ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ವಾರಗಳಿಂದ ನಿರಂತರವಾಗಿ ಸುರಿದ ಮಳೆಯು ಬಿಡುವು ತೆಗೆದುಕೊಂಡಿದ್ದು, ಬೆಳೆಗಾರರು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳತ್ತ ಮುಖ ಮಾಡುವಂತೆ , ಬೆಳೆಗಳಿಗೆ ಗೊಬ್ಬರ ಮತ್ತು ಔಷದ ಸಿಂಪಡಣೆಗೆ ಕೃಷಿ ಇಲಾಖೆ ಸಲಹೆ ನೀಡಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.25): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ವಾರಗಳಿಂದ ನಿರಂತರವಾಗಿ ಸುರಿದ ಮಳೆಯು ಕಳೆದ ಎರಡು ಮೂರು ದಿನಗಳಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತ, ಬೆಳೆಗಾರರು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಆರಂಭಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ಸಲಹೆ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ವಾರಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ನಿರಂತರವಾಗಿ ಸುರಿದ ಮಳೆಯ ಹಿನ್ನಲೆಯಲ್ಲಿ ಬೆಳೆಗಳಿಗೆ ಗೊಬ್ಬರ ಮತ್ತು ಔಷದ ಸಿಂಪಡಣೆ ಮಾಡಲು ಅವಕಾಶ ಇರಲಿಲ್ಲ. ಇದರಿಂದ ತೋಟ ಮತ್ತು ಹೊಲಗಳ ಬೆಳೆಗಳಿಗೆ ರೋಗ ಮತ್ತು ಕೀಟದ ಬಾಧೆಗಳಿಗೆ ತುತ್ತಾಗಿದೆ.ಸದ್ಯ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಲಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುಲು ಮುಂದಾಗಬಹುದು ಎಂದು ಕೃಷಿ ಮತ್ತು ಹವಾಮಾನ ಆಶ್ತ್ರದ ವಿಷಯ ತಜ್ಞರಾದ ಪಿ.ಎಸ್.ಶಬ್ನಂ ತಿಳಿಸಿದ್ದಾರೆ. ಬಯಲಿನ ಕಡೂರು ಮತ್ತು ತರೀಕೆರೆ ಭಾಗಗಳಲ್ಲಿ ಈರುಳ್ಳಿ ಬೆಳೆಯಲ್ಲಿ ನೇರಳೆ ಮಚ್ಚೆ ರೋಗ ಹೆಚ್ಚಾಗಿ ಕಂಡುಬರುವ ಸಾಧ್ಯತೆಯಿದ್ದು, ಹತೋಟಿಗೆ ಕಾರ್ಬೆಂಡೇಜಿಯಂ ಪ್ಲಸ್ ಮ್ಯಾಂಕೋಜೆಬ್ ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಿರಿ ಮತ್ತು ನುಸಿ (ತ್ರಿಪ್ಸ್) ಹತೋಟಿಗೆ ಇಮಿಡಕ್ಲ್ರೋಪಿಡ್ 0.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ.
ರೈತರು ಹವಾಮಾನ ಮುನ್ಸೂಚನೆ ತಿಳಯುಲು ಆಪ್ ಬಳಸಲು ಸಲಹೆ
ರೈತರು ಹಾಗೂ ಸಾರ್ವಜನಿಕರು ಒಂದು ಸ್ಥಳದ ನಿರ್ದಿಷ್ಟವಾದ ಹವಾಮಾನ ಮುನ್ಸೂಚನೆಗಳನ್ನು ತಿಳಿದುಕೊಳ್ಳಲು ಮೌಸಮ್ ಆಪ್ ಅನ್ನು ಹಾಗೂ ಹವಾಮಾನ ಮುನ್ಸೂಚನೆ ಹಾಗೂ ಬೆಳೆ ಸಲಹೆಗಳನ್ನು ತಿಳಿದುಕೊಳ್ಳಲು ಮೇಘಧೂತ್ ಆಪ್ ಅನ್ನು ಹಾಗೂ ಗುಡುಗು ಮತ್ತು ಮಿಂಚಿನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ದಾಮಿನಿ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಮಳೆಯಿಂದ ತೋಟಗಾರಿಕೆ ಬೆಳೆಯಾದ ಅಡಿಕೆ ಮತ್ತು ಕಾಳುಮೆಣಸಿನಲ್ಲಿ ಕೊಳೆ ರೋಗ ಹೆಚ್ಚಾಗಿ ಕಂಡುಬರುವುದರಿಂದ ರೋಗ ಹತೋಟಿಗೆ ಶೇ.1 ಬೋಡೋ ದ್ರಾವಣ ಸಿಂಪಡಿಸಿರಿ ಮತ್ತು ಅಧಿಕ ತೇವಾಂಶದಿಂದಾಗಿ ಕಾಯಿ ಉದುರುವಿಕೆ ಕಂಡು ಬಂದರೆ 50 ಗ್ರಾಂ ಯೂರಿಯ ಪ್ರತಿ ಗಿಡಕ್ಕೆ ಹಾಕಬೇಕಿರುತ್ತದೆ ಎಂದಿದ್ದಾರೆ.
ಕಾಫಿ ತೋಟದಲ್ಲಿ ಕಾಯಿಕೊಳೆ ರೋಗ ಹತೋಟಿಗೆ ಶೇ.0.5 ಬೋರ್ಡೋ ದ್ರಾವಣವನ್ನು ಅಥವಾ ಕಾರ್ಬೆಂಡೇಜಿಯಂ ಪ್ಲಸ್ ಮ್ಯಾಂಕೋಜೆಬ್ ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಿರಿ ಹಾಗೂ ತೋಟದಲ್ಲಿ ಸ್ವಚ್ಛತೆಯನ್ನು ಕಾಪಡುವುದು ಮತ್ತು ಬಸಿಗಾಲುವೆ ವ್ಯವಸ್ಥೆ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಹಾಗೂ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಳೆ ಬಿಡುವು ನೀಡಲಿದ್ದು, ಬೆಂಗಳೂರು ನೀಡಿರುವ ಮುನ್ಸೂಚನೆಯ ಆಧಾರದಲ್ಲಿ ರೈತರಿಗೆ ಈ ಸಲಹೆ ನೀಡಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.