ಆದಾಯಕ್ಕಿಂತ ವೆಚ್ಚ ಹೆಚ್ಚಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿ| ಈ ಬಾರಿ ವಾಸ್ತವಿಕ ಆಯವ್ಯಯ ಮಂಡನೆಗೆ ನಿರ್ಧಾರ| 22 ಸಾವಿರ ಕೋಟಿ ಆರ್ಥಿಕ ಹೊರೆ| ರಾಜ್ಯ ಸರ್ಕಾರ ಅನುದಾನ, ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಣೆ ಸೇರಿದಂತೆ ಇತರೆ ಆದಾಯಗಳನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ಬಜೆಟ್ ಮಂಡಿಸುವುದಕ್ಕೆ ತೀರ್ಮಾನ|
ಬೆಂಗಳೂರು(ಮಾ.11): ಆದಾಯಕ್ಕಿಂತ ವೆಚ್ಚ ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಬಿಎಂಪಿ ಪ್ರಸಕ್ತ 2021-22ನೇ ಸಾಲಿನ ಬಜೆಟ್ ಗಾತ್ರವನ್ನು ಸುಮಾರು 6,500 ಕೋಟಿಗೆ ಸೀಮಿತಗೊಳಿಸುವ ಮೂಲಕ ವಾಸ್ತವಿಕ ಆಯವ್ಯಯವನ್ನು ಮಂಡನೆಗೆ ನಿರ್ಧರಿಸಿದೆ.
ಆದಾಯಕ್ಕಿಂತ ಹೆಚ್ಚಿನ ಮೊತ್ತದ ಯೋಜನೆ ಅನುಷ್ಠಾನದಿಂದ ಆರ್ಥಿಕ ಹೊರೆ ಅನುಭವಿಸುತ್ತಿರುವ ಬಿಬಿಎಂಪಿ 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅನುದಾನ, ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಣೆ ಸೇರಿದಂತೆ ಇತರೆ ಆದಾಯಗಳನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ಬಜೆಟ್ ಮಂಡಿಸುವುದಕ್ಕೆ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ 10ರಿಂದ 12 ಸಾವಿರ ಕೋಟಿ ರು. ವರೆಗೆ ಮಂಡನೆಯಾಗುತ್ತಿದ್ದ ಬಿಬಿಎಂಪಿ ಆಯವ್ಯಯ ಈ ಬಾರಿ 6,500 ಕೋಟಿಗೆ ಮಿತಿಗೊಳ್ಳುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳ ಮಾಹಿತಿ ನೀಡಿವೆ.
ಇನ್ನು ಈ ಬಾರಿ ರಾಜ್ಯ ಸರ್ಕಾರ ಕೂಡ ಪಾಲಿಕೆಗೆ ಲೆಕ್ಕಾಚಾರ ಮಾಡಿ ಅನುದಾನ ನೀಡುತ್ತಿದೆ. 2021-22ನೇ ಸಾಲಿನಲ್ಲಿ .5 ಸಾವಿರ ಕೋಟಿ ಅನುದಾನಕ್ಕೆ ಬಿಬಿಎಂಪಿ ಮನವಿ ಮಾಡಲಾಗಿತ್ತು. ಇದರಲ್ಲಿ .3 ಸಾವಿರ ಕೋಟಿ ಮಾತ್ರ ನೀಡಿದೆ. ಈ ಪೈಕಿ .1 ಸಾವಿರ ಕೋಟಿ ವೆಚ್ಚದಲ್ಲಿ ಪಾಲಿಕೆಯ 110 ಹಳ್ಳಿಗಳಲ್ಲಿ ಜಲಮಂಡಳಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಬಳಸಲು ಯೋಜನೆ ರೂಪಿಸಲಿದೆ. ಉಳಿದ .2 ಸಾವಿರ ಕೋಟಿಯನ್ನು ಪಾಲಿಕೆ ವ್ಯಾಪ್ತಿಯ ಹಾಲಿ ಕಾಮಗಾರಿಗಳು ಹಾಗೂ ಈ ಬಾರಿ ಘೋಷಣೆ ಆಗಿರುವ ಕಾಮಗಾರಿ ಅನುಷ್ಠಾನಕ್ಕೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಬಿಬಿಎಂಪಿಗೆ ಸಿಗ್ತಿಲ್ಲ ಪೂರ್ತಿ ಬಜೆಟ್ ದುಡ್ಡು..!
ಮಾ.20ರ ಬಳಿ ಬಜೆಟ್:
ಪಾಲಿಕೆಯು ಮಾ.20ರ ಬಳಿಕ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಈ ಬಜೆಟ್‌ನಲ್ಲಿ ಅನಾವಶ್ಯಕ ವೆಚ್ಚ ನಿಯಂತ್ರಣದೊಂದಿಗೆ ಅಗತ್ಯ ವೆಚ್ಚ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಅನುದಾನ ಮೀಸಲಿಗೆ ನಿರ್ಧರಿಸಲಾಗಿದೆ. ಅಂತೆಯೆ ಈ ಬಾರಿಯ ಬಜೆಟ್‌ನಲ್ಲಿ ನ್ಯಾಷನಲ್ ಮುನ್ಸಿಪಾಲ್ ಅಕೌಂಟಿಂಗ್ ಪದ್ಧತಿ ಅಳವಡಿಸಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ. ಇದರಿಂದ ನಿರ್ದಿಷ್ಟಕಾಮಗಾರಿಗೆ ಮೀಸಲಾದ ಹಣ ಹಾಗೂ ವೆಚ್ಚದ ಸಂಪೂರ್ಣ ವಿವರ ಸಿಗಲಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
22 ಸಾವಿರ ಕೋಟಿ ಆರ್ಥಿಕ ಹೊರೆ
ಆದಾಯಕ್ಕಿಂತ ಹೆಚ್ಚಿನ ಮೊತ್ತದ ಬಜೆಟ್ ಮಂಡನೆಯಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾಗಿರುವ ಬಿಲ್‌ಗಳ ಮೊತ್ತದ ಬಾಕಿ ಹೆಚ್ಚಾಗಿದೆ. ಈವರೆಗೆ ಪಾಲಿಕೆ ಅನುದಾನದಲ್ಲಿ 2,575.25 ಕೋಟಿ ಮೊತ್ತದ ಕಾಮಗಾರಿ ಬಿಲ್ಲುಗಳನ್ನು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿಯಿದೆ. ಬಿಲ್‌ಗಳ ಬಾಕಿ ಸೇರಿದಂತೆ ಒಟ್ಟು 22,656.52 ಕೋಟಿಗೂ ಅಧಿಕ ಆರ್ಥಿಕ ಹೊರೆ ಪಾಲಿಕೆಯ ಮೇಲಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಪಡೆದಿರುವ 286.34 ಕೋಟಿ ಸಾಲದ ಹೊರೆಯೂ ಇದೆ.