ಧಿ ಪೂರಕ ನಿಲುವು ಕೈಗೊಳ್ಳಬೇಕು. ಕೇಂದ್ರ ಹೊರಡಿಸಿರುವ ಅಧಿಸೂಚನೆಯಿಂದ ಈ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಅಲ್ಲದೇ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ವನ್ಯ ಜೀವಿಗಳ ಸಂರಕ್ಷಣೆ ಮಾಡಲು ಸಾಕಷ್ಟು ಕಾಯ್ದೆ, ಕಾನೂನುಗಳಿವೆ‌. ಆದ್ರೆ, ಇದರಿಂದ ಜನರ ಜೀವನಕ್ಕೆ ಯಾವುದೇ ತೊಂದರೆಯಾಗಬಾರದು. ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಲ್ಲ, ಸ್ಥಳಗಳಿಗೆ ಭೇಟಿ ‌ನೀಡಿ ಮಾಡಿದ್ದಲ್ಲ. ಮೊದಲೇ ಅಭಿವೃದ್ಧಿ ಕಾಣದ ಜಿಲ್ಲೆಯ ಸಾಕಷ್ಟು ಭಾಗಗಳಿಗೆ ಮತ್ತೆ ಭಾರೀ ಹೊಡೆತ ಬೀಳಲಿದೆ. ಜನರ ಶ್ರೇಯೋಭಿವೃದ್ಧಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಸ್ತೂರಿ ರಂಗನ್‌ ವರದಿ ವಿರುದ್ಧ ಕಾನೂನು ಹೋರಾಟ

ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ವಯ ಉತ್ತರಕನ್ನಡ ಜಿಲ್ಲೆಯ ಹಲವು ಭಾಗಗಳ‌ನ್ನು ಪರಿಸರ ಸೂಕ್ಷ್ಮ ವಲಯದ ಭಾಗವನ್ನಾಗಿಸಲು ಜನರಿಂದ ಆಕ್ರೊಶ ವ್ಯಕ್ತವಾಗಿದೆ. ಈ ವರದಿ ಯೋಜನೆಯ ರೂಪದಲ್ಲಿ ಅನುಷ್ಠಾನಗೊಂಡಲ್ಲಿ ಜಿಲ್ಲೆಯ ಸಾವಿರಾರು ಜನರು ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದ್ದಾರೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯಂತೆ ನಿಲುವು ಕೈಗೊಳ್ಳುವುದನ್ನು ಹಿಂಪಡೆಯಬೇಕು ಎಂದು ಮಲೆನಾಡಿನ ಜನರು ಒತ್ತಾಯಿಸಿದ್ದಾರೆ.

click me!