* ಅಂಟಿ ಬಯಾಟಿಕ್ ಮತ್ತು ಅಂಟಿ ಫಂಗಲ್‌ಗೆ ಚಿಕಿತ್ಸೆ
* ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ
* ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವ ರೋಗಿ
ಬೆಂಗಳೂರು(ಏ.28): ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ (Black Fungus) ಪ್ರಕರಣವೊಂದು ಪತ್ತೆಯಾಗಿದೆ. ಏ. 22ರಂದು 64 ವರ್ಷದ ಮಹಿಳೆಯೊಬ್ಬರು(Woman) ಉಸಿರಾಟದ ತೊಂದರೆ ಮತ್ತು ಮುಖ ಊದಿರುವ ಲಕ್ಷಣದೊಂದಿಗೆ ದಾಖಲಾಗಿದ್ದು, ಅವರಲ್ಲಿ ಬ್ಲ್ಯಾಕ್ ಫಂಗಸ್ ಇರುವುದು ಖಚಿತವಾಗಿದೆ ಎಂದು ಆಸ್ಪತ್ರೆಯ ಕನ್ಸಲ್ಟಂಟ್ ಫಿಜಿಷಿಯನ್ ಆದರ್ಶ ನಾಯಕ್ ಹೇಳಿದ್ದಾರೆ.
ನಾವು ಪರೀಕ್ಷೆ ನಡೆಸಿದಾಗ ಬ್ಲ್ಯಾಕ್ ಫಂಗಸ್ ಇರುವುದು ಗೊತ್ತಾಯಿತು. ಆ ನಂತರ ರೋಗಿ ಡಯಾಬಿಟಿಕ್ ಆಗಿರುವುದು ಮತ್ತು ಮೂತ್ರಪಿಂಡದ ವೈಫಲ್ಯ ಸಮಸ್ಯೆ ಇರುವುದು ತಿಳಿಯಿತು. ತಕ್ಷಣವೇ ಅಂಟಿ ಬಯಾಟಿಕ್ ಮತ್ತು ಅಂಟಿ ಫಂಗಲ್‌ಗೆ ಚಿಕಿತ್ಸೆ ಆರಂಭಿಸಿದ್ದೆವು. ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ(Treatment)ಮುಂದುವರಿಸಲಾಗಿದೆ. ಚಿಕಿತ್ಸೆಗೆ ರೋಗಿಯು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಡಾ. ಆದರ್ಶ ನಾಯಕ್ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಎರಡನೇ ಅಲೆ(Covid 2nd Wave) ಕ್ಷೀಣಿಸಿದ ಬಳಿಕ ಜುಲೈ, ಆಗಸ್ಟ್ ತಿಂಗಳಿನಲ್ಲಿ ಕೋವಿಡ್ ಸೊಂಕಿತ ಸಾವಿರಾರು ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಆದರೆ ಈಕೆಗೆ ಕೋವಿಡ್ ಬಂದಿರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಳೆದ 6 ತಿಂಗಳಲ್ಲಿ ಬ್ಲ್ಯಾಕ್ ಫಂಗಸ್ ಪೀಡಿತ 10 ಮಂದಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
3ನೇ ಅಲೆಯಲ್ಲಿ ಮರಳಿ ಬಂತಾ ಬ್ಲಾಕ್ ಫಂಗಸ್: ಮುಂಬೈನಲ್ಲಿ ವರ್ಷದ ಮೊದಲ ಕೇಸ್ ಪತ್ತೆ
4ನೇ ಅಲೆ ತೀವ್ರವಾದರೆ ಗರ್ಭಿಣಿಯರಿಗೆ ವಲಯವಾರು ಪ್ರತ್ಯೇಕ ಆಸ್ಪತ್ರೆ ಆರಂಭ
ಕೊರೋನಾ(Coronavirus) 4ನೇ ಅಲೆ ತೀವ್ರಗೊಂಡರೆ ಗರ್ಭಿಣಿ(Pregnent) ಮತ್ತು ಬಾಣಂತಿಯರ ಚಿಕಿತ್ಸೆಗೆ ವಲಯವಾರು ಒಂದೊಂದು ಪ್ರತ್ಯೇಕ ಆಸ್ಪತ್ರೆ(Hospital) ಆರಂಭಿಸಲಾಗುವುದು ಎಂದು ಬಿಬಿಎಂಪಿ ಕ್ಲಿನಿಕಲ್ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಬುಗ್ಗಿ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಎರಡು ಅಲೆಯ ವೇಳೆ ಗರ್ಭಿಣಿಯರು ಹಾಗೂ ಬಾಣಂತಿಯರ ಚಿಕಿತ್ಸೆಗೆ ಸಾಕಷ್ಟುಸಮಸ್ಯೆ ಎದುರಾಗಿತ್ತು. ಈ ವೇಳೆ ಕೆಲವು ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಾಣಿವಿಲಾಸ ಮತ್ತು ಘೋಷಾ ಆಸ್ಪತ್ರೆಯನ್ನು ಮೀಸಲು ಇಡಲಾಗಿತ್ತು. ಎರಡನೇ ಅಲೆಯ ವೇಳೆ ಪಾಲಿಕೆಯ ಕೆಲವು ಆಸ್ಪತ್ರೆಗಳನ್ನು ಸಿದ್ಧಪಡಿಸಿ, ಅಲ್ಲಿ ಹೆರಿಗೆ ಮತ್ತು ಕೋವಿಡ್ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಕೋವಿಡ್ 4ನೇ ಅಲೆಯ(Covid 4th Wave) ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರ ಹೆರಿಗೆಗೆ ಮತ್ತು ಸೋಂಕಿತ ಬಾಣಂತಿಯರ ಆರೈಕೆಗೆ ಪ್ರತ್ಯೇಕವಾಗಿ ಆಸ್ಪತ್ರೆಯನ್ನು ಮೀಸಲಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆಯ(BBMP) ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ 2ನೇ ಅಲೆಯ ವೇಳೆ ಹಲವು ಸೋಂಕಿತ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಕೊರೋನಾ 3ನೇ ಅಲೆಯಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಸೋಂಕು ಪತ್ತೆಯಾಗಲಿಲ್ಲ. ಜತೆಗೆ ಮೂರನೇ ಅಲೆ ಮುಕ್ತಾಯಗೊಂಡ ನಂತರ ಯಾವುದೇ ಗರ್ಭಿಣಿ ಅಥವಾ ಬಾಣಂತಿಗೆ ಸೋಂಕು ಕಾಣಿಸಿಕೊಂಡಿಲ್ಲ. ಈಗ ವಲಯಕ್ಕೊಂದು ಆಸ್ಪತ್ರೆ ಸಿದ್ಧಪಡಿಸಲಾಗುತ್ತಿದ್ದು, ಕನಿಷ್ಠ 10 ಹಾಸಿಗೆ, ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲು ನಿಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.