ಚಿಕ್ಕಬಳ್ಳಾಪುರ ಕ್ಷೇತ್ರ: ಕಾಂಗ್ರೆಸ್‌ಗೆ ಸಾರಥಿಯೇ ಸಿಗುತ್ತಿಲ್ಲ

Published : Mar 31, 2023, 09:03 AM IST
 ಚಿಕ್ಕಬಳ್ಳಾಪುರ ಕ್ಷೇತ್ರ: ಕಾಂಗ್ರೆಸ್‌ಗೆ ಸಾರಥಿಯೇ ಸಿಗುತ್ತಿಲ್ಲ

ಸಾರಾಂಶ

ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಘೋಷಣೆ ಮುಗಿದಿದೆ. ಹಾಲಿ ಶಾಸಕರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾದರೂ ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆಂಬ ಗೊಂದಲ, ಕುತೂಹಲ ಇನ್ನೂ ಮುಂದುವರೆದಿದೆ.

ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಘೋಷಣೆ ಮುಗಿದಿದೆ. ಹಾಲಿ ಶಾಸಕರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾದರೂ ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುತ್ತಾರೆಂಬ ಗೊಂದಲ, ಕುತೂಹಲ ಇನ್ನೂ ಮುಂದುವರೆದಿದೆ.

ಹೌದು, ರಾಜ್ಯ ವಿಧಾನಸಭೆಯ ಅಖಾಡಕ್ಕೆ ಮುಹೂರ್ತ ನಿಗದಿಯಾಗಿ ರಾಜಕೀಯ ಪಕ್ಷಗಳು ಭರ್ಜರಿ ತಾಲೀಮು ಶುರು ಮಾಡಿದರೂ ಜಿಲ್ಲಾ ಕೇಂದ್ರ ಹೊಂದಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬ ಸಣ್ಣ ಸುಳಿವು ಇನ್ನೂ ಸಿಗುತ್ತಿಲ್ಲ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಆತಂಕ, ಗೊಂದಲಕ್ಕೆ ಕಾರಣವಾಗಿದೆ.

ಕೈ ಕಾರ್ಯಕರ್ತರಲ್ಲಿ ತಳಮಳ

ಜಿಲ್ಲೆಯ ಪೈಕಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿರುವ ಕ್ಷೇತ್ರ, ಬಿಜೆಪಿ, ಜೆಡಿಎಸ್‌, ಇಂದಿರಾ ಕಾಂಗ್ರೆಸ್‌ ತಲಾ ಒಮ್ಮೆ ಗೆಲುವು ಸಾಧಿಸಿರುವುದು ಹೊರತುಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಇಲ್ಲಿ ತನ್ನ ಪಾರುಪಾತ್ಯ ಸಾಧಿಸಿದೆ. ಆದರೆ ಕ್ಷೇತ್ರದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವಿಳಂಬ ಅನುಸರಿಸುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ ಮೊದಲ ಪಟ್ಟಿಬಿಡುಗಡೆಗೊಂಡರೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಇನ್ನೂ ಅಭ್ಯರ್ಥಿ ಆಯ್ಕೆ ಕಂಗಟ್ಟು ಆಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ತಳಮಳಕ್ಕೆ ಕಾರಣವಾಗಿದೆ.

ಈಗಾಗಲೇ ಕಾಂಗ್ರೆಸ್‌ ನಾಯಕರು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತೋರುತ್ತಿರುವ ವಿಳಂಭ ದೋರಣೆಗೆ ಬೇಸತ್ತು ಬಹಳಷ್ಟುನಾಯಕರು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟು ಬಿಜೆಪಿ, ಜೆಡಿಎಸ್‌ ಪಕ್ಷಗಳಿಗೆ ವಲಸೆ ಹೋಗುವುದು ಶುರುವಾಗಿದೆ. ಒಂದು ರೀತಿ ಕಾಂಗ್ರೆಸ್‌ ಪಕ್ಷದಲ್ಲಿ ಯಾವ ನಾಯಕನಿಗೂ ಪಕ್ಷದ ಕಾರ್ಯಕರ್ತರ ಮೇಲೆ ಕ್ಷೇತ್ರದಲ್ಲಿ ಹಿಡಿತ ಇಲ್ಲದೇ ಇರುವುದು, ಮನೆಯೊಂದು ಮೂರು ಬಾಗಿಲು ಎನ್ನುವಂತೆ ಪಕ್ಷದ ಟಿಕೆಟ್‌ಗಾಗಿ ಪಕ್ಷದೊಳಗೆ ಅತಂರಿಕವಾಗಿ ಗುಂಪುಗಾರಿಕೆ ತಾರಕಕ್ಕೇರಿರುವ ಪರಿಣಾಮ ಪಕ್ಷದ ವರಿಷ್ಠರಿಗೂ ಟಿಕೆಟ್‌ ಆಯ್ಕೆ ವಿಚಾರ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಸಿಗುತ್ತಿಲ್ಲ

ಆರೋಗ್ಯ ಸಚಿವ ಸುಧಾಕರ್‌ರನ್ನು ಮಣಿಸಬೇಕೆಂಬ ಕಾಂಗ್ರೆಸ್‌ ನಾಯಕರ ಚಿಂತನೆಗೆ ಪೂರಕವಾಗಿ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಸಲು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್‌ ನಾಯಕರಿಗೂ ಇನ್ನೂ ಸಾಧ್ಯವಾಗದಿರುವುದು ಎದ್ದು ಕಾಣುತ್ತಿದೆ. ಜೊತೆಗೆ ಅಖಾಡಕ್ಕೆ ಪ್ರಬಲ ವ್ಯಕ್ತಿಗಳನ್ನು ಇಳಿಸಬೇಕೆಂಬ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಮುಳಬಾಗಿಲು ಮಾಜಿ ಶಾಸಕ ಕೊತ್ತನೂರು ಮಂಜುನಾಥ, ಮಾಜಿ ಸಚಿವ ಎಂ.ಆರ್‌.ಸೀತಾರಾಮ್‌ ಪುತ್ರ ರಕ್ಷಾ ರಾಮಯ್ಯರನ್ನು ಕರೆ ತರುವ ಪ್ರಯತ್ನಗಳು ಫಲ ಸಿಗದೇ ಇರುವುದರಿಂದ ಒಂದು ರೀತಿ ಕಾಂಗ್ರೆಸ್‌ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಅನಾಥವಾದಂತೆ ಕಂಡು ಬರುತ್ತಿದೆ.

ವಿನಯ್‌, ಪ್ರದೀಪ್‌ ಹೆಸರು ಮುಂಚೂಣಿ!

ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ವಿನಯ್‌ ಶಾಮ್‌, ಪ್ರದೀಪ್‌ ಈಶ್ವರ್‌ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ವಿನಯ್‌ ಶಾಮ್‌ ಸೇವಾ ಕಾರ್ಯಗಳ ಮೂಲಕ ಕ್ಷೇತ್ರದಲ್ಲಿ ಒಂದಿಷ್ಟುಜನಪ್ರಿಯತೆ ಹೊಂದಿದ್ದಾರೆ. ಪ್ರದೀಪ್‌ ಈಶ್ವರ್‌ ಹೊಸ ಮುಖ. ಈ ಹಿಂದೆ ಸುಧಾಕರ್‌ ವಿರುದ್ಧ ಹೋರಾಟ ನಡೆಸಿ ಮುಂಚೂಣಿಗೆ ಬಂದಿದ್ದ ವ್ಯಕ್ತಿ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಬಲಿಜ ಸಮುದಾಯದ ಯುವ ಮುಖಂಡ. ಆದರೆ ಸುಧಾಕರ್‌ ವಿರುದ್ದ ಹೋರಾಟ ನಡೆಸಿ ಬಳಿಕ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದೆಡೆ ಯಲುವಹಳ್ಳಿ ರಮೇಶ್‌, ಗಂಗರೇ ಕಾಲುವೆ ನಾರಾಯಣಸ್ವಾಮಿ ಕೂಡ ಟಿಕೆಟ್‌ಗೆ ಟವೆÜಲ್‌ ಹಾಕಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದರೂ ಚಿಕ್ಕಬಳ್ಳಾಪುರ ಕಾಂಗ್ರೆಸ್‌ಗೆ ಸಾರಥಿ ಸಿಗದಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದು ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕತರು ತಮ್ಮ ರಾಜಕೀಯ ಭವಿಷ್ಯ ಕಾಪಾಡಿಕೊಳ್ಳಲು ಅನ್ಯಪಕ್ಷಗಳತ್ತ ವಲಸೆ ಸಜ್ಜಾಗುತ್ತಿದ್ದಾರೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ