ಕನ್ನಡಿಗರ ಬದುಕು ಕಸಿಯುತ್ತಿರುವ ಅನ್ಯರು; ಭೂಮಿ ಖರೀದಿಗೆ ಕಡಿವಾಣ ಹಾಕಿ

By Kannadaprabha News  |  First Published Mar 5, 2023, 11:02 AM IST

ಕೊಪ್ಪಳ ಜಿಲ್ಲೆ ಈಗ ಅನ್ಯರ ನಾಡಾಗುತ್ತಿದೆ. ಇದನ್ನು ತಡೆಯದೇ ಹೋದರೆ ಮುಂದೊಂದು ದಿನ ಇಲ್ಲಿ ಅನ್ಯರದ್ದೇ ಕಾರುಬಾರು ಆಗುವುದರಲ್ಲಿ ಎರಡು ಮಾತಿಲ್ಲ!


ಸೋಮರಡ್ಡಿ ಅಳವಂಡಿ

ಕೊಪ್ಪಳ (ಮಾ.5) ಕೊಪ್ಪಳ ಜಿಲ್ಲೆ ಈಗ ಅನ್ಯರ ನಾಡಾಗುತ್ತಿದೆ. ಇದನ್ನು ತಡೆಯದೇ ಹೋದರೆ ಮುಂದೊಂದು ದಿನ ಇಲ್ಲಿ ಅನ್ಯರದ್ದೇ ಕಾರುಬಾರು ಆಗುವುದರಲ್ಲಿ ಎರಡು ಮಾತಿಲ್ಲ!

Tap to resize

Latest Videos

undefined

ತುಂಗಭದ್ರಾ ಜಲಾಶಯ(Tungabhadra dam) ನಿರ್ಮಾಣವಾಗುವ ವೇಳೆ ಪ್ರಾರಂಭವಾದ ತಮಿಳು, ಆಂಧ್ರದವರ ಲಗ್ಗೆ ಇಡುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಕಾರ್ಖಾನೆಯಲ್ಲಿ ಪಶ್ಚಿಮ ಬಂಗಾಳ, ಬಿಹಾರಿಗಳು ತುಂಬಿಕೊಂಡಿದ್ದರೆ ಇತ್ತೀಚೆಗೆ ಸಿಂಗಟಾಲೂರು, ಹಿರೇಹಳ್ಳ, ಕೊಪ್ಪಳ ಏತ ನೀರಾವರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೂ ಆಂಧ್ರ ಸೇರಿದಂತೆ ಅನ್ಯರಾಜ್ಯದವರು ಲಗ್ಗೆ ಇಡುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಈಗ ಶೇ. 15-20ರಷ್ಟುಅನ್ಯರಾಜ್ಯದವರು ತುಂಬಿಕೊಂಡಿದ್ದಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲಾ ವ್ಯಾಪ್ತಿಯಲ್ಲಿ ಇರುವುದೇ ಆಂಧ್ರದವರು.

ಸಿಂಗಟಾಲೂರು ಏತ ನೀರಾವ(Singataluru lift irrigation)ರಿ ವ್ಯಾಪ್ತಿಯಲ್ಲೂ ಸಾವಿರಾರು ಎಕರೆ ಭೂಮಿ ಖರೀದಿಸುವ ಆಂಧ್ರದವರು ಇಂದಲ್ಲ ನಾಳೆ ನೀರಾವರಿಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಇದರ ಹೊರತಾಗಿಯೂ ನೀರಾವರಿ ಆಗಬಹುದಾದ ಪ್ರದೇಶಗಳನ್ನು ಗುರುತಿಸಿ ಭೂಮಿ ಖರೀದಿ ಮಾಡುತ್ತಲೇ ಇದ್ದಾರೆ. ಹಿರೇಹಳ್ಳ ಜಲಾಶಯ ವ್ಯಾಪ್ತಿಯಲ್ಲೂ ಸಾವಿರಾರು ಕುಟುಂಬಗಳು ಆಗಮಿಸಿವೆ. ಕಿನ್ನಾಳ ಗ್ರಾಮದಲ್ಲಿ ಇವರ ಪ್ರತ್ಯೇಕ ಏರಿಯಾ ಇದೆ.

ಕೊಪ್ಪಳ: ಹನುಮಸಾಗರ ಕನ್ನಡ ನುಡಿ ತೇರಿಗೆ ಕ್ಷಣಗಣನೆ

ಈಗಷ್ಟೇ ಕೊಪ್ಪಳ ಏತ ನೀರಾವರಿ(Koppal lift irrigation)( ಯೋಜನೆಯಲ್ಲಿ ಜಿಲ್ಲೆಗೆ ನೀರು ಆಗಮಿಸಿದ್ದು, ಇನ್ನು ನೀರಾವರಿಗೆ ಅವಕಾಶ ನೀಡಿಲ್ಲ. ಕೇವಲ ಕುಡಿಯುವ ನೀರಿಗಾಗಿ ಕೆರೆ ತುಂಬಿಸಬಹುದಾಗಿದೆ. ಇಂದಲ್ಲ ನಾಳೆ ನೀರಾವರಿಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಭೂಮಿ ಖರೀದಿಗಾಗಿ ಆಂಧ್ರದವರು ಸುತ್ತಾಡುತ್ತಿದ್ದಾರೆ.

ಇದು, ಕಳೆದ 50-60 ವರ್ಷಗಳಿಂದ ನಡೆಯುತ್ತಲೇ ಇದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಷ್ಟೇ ಅಲ್ಲ, ತುಂಗಭದ್ರಾ ಕಾಡಾ ಕಚೇರಿಯಲ್ಲಿ ಹಾಗೆ ಸುತ್ತಾಡಿದರೆ ಸಾಕು ಗುತ್ತಿಗೆ ಆಧಾರದಲ್ಲಿ ನೇಮಕವಾಗುವ ಎಲ್ಲರೂ ಆಂಧ್ರಮೂಲದವರೇ ಆಗಿದ್ದಾರೆ. ಮಾತೆತ್ತಿದರೆ ಸಾಕು ‘ಏಮ್‌ ಸಾರ್‌’ ಎನ್ನುತ್ತಾರೆಯೇ ಹೊರತು ‘ಏನು ಸರ್‌’ ಎನ್ನುವುದಿಲ್ಲ.

ಇನ್ನು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕೈಗಾರಿಕೆಗಳಿವೆ. ದೊಡ್ಲ, ನಂದಿನಿ ಹಾಲು ಉತ್ಪಾದಕ ಘಟಕಗಳಿವೆ. ಇದರಲ್ಲಿ ದೊಡ್ಲ ಕಂಪನಿಯಲ್ಲಿ ಕನ್ನಡಿಗರಿಗೆ ಮಾನ್ಯತೆಯೇ ಇಲ್ಲ ಎನ್ನುವುದು ರಾಜ್ಯಮಟ್ಟದ ವಿವಾದವೇ ಆಯಿತು. ಕೈಗಾರಿಕೆಗಳು ಇದ್ದರೂ ಪಶ್ಚಿಮ ಬಂಗಾಳ ಹಾಗೂ ಬಿಹಾರದವರೇ ಶೇ. 90ರಷ್ಟುಇದ್ದಾರೆ. ಗಿಣಿಗೇರಿ ಸೇರಿದಂತೆ ಸುತ್ತಮುತ್ತಲೂ ಅವರಿದ್ದಾರೆ.

ಇಲ್ಲವೇ ಪರಿಹಾರ?:

ಇದ್ಯಾವುದನ್ನೂ ಸ್ಥಳೀಯ ನಾಯಕರು ಹಾಗೂ ಕಸಾಪ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ. ಈಗೀಗ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತಿರುವುದರಿಂದ ಅಲ್ಲಿಗೂ ಉತ್ತರ ಭಾರತದವರು ಲಗ್ಗೆ ಇಡುತ್ತಿದ್ದಾರೆ. ಸುತ್ತಮುತ್ತಲೂ ವ್ಯಾಪಾರ ಮಾಡುವವರು, ಅರ್ಚಕರು ಸೇರಿದಂತೆ ಬಹುತೇಕರು ಉತ್ತರದವರೇ ಆಗಿದ್ದಾರೆ. ಇದನ್ನು ತಡೆಯುವ ದಿಸೆಯಲ್ಲಿ ಪ್ರಯತ್ನ ಆಗುತ್ತಿಲ್ಲ. ಸ್ಥಳೀಯವಾಗಿ ಪ್ರಶ್ನೆ ಮಾಡುವವರ ವಿರುದ್ಧ ಸ್ಥಳೀಯರೇ ಎದ್ದುನಿಲ್ಲುತ್ತಾರೆ. ಇದ್ಯಾವುದಕ್ಕೂ ಪರಿಹಾರ ಇಲ್ಲವೇ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ಬೇಕು ಕಾನೂನು:

ಜಿಲ್ಲೆಯಲ್ಲಿ ಈಗಾಗಲೇ ಆಗಿರುವ ನೀರಾವರಿ ಯೋಜನೆಗಳು ಹಾಗೂ ಆಗುತ್ತಿರುವ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಅನ್ಯರಾಜ್ಯದವರು ಭೂಮಿ ಖರೀದಿಸುವುದಕ್ಕೆ ಕಡಿವಾಣ ಹಾಕಬೇಕು. ಇಲ್ಲಿಯ ರೈತರು ಭೂಮಿ ಮಾರಾಟ ಮಾಡುವುದಾದರೆ ಸ್ಥಳೀಯರಿಗೆ ಮಾರಾಟ ಮಾಡುವಂತಹ ಷರತ್ತು ಅಥವಾ ನಿಯಮ ಜಾರಿಗೆ ಬರಬೇಕು. ಇಲ್ಲದಿದ್ದರೆ ಮುಂದೊಂದು ದಿನ ಜಿಲ್ಲೆಯಲ್ಲಿ ಅನ್ಯರದ್ದೇ ಕಾರುಬಾರು ಎನ್ನುವಂತಾಗಲಿದೆ.

ಅಸ್ಸಾಂ ಕಾರ್ಮಿಕರಿಂದ ಸ್ಥಳೀಯ ಕಾರ್ಮಿಕರ ಮೇಲೆ ಹಲ್ಲೆ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕಸಾಪ ಈ ದಿಸೆಯಲ್ಲಿ ಸಮ್ಮೇಳನದಲ್ಲಿ ಚರ್ಚೆ ಮಾಡಿ, ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಬೇಕಾಗಿದೆ.

click me!