Hijab Row : ಹಿಜಾಬ್ ಧಾರಣೆ ಕಡ್ಡಾಯ ಎಂದಾದರೆ  ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಅಲ್ಲವೇ?

By Kannadaprabha News  |  First Published Feb 23, 2022, 3:49 AM IST

* ಹಿಜಾಬ್‌ ಧಾರಣೆ ಸ್ತ್ರೀಯರ ಇಚ್ಛೆಗೆ ಬಿಡಿ: ಸರ್ಕಾರ

* ಹಿಜಾಬ್‌ ಕಡ್ಡಾಯ ಧಾರ್ಮಿಕ ಆಚರಣೆಯಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ

* ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಾದ ಮುಕ್ತಾಯಗೊಳಿಸಿದ ನಾವದಗಿ


ಬೆಂಗಳೂರು ( ಫೆ. 23)  ಹಿಜಾಬ್‌ (Hijab) ಧರಿಸಲು ಇಷ್ಟಪಡದ ಮಹಿಳೆಯರಿಗೆ ಸಂವಿಧಾನದ (Constitution of India) ವಿಧಿ 25ರ ಅಡಿ ಹಿಜಾಬ್‌ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆ ಎಂದಾದರೆ ಅದು 19(1) (ಎ) ಅಡಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ. ಹಾಗಾಗಿ ಹಿಜಾಬ್‌ ಧರಿಸುವುದನ್ನು ಮಹಿಳೆಯ ಆಯ್ಕೆಗೆ ಬಿಡಬೇಕು ಎಂದು ರಾಜ್ಯ ಸರ್ಕಾರ (Karnataka Govt) ಹೈಕೋರ್ಟ್‌ (High Court) ಮುಂದೆ ವಾದ ಮಂಡಿಸಿದೆ.

ಹಿಜಾಬ್‌ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರಿದ್ದ ವಿಸ್ತೃತ ಪೀಠದ ಮುಂದೆ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ 2 ಗಂಟೆಗಳ ವಾದ ಮಂಡಿಸಿದರು.#

Tap to resize

Latest Videos

undefined

Hijab Row : ಧಾರ್ಮಿಕ ಆಚರಣೆ ಎನ್ನುವ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು 2ನೇ ದರ್ಜೆಯ ಪ್ರಜೆಯಾಗಿ ನೋಡಬಾರದು!

ಹಿಜಾಬ್‌ ಧರಿಸುವುದು ಕಡ್ಡಾಯ ಎಂಬ ಬಗ್ಗೆ ಪುರಾವೆಗಳನ್ನು ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಒಂದು ವೇಳೆ ಹಿಜಾಬ್‌ ಕಡ್ಡಾಯಗೊಳಿಸಿದಲ್ಲಿ ಇಸ್ಲಾಂ ಧರ್ಮದ ಮಹಿಳೆಯರು ಕಡ್ಡಾಯವಾಗಿ ಆಚರಣೆ ಮಾಡಬೇಕಾಗುತ್ತದೆ. ಇದು ಹಿಜಾಬ್‌ ಧರಿಸಲು ಇಚ್ಛಿಸದ ಮಹಿಳೆಯ ಘನತೆಗೆ ವಿರುದ್ಧವಾಗಿರಲಿದೆ. ಧಾರ್ಮಿಕ ಆಚರಣೆಗಳು ಧರ್ಮದ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿರಬೇಕು. ಬಾಬರಿ ಮಸೀದಿ ಪ್ರಕರಣದಲ್ಲಿ ಮಸೀದಿಯಲ್ಲಿಯೇ ನಮಾಜ್‌ ಮಾಡಬೇಕು ಎಂಬ ವಾದವನ್ನು ಕೋರ್ಟ್‌ ನಿರಾಕರಿಸಿತ್ತು. ಧಾರ್ಮಿಕ ಆಚರಣೆಗಳು ಅತ್ಯಗತ್ಯವಾಗಿದ್ದರೆ ಮಾತ್ರ ಕಡ್ಡಾಯ ಮಾಡಬಹುದು ಎಂದು ವಾದಿಸಿದರು.

ಹಿಜಾಬ್‌ ನಿರ್ಬಂಧಿಸುವ ಸಂಬಂಧ ಈವರೆಗೂ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಈ ಬಗ್ಗೆ ನಿರ್ಧರಿಸಲು ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಶಾಲೆಯ ಒಳಗೆ ಹಿಜಾಬ್‌ ಧರಿಸದಂತೆ ಹೇಳಿವೆಯೇ ಹೊರತು, ಹೊರಗೆ ಅಲ್ಲ. ಶಾಲೆವರೆಗೂ ಹಾಕಿಕೊಂಡು ಬರಲು ಅಭ್ಯಂತರವಿಲ್ಲ. ಸಾಂಸ್ಥಿಕ ಶಿಸ್ತುಗಳನ್ನು ಪಾಲಿಸುವ ಸಂದರ್ಭದಲ್ಲಿ ವೈಯಕ್ತಿಕ ಆಚರಣೆಗಳಿಗೆ ಅವಕಾಶವಿರುವುದಿಲ್ಲ ಎಂದು ನಾವದಗಿ ವಾದಿಸಿದರು.

ಶಿಸ್ತು ತರಲು ಸಮವಸ್ತ್ರ: ಉಡುಪಿಯ ಪಿಯು ಶಿಕ್ಷಕರ ಪರ ಹಿರಿಯ ವಕೀಲ ಆರ್‌.ವೆಂಕಟರಮಣಿ ವಾದ ಮಂಡಿಸಿ, ಸಾರ್ವಜನಿಕ ಪ್ರದೇಶಕ್ಕೂ ಶಾಲೆಯ ವಾತಾವರಣಕ್ಕೂ ವ್ಯತ್ಯಾಸವಿರುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಶಿಕ್ಷಣ ಸಂಸ್ಥೆಗಳು ತಮ್ಮದೇ ಕೆಲ ನಿಯಮಗಳನ್ನು ಹೊಂದಿರುತ್ತವೆ. ಕುರಾನ್‌ನಲ್ಲಿ ಇರುವ ಅಂಶಗಳ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿನ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಒಳಗೂ ಆಚರಿಸುತ್ತೇವೆ ಎನ್ನುವುದು ಸರಿಯಲ್ಲ. ಶಾಲೆಗಳ ಒಳಗೆ ಧಾರ್ಮಿಕ ಆಚರಣೆಗಳಿಗೆ ಆವಕಾಶವಿಲ್ಲ. ಇಲ್ಲಿ ಯಾರ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ. ನ್ಯಾಯಾಲಯಗಳು ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವೇ ಮಧ್ಯಪ್ರವೇಶಿಸಬಹುದು, ಆಡಳಿತ ಹೇಗೆ ನಡೆಸಬೇಕು ಎಂಬ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಮನವಿ ಮಾಡಿದರು.

ಶಿಕ್ಷಣ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ್‌, ಧಾರ್ಮಿಕ ಸಂಪ್ರದಾಯಗಳನ್ನು ಎಲ್ಲೆಡೆ ಆಚರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದರು.

ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆದೇಶಿಸಿಲ್ಲ: ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಶಿಕ್ಷಣ ಸಂಸ್ಥೆಗಳೇ ವಸ್ತ್ರ ಸಂಹಿತೆ ನಿಗದಿ ಮಾಡುತ್ತವೆ. ಸರ್ಕಾರ ಸಮವಸ್ತ್ರ ನಿಗದಿಪಡಿಸಿಲ್ಲ ಎಂಬ ಅಡ್ವೋಕೇಟ್‌ ಜನರಲ್‌ ನಾವದಗಿ ವಾದ ಒಪ್ಪಿದ ಪೀಠ, ಆದೇಶ ಪ್ರಶ್ನಿಸಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಅಗತ್ಯವಿಲ್ಲವೆಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಇದೇ ವಾರದಲ್ಲಿ ಇತ್ಯರ್ಥ: ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ಇದೇ ವಾರದಲ್ಲಿ ಪೂರ್ಣಗೊಳಿಸಬೇಕು ಎಂದ ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ಅರ್ಜಿದಾರರು ಹಾಗೂ ಪ್ರತಿವಾದಿಗಳು ತಮ್ಮ ವಾದವನ್ನು ಸಂಕ್ಷಿಪ್ತವಾಗಿ ಮಂಡಿಸಬೇಕು. ಲಿಖಿತ ಆಕ್ಷೇಪಣೆಗಳನ್ನು ತ್ವರಿತವಾಗಿ ಸಲ್ಲಿಸಿ. ಎಲ್ಲ ಅರ್ಜಿದಾರರಿಗೂ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು.

ನ ಮುಂಹ್‌ ಚುಪಾಕೆ ಜೀಯೊ!: ನಾವದಗಿ ತಮ್ಮ ವಾದ ಮುಕ್ತಾಯಗೊಳಿಸುವ ಮುನ್ನ 1970ರ ದಶಕದ ಬಾಲಿವುಡ್‌ನ ಹಿಂದಿ ಚಲನಚಿತ್ರ ‘ಹಮ್‌ರಾಜ್‌‘ನ ಹಾಡಿನ ಸಾಲುಗಳನ್ನು ಭಾವುಕರಾಗಿ ಉದ್ಧರಿಸಿದರು.

ಸಾಹಿರ್‌ ಲೂಧಿಯಾನ್ವಿ ವಿರಚಿತ ಮತ್ತು ಖ್ಯಾತ ಗಾಯಕ ಮಹೇಂದ್ರ ಕಪೂರ್‌ ಹಾಡಿರುವ, ‘ನ ಮುಂಹ್‌ ಚುಪಾಕೆ ಜೀಯೊ, ಔರ್‌ ನ ಸರ್‌ ಝುಕಾ ಕೆ ಜೀಯೊ, ಗಮೋಂ ಕಾ ದೌರ್‌ ಭಿ ಆಯೇ ತೊ ಮುಸ್ಕುರಾ ಕೆ ಜೀಯೊ (ಮುಖ ಮುಚ್ಚಿಕೊಂಡು ಬದುಕಬೇಡ, ತಲೆತಗ್ಗಿಸಿ ಬದುಕಬೇಡ, ದುಃಖದ ಘಳಿಗೆಗಳು ಎದುರಾದರೂ ಹಸನ್ಮುಖಿಯಾಗಿಯೇ ಬದುಕು) ಎಂಬ ಸಾಲುಗಳನ್ನು ಹೇಳಿ ತಮ್ಮ ಆಸನದಲ್ಲಿ ಕುಳಿತರು.

click me!