ಆದಿವಾಸಿ ಜನರ ಅಭಿವೃದ್ಧಿಗೆ ಶ್ರಮಿಸಿದ ಚೇತನ ಬಿರ್ಸಾ ಮುಂಡ: ಹೊನ್ನೇಗೌಡ

By Girish Goudar  |  First Published Nov 15, 2023, 8:29 PM IST

ಬಿರ್ಸಾ ಮುಂಡ ಅವರು ಆದಿವಾಸಿ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ಬಳಿ ಜನಿಸಿರುವ ಬಿರ್ಸಾ ಮುಂಡ ಅವರು ಆದಿವಾಸಿ ಜನಾಂಗ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಿದ್ದಾರೆ: ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ
 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.15): ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಕಾರದಲ್ಲಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಬಿರ್ಸಾ ಮುಂಡ ಜಯಂತಿ ಕಾರ್ಯಕ್ರಮವು ಬುಧವಾರ ಮಡಿಕೇರಿಯಲ್ಲಿ ಇಂದು(ಬುಧವಾರ) ಸರಳವಾಗಿ ನಡೆಯಿತು. ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಶೇಖರ್, ಐಟಿಡಿಪಿ ಇಲಾಖೆ ಅಧಿಕಾರಿ ಎಸ್.ಹೊನ್ನೇಗೌಡ, ಇತರರು ಬಿರ್ಸಾ ಮುಂಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. 

Tap to resize

Latest Videos

ಬಳಿಕ ಮಾತನಾಡಿ ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು, ಬಿರ್ಸಾ ಮುಂಡ ಅವರು ಆದಿವಾಸಿ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ಬಳಿ ಜನಿಸಿರುವ ಬಿರ್ಸಾ ಮುಂಡ ಅವರು ಆದಿವಾಸಿ ಜನಾಂಗ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಿದ್ದಾರೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು. ಬ್ರಿಟಿಷ್ ಸರ್ಕಾರ ಜಾರ್ಖಂಡ್ ಆದಿವಾಸಿಗಳು ವಾಸಿಸುತ್ತಿದ್ದ ಕಾಡು ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿ, ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಪರಿಣಾಮ ಬ್ರಿಟಿಷರ ಈ ನೀತಿಯ ವಿರುದ್ದ ಬಿರ್ಸಾಮುಂಡ ಅವರು ದೊಡ್ಡ ಹೋರಾಟ ಮಾಡಿದರು. 1893-94 ರಲ್ಲಿ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ್ಯ ಸಂಗ್ರಾಮವಾಗಿ ರೂಪಿಸುವಲ್ಲಿ ಬಿರ್ಸಾ ಮುಂಡ ಯಶಸ್ವಿ ಆದರು ಎಂದು ಎಸ್.ಹೊನ್ನೇಗೌಡ ಅವರು ತಿಳಿಸಿದರು. 

ದಿಲ್ಲಿ ಭೀಕರ ವಾಯುಮಾಲಿನ್ಯಕ್ಕೆ ಕೊಡಗಿನ ಕಾಫಿ ಉದ್ಯಮಿ ಬಲಿ

ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದರು. 1894 ರ ಅಕ್ಟೋಬರ್, 01 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬೃಹತ್ ಮೆರವಣಿಗೆಗೆ ಕರೆ ನೀಡಿದರು. ‘ಉಳುವವನೇ ಭೂಮಿಯ ಒಡೆಯನಾಗಬೇಕು’ ‘ಮಹಾರಾಣಿಯ ಆಡಳಿತವನ್ನು ಸ್ಥಾಪಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. 

ಬಿರ್ಸಾ ಅವರ ಕರೆಗೆ ಆದಿವಾಸಿಗಳು ಸ್ಪಂದಿಸಿ ಮೆರವಣಿಗೆ ಯಶಸ್ವಿಯಾಯಿತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾ ಅವರ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು ಹೊರ ಬರುತ್ತಿದ್ದಂತೆಯೇ, ಬಿರ್ಸಾ ತನ್ನ ಚಳುವಳಿಯ ರೂಪವನ್ನೇ ಬದಲಾಯಿಸಿದರು. ಬಿಡುಗಡೆಯ ನಂತರ ಭೂಗತರಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದರು. 

Honeytrap ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾದನಾ ನಿವೃತ ಯೋಧ!

ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ ಅವರನ್ನು ಬೆಂಬಲಿಸುತ್ತಿದ್ದ ಜನರ ಮನೆಗಳ ಮೇಲೆ ಮತ್ತು ಪೊಲೀಸರ ತಂಡಗಳ ಮೇಲೆ ಬಿರ್ಸಾ ಆದಿವಾಸಿಗಳ ಗೆರಿಲ್ಲಾ ಸೈನ್ಯ ದಾಳಿ ಮಾಡಿತು. ನೂರಾರು ಪೊಲೀಸರನ್ನು ಕೊಂದು ಹಾಕಿತು. ಒಮ್ಮೆ ರಾಂಚಿ ಮತ್ತು ಕುಂತಿ ಎಂಬಲ್ಲಿ ಸುಮಾರು ನೂರಾರು ಕಟ್ಟಡಗಳನ್ನು ಭಸ್ಮ ಮಾಡಿತು. ಬಿರ್ಸಾರನ್ನು ಹಿಡಿದು ಕೊಟ್ಟವರಿಗೆ 500 ರೂ.ಗಳ ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ಚೋಟಾ ನಾಗ್ಪುರ್ ಸುತ್ತಲಿನ 550 ಚದರ ಮೈಲಿ ಪ್ರದೇಶದಲ್ಲಿ ಆತನ ಹೋರಾಟ ವ್ಯಾಪಿಸಿತು. 1899 ರಲ್ಲಿ ಆತ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಕುಂತಿ, ಒಮರ್, ಬಸಿಯ, ರಾಂಚಿ ಮತ್ತಿತರ ಕಡೆಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. 8 ಪೊಲೀಸರು ಕೊಲ್ಲಲ್ಪಟ್ಟು, 32 ಜನ ಪರಾರಿಯಾದರು. ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. 89 ಭೂಮಾಲೀಕರ ಮನೆಗಳು ಬೂದಿಯಾದವು. ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿ ಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರಗೊಂಡಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ, ಕೊನೆಗೆ ಸೈನ್ಯಕ್ಕೇ ಬರ ಹೇಳಿದರು. 1900 ರ ಜನವರಿಯಲ್ಲಿ ಬಿರ್ಸಾ ತನ್ನ ದಂಗೆಯ ಎರಡನೇ ಅಧ್ಯಾಯಕ್ಕೆ ಚಾಲನೆ ನೀಡಿದರು. 

ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈ ಜೋಡಿಸಿದ್ದ ಲೇವಾದೇವಿಗಾರರು, ಭೂಮಾಲೀಕರು, ಗುತ್ತಿಗೆದಾರರು ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರು. ಬಹಳಷ್ಟು ಜನ ಸಾವಿಗೀಡಾದರು ಲೆಕ್ಕವಿಲ್ಲದಷ್ಟು ಕಟ್ಟಡಗಳು ದ್ವಂಸಗೊಂಡವು ಎಂದು ಹೊನ್ನೇಗೌಡ ಅವರು ಅಭಿಪ್ರಾಯಪಟ್ಟರು.

click me!