ಬೆಂಗಳೂರು ನಗರದಲ್ಲಿ ಒಂದೇ ತಿಂಗಳಲ್ಲಿ ಡೆಂಘೀ ದುಪ್ಪಟ್ಟು ಆಗಿದೆ. 2 ವರ್ಷ ತಗ್ಗಿದ್ದ ಡೆಂಘೀ ಜ್ವರ ಈ ವರ್ಷ ಭಾರೀ ಹೆಚ್ಚಳ ಕಂಡಿದೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಎಡತಾಕುತ್ತಿರುವ ರೋಗಿಗಳು.
ಜಯಪ್ರಕಾಶ್ ಬಿರಾದಾರ್
ಬೆಂಗಳೂರು (ಜು.19): ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಮತ್ತು ಸ್ಪಚ್ಛತೆಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ರಾಜಧಾನಿ ಜನರಿಗೆ ಬಿಡುವ ಕೊಟ್ಟಿದ್ದ ಡೆಂಘೀ ಜ್ವರ ಈ ಬಾರಿ ಮತ್ತೆ ಕಾಟ ಕೊಡಲಾರಂಭಿಸಿದೆ!. ಬೆಂಗಳೂರಿನಲ್ಲಿ ಡೆಂಗ್ಯೂ ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ನಗರದ ಖಾಸಗಿ ಆಸ್ಪತ್ರೆ, ಗಲ್ಲಿ ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳ ಬಳಿ ಡೆಂಘೀ ಜ್ವರದಿಂದ ಬಳಲುತ್ತಿರುವವರು, ಶಂಕಿತ ಡೆಂಘೀ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಡೆಂಘೀ ರೋಗಿಗಳ ನಿಖರ ಮಾಹಿತಿ ಸಂಗ್ರಹಕ್ಕೆ ಬಿಬಿಎಂಪಿ ಬಳಿ ಸದ್ಯ ಸೂಕ್ತ ವ್ಯವಸ್ಥೆ ಇಲ್ಲ, ಜತೆಗೆ ಖಾಸಗಿ ಆಸ್ಪತ್ರೆಗಳಿಂದ ಡೆಂಘೀ ಪ್ರಕರಣಗಳ ಖಚಿತ ಮಾಹಿತಿ ಸಿಗುತ್ತಿಲ್ಲ. ಆದರೆ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಡೆಂಘೀ ಹೆಚ್ಚಿದೆ ಎಂದು ಬಿಬಿಎಂಪಿ ಅಧಿಕಾರಿಗಳೇ ತಿಳಿಸಿದ್ದಾರೆ. ಡೆಂಗ್ಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜ್ವರ ರೋಗಿಗಳು ಶೇ.25ರಷ್ಟುಹೆಚ್ಚಳ: ಜಯ ನಗರದ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ, ಮದ್ರಾಸ್ ರಸ್ತೆಯ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಪ್ರತಿನಿತ್ಯ ಸರಾಸರಿ 100ಕ್ಕೂ ಅಧಿಕ ಜನ ಜ್ವರ ಪೀಡಿತರು ಭೇಟಿ ನೀಡುತ್ತಿದ್ದಾರೆ. ವಿವಿಧ ಕ್ಲಿನಿಕ್‌ಗಳಲ್ಲಿ ಸಹ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಜ್ವರದಿಂದ ಕಳೆದ ಎರಡು ವಾರದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.25ರಷ್ಟುಹೆಚ್ಚಳವಾಗಿದೆ ಎನ್ನುತ್ತಾರೆ ಆಸ್ಪತ್ರೆಗಳ ವೈದ್ಯರು.
740 ಕೇಸ್ ಪತ್ತೆ: ರಾಜ್ಯ ಆರೋಗ್ಯ ಇಲಾಖೆ ಮಾಹಿತಿಯಂತೆ ಬೆಂಗಳೂರಿನಲ್ಲಿ ಜನವರಿ 1ರಿಂದ ಜೂನ್ 17ವರೆಗೂ 388 ಮಂದಿಯಲ್ಲಿ ಡೆಂಘೀ ದೃಢಪಟ್ಟಿತ್ತು. ಆದರೆ, ಕಳೆದ ಒಂದೇ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆಯು 740ಕ್ಕೆ ಹೆಚ್ಚಳವಾಗಿದೆ. ಏಳು ಸಾವಿರಕ್ಕೂ ಅಧಿಕ ಮಂದಿಯನ್ನು ಶಂಕಿತ ಡೆಂಘೀ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.
ನಿರ್ಲಕ್ಷ್ಯ ಕಾರಣ: ಮಳೆಗಾಲ ಆರಂಭವಾದ ಕೂಡಲೇ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಘೀ ಜ್ವರ 2017, 2018 ಮತ್ತು 2019ರಲ್ಲಿ ಬೆಂಗಳೂರು ನಗರವನ್ನು ಸಾಕಷ್ಟು ಬಾಧಿಸಿತ್ತು. ಆದರೆ, ಕೊರೋನಾ ಹಿನ್ನೆಲೆ ಜನರು ಸ್ವಯಂ ಪ್ರೇರಿತವಾಗಿ ಕೈಗೊಂಡ ಸ್ವಚ್ಛತಾ ಕ್ರಮಗಳು ಮತ್ತು ರೋಗಗಳ ಬಗೆಗಿನ ಮುನ್ನೆಚ್ಚರಿಕೆಗಳಿಂದ 2020 ಮತ್ತು 2021ರ ಮಳೆಗಾಲದಲ್ಲಿ ಡೆಂಘೀ ಸಾಕಷ್ಟುತಗ್ಗಿತ್ತು. ಕೊರೋನಾ ಸೊಂಕು ತಗ್ಗಿರುವ ಹಿನ್ನೆಲೆ ಸಾರ್ವಜನಿಕರು ಮತ್ತು ಬಿಬಿಎಂಪಿ ಕೂಡಾ ಸ್ವಚ್ಛತೆ ಮೈಮರೆತಿದ್ದು, ಹೀಗಾಗಿ, ಕಳೆದ ಒಂದು ತಿಂಗಳ ಮಳೆಗಾಲ ಆರಂಭವಾಗುವುದರೊಂದಿಗೆ ನಗರದಾದ್ಯಂತ ಡೆಂಘೀ ಕಾಟ ಹೆಚ್ಚಾಗಿದೆ.
ಡೆಂಘೀ ಜ್ವರದ ಲಕ್ಷಣಗಳು: ಜ್ವರ, ತಲೆನೋವು, ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ನಿಶಕ್ತಿ, ಮೈ-ಕೈ ನೋವು, ಅತಿಸಾರ ಭೇದಿ, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಮೂರು ಹಂತದಲ್ಲಿ ಜ್ವರ ಕಾಟ: ಈಡಿಸ್ ಈಜಿಪ್ಟೆಎಂಬ ಸೊಳ್ಳೆ ಕಡಿತದಿಂದ ಡೆಂಘೀ ಜ್ವರ ತಗಲುತ್ತದೆ. ಸಂಗ್ರಹಿಸಿಟ್ಟತಿಳಿ ನೀರಿನಲ್ಲಿ ಮೊಟ್ಟೆಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಮೂರು ಹಂತಗಳಲ್ಲಿ ಕಾಡುವ ಈ ಡೆಂಘೀ ಸಾಮಾನ್ಯ ಜ್ವರ, ಡೆಂಘೀ ಹೆಮೊರೈಜಿನ್ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ) ಹಾಗೂ ಕೊನೆಯ ಹಂತ ಡೆಂಘೀ ಶಾಕ್ ಸಿಂಡ್ರೋಮ್ ಆಗಿದ್ದು, (ದೇಹದಲ್ಲಿ ರಕ್ತಸ್ರಾವವಾಗಿ ರೋಗಿ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆ) ರೋಗಿಗೆ ರಕ್ತದ ಪ್ಲೇಟ್ಲೆಟ್ಸ್ ಪ್ರಮಾಣ ಇಳಿಕೆಯಾಗುತ್ತಾ ಬರುತ್ತದೆ ಎನ್ನುತ್ತಾರೆ ವೈದ್ಯರು.
2-3 ದಿನದಲ್ಲಿ ಮಾಹಿತಿ ಸಂಗ್ರಹ: ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ನಿತ್ಯ ವರದಿಯಾಗುವ ಡೆಂಘೀ ರೋಗಿಗಳ ಮಾಹಿತಿ ಕಡ್ಡಾಯವಾಗಿ ಬಿಬಿಎಂಪಿ/ಆರೋಗ್ಯ ಇಲಾಖೆಗೆ ನೀಡಬೇಕು. ಇದಕ್ಕಾಗಿ ಬಿಬಿಎಂಪಿ ಸೂಕ್ತ ತಂತ್ರಾಂಶ ಸಿದ್ಧಪಡೆಸಿತ್ತು. ಸದ್ಯ ತಾಂತ್ರಿಕ ದೋಷ ಉಂಟಾಗಿದ್ದು, ಸರಿಪಡಿಸಲಾಗುತ್ತಿದೆ. 2-3 ದಿನದೊಳಗೆ ನಗರದ ಆಸ್ಪತ್ರೆಗಳಿಂದ ಡೆಂಘೀ ಪ್ರಕರಣಗಳ ನಿಖರ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದ್ದಾರೆ.
ಡೆಂಘೀ ತಡೆಗಟ್ಟಲು ಏನು ಮಾಡಬೇಕು?