* ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳ
* ಬಹುತೇಕ ಕೇಂದ್ರಗಳು ಖಾಲಿ
* ಪಾಲಿಕೆಯಿಂದ ವಾರದೊಳಗೆ ನಿರ್ಧಾರ
ಬೆಂಗಳೂರು(ಜ.26): ನಗರದಲ್ಲಿ ಕೋವಿಡ್(Covid-19) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಬಹುತೇಕರು ಮನೆಯಲ್ಲೇ ಚಿಕಿತ್ಸೆ(Treatment) ಪಡೆಯುತ್ತಿರುವುದರಿಂದ ಅನೇಕ ‘ಕೋವಿಡ್ ಆರೈಕೆ ಕೇಂದ್ರ’ಗಳು(Covid Care Center) ಖಾಲಿ ಇರುವ ಹಿನ್ನೆಲೆಯಲ್ಲಿ ವಾರದ ಹಿಂದೆ ಪುನರಾರಂಭವಾಗಿದ್ದ ಕೇಂದ್ರದ ಪೈಕಿ ಕೆಲವನ್ನು ಬಂದ್ ಮಾಡಲು ಬಿಬಿಎಂಪಿ(BBMP) ಮುಂದಾಗಿದೆ.
ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ 27 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಎಚ್‌ಎಎಲ್, ಕಾರ್ಮಿಕ ಭವನ, ಮಹದೇವಪುರದ ಜಿಂಕ್ ಹೋಟೆಲ್, ಮಹಾಲಕ್ಷ್ಮಿಲೇಔಟ್‌ನ ಕೆಂಪೇಗೌಡ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಆರು ಆರೈಕೆ ಕೇಂದ್ರಗಳಲ್ಲಿ ಕೇವಲ 270 ಸೋಂಕಿತರು ದಾಖಲಾಗಿದ್ದಾರೆ. ಉಳಿದ ಕೇಂದ್ರಗಳು ಖಾಲಿಯಾಗಿರುವುದರಿಂದ ರೋಗಿಗಳು ಇರುವ ಕೇಂದ್ರಗಳನ್ನು ಉಳಿಸಿಕೊಂಡು ಖಾಲಿ ಇರುವ ಕೇಂದ್ರಗಳನ್ನು ಮುಚ್ಚುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ.
Covid-19: ದೇಶದಲ್ಲಿ 2.55 ಲಕ್ಷ ಕೇಸ್, ಒಂದೇ ದಿನ 50,000 ಇಳಿಕೆ..!
270 ಮಂದಿ ಮಾತ್ರ ಚಿಕಿತ್ಸೆ:
27 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 2668 ಹಾಸಿಗೆ ವ್ಯವಸ್ಥೆ ಇದೆ. ನಿತ್ಯ 20 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದರೂ, ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗುವವರ ಸಂಖ್ಯೆ ಮಾತ್ರ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 25 ದಿನಗಳಲ್ಲಿ ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗಿದ್ದು, ಪ್ರಸ್ತುತ 270 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ) ಬಾಲಸುಂದರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ವಾರದ ಬಳಿಕ ನಿರ್ಧಾರ:
ಸೋಂಕಿತರು ದಾಖಲಾಗುತ್ತಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ಉಳಿಸಿಕೊಳ್ಳುತ್ತೇವೆ. ಕೋವಿಡ್ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಇನ್ನೂ ಒಂದು ವಾರ ಕಾದು ನೋಡಿದ ಬಳಿಕ ಏನು ಮಾಡಬೇಕೆಂಬುದನ್ನು ಪಾಲಿಕೆ ಮುಖ್ಯ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸದ್ಯ ರೋಗಿಗಳು(Patients) ದಾಖಲಾಗುತ್ತಿರುವ ಕೇಂದ್ರಗಳಲ್ಲಿ ಹಾಸಿಗೆಗಳು(Beds) ಭರ್ತಿಯಾಗುವವರೆಗೂ ಅಲ್ಲಿಯೇ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲಾಗುವುದು. ನಂತರ ಉಳಿದ ಕೋವಿಡ್ ಆರೈಕೆ ಕೇಂದ್ರಗಳಿಗೆ ರೋಗಿಗಳನ್ನು ದಾಖಲು ಮಾಡುತ್ತೇವೆ ಎಂದು ತಿಳಿಸಿದರು.
ಪಾಲಿಕೆಯ ಮತ್ತೊಬ್ಬ ಆರೋಗ್ಯಾಧಿಕಾರಿಯ ಮಾಹಿತಿಯಂತೆ ಅನಾವಶ್ಯಕವಾಗಿ ಕೋವಿಡ್ ಕೇಂದ್ರ ಸೆಂಟರ್‌ಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕಾಗುತ್ತಿದೆ. ಆದ್ದರಿಂದ ಅವಶ್ಯಕತೆ ಇರುವಂತ ಆರೈಕೆ ಕೇಂದ್ರಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಬಂದ್ ಮಾಡುವುದು ಒಳಿತು. ಈ ಬಗ್ಗೆಯೇ ಪಾಲಿಕೆ ಕೂಡ ಚಿಂತನೆ ನಡೆಸಿದೆ ಎಂದಿದ್ದಾರೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ತಾತ್ಕಾಲಿಕವಾಗಿ ಇವುಗಳನ್ನು ಬಂದ್ ಮಾಡಿದರೂ ಅಗತ್ಯವಿದ್ದಾಗ ಅವುಗಳನ್ನು ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಅಧಿಕವಾದರೆ ಅವುಗಳನ್ನು ಸಹ ಬಳಕೆ ಮಾಡಿಕೊಳ್ಳುವುದಾಗಿ ಪಾಲಿಕೆ ಹಿರಿಯ ಅರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿಗೆ 19 ಬಲಿ: 209 ದಿನಗಳ ಗರಿಷ್ಠ
ಬೆಂಗಳೂರು(Bengaluru) ನಗರದಲ್ಲಿ ಕೊರೋನಾ(Coronavirus) ಸೋಂಕಿನಿಂದ ಮಂಗಳವಾರ 19 ಜನರು ಮೃತಪಟ್ಟಿದ್ದು(Death), 209 ದಿನಗಳ ಗರಿಷ್ಠ ಪ್ರಕರಣ ಇದಾಗಿದೆ. ಈ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 16,526ಕ್ಕೆ ಏರಿಕೆಯಾಗಿದೆ.
Fact Check: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು!
ಈ ಹಿಂದೆ ಜೂ.23ರಂದು 24 ಸೋಂಕಿತರು ಮತ್ತು ಜು.1ರಂದು 18 ಮಂದಿ ಮೃತಪಟ್ಟಿದ್ದು, ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ಮಂಗಳವಾರ 19,105 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಹೊಸ ಪ್ರಕರಣದೊಂದಿಗೆ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 16.26 ಲಕ್ಷಕ್ಕೆ ಏರಿಕೆಯಾಗಿದೆ. 33,011 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು ಇದುವರೆಗೆ 13.97 ಲಕ್ಷ ಜನರು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,12,460ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ ಇಳಿಕೆಯಾಗಿದ್ದು 188 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಯಲಹಂಕ 49, ಪೂರ್ವ 45, ಬೊಮ್ಮನಹಳ್ಳಿ 42, ಮಹದೇವಪುರ 26, ಪಶ್ಚಿಮ 13, ರಾಜರಾಜೇಶ್ವರಿ ನಗರ 6, ದಕ್ಷಿಣ 5, ದಾಸರಹಳ್ಳಿ 2 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿಯಲ್ಲಿ ತಿಳಿಸಿದೆ.
ಪಾಲಿಕೆ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬೆಳ್ಳಂದೂರು 648, ನ್ಯೂತಿಪ್ಪಸಂದ್ರ 381, ಬೇಗೂರು 380, ಎಚ್‌ಎಸ್‌ಆರ್ ಲೇಔಟ್ 357, ಹೊರಮಾವು 356, ದೊಡ್ಡನೆಕ್ಕುಂದಿ 348, ವರ್ತೂರು 343, ಹಗದೂರು 302, ಹೂಡಿ 272 ಮತ್ತು ಕೋರಮಂಗಲ 257 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.