ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ರಾಮನಗರದಲ್ಲಿ ತಮ್ಮ ಪಕ್ಷ ಬಲಪಡಿಸಲು ಸತತ ಯತ್ನ ನಡೆಸುತ್ತಿವೆ. ಇದೀಗ ಹೊಸ ಸಾರಥಿಗಾಗಿ ಹುಡುಕಾಟ ನಡೆಸುತ್ತಿವೆ.
ಎಂ. ಅಫ್ರೋಜ್ ಖಾನ್
ರಾಮನಗರ [ಆ.24]: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠರು ರಾಮನಗರ ಜಿಲ್ಲೆಯಲ್ಲು ಹೊಸ ಸಾರಥಿಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಎರಡು ಪಕ್ಷಗಳಿಗೂ ಪ್ರಬಲವಾಗಿ ಪೈಪೋಟಿ ನೀಡುವಂತೆ ಕಮಲ ಪಕ್ಷವನ್ನು ಸುಭದ್ರವಾಗಿ ಕಟ್ಟುವ ತವಕ ಬಿಜೆಪಿ ವರಿಷ್ಠರದ್ದಾಗಿದೆ. ಹೀಗಾಗಿ ಪಕ್ಷ ಸಂಘಟನೆ ಉದ್ದೇಶದಿಂದ ದಳ ಮತ್ತು ಕಮಲ ಪಕ್ಷಗಳ ವರಿಷ್ಠರು ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ.
ಚರ್ಚೆಗೆ ಗ್ರಾಸ:
ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವರು ರಾಜಿನಾಮೆ ನೀಡಿ ಒಂದೂವರೆ ತಿಂಗಳು ಕಳೆದಿದೆ. ರಾಜ್ಯದಲ್ಲಿ ತಮ್ಮ ಪಕ್ಷದವರೇ ಸಿಎಂ ಆಗಿರುವಾಗ ಅಶೋಕ್ ರಾಜೀನಾಮೆ ನೀಡಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಆತಂಕದಲ್ಲಿದ್ದ ಕಾರಣ ಅಶೋಕ್ ಅವರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನವನ್ನು ಮಾಡಲಿಲ್ಲ.
ಈಗ ಅಶೋಕ್ ರಾಜಿನಾಮೆಯಿಂದ ತೆರವಾಗಿರುವ ಸ್ಥಾನದಲ್ಲಿ ತೆನೆ ಹೊರುವ ಆಕಾಂಕ್ಷಿತರಲ್ಲಿ ಕನಕಪುರದ ದುಂತೂರು ವಿಶ್ವನಾಥ್, ಚನ್ನಪಟ್ಟಣ ಸಿಂ.ಲಿಂ. ನಾಗರಾಜು, ರಾಮನಗರದ ಕೆ.ಎಸ್. ಸಿದ್ದಲಿಂಗೇಗೌಡ (ಪ್ರಾಣೇಶ್ ) ಹಾಗೂ ತಾಲೂಕು ಅಧ್ಯಕ್ಷ ರಾಜಶೇಖರ್ ಹೆಸರು ಚಾಲ್ತಿಯಲ್ಲಿದೆ.
ಜಿಲ್ಲೆಗಳ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ದೊರೆತಿದ್ದರೆ ಪಕ್ಷ ಸಂಘಟನೆಯನ್ನು ಸುಲಭವಾಗಿ ನಿಭಾಯಿಸಬಹುದಾಗಿತ್ತು. ನಿಗಮ ಮಂಡಳಿಗಳಲ್ಲೂ ಅವಕಾಶ ಸಿಗಲಿಲ್ಲ. ಈಗ ಎಲ್ಲಾದಕ್ಕೂ ಜೇಬಿನಿಂದಲೇ ಖರ್ಚು ಮಾಡಬೇಕು ಎಂಬ ಕಾರಣಕ್ಕೆ ಕೆಲ ನಾಯಕರು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುತ್ತಿದ್ದಾರೆ.
ಪಕ್ಷ ಲಾಭ ಮುಖ್ಯ:
ಆದರೆ, ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಕಾರಣ ಆ ಸಮುದಾಯಕ್ಕೆ ಸೇರಿದವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ. ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಲೆಕ್ಕಾಚಾರದಲ್ಲಿರಬಹುದು.
ಕನಕಪುರದಲ್ಲಿ ಡಿಕೆಶಿ ಸಹೋದರರ ಪ್ರಾಬಲ್ಯದ ನಡುವೆಯೂ ಹೋರಾಟದ ಮೂಲಕ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದುಂತೂರು ವಿಶ್ವನಾಥ್ ಹಾಗೂ ಪಕ್ಷಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಿರುವ ಸಿಂ.ಲಿಂ.ನಾಗರಾಜು, ಕೆ.ಎಸ್.ಸಿದ್ದಲಿಂಗೇಗೌಡ (ಪ್ರಾಣೇಶ್ ) ಅವರ ಹೆಸರುಗಳು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ.
ಆಯ್ಕೆ ಪರಿಗಣನೆ:
ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಡಿ.ಕೆ.ಶಿವಕುಮಾರ್ ವಿರುದ್ಧ ದುಂತೂರು ವಿಶ್ವನಾಥ್ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿರುವ ಸಿಂ.ಲಿಂ.ನಾಗರಾಜು 2011ರ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಯೋಗೇಶ್ವರ್ ಎದುರು ಪರಾಭವಗೊಂಡವರು. ಪ್ರಾಣೇಶ್ ಅವರು ಕೆಎಂಎಫ್ ನ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡ ವೇಗದಲ್ಲಿಯೇ ಅಧಿಕಾರ ಕಳೆದುಕೊಂಡವರು. ಈ ಮೂವರು ನಾಯಕರು ಯಾವುದೇ ಅಧಿಕಾರ ಅನುಭವಿಸಿದವರಲ್ಲ. ಆದರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಸಂಘಟಿಸಲು ಪಕ್ಷದ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ಧತೆ ಆರಂಭಿಸಿದ್ದಾರೆ. ಅದರಂತೆ ರಾಮನಗರ ಜಿಲ್ಲೆಯ ಅಧ್ಯಕ್ಷ ಸ್ಥಾನವನ್ನು ಸಮರ್ಥರಿಗೆ ನೀಡಿ ಆ ಕೆಲಸವನ್ನು ಕಾರ್ಯಗತಗೊಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸೋಲಿನ ಆಘಾತ:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಪ್ರಭಾವಿ ನಾಯಕ ಸಿ.ಪಿ.ಯೋಗೇಶ್ವರ್ ಸೋಲು ಕೂಡ ವರಿಷ್ಠರಿಗೆ ಆಘಾತ ತಂದಿತು. ಈ ಕಾರಣದಿಂದಾಗಿಯೇ ಆಗಿನ ಜಿಲ್ಲಾಧ್ಯಕ್ಷರಾಗಿದ್ದ ದೇವರಾಜು ಅವರನ್ನು ಸ್ಲಂ ಮೋರ್ಚಾ ಸಮಿತಿ ರಾಜ್ಯ ಕಾರ್ಯದರ್ಶಿ ಸ್ಥಾನ ನೀಡಿ ಹುದ್ದೆ ತೆರವುಗೊಳಿಸುವಂತೆ ಮಾಡಿದರು.
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದ ಕುಮಾರಸ್ವಾಮಿ ರಾಮನಗರ ಕ್ಷೇತ್ರ ತೊರೆದಿದ್ದರು. ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತನ್ನ ಆಪ್ತ ಎಂ.ರುದ್ರೇಶ್ ಅವರನ್ನು ರಾತ್ರೋರಾತ್ರಿ ರಾಮನಗರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಕಳುಹಿಸಿದರು.
ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದ್ದು ಹಾಗೂ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೊನೆ ಗಳಿಗೆಯಲ್ಲಿ ಕಣದಿಂದ ಹಿಂದೆ ಸರಿದಿದ್ದು ಬಿಜೆಪಿ ನಾಯಕರನ್ನು ಮುಜುಗರಗೊಳ್ಳುವಂತೆ ಮಾಡಿತು. ಅಲ್ಲದೆ, ಸಂಸತ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಸೋಲು ವರಿಷ್ಠರಿಗೆ ಪಕ್ಷ ಸಂಘಟನೆಯ ಕೊರತೆಯನ್ನು ಬಿಂಬಿಸುವಂತಿತ್ತು.
ಮನ್ನಣೆಗೆ ಚಿಂತನೆ:
ಬಿಜೆಪಿಯಲ್ಲಿ ಪದಾಧಿಕಾರಿ ಹುದ್ದೆ ಮೂರು ವರ್ಷಗಳ ಅವಧಿಗೆ ಸೀಮಿತ. ದೇವರಾಜು ಅವರು ಒಂದೂಮುಕ್ಕಾಲು ವರ್ಷ ಅಧ್ಯಕ್ಷರಾಗಿದ್ದರು. ಆನಂತರ ಎಂ.ರುದ್ರೇಶ್ ಅವರನ್ನು ಒಂದು ಕಾಲು ವರ್ಷದ ಅವಧಿಗಾಗಿ ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿತ್ತು. ಈಗ ಆ ಅವಧಿ ಮುಗಿಯುವ ಹಂತಕ್ಕೆ ಬಂದಿರುವುದರಿಂದ ಹೊಸ ಅಧ್ಯಕ್ಷರ ನೇಮಕದ ಚರ್ಚೆಗಳು ಪಕ್ಷದೊಳಗೆ ಶುರುವಾಗಿದೆ.
ಒಕ್ಕಲಿಗರ ಪ್ರಾಬಲ್ಯ ಉಳ್ಳ ಜಿಲ್ಲೆಯಾಗಿರುವ ಕಾರಣ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸಂಘಟನೆಯ ಚಾಕಚಕ್ಯತೆಯ ಜತೆಗೆ ಎಲ್ಲಾದರಲ್ಲೂ ಸಬಲರಾಗಿರುವ ವ್ಯಕ್ತಿಯನ್ನೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮನ್ನಣೆ ನೀಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಉಭಯ ಪಕ್ಷಗಳ ಮುಖಂಡರು.