ವರದಿ: ಎಂ. ಅಫ್ರೋಜ್ ಖಾನ್
ರಾಮನಗರ (ಡಿ.15): ಸಾಲು ಸಾಲು ಚುನಾವಣೆಗಳ (Election) ಸೋಲಿಗೆ ಪ್ರತೀಕಾರವಾಗಿ ವಿಧಾನ ಪರಿಷತ್ ಚುನಾವಣಾ (MLC Election) ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್, (JDS) ಮತ್ತೊಮ್ಮೆ ಸೋಲು ಅನುಭವಿಸಿರುವುದು ಡಿಕೆ ಸಹೋದರರ ಕೋಟೆಯಲ್ಲಿ ಕಾಂಗ್ರೆಸ್ (Congress) ಮತ್ತಷ್ಟು ಭದ್ರಗೊಂಡಂತಾಗಿದೆ. ವಿಧಾನ ಪರಿಷತ್ ಚುನಾವಣೆಯನ್ನು ಎಚ್‌ಡಿಕೆ (HD Kumaraswamy) ಮತ್ತು ಡಿಕೆಶಿ ಕಾಳಗ ಎಂದೇ ಬಿಂಬಿತವಾಗಿತ್ತು. ಈ ಕಾಳಗದಲ್ಲಿ ಡಿಕೆ ಸಹೋದರರು ಹೂಡಿದ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಎಡವಿದ ಕುಮಾರಸ್ವಾಮಿ ಸೋಲಿಗೆ ಶರಣಾಗಿದ್ದು, ಜೆಡಿಎಸ್ ತನ್ನ ಭದ್ರಕೋಟೆಯನ್ನು ಛಿದ್ರಗೊಳಿಸಿಕೊಂಡಿದೆ.ಬೆಂಗಳೂರು ಗ್ರಾಮಾಂತರ (Bengaluru Rural) ಹಾಗೂ ರಾಮನಗರ ಜಿಲ್ಲೆಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಜೆಡಿಎಸ್ ಶಾಸಕರೇ ಇದ್ದರು. ಕೆಲವೆಡೆ ಮತದಾರರ ಸಂಖ್ಯಾಬಲವನ್ನೂ ಹೊಂದಿತ್ತು. ಆದರೂ ದಳ ಶರಣಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಾಸಕರು ಹಾಗೂ ಸ್ಥಳೀಯವಾಗಿ ಅಧಿಕಾರ ಪ್ರಾಬಲ್ಯವನ್ನು ಹೊಂದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ವಿರುದ್ಧ ಪರಾಭವಗೊಂಡಿರುವುದು ಜೆಡಿಎಸ್ ನಾಯಕರ ಅಸಂಘಟಿತ ಹೋರಾಟಕ್ಕೂ ಸಾಕ್ಷಿಯಾಗಿದೆ. ಅಲ್ಲದೆ, ದಳಪತಿಗಳ ಅತಿಯಾದ ಆತ್ಮವಿಶ್ವಾಸವೋ ಅಥವಾ ನಾಯಕತ್ವದ ಕೊರತೆಯೋ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಪ್ರತಿ ಚುನಾವಣೆಯಂತೆ ಈ ಚುನಾವಣೆಯಲ್ಲಿಯೂ ಜೆಡಿಎಸ್ (JDS), ನಾಯಕತ್ವದ ಸವಾಲನ್ನು ಎದುರಿಸುತ್ತಲೇ ಬಂದಿತು. ಆರಂಭದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಾರಥ್ಯದಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದವು. ಅಂತಿಮವಾಗಿ ಜವಾಬ್ದಾರಿ ವಹಿಸಿಕೊಂಡ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಮಾತುಗಳು ಜೆಡಿಎಸ್ ವಲಯದಲಿಯೇ ಕೇಳಿ ಬರುತ್ತಿದೆ.
ಜೆಡಿಎಸ್ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ (JDS) ಬೆಂಬಲಿತ ಮತದಾರರನ್ನು ಹಿಡಿದಿಟ್ಟುಕೊಂಡಿದ್ದರೆ ಪಕ್ಷದ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಒಟ್ಟು ಮತದಾರರಲ್ಲಿ ಶೇ.40ರಿಂದ 45ರಷ್ಟು ಮತದಾರರು ದಳದವರೇ ಆಗಿದ್ದರು ಎಂಬುದನ್ನು ಪಕ್ಷದ ನಾಯಕರು ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದರು. ಹಾಗಿದ್ದರೆ ದಳ ಮತಗಳು ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿ ರಮೇಶ್ ಗೌಡ ಪರವಾಗಿ ಬಂದಿದ್ದರೂ, ಬೇರೆ ಪಕ್ಷಗಳ ಮತಗಳನ್ನು ಸೆಳೆಯುವಲ್ಲಿ ಪಕ್ಷದ ನಾಯಕರು ವಿಫಲರಾದರೇ ಎಂಬ ಅನುಮಾನಗಳು ಫಲಿತಾಂಶದ ನಂತರ ಕಾಡುತ್ತಿದೆ.
ಜೆಡಿಎಸ್ ಕೋಟೆ ಛಿದ್ರ: ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಮತದಾರರ ಸಂಖ್ಯಾಬಲವನ್ನು ಹೊಂದಿದ್ದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಸುಲಭವಾಗಿ ಮೂರನೇ ಬಾರಿಗೆ ವಿಜೇತರಾಗಿ ದಾಖಲೆ ಬರೆದಿದ್ದಾರೆ. 2015ರಲ್ಲಿ ಜೆಡಿಎಸ್‌ನಿಂದ ಕೇವಲ 278 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ದಾಖಲಿಸಿತ್ತು. ಈ ಬಾರಿ 722 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಮತ್ತೊಂದು ವಿಶೇಷ. ಇದೆಲ್ಲದರ ನಡುವೆ, ಜೆಡಿಎಸ್‌ಗೆ ಮುಖಭಂಗವಾಗಿರುವುದಂತು ಸುಳ್ಳಲ್ಲ.
2004ರಿಂದ ಈವರೆಗೂ ಮೂರು ಬಾರಿ ಗೆಲುವು ದಾಖಲಿಸಿರುವುದು ಕಾಂಗ್ರೆಸ್‌ಗೆ (Congress) ಆನೆಬಲ ಬಂದಂತಾಗಿದ್ದು, ಜೆಡಿಎಸ್ ಬಲದ ಜತೆಗೆ ನೆಲೆಯನ್ನೂ ಕಳೆದುಕೊಳ್ಳುತ್ತಿರುವುದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಕೇವಲ 54 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿರುವ ಬಿಜೆಪಿಗೆ (BJP) ಮುಖಭಂಗ ಅನುಭವಿಸುವಂತಾಗಿದೆ. ಚಲಾವಣೆಗೊಂಡ ಒಟ್ಟು 3912 ಮತಗಳಲ್ಲಿ ಗೆಲ್ಲುವ ಅಭ್ಯರ್ಥಿ1929ಮತಗಳನ್ನು ಪಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ರವಿ 333ಮತಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯಲ್ಲಿಯು ಕಾಂಗ್ರೆಸ್ ಬೆಂಬಲಿತರೆ ಹೆಚ್ಚಾಗಿ ಗೆಲುವು ದಾಖಲಿಸಿದ್ದರು. ಜೆಡಿಎಸ್‌ನ ಭದ್ರಕೋಟೆಯಾದ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ಬೆಂಬಲಿತ ಸದಸ್ಯರ ಮತಗಳೆಲ್ಲವೂ ಕಾಂಗ್ರೆಸ್ ಪಾಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದು ಫಲಿತಾಂಶದದಿಂದ ಧೃಡ ಪಟ್ಟಿದೆ.
ಕಾಂಗ್ರೆಸ್-ಜೆಡಿಎಸ್‌ನ ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರ ಮತ್ತು ವರ್ಚಸ್ಸು ಸ್ಥಾಪಿಸಿಕೊಳ್ಳಲು ಹವಣಿಸುತ್ತಲೇ ಇದ್ದಾರೆ. ಅವಕಾಶ ಸಿಕ್ಕಾಗೆಲ್ಲ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಕಸರತ್ತು ನಡೆಸುವುದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ವಾಡಿಕೆ. ಅದೇ ಮಾದರಿಯಲ್ಲಿ ವಿಧಾನ ಪರಿಷತ್ ಚುನಾವಣೆಯು ನಡೆದಿತ್ತು. ಈಗ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಒಂದೆಡೆ ಡಿ.ಕೆ.ಶಿವಕುಮಾರ್‌ಗೆ ಪ್ಲಸ್ ಪಾಯಿಂಟ್ ಆಗಿದ್ದರೆ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾದಂತಾಗಿದೆ.
ಗೆಲುವು-ಸೋಲಿಗೆ ಕಾರಣಗಳೇನು?
ಈ ಹಿಂದೆಯೂ ಎಸ್.ರವಿ ಕಾಂಗ್ರೆಸ್‌ನಿಂದ ಎಂಎಲ್‌ಸಿ ಆಗಿದ್ದರು. ಇದರೊಂದಿಗೆ ಡಿ.ಕೆ.ಶಿವಕುಮಾರ್‌ಗೆ ಸಂಬಂಧಿಯೂ ಆಗಿದ್ದರಿಂದ ಕಾಂಗ್ರೆಸ್‌ನ ಇಡೀ ಪಕ್ಷವೇ ಇವರೊಟ್ಟಿಗೆ ಪ್ರಚಾರಕ್ಕಿಳಿದಿತ್ತು. ಗ್ರಾಪಂನಲ್ಲಿಯು ಕಾಂಗ್ರೆಸ್‌ನ ಬೆಂಬಲಿತರ ಬಲ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಎಸ್.ರವಿ ಗೆಲುವು ನಿರಾಯಾಸವಾಗಿತ್ತು. ಇದರೊಂದಿಗೆ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಒಳ ರಾಜಕೀಯ ಮಾಡಿ, ಬಿಜೆಪಿ ಮತಗಳು ಕಾಂಗ್ರೆಸ್ ಪಾಲಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.ಕಳೆದ ಬಾರಿ ಇ.ಕೃಷ್ಣಪ್ಪ ಕಾಂಗ್ರೆಸ್‌ಗೆ (Congress) ಪ್ರಬಲ ಪೈಪೋಟಿ ನೀಡಿದ್ದರು. ಆದರೆ, ಈ ಬಾರಿ ರಮೇಶ್ ಗೌಡ ಅವರಿಗೆ ಕಾಲಾವಕಾಶ ಕಡಿಮೆ ಇದ್ದ ಕಾರಣ ಮತದಾರರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಅಲ್ಲದೆ,ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವದಂತಿಗಳು ಚುನಾವಣೆ ಮೇಲೆ ಪರಿಣಾಮ ಬೀರಿದೆ.
ಮುಂದಿನ ಚುನಾವಣೆಗೆ ದಿಕ್ಸೂಚಿ
2023ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಜೆಡಿಎಸ್ ಪಕ್ಷವು ಜನತಾ ಪರ್ವ - ಜೆಡಿಎಸ್ ಮಿಷನ್ 123 ಕಾರ್ಯಾಗಾರದ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿರುವಾಗಲೇ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಆಘಾತ ನೀಡಿದೆ. ಇದೆಲ್ಲವನ್ನು ನಿಭಾಯಿಸಿಕೊಂಡು ನಾಯಕರು ಪಕ್ಷ ತೊರೆಯುವುದನ್ನು ತಡೆದು ಪಕ್ಷ ಸಂಘಟಿಸಿ ಮತ್ತೆ ಚುನಾವಣೆಗೆ ಅಣಿಗೊಳಿಸುವ ಜವಾಬ್ದಾರಿ ಜೆಡಿಎಸ್ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಇನ್ನು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತರಿಸಿದೆ.