ಕರಿದ ಅಡುಗೆ ಎಣ್ಣೆ ಕೊಡಿ, ಬಯೋ ಡೀಸೆಲ್‌ ಒಯ್ಯಿರಿ!

By Web DeskFirst Published Oct 1, 2019, 11:50 AM IST
Highlights

ಕರಿದ ಅಡುಗೆ ಎಣ್ಣೆ ಕೊಡಿ, ಬಯೋ ಡೀಸೆಲ್‌ ಒಯ್ಯಿರಿ!| ಮಂಗಳೂರಿನ ಪ್ರಾಧ್ಯಾಪಕರಿಂದ ಬಯೋಡೀಸೆಲ್‌ ಕೇಂದ್ರ| ಸರ್ಕಾರಿ ವಾಹನ, ಸಿಟಿ ಬಸ್‌ಗಳಲ್ಲೂ ಇವರು ಆವಿಷ್ಕರಿಸಿದ ಇಂಧನ ಬಳಕೆ

ಸಂದೀಪ್‌ ವಾಗ್ಲೆ

ಮಂಗಳೂರು[ಅ.01]: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪದೇ ಪದೇ ಕರಿದ ಎಣ್ಣೆಯನ್ನು ಬಳಸಿ ಇಲ್ಲಿನ ಎಂಜಿನಿಯರಿಂಗ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಪರಿಸರ ಸ್ನೇಹಿ ಬಯೋ ಡೀಸೆಲ್‌ ಆವಿಷ್ಕರಿಸಿದ್ದು, ಇವರ ಈ ಸಾಧನೆಗೆ ಸಾಕಷ್ಟುಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿಟ್ಟೆಎಂಜಿನಿಯರಿಂಗ್‌ ಕಾಲೇಜಿನ ಅಸಿಸ್ಟೆಂಟ್‌ ಪ್ರೊಫೆಸರ್‌ ಹಾಗೂ ಕಾಲೇಜಿನಲ್ಲಿರುವ ಜೈವಿಕ ಇಂಧನ ಕೇಂದ್ರ (ರಾಜ್ಯ ಸರ್ಕಾರದ ಯೋಜನೆ)ದ ವೈಜ್ಞಾನಿಕ ಸಹಾಯಕರಾಗಿರುವ ಡಾ.ಸಂತೋಷ್‌ ಪೂಜಾರಿ ಅವರು ಕರಿದ ಎಣ್ಣೆಯಿಂದ ಬಯೋ ಡೀಸೆಲ್‌ ಆವಿಷ್ಕರಿಸಿದ್ದಾರೆ. ಈ ಪ್ರಯೋಗ ಮಾಡಿದ ರಾಜ್ಯದ ಮೊದಲ ಸಂಶೋಧಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಬಯೋಡೀಸೆಲ್‌ ಈಗ ಮಂಗಳೂರಿನ ಸಿಟಿ ಬಸ್‌ಗಳು, ವಿವಿಧ ಶಾಲೆ- ಕಾಲೇಜು ವಾಹನಗಳಲ್ಲಿ ಮಾತ್ರವಲ್ಲದೇ ಸರ್ಕಾರಿ ವಾಹನಗಳಲ್ಲೂ ಬಳಕೆಯಾಗುತ್ತಿದೆ.

ಬೆಲೆಯೂ ಕಮ್ಮಿ, ಖರ್ಚೂ ಕಡಿಮೆ:

ಕರಿದ ಎಣ್ಣೆಯನ್ನು ಲೀಟರ್‌ಗೆ 20 ರು.ನಂತೆ ನಿಟ್ಟೆಜೈವಿಕ ಇಂಧನ ಕೇಂದ್ರದಲ್ಲಿ ಖರೀದಿಸಲಾಗುತ್ತದೆ. ಈ ಎಣ್ಣೆಯಿಂದ ಒಂದು ಲೀ.ಗೆ ಶೇ.90ರಷ್ಟುಬಯೋಡೀಸೆಲ್‌ (ಕರಿದ ಎಣ್ಣೆಯ ಗುಣಮಟ್ಟಆಧರಿಸಿ) ಸಿದ್ಧಗೊಳ್ಳಲಿದ್ದು, ಪ್ರತಿ ಲೀಟರ್‌ಗೆ 55 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಡೀಸೆಲ್‌ ಎಂಜಿನ್‌ ವಾಹನ ಮಾಲೀಕರ ಖರ್ಚನ್ನೂ ಕಡಿಮೆ ಮಾಡಲಾಗುತ್ತಿದೆ. ಸಂಶೋಧನಾ ಕೇಂದ್ರವು ತಿಂಗಳಿಗೆ 600- 800 ಲೀ. ಬಯೋಡೀಸೆಲ್‌ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿಟಿ ಬಸ್‌ಗೂ ಬಯೋಡೀಸೆಲ್‌:

‘ಆರಂಭದಲ್ಲಿ ನಿಟ್ಟೆಕಾಲೇಜಿನ ಗೂಡ್ಸ್‌ ವಾಹನಕ್ಕೆ ಬಯೋಡೀಸೆಲ್‌ ಹಾಕಿ ಯಶಸ್ವಿಯಾದೆವು. ಬಳಿಕ ಕಾಲೇಜಿನ ಇತರ 2-3 ಬಸ್ಸುಗಳಲ್ಲಿ ಬಳಸಲು ಆರಂಭಿಸಿದೆವು. ನಂತರ ಇದರ ವ್ಯಾಪ್ತಿ ವಿಸ್ತರಿಸಿ ಇತರ ಶಾಲೆ- ಕಾಲೇಜುಗಳಿಂದಲೂ ಬಯೋಡೀಸೆಲ್‌ ಕೊಂಡೊಯ್ಯುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕಾರ್ಕಳ ತಾ.ಪಂ.ಗೆ ಸೇರಿದ ಟಾಟಾ ಸುಮೊ, ಬೊಲೆರೊ ವಾಹನಗಳಿಗೂ ಬಳಕೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಸಾವಿರ ಲೀಟರ್‌ಗಳಷ್ಟುಬಯೋಡೀಸೆಲ್‌ ತೆಗೆದುಕೊಂಡು ಹೋಗಿದ್ದು, ಸಿಟಿ ಬಸ್‌ಗಳಲ್ಲೂ ಬಳಕೆಯಾಗುತ್ತಿದೆ. ಟ್ರ್ಯಾಕ್ಟರ್‌, ಟಿಲ್ಲರ್‌ಗಳಿಗೂ ಜನರು ಬಂದು ಇಂಧನ ಕೊಂಡೊಯ್ಯುತ್ತಿದ್ದಾರೆ’ ಎಂದು ಡಾ.ಸಂತೋಷ್‌ ಪೂಜಾರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಎಂಜಿನ್‌ ಬಾಳಿಕೆ, ಮೈಲೇಜ್‌ ಹೆಚ್ಚು:

‘ಈಗ ಸಾಮಾನ್ಯ ಡೀಸೆಲ್‌ನೊಂದಿಗೆ ಬಯೋ ಡೀಸೆಲ್‌ನ್ನು ಶೇ.20-30ರಷ್ಟುಸೇರಿಸಲು ಸಲಹೆ ನೀಡುತ್ತಿದ್ದೇವೆ. ಶೇ.100ರಷ್ಟುಬಯೋಡೀಸೆಲ್‌ನ್ನೂ ಬಳಸಬಹುದು, ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲವು ಎಂಜಿನ್‌ಗಳು ಕೇವಲ ಸಾಮಾನ್ಯ ಡೀಸೆಲ್‌ಗೆ ಮಾತ್ರ ಹೊಂದಿಕೆಯಾಗಿರಬಹುದು ಎನ್ನುವ ನಿಟ್ಟಿನಲ್ಲಿ ಈ ರೀತಿ ಮಾಡುತ್ತಿದ್ದೇವೆ. ಕರಿದ ಎಣ್ಣೆಯಿಂದ ಮಾಡಿದ ಬಯೋ ಡೀಸೆಲ್‌ನಲ್ಲಿ ಸಲ್ಫರ್‌ ಇಲ್ಲದಿದ್ದರೂ ಲ್ಯೂಬ್ರಿಕೇಶನ್‌ ಜಾಸ್ತಿ ಇರುವುದರಿಂದ ಸಹಜವಾಗಿ ಎಂಜಿನ್‌ನ ಬಾಳಿಕೆಯೂ ಹೆಚ್ಚು. ಜತೆಗೆ ವಾಹನ ಮೈಲೇಜ್‌ ಕೂಡ ಹೆಚ್ಚಿರುವುದು ಕಂಡುಬಂದಿದೆ’ ಎನ್ನುತ್ತಾರೆ ಡಾ.ಸಂತೋಷ್‌.

ರಬ್ಬರ್‌, ಹೊನ್ನೆಯಿಂದ ಬಯೋಡೀಸೆಲ್‌!

ಕಾರ್ಕಳದ ನೆಲ್ಲಿಕಟ್ಟೆಗ್ರಾಮದ ನಿವಾಸಿಯಾಗಿರುವ ಡಾ.ಸಂತೋಷ್‌ ಪೂಜಾರಿ ಪಿಎಚ್‌.ಡಿ ಸಂಶೋಧನೆಗಾಗಿ ಹೊನ್ನೆ, ರಬ್ಬರ್‌, ಬುಗರಿ ಬೀಜಗಳಿಂದ ಬಯೋಡೀಸೆಲ್‌ ತಯಾರಿಸಿ ಯಶಸ್ವಿಯಾಗಿದ್ದರು. ಆದರೆ ಈ ಬೀಜಗಳು ದೊಡ್ಡ ಸಂಖ್ಯೆಯಲ್ಲಿ ಸಿಗುವುದು ಕಷ್ಟಸಾಧ್ಯವಾಗಿದ್ದರಿಂದ ಬಳಿಕ ಕರಿದ ಎಣ್ಣೆಯತ್ತ ಅವರ ಸಂಶೋಧನಾ ದೃಷ್ಟಿನೆಟ್ಟಿದ್ದು, ಅದರಲ್ಲೂ ಯಶಸ್ವಿಯಾಗಿದ್ದಾರೆ. ಈಗ ಈ ಸಂಶೋಧನೆಯ ಹಕ್ಕುಸ್ವಾಮ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ್ದಿದಾರೆ.

ಕರಿದ ಎಣ್ಣೆಯಿಂದ ತಯಾರಿಸಿದ ಬಯೋಡೀಸೆಲ್‌ ಸಾಮಾನ್ಯ ಡೀಸೆಲ್‌ಗಿಂತ ಅಗ್ಗ. ವಿಷಾನಿಲಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಹೊರಸೂಸುವುದರಿಂದ ಪರಿಸರ ಸ್ನೇಹಿಯೂ ಹೌದು. ಇದರಿಂದ ಎಂಜಿನ್‌ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಕರಿದ ಎಣ್ಣೆಯಲ್ಲಿ ಪದೇ ಪದೇ ಆಹಾರ ಕರಿಯುವುದರಿಂದ ಆರೋಗ್ಯಕ್ಕೆ ಹಾನಿ ಮಾಡುವ ಬದಲು ಆ ಎಣ್ಣೆಯಿಂದ ಬಯೋಡೀಸೆಲ್‌ ಮಾಡಿ ಮರುಬಳಕೆ ಮಾಡುವುದು ಉತ್ತಮ ಮಾರ್ಗ.

- ಡಾ. ಸಂತೋಷ್‌ ಪೂಜಾರಿ, ಸಂಶೋಧಕ

click me!