ನಮ್ಮ ಮೆಟ್ರೋಗೆ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಲೇ ಇಲ್ಲ: ಬೋಗಿ ಕೊರತೆ ಕಾರಣ?

By Kannadaprabha NewsFirst Published Dec 21, 2023, 6:43 AM IST
Highlights

ನೇರಳೆ ಮಾರ್ಗ ಪೂರ್ಣಗೊಂಡ ನಂತರವೂ ರೈಲುಗಳ ಕೊರತೆ, ಪ್ರಯಾಣಿಕರ ಗಮ್ಯ ಸಂಪರ್ಕದ ಸಮಸ್ಯೆ ಹಾಗೂ ಏಕೈಕ ಇಂಟರ್‌ಚೇಂಜ್‌ ಸಮಸ್ಯೆಯಿಂದಾಗಿ ‘ನಮ್ಮ ಮೆಟ್ರೋ’ದಲ್ಲಿ ನಿರೀಕ್ಷಿತ ಪ್ರಮಾಣದಂತೆ ಸರಾಸರಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. 

ಬೆಂಗಳೂರು (ಡಿ.21): ನೇರಳೆ ಮಾರ್ಗ ಪೂರ್ಣಗೊಂಡ ನಂತರವೂ ರೈಲುಗಳ ಕೊರತೆ, ಪ್ರಯಾಣಿಕರ ಗಮ್ಯ ಸಂಪರ್ಕದ ಸಮಸ್ಯೆ ಹಾಗೂ ಏಕೈಕ ಇಂಟರ್‌ಚೇಂಜ್‌ ಸಮಸ್ಯೆಯಿಂದಾಗಿ ‘ನಮ್ಮ ಮೆಟ್ರೋ’ದಲ್ಲಿ ನಿರೀಕ್ಷಿತ ಪ್ರಮಾಣದಂತೆ ಸರಾಸರಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗ ಪೂರ್ಣಗೊಂಡು 43.49 ಕಿಮೀ ಸಂಚಾರ ಸೇವೆ ಆರಂಭಿಸಿದಾಗ ಹಸಿರು ಮಾರ್ಗವೂ ಸೇರಿ ತಿಂಗಳಿಗೆ ಸರಾಸರಿ 7.50 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿತ್ತು. ಆದರೆ, ಎರಡು ತಿಂಗಳಲ್ಲಿ ಒಂದೆರಡು ದಿನ ಮಾತ್ರ ಇಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನೀಡಿರುವ ಮಾಹಿತಿಯಂತೆ ಕಳೆದ ತಿಂಗಳಲ್ಲಿ 1,99,21,460 ಪ್ರಯಾಣಿಕರು ಸಂಚರಿಸಿದ್ದು, ದಿನಕ್ಕೆ ಸರಾಸರಿ 6.64 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದರಿಂದ ನಿಗಮ ₹ 51,22,03,333 ಆದಾಯ ಗಳಿಸಿದೆ. ನ. 9ರಂದು ಗರಿಷ್ಠ ಅಂದರೆ 7,56,368 ಜನ ಪ್ರಯಾಣಿಸಿದ್ದರು. ನ. 2ರಂದು ಗರಿಷ್ಠ ₹ 2,08,66,237 ಆದಾಯ ಗಳಿಸಿತ್ತು. ನೇರಳೆ ಮಾರ್ಗ ಪೂರ್ಣಗೊಳ್ಳುವುದಕ್ಕೂ ಮುನ್ನ ನಿತ್ಯ ಸರಾಸರಿ 6.2 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಕ್ಟೋಬರ್‌ನಲ್ಲಿ 1,98,53,691 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.

Latest Videos

ಕೊರೊನಾ ವೈರಸ್ ದಿನೇ ದಿನೇ ಹೆಚ್ಚಳ: 7 ಮಂದಿ ಐಸಿಯುನಲ್ಲಿ!

ರೈಲುಗಳ ಅಭಾವ: ಸದ್ಯ ಬಿಎಂಆರ್‌ಸಿಎಲ್‌ ಬಳಿ ಇರುವ 57 ರೈಲುಗಳ ಪೈಕಿ 33 ನೇರಳೆ ಮಾರ್ಗಕ್ಕೆ 24 ಹಸಿರು ಮಾರ್ಗಕ್ಕೆ ನಿಯೋಜನೆ ಆಗಿವೆ. ಅವುಗಳಲ್ಲಿ ಪ್ರಸ್ತುತ 30 ನೇರಳೆ ಹಾಗೂ 22 ಹಸಿರು ಮಾರ್ಗದಲ್ಲಿ ಸಂಚರಿಸುತ್ತಿವೆ. ಉಳಿದವನ್ನು ನಿರ್ವಹಣೆ, ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗುತ್ತದೆ. ನೇರಳೆ ಮಾರ್ಗ ಪೂರ್ಣಗೊಂಡ ಬಳಿಕ ಇಲ್ಲಿ ಸಂಚರಿಸುವ ರೈಲುಗಳು ಭರ್ತಿಯಾಗಿ ಹೋಗುತ್ತಿವೆ.

ದಿನದ ಸಂಚಾರ ದಟ್ಟಣೆ ಸಮಯದಲ್ಲಿ ಇದು ಸಮಸ್ಯೆಗೆ ಕಾರಣವಾಗಿದೆ. ಹಲವು ಬಾರಿ ದಟ್ಟಣೆ ನಿವಾರಣೆಗೆ ಹಸಿರು ಮಾರ್ಗದ ರೈಲುಗಳನ್ನು ಕೂಡ ನೆರಳೆ ಮಾರ್ಗದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಾಧಾರಣ ಸಮಯದಲ್ಲಿ 10 ನಿಮಿಷಕ್ಕೆ ಒಂದರಂತೆ ಹಾಗೂ ಬೆಳಗ್ಗೆ, ಸಂಜೆ ದಟ್ಟಣೆ ವೇಳೆ ಮೆಜಸ್ಟಿಕ್‌ನಿಂದ ಎಂ.ಜಿ.ರಸ್ತೆವರೆಗೆ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲುಗಳ ಸಂಚಾರವಿದೆ. ಆದರೂ ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ರೈಲುಗಳು ಇಲ್ಲದಿರುವುದೇ ಹೆಚ್ಚಿನ ತೊಂದರೆಗೆ, ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಕಾರಣ ಎಂದು ನಗರ ಸಾರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೊಸ ಬೋಗಿಗಳು ಬರುವವರೆಗೆ ಈ ಕೊರತೆ ಸಮಸ್ಯೆ ಮುಂದುವರಿಯಲಿದೆ.

ಒಂದೇ ಇಂಟರ್‌ಚೇಂಜ್‌: ಸದ್ಯ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಮಾತ್ರ ಇಂಟರ್‌ಚೇಂಜ್‌ ಆಗಿ ಬಳಕೆಯಾಗುತ್ತಿರುವುದು ಕೂಡ ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಕಾರಣವಾಗಿದೆ. ಮಾರ್ಗ ಬದಲಾವಣೆಗೆ ಇಲ್ಲಿ ಮಾತ್ರ ಅವಕಾಶವಿರುವುದು ಪ್ರಯಾಣಿಕ ಸ್ನೇಹಿಯಾಗಿಲ್ಲ. ನಾಗವಾರದಿಂದ-ಕಾಳೇನ ಅಗ್ರಹಾರವರೆಗಿನ ಗುಲಾಬಿ ಮಾರ್ಗ ಪೂರ್ಣಗೊಂಡ ಬಳಿಕವೇ ನೇರಳೆ ಮಾರ್ಗಕ್ಕೆ (ಎಂ.ಜಿ.ರಸ್ತೆ ನಿಲ್ದಾಣ) ಇನ್ನೊಂದು ಇಂಟರ್‌ಚೇಂಜ್‌ ಸಿಗಲಿದೆ. ಹಳದಿ ಮಾರ್ಗ ಮುಂದಿನ ವರ್ಷವೇ ಜನಸಂಚಾರ ಆರಂಭಿಸಿದರೂ ಜಯದೇವ ಇಂಟರ್‌ಚೇಂಜ್‌ ಇದಕ್ಕೆ ಸೇರದ ಕಾರಣ ಹಸಿರು, ನೇರಳೆ ಮಾರ್ಗಕ್ಕೆ ಪ್ರಯೋಜನ ಇಲ್ಲ.

ಗಮ್ಯ ಸಂಪರ್ಕ: ಪ್ರಮುಖವಾಗಿ ಕೊನೆಯ ಮೈಲಿ ಸಂಪರ್ಕ ತೊಂದರೆ ಮೆಟ್ರೋಕ್ಕೆ ದೊಡ್ಡ ಸಮಸ್ಯೆಯಾಗಿದೆ. ನೂರಕ್ಕೂ ಹೆಚ್ಚಿನ ಫೀಡರ್‌ ಬಸ್‌ಗಳು ಇದ್ದರೂ ಕೂಡ ಪ್ರಯಾಣಿಕರಿಗೆ ತೊಂದರೆ ತಪ್ಪಿಲ್ಲ. ಮೆಟ್ರೋ ರೈಲು ಇಳಿದು ಮನೆ, ಕಚೇರಿ ತಲುಪಲು ಆಟೋರಿಕ್ಷಾ, ಕ್ಯಾಬ್‌ ಅವಲಂಬನೆ ಮಾಡಬೇಕಿದೆ. ಮೆಟ್ರೋ ಪ್ರಯಾಣಿಕರಿಗೆ ತಾವು ತಲುಪಬೇಕಾದ ಸ್ಥಳವನ್ನು ಐದು-ಹತ್ತು ನಿಮಿಷಗಳ ಅಂತರದಲ್ಲಿ ಕ್ರಮಿಸುವಂತಾದರೆ ಹೆಚ್ಚಿನವರು ಮೆಟ್ರೋ ಕಡೆಗೆ ಬರುತ್ತಾರೆ ಎಂಬುದು ನಗರ ಸಾರಿಗೆ ತಜ್ಞರ ಅಭಿಮತ.

ಕರ್ನಾಟಕ ದೇಶದ ನಂ.1 ಸಿರಿಧಾನ್ಯ ಬೆಳೆವ ರಾಜ್ಯ ಆಗಲಿ: ಸಿಎಂ ಸಿದ್ದರಾಮಯ್ಯ

ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಏನು ಕಾರಣ?
1. ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ರೈಲುಗಳು ಇಲ್ಲ
2. ಮೆಜೆಸ್ಟಿಕ್‌ ನಿಲ್ದಾಣ ಮಾತ್ರ ಇಂಟರ್‌ಚೇಂಜ್‌ ಆಗಿ ಬಳಕೆ
3. ಮಾರ್ಗ ಬದಲಾವಣೆಗೆ ಪ್ರಯಾಣಿಕ ಸ್ನೇಹಿಯಾಗಿಲ್ಲ
4. ಮೆಟ್ರೋಕ್ಕೆ ಸಮಸ್ಯೆಯಾದ ಕೊನೆ ಮೈಲಿ ಸಂಪರ್ಕ
5. ಗಮ್ಯ ತಲುಪಲು ಆಟೋ, ಕ್ಯಾಬ್‌ ಅವಲಂಬನೆ ಅನಿವಾರ್ಯ

click me!