ರಾಜೀನಾಮೆ ವಿಚಾರವೊಂದು ಇದೀಗ ಬಿಜೆಪಿಗೆ ತಲೆನೋವಾಗಿದೆ. ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತಹ ಸ್ಥಿತಿ ನಿರ್ಮಾಣವಾಗಿದೆ
ವರದಿ : ಆರ್.ತಾರಾನಾಥ್
ಚಿಕ್ಕಮಗಳೂರು (ನ.24): ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆ ಎಂಬುದು ಬಿಜೆಪಿ ಪಾಲಿಗೆ ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತಾಗಿದೆ.
ತಾನೇ ಪಟ್ಟಾಭಿಷೇಕ ಮಾಡಿರುವ ಅಧ್ಯಕ್ಷರನ್ನು ಆ ಹುದ್ದೆಯಿಂದ ಕೆಳಗೆ ಇಳಿಸಲು ಪಕ್ಷವು ಹಲವು ತಂತ್ರಗಾರಿಕೆಯ ಕೂಡಿ ಕಳೆಯುವ ಲೆಕ್ಕಚಾರ ಮಾಡುತ್ತಿದೆ. ಆದರೆ, ಯಾವ ಪ್ರಯತ್ನವೂ ಫಲಶೃತಿ ನೀಡುತ್ತಿಲ್ಲ.
ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಂದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೂ, ಪಕ್ಷದಿಂದ ಅಮಾನತುಗೊಳಿಸಿರುವುದಕ್ಕೆ ಆಡಳಿತಾತ್ಮಕವಾಗಿ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಮುಂದಿನ ಹಂತದಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ.
ಅವಿಶ್ವಾಸ ನಿರ್ಣಯ:
ಇದು, ಸದ್ಯ ಬಿಜೆಪಿಯ ಮುಂದಿನ ಅಸ್ತ್ರ. ಆದರೆ, ಅದನ್ನು ತಕ್ಷಣಕ್ಕೆ ಪ್ರಯೋಗ ಮಾಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ. ಕಾರಣ, ಸಂಖ್ಯಾ ಬಲದ ಕೊರತೆ. ಈ ವಿಷಯದಲ್ಲಿ ಪ್ರತಿಪಕ್ಷದ ಬೆಂಬಲ ಕೋರುವುದು ಸರಿಯಲ್ಲ. ಆದ್ದರಿಂದ ಪಕ್ಷ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ತರಬೇಕಾದರೆ, ಅಧ್ಯಕ್ಷರು, ಆ ಹುದ್ದೆಗೆ ಚುನಾಯಿತರಾಗಿ 30 ತಿಂಗಳು ಕಳೆದಿರಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿನಿಯಮದಲ್ಲಿ ಹೇಳಲಾಗಿದೆ. ಆದರೆ, ಈ ಆದೇಶಕ್ಕೆ 31-3-2020 ರಂದು ತಿದ್ದುಪಡಿ ತರಲಾಗಿದ್ದು, ಅಧ್ಯಕ್ಷರು, 15 ತಿಂಗಳು ಅಧಿಕಾರ ಪೂರೈಸಿದರೆ ಅವರ ವಿರುದ್ಧ ಅವಿಶ್ವಾಸ ತರಬಹುದೆಂದು ಮಾರ್ಪಾಡುಗೊಳಿಸಲಾಗಿದೆ. ಈ ಆದೇಶದ ಪ್ರಕಾರ, ಜಿಪಂ ಅಧ್ಯಕ್ಷರ ವಿರುದ್ಧ ಬಿಜೆಪಿ ಅವಿಶ್ವಾಸ ತರಬಹುದು.
BJP ಸಚಿವರು, ಸಂಸದರಿಗೆ BLಸಂತೋಷ್ ವಾರ್ನಿಂಗ್ : ಒಪ್ಪಿಕೊಳ್ಳಲಾಗಲ್ಲ ಎಂದು ಎಚ್ಚರಿಕೆ ...
ಸಂಖ್ಯಾಬಲ ಕೊರತೆ:
ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯಬಲ 33. ಇದರಲ್ಲಿ ಸದ್ಯದ ಚಿತ್ರಣದ ಪ್ರಕಾರ, ಬಿಜೆಪಿಯಲ್ಲಿ 21, ಕಾಂಗ್ರೆಸ್ 11, ಜೆಡಿಎಸ್ 1 ಸದಸ್ಯರು ಇದ್ದಾರೆ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರಬೇಕಾದರೆ ಮೂರನೇ ಎರಡು ಭಾಗ ಸದಸ್ಯರ ಬಲ ಬೇಕು. ಅಂದರೆ, 22 ಸದಸ್ಯರ ಬೆಂಬಲ ಬೇಕು. ಆದರೆ, ಸದ್ಯ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಸೇರಿದಂತೆ ಬಿಜೆಪಿಯಲ್ಲಿ 21 ಮಂದಿ ಇದ್ದಾರೆ. ಅಧ್ಯಕ್ಷರು ತಮ್ಮ ವಿರುದ್ಧ ತಾವೇ ಮತ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿಯಲ್ಲಿ 20 ಸದಸ್ಯರು ಇದ್ದು, ಇನ್ನುಳಿದ 2 ಸದಸ್ಯರ ಬೆಂಬಲ ಬೇಕಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಬುಟ್ಟಿಗೆ ಕೈ ಹಾಕಬೇಕಾಗುತ್ತದೆ. ಆ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಗಬಹುದು ಎಂಬುದು ಬಿಜೆಪಿ ಮುಂದಿರುವ ಪ್ರಶ್ನೆ.
ಕೊನೆ ಹಂತ:
ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಾದರೂ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಬಹುದು. ಆಗ, ಒಂದು ತಿಂಗಳು ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅನಂತರ ಮಾಚ್‌ರ್ ಮಾಹೆಯೊಳಗೆ ಚಾಲ್ತಿಯಲ್ಲಿರುವ ಯೋಜನೆಗಳು ಪೂರ್ಣಗೊಳಿಸಿ ಅನುದಾನ ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರಲು ಬಿಜೆಪಿ ಮುಂದಾಗುವುದು ಅನುಮಾನ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.