ಜಿಲ್ಲೆಯಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಇರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಹುಭಾಷ ನಟ ಸಾಯಿಕುಮಾರ್‌ರನ್ನು ಕಣಕ್ಕೆ ಇಳಿಸುವ ಮೂಲಕ ಖಾತೆ ತೆರೆಯವ ತವಕದಲ್ಲಿ ಸೋತು ಕೈ ಸುಟ್ಟುಕೊಂಡಿರುವ ಬಿಜೆಪಿ, 2023 ರ ಚುನಾವಣೆಗೆ ಬಲಿಷ್ಠ ನಾಯಕನ ಹುಡುಕಾಟ ಮುಂದುವರಿಸಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಇರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಹುಭಾಷ ನಟ ಸಾಯಿಕುಮಾರ್‌ರನ್ನು ಕಣಕ್ಕೆ ಇಳಿಸುವ ಮೂಲಕ ಖಾತೆ ತೆರೆಯವ ತವಕದಲ್ಲಿ ಸೋತು ಕೈ ಸುಟ್ಟುಕೊಂಡಿರುವ ಬಿಜೆಪಿ, 2023 ರ ಚುನಾವಣೆಗೆ ಬಲಿಷ್ಠ ನಾಯಕನ ಹುಡುಕಾಟ ಮುಂದುವರಿಸಿದೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸುವುದು ಖಚಿತವಾಗಿದ್ದು ಅಧಿಕೃತ ಘೊಷಣೆ ಬಾಕಿದೆ. ಕ್ಷೇತ್ರದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿರುವ ಸಿಪಿಎಂ ಕೂಡ ಈಗಾಗಲೇ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್‌ರನ್ನು ಕಣಕ್ಕೆ ಇಳಿಸುತ್ತಿದೆ. ದಳದಿಂದ ಕೂಡ ಡಿ.ಜೆ.ನಾಗರಾಜರೆಡ್ಡಿರನ್ನು ಅಧಿಕೃವಾಗಿ ಘೋಷಿಸಿದೆ. ಆದರೆ ಕ್ಷೇತ್ರದ ಬಿಜೆಪಿ ಹುರಿಯಾಳು ಯಾರು ಎನ್ನವುದು ಮಾತ್ರ ನಿಗೂಢವಾಗಿದೆ.
ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟರು ಇಲ್ಲಿ ಸಂಪ್ರದಾಯಿಕ ರಾಜಕೀಯ ಎದುರಾಗಳಿದ್ದು ಇಲ್ಲಿವರೆಗೂ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಚುನಾವಣೆ ಗೆದ್ದ ಇತಿಹಾಸವಿಲ್ಲ. ಎರಡು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಟ ಸಾಯಿಕುಮಾರ್ 5000 ಸಾವಿರ ಮತ ದಾಟಿಲ್ಲ. ಜೆಡಿಎಸ್ ಕಳೆದ ಬಾರಿ ಇಲ್ಲಿ ಸಿ.ಆರ್.ಮನೋಹರ್ ಅವರನ್ನು ಕಣಕ್ಕಿಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ರಾಮಲಿಂಗಪ್ಪಗೆ ಸಿಗುತ್ತಾ ಟಿಕೆಟ್:
ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಬಲಿಜ ಸಮುದಾಯದ ನಾಯಕರಾಗಿರುವ ರಾಮಲಿಂಗಪ್ಪ ಪಕ್ಷದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಬೆಂಗಳೂರಿನ ಸಮಾಜ ಸೇವಕರಾದ ಜಿಪಂ ಮಾಜಿ ಅಧ್ಯಕ್ಷ ಮುನಿರಾಜು ಕೂಡ ಬಿಜೆಪಿ ಟಿಕೆಟ್ ನನಗೇ ಎನ್ನುತ್ತಿದ್ದಾರೆ. ಜೆಡಿಎಸ್ ಟಿಕೆಟ್ ವಂಚಿತ ನಿವೃತ್ತ ಪೊಲೀಸ್ ಅಧಿಕಾರಿ ಕೋನಪ್ಪರೆಡ್ಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ ಈ ಮೂರು ಮಂದಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಾಗೇಪಲ್ಲಿ ಪಟ್ಟಣದಲ್ಲಿ ಬಲಿಜ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಗ್ರಾಮಾಂತರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿವೆ. ಈಗಾಗಿ ಜಾತಿ ಲೆಕ್ಕಾರದಲ್ಲಿ ಬಿಜೆಪಿ ಯಾವ ಸಮುದಾಯಕ್ಕೆ ಇಲ್ಲಿ ಮಣೆ ಹಾಕುತ್ತದೆ ಎನ್ನುವುದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.
ಕ್ಷೇತ್ರದ ಮೇಲೆ ಡಾ. ಸುಧಾಕರ್ ಹಿಡಿತ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಲವು ತಿಂಗಳಿಂದ ಬಾಗೇಪಲ್ಲಿ ಕ್ಷೇತ್ರದಲ್ಲಿ ಹೆಚ್ಚು ಒಡನಾಟ ಇಟ್ಟುಕೊಂಡು ವಿವಿಧ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಪದೇ ಪದೇ ಭೇಟಿ ನೀಡುವ ಮೂಲಕ ಕ್ಷೇತ್ರದ ಮೇಲೆ ಮುತುವರ್ಜಿ ವಹಿಸಿದ್ದಾರೆ. ಸುಧಾಕರ್ ಹೇಳುವ ವ್ಯಕ್ತಿಗೆ ಅಲ್ಲಿ ಟಿಕೆಟ್ ಸಿಗುವುದು ಖಚಿತವಾಗಿದ್ದರೂ ಪ್ರಬಲ ಒಕ್ಕಲಿಗ ಸಮುದಾಯದ ಕೋನಪ್ಪರೆಡ್ಡಿ ಹಾಗೂ ಬಲಿಜ ಸಮುದಾಯದ ರಾಮಲಿಂಗಪ್ಪ ಮತ್ತು ಮುನಿರಾಜು ಹೆಚ್ಚು ಪೈಪೋಟಿ ನಡೆಸುತ್ತಿದ್ದಾರೆ.