ಅತ್ಯಧಿಕ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಭಾರೀ ಕುತೂಹಲಕ್ಕೆ ತೆರೆ ಬಿದ್ದಿದೆ.
ಚಿಕ್ಕಬಳ್ಳಾಪುರ (ಫೆ.15): ಜಿಲ್ಲೆಯ ರಾಜಕೀಯ ಪಕ್ಷಗಳ ನಡುವೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಬರೋಬ್ಬರಿ 152 ಗ್ರಾಪಂಗಳ ಚುನಾವಣಾ ಸಮರಕ್ಕೆ ಕೊನೆಗೂ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಮೂಲಕ ಅಂತಿಮ ತೆರೆ ಬಿದ್ದಿದೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ ನಡೆದ 152 ಗ್ರಾಪಂಗಳ ಪೈಕಿ ಕಾಂಗ್ರೆಸ್ ಬೆಂಬಲಿಗರು ಒಟ್ಟು 52 ಗ್ರಾಪಂಗಳಲ್ಲಿ ಮಾತ್ರ ತಮ್ಮ ಹಿಡಿತ ಸಾಧಿಸುವ ಮೂಲಕ ಗಮನ ಸೆಳೆದರೆ ರಾಜ್ಯದ ಆಡಳಿತರೂಢ ಬಿಜೆಪಿ ಬೆಂಬಲಿಗರು 31 ಗ್ರಾಪಂಗಳಲ್ಲಿ ಅಧಿಕಾರ ಹಿಡಿಯುವ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜಕೀಯವಾಗಿ ದೊಡ್ಡ ಪ್ರಮಾಣದಲ್ಲಿ ಹೆಜ್ಜೆ ಗುರುತು ಮೂಡಿಸಿದೆ.
undefined
2443 ಗ್ರಾಪಂ ಸದಸರ ಆಯ್ಕೆ
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಎರಡು ಹಂತದಲ್ಲಿ ಜಿಲ್ಲೆಯ ಒಟ್ಟು 152 ಗ್ರಾಪಂಗಳ ಒಟ್ಟು 2,443 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು ಡಿಸೆಂಬರ್ 30 ರಂದು ಹಳ್ಳಿ ಸಮರದ ಫಲಿತಾಂಶ ಪ್ರಕಟಗೊಂಡಿತ್ತು. ಬಳಿಕ ತಿಂಗಳಿಗೆಲ್ಲಾ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ಜಿಲ್ಲಾಡಳಿತ ಸುಸೂತ್ರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮಾಡಿ ಮುಗಿಸಿದೆ. ಗ್ರಾಪಂಗಳ ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಪರೋಕ್ಷವಾಗಿ ತಮ್ಮ ಬೆಂಬಲಿತ ಸದಸ್ಯರ ಮೂಲಕ ಮೀಸಲಾತಿ ಸೇರಿದಂತೆ ವಿವಿಧ ರಾಜಕೀಯ ಆಟೋಟಗಳಿಗೆ ಸಾಕ್ಷಿಯಾಯಿತು.
ತಾಲೂಕುವಾರು ಮಾಹಿತಿ:
ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ಗೆ ಕ್ಷೇತ್ರದ ಗ್ರಾಮೀಣ ಮತದಾರರು ಸೈ ಎಂದಿದ್ದು 23 ಗ್ರಾಪಂಗಳ ಪೈಕಿ 22 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಸಚಿವ ಸುಧಾಕರ್ ಕಮಲವನ್ನು ಅರಳಿಸಿದ್ದಾರೆ. ಅಂಗರೇಖನಹಳ್ಳಿ ಗ್ರಾಪಂ ಮಾತ್ರ ಕಾಂಗ್ರೆಸ್ ಪಾಲಾಗಿದೆ.
'ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ'
ಚಿಂತಾಮಣಿ ತಾಲೂಕಿನ ಒಟ್ಟು 35 ಗ್ರಾಪಂಗಳ ಪೈಕಿ ಶಿಡ್ಲಘಟ್ಟವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಲಕಲನೇರ್ಪು ಹೋಬಳಿ ಸೇರಿ ಒಟ್ಟು 16 ಗ್ರಾಪಂಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾದರೆ ಕ್ಷೇತ್ರದ ಮಾಜಿ ಶಾಸಕರಾದ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕೋನಪಲ್ಲಿ ಗ್ರಾಪಂನಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತರು ವಿಜಯದ ನಗೆ ಬೀರಿದ್ದರೆ, ಚಿನ್ನಸಂದ್ರ ಗ್ರಾಪಂ ಸುಲ್ತಾನ್ ಷರೀಫ್ ಹಿಡಿತದಲ್ಲಿದೆ.
ಗೌರಿಬಿದನೂರಲ್ಲಿ ಕೈಗೆ ಹಿನ್ನಡೆ: ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ ಜಿಲ್ಲೆಯ ಗೌರಿಬಿದನೂರಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ಹಿನ್ನಡೆ ಆಗಿದೆ. ಒಟ್ಟು 37 ಗ್ರಾಪಂಗಳ ಪೈಕಿ (ಮಂಚೇನಹಳ್ಳಿ ಹೋಬಳಿ ಸೇರಿ) ಕಾಂಗ್ರೆಸ್ ಬೆಂಬಲಿತರು ಬರೀ 12 ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದ್ದರೆ ಬಿಜೆಪಿ ಬೆಂಬಲಿಗರು ಮೊದಲ ಬಾರಿಗೆ 8 ಗ್ರಾಪಂಗಳಲ್ಲಿ ಹಿಡಿತ ಸಾಧಿಸಿದ್ದಾರೆ. ಪುಟ್ಟಸ್ವಾಮಿಗೌಡ ಬಣ 10, ಜೆಡಿಎಸ್ ಸೇರಿ ಜಿಪಂ ಸದಸ್ಯ ಕೆಂಪರಾಜು ಬಣ 7 ಗ್ರಾಪಂಗಳಲ್ಲಿ ಹಿಡಿತ ಸಾಧಿಸಿದೆ. ಶಿಡ್ಲಘಟ್ಟತಾಲೂಕಿನಲ್ಲಿ ಒಟ್ಟು 24 ಗ್ರಾಪಂಗಳ ಪೈಕಿ ಕಾಂಗ್ರೆಸ್ ಬೆಂಬಲಿತರಿಗೆ 14, ಜೆಡಿಎಸ್ ಬೆಂಬಲಿಗರು 10 ಗ್ರಾಪಂಗಳಲ್ಲಿ ತಮ್ಮ ಹಿಡಿತ ಸಾಧಿಸಿದೆ. ವಿಧಾನಸಭಾ ಕ್ಷೇತ್ರವಾದು ನೋಡುವುದಾಗಿ ಜೆಡಿಎಸ್ ಬೆಂಬಲಿಗರು ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು 25 ಗ್ರಾಪಂಗಳ ಪೈಕಿ 18 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದಾರೆ. 3 ಗ್ರಾಪಂಗಳಲ್ಲಿ ಸಿಪಿಎಂ ಹಾಗೂ 1 ಬಿಜೆಪಿ ಹಾಗೂ 3 ಗ್ರಾಪಂಗಳಲ್ಲಿ ಪಕ್ಷೇತರರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಹಾಗೂ ಗುಡಿಬಂಡೆಯ ಒಟ್ಟು 8 ಗ್ರಾಪಂಗಳಲ್ಲಿ ಒಟ್ಟು 6 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾದರೆ, ಉಳಿದಂತೆ ಸಿಎಪಿಎಂ ಹಾಗೂ ಪ್ರಜಾ ಸಂಘರ್ಷ ಸಮಿತಿ ತಲಾ 1 ಗ್ರಾಪಂನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಿದೆ.