Tumakur : ಕ್ವಿಂಟಾಲ್‌ ಕೊಬ್ಬರಿ ದರ ಭಾರೀ ಕುಸಿತ

By Kannadaprabha News  |  First Published Dec 8, 2022, 4:57 AM IST

  ತಾಲೂಕಿನ ರೈತರ ಜೀವನಾಧಾರ ವಾಣಿಜ್ಯ ಬೆಳೆ ತೆಂಗು ಆಗಿದ್ದು, ಅದರ ಪ್ರಮುಖ ಉತ್ಪನ್ನವಾದ ಕೊಬ್ಬರಿಯ ಬೆಲೆ ಏಷ್ಯಾದಲ್ಲೇ ಪ್ರಸಿದ್ಧವಾದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಬುಧವಾರ ತೀವ್ರ ಕುಸಿತವಾಗಿರುವುದು ಕಲ್ಪತರು ನಾಡಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ.


 ಬಿ. ರಂಗಸ್ವಾಮಿ, ತಿಪಟೂರು

  ತಿಪಟೂರು (ಡಿ.08):  ತಾಲೂಕಿನ ರೈತರ ಜೀವನಾಧಾರ ವಾಣಿಜ್ಯ ಬೆಳೆ ತೆಂಗು ಆಗಿದ್ದು, ಅದರ ಪ್ರಮುಖ ಉತ್ಪನ್ನವಾದ ಕೊಬ್ಬರಿಯ ಬೆಲೆ ಏಷ್ಯಾದಲ್ಲೇ ಪ್ರಸಿದ್ಧವಾದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಬುಧವಾರ ತೀವ್ರ ಕುಸಿತವಾಗಿರುವುದು ಕಲ್ಪತರು ನಾಡಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

Tap to resize

Latest Videos

2022 ಜನವರಿಯಿಂದ ಇಲ್ಲಿಯವರೆಗೂ ಹಲವು ಏಳು ಬೀಳುಗಳ ನಡುವೆಯೂ ಕ್ವಿಂಟಾಲ್‌ (Coconut)  ಬೆಲೆ ರು.18ಸಾವಿರವರೆಗೂ ಇದ್ದು ಬೆಳೆಗಾರರಲ್ಲಿ ಒಂದು ರೀತಿಯ ನೆಮ್ಮದಿ ತಂದಿತ್ತು. ಕಳೆದ 2 ತಿಂಗಳಿನಿಂದ ಕೊಬ್ಬರಿ ಬೆಲೆ ಇಳಿಯುತ್ತಲೇ ಕ್ವಿಂಟಾಲ್‌ಗೆ ರು.13 ಸಾವಿರದ ಆಸುಪಾಸಿನಲ್ಲಿತ್ತು. ಇತ್ತೀಚಿನ 20 ದಿನಗಳಿಂದ ಕೊಬ್ಬರಿ ಬೆಲೆ ಇಳಿಯುತ್ತಲೇ ಇಂದಿನ ಬುಧವಾರದ ಹರಾಜುಯಲ್ಲಿ ರು. 11500ಕ್ಕೆ ತೀವ್ರ ಕುಸಿತ ಕಂಡಿದ್ದು ಮುಂದಿನ ಹರಾಜಿನಲ್ಲಿ ಬೆಲೆ ಏನಾಗಲಿದೆ ಎಂಬ ಆತಂಕ ವರ್ತಕರು ಹಾಗೂ ಬೆಳೆಗಾರರಲ್ಲಿ (Farmers)  ಮೂಡಿದೆ.

ಮುಖ್ಯವಾಗಿ ಇತ್ತೀಚಿನ 1 ತಿಂಗಳಿನಿಂದ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಗುಣಮಟ್ಟದಲ್ಲಿ ಅಂದರೆ ತೇವಾಂಶ ತುಂಬಾ ಹೆಚ್ಚಿರುವುದರಿಂದ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂಬುದು ಮಾರುಕಟ್ಟೆತಜ್ಞರ ಅನಿಸಿಕೆಯಾಗಿದೆ.

ಈಗಿನ ತೋಟಗಾರಿಕಾ ಕೃಷಿಯ ವೆಚ್ಚ ದುಬಾರಿಯಾಗಿದ್ದು, ಒಂದು ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ ರು.16ಸಾವಿರ ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಾಲ್‌ ಕೊಬ್ಬರಿಗೆ ರು. 18 ಸಾವಿರ ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ಮಾಡಬಹದಾಗಿದೆ. ಆದರೆ ಪ್ರಸ್ತುತ 11 ಸಾವಿರ ಆಸುಪಾಸಿನಲ್ಲಿ ಕೊಬ್ಬರಿ ಬೆಲೆ ಇದ್ದು ಬೆಳೆಗಾರರು ತೀವ್ರ ನಷ್ಟಅನುಭವಿಸುವಂತಾಗಿದೆ.

ತೆಂಗು ಬೆಳೆಗಾರರಿಗೆ ತೋಟಗಾರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ಕಪ್ಪುತಲೆ ಹುಳುರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡಕೊರಕ ಇತ್ಯಾದಿ ರೋಗಗಳ ಜೊತೆ ಜೊತೆಗೆ ತೋಟಗಳ ಅಭಿವೃದ್ಧಿಗೆ ಬ್ಯಾಂಕುಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲೂ ಸಹ ಬೆಲೆ ಕುಸಿತ ಕಂಗಾಲಾಗುವಂತೆ ಮಾಡಿದೆ.

18 ಸಾವಿರಕ್ಕೆ ಬೆಂಬಲ ಬೆಲೆ ನಿಗದಿಯಾಗಲಿ: ಹಾಲಿ ಇರುವ ಕೊಬ್ಬರಿ ಬೆಂಬಲ ಬೆಲೆಯನ್ನು ರು. 11 ಸಾವಿರದಿಂದ ವೈಜ್ಞಾನಿಕ ಬೆಲೆ ಕನಿಷ್ಠ ರು.18 ಸಾವಿರಕ್ಕಾದರೂ ಏರಿಸಿದಲ್ಲಿ ತೆಂಗು ಬೆಳೆಗಾರರು ನೆಮ್ಮದಿ ಜೀವನ ನಡೆಸಬಹುದೆಂಬ ಅಭಿಪ್ರಾಯ ಬೆಳೆಗಾರರು ಹಾಗೂ ವರ್ತಕರಲ್ಲಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ ರು.18 ಸಾವಿರಕ್ಕೆ ನಿಗದಿಗೊಳಿಸಿದಲ್ಲಿ ಕೊಬ್ಬರಿ ದರ ತೀವ್ರ ಇಳಿಕೆಯಾಗದೆ ಒಂದು ಹಂತದಲ್ಲಿ ಸ್ಥಿರವಾಗಿರಲಿದೆ.

ಕೋಟ್‌ 1 : ತಿಪಟೂರು ಕೊಬ್ಬರಿಯ ಬಹುಪಾಲು ಉತ್ತರ ಭಾರತದ ಬಹುತೇಕ ಮಾರುಕಟ್ಟೆಗಳಿಗೆ ತಿನ್ನಲು ಹೋಗುತ್ತದೆ. ಆದರೆ ಈಗ ಆ ಭಾಗಗಳಲ್ಲಿ ಹೆಚ್ಚಿನ ಉಷ್ಣಾಂಶ ಇದ್ದು ಕೊಬ್ಬರಿ ತಿನ್ನುವವರ ಸಂಖ್ಯೆ ಕಡಿಮೆಯಾಗಿ ಬೇಡಿಕೆಯೂ ಕಡಿಮೆಯಾಗಿದೆ. ಮುಖ್ಯವಾಗಿ ಈ ಸಮಯದಲ್ಲಿ ರೈತರು ಹಸಿ ಕೊಬ್ಬರಿಯನ್ನೇ ಮಾರುಕಟ್ಟೆಗೆ ತರುತ್ತಿರುವುದರಿಂದ ಗುಣಮಟ್ಟಹಾಳಾಗಿ ವರ್ತಕರಿಗೂ ನಷ್ಟವಾಗುತ್ತದೆ. ಹಾಗಾಗಿ ಕೊಬ್ಬರಿ ಬೆಲೆ ಕಡಿಮೆಯಾಗಿದೆ.

ಎಚ್‌. ಬಿ. ದಿವಾಕರ್‌, ಎಪಿಎಂಸಿ ಮಾಜಿ ಅಧ್ಯಕ್ಷ, ತಿಪಟೂರು.

ಕೋಟ್‌ 2 : ತಿಪಟೂರು ಕೊಬ್ಬರಿ ತಿನ್ನಲು ಬಹುರುಚಿಯಾಗಿದೆ. ಉತ್ತರ ಭಾರತದ ಜನರು ಹೆಚ್ಚಾಗಿ ಕೊಬ್ಬರಿ ತಿನ್ನುವುದು ವಾಡಿಕೆ. ಆದರೆ ಉತ್ತಮ ಗುಣಮಟ್ಟದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಗೆ ಬೆಳೆಗಾರರು ಗುಣಮಟ್ಟದ ಕೊಬ್ಬರಿ ತರುವ ಬದಲು, ಹೆಚ್ಚು ತೇವಾಂಶವಿರುವ ಕೊಬ್ಬರಿ ತರುತ್ತಿದ್ದು, ಅದು ಬೇಗ ಹಾಳಾಗುವುದರಿಂದ ದರ ಕಡಿಮೆಯಾಗಿದೆ. ರೈತರು ಉತ್ತಮ ಕೊಬ್ಬರಿ ತಂದಲ್ಲಿ ಕೊಬ್ಬರಿ ಬೆಲೆ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ತೋಟಗಾರಿಕೆ ತಜ್ಞರು ಕೊಬ್ಬರಿ ಗುಣಮಟ್ಟದ ಬಗ್ಗೆ ಬೆಳೆಗಾರರಿಗೆ ಅರಿವು ಮೂಡಿಸಬೇಕಿದೆ.

ಎಸ್‌.ಬಿ. ನ್ಯಾಮಗೌಡರು, ಗ್ರೇಡ್‌ 2 ಕಾರ್ಯದರ್ಶಿ, ತಿಪಟೂರು.

click me!