Chamarajanagar; ರೈತನ ಕಣ್ಣಲ್ಲಿ ನೀರು ತರಿಸ್ತಿದೆ ಸಣ್ಣೀರುಳ್ಳಿ

By Gowthami KFirst Published Jul 24, 2022, 9:09 PM IST
Highlights

ಚಾಮರಾಜನಗರ ಜಿಲ್ಲೆಯಲ್ಲಿ ಅಂದಾಜು 2800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದ್ರೆ ಮಳೆಯಿಂದ ಸುಮಾರು 500 ಕ್ಕೂ ಹೆಕ್ಟೇರ್ ಬೆಳೆ ಹಾಳಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಕೂಡ ಸಿಗದೆ ರೈತರು ಕಂಗಾಲಾಗಿದ್ದಾರೆ.

ವರದಿ: ಪುಟ್ಟರಾಜು. ಆರ್.ಸಿ. ಏಷ್ಯಾನೆಟ್  ಸುವರ್ಣ  ನ್ಯೂಸ್ 

ಚಾಮರಾಜನಗರ (ಜು.24): ಈರುಳ್ಳಿ ಅಡುಗೆ ಮನೆಯಲ್ಲಿ ಹೆಣ್ಮಕ್ಕಳ ಮುಖದಲ್ಲಿ ಕಣ್ಣೀರು ತರಿಸುವುದು ಕಾಮನ್. ಆದ್ರೀಗ ಈರುಳ್ಳಿ ಬೆಳೆದ ನೂರಾರು ರೈತರ ಮೊಗದಲ್ಲೂ ಕಣ್ಣೀರು ತರಿಸುತ್ತಿದೆ.  ಚಾಮರಾಜನಗರ ಜಿಲ್ಲೆಯಲ್ಲಿ ಅಂದಾಜು 2800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದ್ರೆ ಮಳೆಯಿಂದ ಸುಮಾರು 500 ಕ್ಕೂ ಹೆಕ್ಟೇರ್ ಬೆಳೆ ಹಾಳಾಗಿದೆ. ಇನ್ನುಳಿದ ಪ್ರದೇಶದಲ್ಲಿ ಈರುಳ್ಳಿಗಳು ಬೆಳೆ ಚೆನ್ನಾಗಿದ್ರು ಬೆಲೆ ಕುಸಿತದಿಂದ ರೈತರು ಈರುಳ್ಳಿಯನ್ನು ಕೀಳಲು ಮುಂದಾಗಿಲ್ಲ. ಸದ್ಯ ಈರುಳ್ಳಿ ಕಿತ್ತು ಒಣಗಿಸಲು ಪ್ರತಿ ಕೆಜಿಗೆ 6 ರಿಂದ 8 ರೂಪಾಯಿ ಖರ್ಚಾಗುತ್ತದೆ. ಆದ್ರೆ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರಸ್ಥರು ಕೆಜಿಗೆ 6 ರೂಪಾಯಿಗೆ ಕೇಳುತ್ತಾರೆ. ಹೀಗಾಗಿ ಈರುಳ್ಳಿ ಕಿತ್ತ ಹಣ ಸಹ ಬರಲ್ಲ. ಇದು ಒಂದು ಕಡೆಯಾದರೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಕಣ್ಣೀರು ತರಿಸುತ್ತಿದೆ. ಹೀಗಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು, ಜೊತೆಗೆ ಅತಿಯಾದ ಮಳೆಯಿಂದ ಜಮೀನಿನಲ್ಲಿ ಈರಳ್ಳಿ ಕೀಳಲಾಗದ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗಿ ಈ ಬಾರಿ  ಈರುಳ್ಳಿ ಬೆಳೆಯನ್ನು ಭೂಮಿಯಲ್ಲೇ ಬಿಡುವ ಪರಿಸ್ಥಿತಿ ಬಂದೊಂದಾಗಿದೆ.

 ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನೆಲಕಚ್ಚಿದ್ದು,  ಬೆಲೆ ಹಾಗು ಮಳೆಯಿಂದ ರೈತರ ಬದುಕಲ್ಲಿ ಈರುಳ್ಳಿ ಕಣ್ಣೀರು ಸುರಿಸುತ್ತಿದೆ. ಇನ್ನು  ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತೆ. ಪ್ರತಿ ವರ್ಷ ಬರುತ್ತಿದ್ದ ಲಾಭವನ್ನು ಗಮನದಲ್ಲಿಟ್ಟುಕೊಂಡು ರೈತರು ಈ ಬಾರಿಯೂ ಈರುಳ್ಳಿ ಬೆಳೆದಿದ್ರು.  ಒಂದೊಂದು ಬಾರಿ ಒಂದು  ಕೆಜಿಗೆ 200 ರೂಪಾಯಿ ತನಕ ಮಾರಾಟವಾಗುವ ಈರುಳ್ಳಿ  ಈ ವರ್ಷ ಒಂದು ಕೆ.ಜಿ. ಈರುಳ್ಳಿಗೆ ಆರರಿಂದ ಏಳು ರೂಪಾಯಿ ಮಾತ್ರ ಸಿಗುತ್ತಿದ್ದು ಇದರಿಂದ ಕೂಲಿ ಕಾರ್ಮಿಕರ ವೆಚ್ಚ  ಭರಿಸಲು ಸಹ ರೈತರಿಂದ ಸಾಧ್ಯವಾಗುತ್ತಿಲ್ಲ. ಬೆಲೆ ಕುಸಿದಿರುವ ಪರಿಣಾಮ ಕೆಲವು ರೈತರು ಜಮೀನುಗಳಲ್ಲೇ ಈರುಳ್ಳಿ ರಾಶಿ ಹಾಕಿಕೊಂಡು ಮಾರಾಟಕ್ಕಾಗಿ ಪರಿತಪಿಸುತ್ತಿದ್ದರೆ, ಇನ್ನು ಕೆಲವು ರೈತರು   ಬೆಲೆ ಕುಸಿದಿರುವ ಪರಿಣಾಮ ಜಮೀನಿನಲ್ಲಿ ಈರುಳ್ಳಿಯನ್ನು ಕೀಳಲು  ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.

ಹೀಗಾಗಿ ಈರುಳ್ಳಿ ಸಂಪೂರ್ಣ ಮಣ್ಣು ಪಾಲಾಗಿದೆ. ಕಬ್ಬು ಬೆಳೆಯಿಂದ ನಷ್ಟವಾಯ್ತು ಅಂತ ಈರುಳ್ಳಿ ಬೆಳೆದ್ವಿ. ಈಗ ಅದಕ್ಕೂ ಬೆಲೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಬಾರಿ ನೂರಾರು ರೈತರು ಈರುಳ್ಳಿ ಬೆಳೆದು ಸಾಲಗಾರರಾಗಿದ್ದು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಬೆಂಬಲ ಬೆಲೆಯನ್ನಾದ್ರೂ ಕೊಡಲಿ ಅಂತಾ ಮನವಿ ಮಾಡ್ತಿದ್ದಾರೆ.

ಒಟ್ಟಾರೆ ಈ ಬಾರಿ ಈರುಳ್ಳಿ ಬೆಳೆ ಮಾತ್ರ ರೈತರ ಕಣ್ಣಲ್ಲಿ ನೀರು ತರಿಸಿದೆ. ಲಾಭದಾಸೆಯಿಂದ ಬಡ್ಡಿ ಸಾಲ ಮಾಡಿ ಬಿತ್ತನೆ ಮಾಡಿದ್ದ ಅನ್ನದಾತನ ಸಂಕಷ್ಟ ಹೇಳತೀರದಾಗಿದೆ. ರೈತರಿಗೆ ವರವಾಗಿದ್ದ ಮಳೆ ಈ ಬಾರಿ ಶಾಪವಾಗಿ ಪರಿಣಮಿಸಿದೆ. ವ್ಯವಸಾಯವನ್ನೆ ನಂಬಿ ಬದುಕು ಕಟ್ಟಿಕೊಂಡಿದ್ದ ಸಣ್ಣ ಪುಟ್ಟ ರೈತರ ಸ್ಥಿತಿ ದುಸ್ಥಿತಿಯಲ್ಲಿದೆ  ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದೆ.

click me!