ಸಾಗರ ತಾಲೂಕಿನ ಗಡಿಪ್ರದೇಶದಲ್ಲಿನ ಬರೂರು ಗ್ರಾಪಂ ವ್ಯಾಪ್ತಿಯಲ್ಲಿನ ಕುಂದೂರು ಸಮೀಪದಲ್ಲಿ ಕಲ್ಲೊಡ್ಡು ಜಲಾಶಯ ಯೋಜನೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕೆಲ ವರ್ಷಗಳ ಹಿಂದೆ ಇಂಥದೊಂದು ಯೋಜನೆ ಜಾರಿಗೆ ಬರುತ್ತದೆ ಎಂದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಮತ್ತೆ ನಿಂತುಹೋಗಿದ್ದ ಯೋಜನೆ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ರಾಜೇಶ ಭಡ್ತಿ
ಸಾಗರ [ಸೆ.02]: ಸಾಗರ ತಾಲೂಕಿನ ಗಡಿಪ್ರದೇಶದಲ್ಲಿನ ಬರೂರು ಗ್ರಾಪಂ ವ್ಯಾಪ್ತಿಯಲ್ಲಿನ ಕುಂದೂರು ಸಮೀಪದಲ್ಲಿ ಕಲ್ಲೊಡ್ಡು ಜಲಾಶಯ ಯೋಜನೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕೆಲ ವರ್ಷಗಳ ಹಿಂದೆ ಇಂಥದೊಂದು ಯೋಜನೆ ಜಾರಿಗೆ ಬರುತ್ತದೆ ಎಂದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ನಂತರ ಕೆಲವರ್ಷಗಳ ಕಾಲ ಇದರ ಸುದ್ದಿಯೇ ಇರಲಿಲ್ಲ. ಈಗ ಮತ್ತೊಮ್ಮೆ ಯೋಜನೆ ಜಾರಿಯಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಯೋಜನೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಏನಿದು ಕಲ್ಲೊಡ್ಡು:
ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕುಂದೂರು ಕೊರ್ಲಿಕೊಪ್ಪ ಮಿಡಿನಾಗರ ಭಾಗದ ಒಂದು ತಗ್ಗಿನ ಪ್ರದೇಶದಲ್ಲಿ ನೀರಿನ ಹರಿವಿದೆ. ಗುತ್ತಳ್ಳಿ ಭಾಗದಲ್ಲಿನ ಕೆರೆಯೊಂದರ ಜಲಮೂಲದಿಂದ ಹೊರಟ ಈ ಹರಿವು ಮುಂದೆ ಬಲಗೊಳ್ಳುತ್ತ ಅಂಬ್ಲಿಗೊಳ ಜಲಾಶಯವನ್ನು ಸೇರುತ್ತದೆ. ಸದರಿ ತಗ್ಗು ಪ್ರದೇಶದಲ್ಲಿ ಜಲಾಶಯ ನಿರ್ಮಾಣದ ಯೋಜನೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾಲದಿಂದಲೂ ಮಾತುಕತೆಗೆ ಬಂದಿತ್ತು ಎನ್ನಲಾಗಿದೆ. ಈ ನೀರಿನ ಹರಿವಿಗೆ ಒಡ್ಡುಕಟ್ಟಿಕೃಷಿಗೆ ಪೂರಕ ನೀರಾವರಿ ಒದಗಿಸುವ ಯೋಜನೆ ಇದಾಗಿದೆ. ಆ ಸಂದರ್ಭದಲ್ಲಿ ಗುಂಡೂರಾವ್ ಈ ಸ್ಥಳಕ್ಕೆ ಬಂದಿದ್ದರೆಂದು, ಯೋಜನೆಗೆ ಶಂಕುಸ್ಥಾಪನೆಯೂ ಆಗಿತ್ತೆಂದು ಇಲ್ಲಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಂದು ಶಂಕುಸ್ಥಾಪನೆಯಾದ ಯಾವ ಗುರುತುಗಳು ಈಗಿಲ್ಲ.
ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಲ್ಲೊಡ್ಡು ಯೋಜನೆಗೆ ಸಂಬಂಧಪಟ್ಟಂತೆ ಮತ್ತೆ ಮಾತುಗಳು ಕೇಳಿ ಬಂದಿದ್ದವು. ಆಡಳಿತಾತ್ಮಕ ಅನುಮೋದನೆಯ ಸಂದರ್ಭದಲ್ಲಿ ಸುಮಾರು 20 ಕೋಟಿ ರು. ಅಂದಾಜು ಪಟ್ಟಿಸಿದ್ಧವಾಗಿತ್ತು ಎನ್ನಲಾಗಿದೆ. ಅಷ್ಟರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರಿಂದ ಯೋಜನೆಯ ಪ್ರಸ್ತಾಪ ಅಲ್ಲಿಗೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಶಿಕಾರಿಪುರ ತಾಲೂಕಿನ ಕೃಷಿಭೂಮಿಗೆ ನೀರೊದಗಿಸುವ ಯೋಜನೆ ಇದಾಗಿರುವುದರಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗಲೆಲ್ಲ ಯೋಜನೆಯ ಪ್ರಸ್ತಾಪವಾಗುತ್ತದೆ. ಈಗ ಆಗಿರುವುದೂ ಅದೆ.
ಯೋಜನೆಯ ಉದ್ದೇಶ:
ಮಡುಬ ಸಿದ್ದಾಪುರ ಎಂಬ ಶಿಕಾರಿಪುರದ ಸಾಗರ ಗಡಿಪ್ರದೇಶದ ಸಮೀಪದ ಸಾಗರ ತಾಲೂಕಿನ ಭೂಭಾಗದಲ್ಲಿ ಯೋಜಿತ ಕಲ್ಲೊಡ್ಡು ಜಲಾಶಯ ನಿರ್ಮಾಣವಾದರೆ ಶಿಕಾರಿಪುರ ವ್ಯಾಪ್ತಿಯ ಕೃಷಿಕರಿಗೆ ನೀರಾವರಿಯ ಅನುಕೂಲವಾಗುತ್ತದೆ. ಸ್ಥಳೀಯರ ಪ್ರಕಾರ ಶ್ರಾವಣ ಮಾಸದಲ್ಲಾಗುವ ಒಂದೆರಡು ಮಳೆಗಳಿಗೆ ನೀರಿನ ಹರಿವು ಹೆಚ್ಚಾಗುತ್ತದೆ ಅಷ್ಟೆ. ಈ ಬಾರಿ ಸುರಿದಂತೆ ಭಾರಿ ಮಳೆಯಾದರೆ ನೀರಿನ ಪ್ರಮಾಣ ಒಂದಷ್ಟುಜಾಸ್ತಿಯಾಗಬಹುದು. ಇಲ್ಲದಿದ್ದರೆ ನೀರಿನ ಮೂಲ ಅಷ್ಟಕ್ಕಷ್ಟೆ. ಅಂಥ ನೀರನ್ನು ಸಂಗ್ರಹಿಸಿ, ಚಾನೆಲ್ ಮೂಲಕ ಹರಿಸಿದರೆ ಶಿಕಾರಿಪುರ ಭಾಗದವರ ನೀರಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎನ್ನುವುದು ಯೋಜನೆಯ ಉದ್ದೇಶ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿರೋಧಕ್ಕೆ ಕಾರಣವೇನು:
ಈಗಾಗಲೇ ಸಾಗರ ತಾಲೂಕಿನ ಕೆಲವು ಪ್ರದೇಶಗಳು ವಿವಿಧ ಜಲವಿದ್ಯುತ್ ಯೋಜನೆಗಳಿಂದಾಗಿ ಮುಳುಗಡೆಯಾಗಿದೆ. ಶರಾವತಿ ಯೋಜನೆಗಳಿಂದಾಗಿ ವಲಸೆ ಹೋದ ಜನರು ಇಂದಿಗೂ ಹತ್ತು ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಬ್ಲಿಗೋಳ ಜಲಾಶಯ ನಿರ್ಮಾಣ, ಎತ್ತರ ಹೆಚ್ಚಳ ಸಂದರ್ಭದಲ್ಲಿ ತಾಲೂಕಿನ ಜನ ಮತ್ತೊಮ್ಮೆ ಮುಳುಗಡೆ ಸಮಸ್ಯೆ ಅನುಭವಿಸಿದ್ದಾರೆ. ಇನ್ನೂ ಕೆಲ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ ಎನ್ನುವ ಆರೋಪವಿದೆ. ಅಲ್ಲದೆ ಕಲ್ಲೊಡ್ಡು ಯೋಜನೆಯಿಂದ ಮುಳುಗಡೆಯಾಗುವ ಪ್ರದೇಶದಲ್ಲಿ ಶರಾವತಿ ಯೋಜನೆಯಿಂದ ಮುಳುಗಡೆಯಾದ ಕುಟುಂಬಗಳಿವೆ. ಅವರೆಲ್ಲ ಮತ್ತೊಮ್ಮೆ ಸಂತ್ರಸ್ತರಾಗುತ್ತಾರೆ. ಈ ಎಲ್ಲ ಕಾರಣದಿಂದ ಕಲ್ಲೊಡ್ಡು ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಆಡಳಿತಾತ್ಮಕ ಅನುಮೋದನೆ:
ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದಾಗಲೇ ಯೋಜನೆಯ ಪ್ರಸ್ತಾಪವಾಗಿ ಶಂಕುಸ್ಥಾಪನೆ ನಡೆದಿದೆ ಎನ್ನಲಾಗುತ್ತಿದ್ದರೂ ಕಳೆದ ಡಿಸೆಂಬರ್ ಜನವರಿ ತಿಂಗಳಿನಲ್ಲಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 121.17ಕೋಟಿ ರು. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈಗ ಬಂದಿರುವ ಬಿಜೆಪಿ ಸರ್ಕಾರ ಹಣ ಬಿಡುಗಡೆಗೆ ಮುಂದಾಗಿದೆ. ಅದು ಬಿಟ್ಟರೆ ಸರ್ವೆ, ಟೆಂಡರ್ ಪ್ರಕ್ರಿಯೆ ಯಾವುದೂ ನಡೆದಿಲ್ಲ.
ಒಟ್ಟಿನಲ್ಲಿ ಯೋಜನೆಗೆ ವಿರೋಧವಂತೂ ವ್ಯಕ್ತವಾಗಿದೆ. ಕಳೆದ ಆ.26ರಂದು ಸಾಗರದಲ್ಲಿ ಹೋರಾಟ ಸಮಿತಿ ಆಶ್ರಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆ, ಸಭೆ ನಡೆದಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹಾಲಿ ಶಾಸಕ ಹಾಲಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಸಾಹಿತಿ ನಾ.ಡಿಸೋಜ, ಪರಿಸರವಾದಿಗಳು, ಗ್ರಾಮಸ್ಥರು ಭಾಗವಹಿಸಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ನಡುವೆ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಯೋಜನೆ ಜಾರಿಗೊಳಿಸಿಯೇ ಸಿದ್ಧ ಎಂದಿದ್ದಾರೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಯೋಜನೆಯ ಸಾಧಕ ಬಾಧಕ: ಹೋರಾಟ ಸಮಿತಿ ಹೇಳುವ ಪ್ರಕಾರ ಯೋಜನೆಯಿಂದ ಸಾಗರ ತಾಲೂಕಿಗೆ ಸೇರಿದ ಸುಮಾರು 11ಸಾವಿರ ಎಕರೆ ಕೃಷಿಭೂಮಿ, 7ಸಾವಿರ ಎಕರೆ ಅರಣ್ಯಪ್ರದೇಶ ಮುಳುಗಡೆಯಾಗಲಿದೆ. ಕುಂದೂರು, ಮಿಡಿನಾಗರ, ಬರೂರು, ಕೊರ್ಲಿಕೊಪ್ಪ ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಲಿದ್ದು ಸುಮಾರು 2ಸಾವಿರ ಕುಟುಂಬಗಳು ಸಂತ್ರಸ್ತರಾಗಲಿವೆ. ಎಲ್ಲಕ್ಕಿಂತ ಬಹಳ ಮುಖ್ಯವಾಗಿ ಉದ್ದೇಶಿತ ಯೋಜನೆಯ ಪ್ರದೇಶ ಮಲೆನಾಡು ಹಾಗೂ ಬಯಲುಸೀಮೆಯ ಕೊಂಡಿಯಾಗಿದೆ. ಇಲ್ಲಿ ದೊಡ್ಡ ದೊಡ್ಡ ಗುಡ್ಡಗಳು, ದಟ್ಟಕಾಡು ಇದೆ. ಅಪರೂಪದ ಜೀವವೈವಿಧ್ಯವಿದೆ. ಗುಡ್ಡಗಳಿಂದ ಹರಿದುಬರುವ ನೀರು ತಗ್ಗು ಪ್ರದೇಶದಲ್ಲಿ ಹರಿಯುವುದರಿಂದ ಸುತ್ತಮುತ್ತಲಿನ ಪ್ರದೇಶದ ಭೂಮಿ ಫಲವತ್ತಾಗಿದೆ. ಆದರೆ ಸರ್ಕಾರದ ಅಂಕಿ ಅಂಶದ ಪ್ರಕಾರ ಯೋಜನೆಯಿಂದ ಒಟ್ಟಾರೆಯಾಗಿ 459ಎಕರೆ ಪ್ರದೇಶ ಮುಳುಗಡೆಯಾಗಲಿದೆ. ಇದರಲ್ಲಿ ಕೃಷಿಭೂಮಿ, ಅರಣ್ಯ ಎಲ್ಲವೂ ಸೇರಿದೆ. ಯೋಜನೆಯಿಂದ 1950 ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದ್ದು ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಲಿದೆ.
ಕಲ್ಲೊಡ್ಡು ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಯೋಜನೆ ಜಾರಿಯಾದರೆ ಕಲ್ಲೊಡ್ಡು ಭಾಗದಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತೊಮ್ಮೆ ಸಂತ್ರಸ್ತರಾಗಲಿದ್ದಾರೆ. ಯೋಜನೆ ಜಾರಿಯಿಂದ ಜನರಿಗೆ ಉಂಟಾಗುವ ತೊಂದರೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು. ಹಿರಿಯರಾದ ಕಾಗೋಡು ತಿಮ್ಮಪ್ಪನವರೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗುತ್ತೇವೆ. ಪಕ್ಷಾತೀತವಾಗಿ ಅವರಲ್ಲಿ ಮನವಿ ಮಾಡಿ ಪರ್ಯಾಯ ದಾರಿ ಹುಡುಕಲು ಪ್ರಯತ್ನಿಸುತ್ತೇನೆ
ಎಚ್.ಹಾಲಪ್ಪ, ಶಾಸಕರು, ಸಾಗರ