ಚಿಕ್ಕಮಗಳೂರು: ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧ

By Suvarna News  |  First Published Jun 2, 2022, 6:34 PM IST

* ಮಲೆನಾಡಿನಲ್ಲಿ ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳನ್ನು ಎದುರಿಸಲು ತಂಡ ರಚನೆ
* ವಿಪತ್ತು ಎದುರಿಸಲು ಮಂಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ
* ಮಳೆಗಾಲದಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಿದ ಜಿಲ್ಲಾಧಿಕಾರಿ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಜೂನ್.02):
ಮುಂಗಾರು ಮಳೆ ಆರಂಭಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. 2019ರಲ್ಲಿ ಸುರಿದ ಮಹಾ ಮಳೆಯಿಂದ ಮಲೆನಾಡಿನಲ್ಲಿ ಸಾಕಷ್ಟು ಅನಾಹುತಗಳು ಉಂಟಾಗಿ ಸಾವು ನೋವುಗಳು ಸಂಭವಿಸಿತ್ತು. ಇದರ ಪಾಠ ಕಲಿತಿರುವ ಜಿಲ್ಲಾಡಳಿತ ಇದೀಗ ಮಳೆಗಾಲಕ್ಕಾಗಿ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದೆ. ಮಳೆಗಾಲದಲ್ಲಿ ಉಂಟಾಗುವ ವಿಪತ್ತು ನಿರ್ವಹಣೆ ಮಾಡಲು ಈಗಿನಿಂದಲೇ ತಯಾರಿ ನಡೆಸಿದೆ.

ಭೂ ಕುಸಿತ ಉಂಟಾಗುವ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮ
ಈ ವರ್ಷದ ಮಳೆಗಾಲದಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಈಗಿನಿಂದಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲಾದ್ಯಂತ ಒಟ್ಟು 69 ಕಾಳಜಿಕೇಂದ್ರಗಳನ್ನು ತೆರೆಯುತ್ತಿದ್ದು, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿ ತಲಾ 6, ನರಸಿಂಹರಾಜಪುರ 17 ಶೃಂಗೇರಿ 7, ಮೂಡಿಗೆರೆ 24, ಕಳಸದಲ್ಲಿ 7 ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ತಿರ್ಮಾನ ತೆಗೆದುಕೊಂಡಿದೆ. ಈ  ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಸಭೆ ನಡೆಸಿ ಅಧಿಕಾರಿಗಳು ತಂಡವನ್ನು ರಚನೆ ಮಾಡಿದ್ದಾರೆ. 

Tap to resize

Latest Videos

Chikkamagaluru ಜಿಲ್ಲೆಯಲ್ಲಿ ಮಾವಿನ ಹಣ್ಣಿಗೆ ಬಾರೀ ಬೇಡಿಕೆ

ಪ್ರತಿಕಾಳಜಿಕೇಂದ್ರಕ್ಕೆ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿಅಧಿಕಾರಿ, ರಾಜಸ್ವನಿರೀಕ್ಷಕರು,ಹಾಸ್ಟೆಲ್ ವಾರ್ಡನ್ ಸೇರಿದಂತೆ ಉನ್ನತಾಧಿಕಾರಿ ಇರುವ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಿ ಅವರುಗಳಿಗೆಲ್ಲ ತರಬೇತಿಯನ್ನು ಕೂಡ ಆಯೋಜನೆ ಮಾಡುತ್ತಿದೆ.ಜಿಲ್ಲೆಯಲ್ಲಿ ದುರ್ಬಲ ಪ್ರದೇಶಗಳು ಅಂದರೆ ಭೂ ಕುಸಿತ ಸಂಭವಿಸಬಹುದಾದ  ಸ್ಥಳಗಳನ್ನು ಗುರುತಿಸಿದ್ದು, ಅವುಗಳ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪಡೆದುಕೊಂಡಿದೆ. ವಿಪತ್ತು ಉಂಟಾಗುವ ಪ್ರದೇಶದ ಸಂತ್ರಸ್ತರನ್ನು ಕಾಳಜಿಕೇಂದ್ರಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸ್ವಯಂ ಸೇವಾಸೇವಕರಿಗೆ ಎನ್ಡಿಆರ್ಎಫ್ ತಂಡದಿಂದ ತರಬೇತಿ ಕೊಡಿಸುವ ಬಗ್ಗೆಯೂ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ..

ಮಳೆಗಾಲಕ್ಕಾಗಿ ವಾಟ್ಸಪ್ ಗ್ರೂಪ್ ರಚನೆ
ಪ್ರತಿ ಗ್ರಾಮಪಂಚಾಯಿತಿಯ ಟಾಸ್ಕ್‌ಫೋರ್ಸ್ ವಿಪತ್ತು ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮ ಕುರಿತು ಎಟಿಐ ವತಿಯಿಂದ ತರಬೇತಿಯನ್ನು ನೀಡಲಾಗಿದೆ. ವಿವಿಧ ಇಲಾಖೆಯಲ್ಲಿ ವಿಪತ್ತು ನಿರ್ವಹಣೆಗೆ ಸಾಮಾಗ್ರಿಗಳ ಮಾಹಿತಿ ಸಂಗ್ರಹಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಕ್ರಮವಹಿಸಲಾಗಿದೆ. ರಸ್ತೆ ಬದಿಯ ಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ಅವುಗಳ ತೆರವಿಗೆ ಕ್ರಮವಹಿಸಲಾಗಿದೆ. 

ಅತಿವೃಷ್ಟಿಯಲ್ಲಿ ಸಂಭವಿಸಬಹುದಾದ ಧರೆಕುಡಿತು ರಸ್ತೆಬದಿಯ ಮಣ್ಣು, ಚಾರ್ಮಾಡಿಘಾಟಿಯಲ್ಲಿ ಉಂಟಾಗಬಹುದಾದ ಕಲ್ಲು ,ಮಣ್ಣುಕುಸಿತ ಉಂಟಾದರೆ ತೆರವಿಗೆ ಜೆಸಿಬಿ, ಹಿಟಾಚಿ ಮತ್ತು ವಾಹನಗಳನ್ನು ಈಗಾಗಲೇ ಗುರುತಿಸಲಾಗಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ಸ್ಥಾಪನೆಯ ಜೊತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದ್ದು, ಕಾಲಕಾಲಕ್ಕೆ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ.

ತುರ್ತುಕಾರ್ಯಗಳಿಗೆ ನುರಿತು ಈಜುಗಾರರು, ಸ್ವಯಂ ಸೇವಕರುನ್ನು ಗುರುತಿಸಿದ್ದು, ಅಗತ್ಯಮಾಹಿತಿಗಳನ್ನು ಇಲಾಖಾಧಿಕಾರಿಗಳಿಂದ ಪಡೆಯಲಾಗುವುದು. ವಿಪತ್ತು ನಿರ್ವಹಣೆಗೆ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.ದುರಸ್ತಿಕಾರ್ಯಕ್ಕೆ ಅವಶ್ಯಕವಿರುವ ಮಾನವ ಸಂಪನ್ಮೂಲಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ವಿಪತ್ತು ಸಮಯದಲ್ಲಿ ಅವಶ್ಯಕವಾಗುವ ವೈದ್ಯಕೀಯ ಉಪಕರಣ,ಔಷಧಿಗಳನ್ನು ದಾಸ್ತಾನುಮಾಡಿಕೊಳ್ಳಲು ಜಿಲ್ಲಾಡಳಿತ ಕ್ರಮವಹಿಸಿದೆ ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಪತ್ತು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

click me!