' ಕನ್ನಡಪ್ರಭ, ಲಂಕೇಶ್ ಪತ್ರಿಕೆ 1983ರಲ್ಲಿ ಸರ್ಕಾರ ಬೀಳಿಸಿದ್ದವು'

By Kannadaprabha News  |  First Published Mar 21, 2021, 11:23 AM IST

ಬೆಂಗಳೂರಿನ ಬಹುರೂಪಿ-ದಾವಣಗೆರೆ ನಗರವಾಣಿ ಸಂಯುಕ್ತಾಶ್ರಯದಲ್ಲಿ ಲೇಖಕ, ಪತ್ರಕರ್ತ ಬಿ.ಎನ್‌.ಮಲ್ಲೇಶ್‌ರ ತೆಪರೇಸಿ ರಿಟರ್ನ್ಸ್ ವಿನೋದ ಬರಹಗಳ ಕೃತಿ ಬಿಡುಗಡೆ ಮಾಡಲಾಯಿತು.  ಈ ವೇಳೆ ಸಾಹಿತ್ಯ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು


 ದಾವಣಗೆರೆ (ಮಾ.21):  ಸಂಸ್ಕೃತದಲ್ಲಿ ವಿಡಂಬನೆ ಇರುವಂತೆ ಕನ್ನಡದಲ್ಲೂ ವಿಡಂಬನಾ ಸಾಹಿತ್ಯವಿದ್ದರೂ, ಕಾರಣಗಳಿಂದಾಗಿ ಅದು ಚರ್ಚೆಯಾಗಿಲ್ಲ. ಸಾಹಿತ್ಯದಲ್ಲಿ ರಸ, ಅಲಂಕಾರ ಇತ್ಯಾದಿಗಳ ಬಗ್ಗೆ ಸಾಕಷ್ಟು ಚರ್ಚೆಯಾದರೂ, ಮೀಮಾಂಸೆಯಲ್ಲಿ ವಿಡಂಬನೆಯ ಬಗ್ಗೆ ಅಷ್ಟೊಂದು ಚರ್ಚೆಯಾಗಿಲ್ಲ ಎಂದು ಹಿರಿಯ ವಾಗ್ಮಿ, ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷತ್ರದಲ್ಲಿ ಶನಿವಾರ ಬೆಂಗಳೂರಿನ ಬಹುರೂಪಿ-ದಾವಣಗೆರೆ ನಗರವಾಣಿ ಸಂಯುಕ್ತಾಶ್ರಯದಲ್ಲಿ ಲೇಖಕ, ಪತ್ರಕರ್ತ ಬಿ.ಎನ್‌.ಮಲ್ಲೇಶ್‌ರ ತೆಪರೇಸಿ ರಿಟರ್ನ್ಸ್ ವಿನೋದ ಬರಹಗಳ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಯೆಯನ್ನೂ ಮೀರಿದಾಗ ಸತ್ಯದರ್ಶನ ಮಾಡಿಸುವಂತಹ ಶಕ್ತಿ ವಿಡಂಬನಾ ಸಾಹಿತ್ಯಕ್ಕೆ ಇದೆ ಎಂದರು.

Tap to resize

Latest Videos

ರನ್ನನ ಗಧಾಯುದ್ಧದಲ್ಲಿ, ಶರಣರ ವಚನಗಳಲ್ಲಿ ಸಾಕಷ್ಟುಸಾಮಾಜಿಕ ವಿಡಂಬನೆಗಳಿವೆ. ಸಂತ ಶಿಶುನಾಳ ಶರೀಫರು, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ದ.ರಾ.ಬೇಂದ್ರೆ, ಕುವೆಂಪು, ಕಾರಂತರು, ಅಡಿಗರು ವಿಡಂಬನಾ ಸಾಹಿತ್ಯ ರಚಿಸಿದ್ದಾರೆ. ಹಿಂದಿನವರ ವಿಡಂಬನಾ ಸಾಹಿತ್ಯ, ಈಗಿನವರ ವಿಡಂಬನಾ ಸಾಹಿತ್ಯಕ್ಕೂ ವ್ಯತ್ಯಾಸವಿದೆ. ಈಗಿನವರ ವಿಡಂಬನೆ ಒಬ್ಬ ಅಸಹಾಯಕ ಪ್ರಜೆಯ ಮೈ ತುರಿಕೆನಾ ಅನಿಸುವಂತಿದೆ. ಪುಣ್ಯವಶಾತ್‌ ವಿಡಂಬನೆಗೆ ಒಳಗಾದವರು ಪುಸ್ತಕಗಳನ್ನು ನಿರಂತರ ಓದುತ್ತಿಲ್ಲ. ಓದಲಾರಂಭಿಸಿದರೆ ನಂತರ ನಾಲ್ಕು ಬಾರಿ ಗದರಿದರೆ ನಾವ್ಯಾರೂ ವಿಡಂಬನೆಯಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಇಂತಹ ಮಹನೀಯರಿಗೆಲ್ಲಾ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಅಭಿಮಾನಿ ಸಂಘಗಳಿವೆ. ಬರೆದವರನ್ನು ಅಟ್ಟಾಡಿಸಿ ಬಿಡುತ್ತಾರೆ ಎಂದು ಹೇಳಿದರು.

ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ .

ಇಂತಹದ್ದೊಂದು ಭಯಾನಕ ವಾತಾವರಣ ಇಂದು ನಮ್ಮೆದುರು ತೆರೆದುಕೊಳ್ಳುತ್ತಿದೆ. ಹಾಗಾಗಿ, ನಾವು ನೇರವಾಗಿ ಹೇಳುವುದು ಕಷ್ಟ. ಇಂತಹ ವಿಡಂಬನೆ ಮಾಡಿ ಬಚಾವಾಗಬಹುದು ಎಂದುಕೊಂಡಿದ್ದೇವೆ. ಇದರಿಂದ ನಮಗೂ, ಓದಿದವರಿಗೂ ಸಮಾಧಾನವಾಯಿತೆಂದರೆ, ಅಲ್ಲಿಗೆ ಮುಗಿಯಿತು. ಆದರೆ, ತೆಪರೇಸಿಗೆ ಯಾವ ರಿಯಾಯಿತಿಯೂ ಬೇಕಿಲ್ಲ. ಇರುವ ಪಾತ್ರದ ರೀತಿಯಲ್ಲೇ ತೆಪರೇಸಿಯನ್ನು ನೋಡಬೇಕು. ವ್ಯವಸ್ಥೆಯ ಬಗ್ಗೆ ಒಂದು ಅಸಮಾಧಾನವು ಜಿಗುಪ್ಸೆಯನ್ನು ನಮ್ಮಲ್ಲಿ ದಾಖಲಿಸಿಕೊಂಡು ಹೋಗುತ್ತದೆ. ಅದು ಮತ ನೀಡುವ ಸಂದರ್ಭದಲ್ಲಿ ಕೆಲಸ ಮಾಡುತ್ತದೆ. 1983ರಲ್ಲಿ ಕನ್ನಡಪ್ರಭ, ಲಂಕೇಶ್‌ ಪತ್ರಿಕೆಗಳೇ ಒಂದು ಸರ್ಕಾರವನ್ನೂ ಬೀಳಿಸಿದ್ದನ್ನು ನಾವ್ಯಾರೂ ಮರೆಯಬಾರದು ಎಂದು ಅವರು ತಿಳಿಸಿದರು.

ಸರ್ಕಾರವನ್ನೇ ಬೀಳಿಸುವಂತಹ ತಾಕತ್ತು ಇನ್ನು ಮುಂದೆ ಪತ್ರಿಕೆಗಳಿಗೆ ಇಲ್ಲ. ಮುಂದೆಯೂ ಇರುವುದಿಲ್ಲ. ಪತ್ರಿಕಾ ರಂಗವೂ ಈಗ ಉದ್ಯಮವಾಗಿದೆ. ಮಾಧ್ಯಮಗಳೂ ಸಹ ಒಂದು ಪಕ್ಷ, ಒಂದು ಜಾತಿ, ಒಂದು ಗುಂಪಿನ ಪರವಾಗಿ ಕೆಲಸ ಮಾಡಲಾರಂಭಿಸಿವೆ. ಭವಿಷ್ಯದಲ್ಲಿ ಇದನ್ನು ಅಧಿಕೃತವಾಗಿ ನಾನು ಈ ಪಕ್ಷದ ಪತ್ರಿಕೆ, ನಾನು ಇಂತಹ ವಾಹಿನಿಯ ಮುಖವಾಣಿ ಎಂಬುದಾಗಿ ಘೋಷಿಸುವ ಕಾಲವೂ ಇನ್ನು ದೂರವಿಲ್ಲ. ಆಗ ತೆಪರೇಸಿಗೂ ಜಾಗ ಇರುವುದಿಲ್ಲ. ತೆಪರೇಸಿ ಅನಾಮಧ, ಆತ ಮುಖ ಇಲ್ಲದವನು. ಇಂತಹವರು ಎಲ್ಲರಿಗಿಂತಲೂ ಹೆಚ್ಚು ಸತ್ಯ ನುಡಿಯುತ್ತಾರೆ. ತಪರೇಸಿ ಹೇಳುವ ಸತ್ಯವನ್ನು ಬಹಳ ದೊಡ್ಡವರೂ ಮಾತನಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಎನ್‌.ವಿಶಾಖ, ಬೆಂಗಳೂರಿನ ಬಹುರೂಪಿಯ ಜೆ.ಎನ್‌.ಮೋಹನ್‌, ನಗರವಾಣಿ ಸಹ ಸಂಪಾದಕ, ಸಾಹಿತಿ ಬಿ.ಎನ್‌.ಮಲ್ಲೇಶ್‌, ಅನುಸೂಯ ಮಲ್ಲೇಶ್‌ ಇತರರು ಇದ್ದರು. ನಗರವಾಣಿ ಸಿಬ್ಬಂದಿ ಹಾಗೂ ಮಯೂರ ಗ್ಲೋಬಲ್‌ ಶಾಲೆ ಶಿಕ್ಷಕಿಯರು, ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು.

  ಆರ್‌.ಕೆ.ಲಕ್ಷ್ಮಣ್‌ ಕಾರ್ಟೂನ್‌ನಿಂದ ತೆಪರೇಸಿ ರಿಟರ್ನ್ಸ್ ವರೆಗೆ ವಿಡಂಬನಾತ್ಮಕವಾಗಿ ಚುಚ್ಚುವ ಕೆಲಸ ಆಗಿದೆ: ಜೋಗಿ

  ಬಹಳ ಹಿಂದೆ ಆರ್‌.ಕೆ.ಲಕ್ಷ್ಮಣ್‌ ವ್ಯಂಗ್ಯಚಿತ್ರಗಳ ಮೂಲಕ ರಾಜಕಾರಣಿಗಳು, ಅಧಿಕಾರಿಗಳ ಯೋಗ್ಯತೆಯನ್ನು ಕನ್ನಡಿಯಲ್ಲಿ ನೋಡಿಕೊಂಡಂತೆ ತೋರಿಸುತ್ತಿದ್ದರು. ಅಂತಹವರು ತಮ್ಮ ಯೋಗ್ಯತೆ ಇಷ್ಟೇ ಎಂಬುದನ್ನು ಆ ಕಾರ್ಟೂನ್‌ಗಳನ್ನು ನೋಡಿಯೇ ಅರ್ಥ ಮಾಡಿಕೊಳ್ಳುತ್ತಿದ್ದರು ಎಂದು ಕನ್ನಡಪ್ರಭ ಪುರವಣಿ ಸಂಪಾದಕ, ಸಾಹಿತಿ ಜೋಗಿ(ಗಿರೀಶ್‌ ರಾವ್‌ ಹತ್ವಾರ್‌) ತಿಳಿಸಿದರು.

ನಗರದಲ್ಲಿ ಶನಿವಾರ ಹಿರಿಯ ಪತ್ರಕರ್ತ ಬಿ.ಎನ್‌.ಮಲ್ಲೇಶ್‌ ಅವರ ತೆಪರೇಸಿ ರಿಟರ್ನ್ಸ್ ವಿನೋದ ಬರಹಗಳ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ರಾಜಕಾರಣಿಗಳು, ಅಧಿಕಾರಿಗಳ ಯೋಗ್ಯತೆ ಹೇಳುವಂತಹವರೇ ಇಲ್ಲದ ಕಾಲದಲ್ಲಿ ಅದನ್ನು ಹೆಕ್ಕಿ, ಪತ್ರಿಕೆಯಲ್ಲಿ ಮಿಡಲ್‌ನಲ್ಲಿ ಹೇಳಿಕೊಂಡು ಬಂದವರು ಆರ್‌.ಕೆ.ಲಕ್ಷ್ಮಣ್‌. ನಂತರ ಅದು ಸಾಲದೆಂಬಂತೆ ಮಾಸ್ಟರ್‌ ಹಿರಣ್ಣಯ್ಯ, ಪಿ.ಲಂಕೇಶ್‌, ರವಿ ಬೆಳಗೆರೆ ಅಂತಹವರು ಅದನ್ನು ಜೋರಾಗಿ ಬಹಳ ಕಟುವಾದ ಧ್ವನಿಗಳಲ್ಲಿ ಹೇಳುತ್ತಾ ಬಂದರು ಎಂದರು.

ಎಲ್ಲ ಅಸ್ತ್ರಗಳು ಸೋತಾಗ ಕಡೆಗೆ ಉಳಿಯುವ ಅಸ್ತ್ರವೆಂದರೆ ಅದು ಈ ತೆಪರೇಸಿ ಬಳಸುವ ವಿನೋದ. ಯಾವುದನ್ನು ನೀವು ವಿರೋಧವಾಗಿ ಹೇಳುತ್ತೀರೋ ಅದನ್ನು ತಮಾಷೆಯಾಗಿ ಹೇಳಿದ್ದು, ಅಂತಹವರ ಮನಸ್ಸಿನಲ್ಲಿ ನಾಟುತ್ತದೆ. ಎಷ್ಟುಕಪ್ಪು ಚುಕ್ಕೆ ಉಳಿಯುತ್ತೆ ಎಂದರೆ ಅದನ್ನು ಅಂತಹವರಿಗೆ ಮರೆಯುವುದಕ್ಕೂ ಸಾಧ್ಯವಿಲ್ಲ. ಒಂದು ದಿನವಾದರೂ ತಮ್ಮನ್ನು ವಿಡಂಬನೆ ಮೂಲಕ ಎಚ್ಚರಿಸುತ್ತಾರೆಂಬ ಕನಿಷ್ಠ ಅರಿವಿನಿಂದಾದರೂ ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕೆಂಬ ಮನೋಭಾವ ಶೇ.5ರಷ್ಟಾದರೂ ಅನಿಸಬಹುದು ಎಂದು ಹೇಳಿದರು.

ಅಪರೂಪದ, ಸಭ್ಯ ಪತ್ರಕರ್ತ ಬಿ.ಎನ್‌.ಮಲ್ಲೇಶ್‌ ಯಾರನ್ನು ಹೊಗಳಬೇಕೆಂದು ರಾಜಕಾರಣಿಗಳು ಬಯಸುತ್ತಾರೋ, ಸಮಾಜ ಬಯಸುತ್ತದೋ, ಆ ರಾಜಕಾರಣಿಗಳ ಬೆಂಬಲಿಗರು ಇಚ್ಛಿಸುತ್ತಾರೋ ಅಂತಹವರನ್ನು ಎಲ್ಲಿ ಟೀಕಿಸಿ, ಎಲ್ಲಿ ಚುಚ್ಚಬೇಕೋ ಅಲ್ಲಿ ಚುಚ್ಚಿ, ಟೀಕಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಎಲ್ಲರನ್ನೂ ಬೆದರಿಸುವುದು, ಉತ್ಸವ ಮೂರ್ತಿಗಳನ್ನಾಗಿ ಮಾಡುವುದು, ಇರುವುದಕ್ಕಿಂತ ದೊಡ್ಡದಾಗಿ ತೋರಿಸುವುದು, ಮಾಡಿದ್ದಕ್ಕಿಂತ 10 ಪಟ್ಟು ದೊಡ್ಡದಾಗಿ ಬಿಂಬಿಸುವ ಕೆಲಸ ಸೋಷಿಯಲ್‌ ಮೀಡಿಯಾಗಳಿಂದ ಹಿಡಿದು ಎಲ್ಲ ಮಾಧ್ಯಮಗಳು ಮಾಡುತ್ತಿರುವ ಕಾಲಘಟ್ಟದಲ್ಲಿ ನಿನ್ನ ಯೋಗ್ಯತೆ ಇಷ್ಟುಅಂತಾ ತೋರಿಸುವುದು ಹಾಸ್ಯದಿಂದ ಮಾತ್ರ ಸಾಧ್ಯ ಎಂದು ಅವರು ವಿವರಿಸಿದರು.

ಪತ್ರಿಕಾ ರಂಗಕ್ಕೆ ನಾನು ಬಂದ ಮೂರು ದಶಕವಾಯಿತು. ಯಾರು ರಾಜಕಾರಣಿಗಳು, ಅಧಿಕಾರಿಗಳಿಂದ ನೊಂದಿದ್ದಾರೋ, ಯಾವ ಪ್ರಜೆಯ ಒಳಗೆ ಒಬ್ಬ ನೊಂದ ಮತದಾರನಿದ್ದಾನೋ ಅಂತಹವರ ಮನಸ್ಸಿಗೆ ಸಂತೋಷ ತರುವ ಕೆಲಸ ತೆಪರೇಷಿ ಮಾಡಿದ್ದಾನೆ. ನಾವು ನ್ಯಾಯಾಂಗವನ್ನು ಏಕೆ ಮೆಚ್ಚುತ್ತೇವೆಂದರೆ ಈ ಸಮಾಜದಲ್ಲಿರುವ ಏಳು-ಬೀಳುಗಳನ್ನು ಅಥವಾ ಮೇಲು-ಕೀಳುಗಳನ್ನು ನ್ಯಾಯಾಂಗ ವ್ಯವಸ್ಥೆ ಸರಿ ಮಾಡುತ್ತದೆಂಬ ನಂಬಿಕೆಯಿಂದ. ಈ ರೀತಿಯ ಸರಿಪಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಇಂದು ಮಾಡಲಿಕ್ಕೆ ಸಾಧ್ಯವಿರುವುದು ತೆಪರೇಸಿಯಂತಹ ಒಂದು ಪಾತ್ರದಿಂದ. ವಿಡಂಬನಾತ್ಮಕವಾಗಿ ಚುಚ್ಚಿ ಎಚ್ಚರಿಸುವ ಕೆಲಸ ತೆಪರೇಸಿ ಮಾಡುತ್ತಿದ್ದು, ಈ ಪಾತ್ರದ ಸೃಷ್ಟಿಕರ್ತ ಮಲ್ಲೇಶ್‌ಗೆ ಅಭಿನಂದಿಸುವೆ.

-ಜೋಗಿ(ಗಿರೀಶ್ ರಾವ್‌ ಹತ್ವಾರ್‌) ಕನ್ನಡಪ್ರಭ ಪುರವಣಿ ಸಂಪಾದಕ

click me!