ವಿಜಯನಗರ ಜಿಲ್ಲೆಯಲ್ಲಿ ಮನೆ, ಮನೆಗೆ ಒಂದೊಂದು ಪೌಷ್ಟಿಕ ಕೈತೋಟ ನಿರ್ಮಿಸುವ ಯೋಜನೆ ರೂಪಿಸಿದ ಜಿಲ್ಲಾ ಪಂಚಾಯಿತಿ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಸೆ.08): ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಎಂಬುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಮಾತು. ಈ ಪೌಷ್ಟಿಕತೆ ಹೋಗಲಾಡಿಸಲು ನೂತನ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮನೆ, ಮನೆಗೆ ಒಂದೊಂದು ಪೌಷ್ಟಿಕ ಕೈತೋಟ ನಿರ್ಮಿಸುವ ಯೋಜನೆ ರೂಪಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಅಪೌಷ್ಟಿಕತೆ ಹೋಗಲಾಡಿಸಲು ಜಿಪಂ ಯೋಜನೆ ಜಾರಿಗೊಳಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಸ್ವ-ಸಹಾಯ ಸಂಘದ ಸದಸ್ಯರು, ಅವರ ಕುಟುಂಬದವರಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸಲುವಾಗಿ ಈ ಹೆಜ್ಜೆ ಇರಿಸಿದೆ.
undefined
ಸಮೀಕ್ಷಾ ಕಾರ್ಯ:
ಮನೆಗಳಲ್ಲಿ ಗರ್ಭಿಣಿಯರು ಸೇರಿದಂತೆ ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ಅದನ್ನು ಹೋಗಲಾಡಿಸಿ, ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮನೆಗಳ ಮುಂದೆಯೇ ಸ್ಥಳಾವಕಾಶ ನೋಡಿಕೊಂಡು ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಲು ಜಿಲ್ಲೆಯಲ್ಲಿ ಜಿಪಂ ಹೊಸ ಹೆಜ್ಜೆಯನ್ನಿಟ್ಟಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆ ಕೈಗೊಂಡಿದೆ.
HOSAPETE: ಪೋಲಪ್ಪಗೆ ಎಂದೂ ಬೆದರಿಕೆ ಹಾಕಿಲ್ಲ: ಸಚಿವ ಆನಂದ ಸಿಂಗ್
ಎನ್‌ಆರ್‌ಎಲ್‌ಎಂ, ತೋಟಗಾರಿಕೆ ಇಲಾಖೆ, ಮನರೇಗಾ ಯೋಜನೆ ಸಹಯೋಗದಲ್ಲಿ ಜೀವನೋಪಾಯ ವರ್ಷಾಚರಣೆ ನಿಮಿತ್ತ ಕೃಷಿ ಪೌಷ್ಟಿಕ ತೋಟ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಸಮೀಕ್ಷೆ ಆರಂಭಿಸಲಾಗಿದೆ. ತೋಟ ನಿರ್ಮಾಣ, ಅಭಿವೃದ್ಧಿ ವೆಚ್ಚವನ್ನು ಮನರೇಗಾದಡಿ ಭರಿಸಲಾಗುತ್ತದೆ. ಸದ್ಯ ಒಂದು ಮನೆಯ ಅಂಗಳದಲ್ಲಿ ತೋಟ ಅಭಿವೃದ್ಧಿಪಡಿಸಲು ಸಾಮಗ್ರಿ, ಗಿಡ ಸೇರಿದಂತೆ .8-10 ಸಾವಿರಗಳನ್ನು ನೀಡಲು ಚಿಂತನೆ ನಡೆಸಿದೆ.
ಬಡತನ ತೀವ್ರತೆ ಕಡಿಮೆ ಮಾಡಿ ತಲಾ ಆದಾಯ ಹೆಚ್ಚಳ ಮಾಡುವ ಉದ್ದೇಶದಿಂದ, ಆದಾಯೋತ್ಪನ್ನ, ಜೀವನೋಪಾಯ ಚಟುವಟಿಕೆಗೆ ಒತ್ತು ನೀಡುವ ಉದ್ದೇಶದಿಂದ ಸ್ವ-ಸಹಾಯ ಗುಂಪಿನ ಸದಸ್ಯರ ಆಹಾರ, ಪೌಷ್ಟಿಕ, ಆರೋಗ್ಯ, ಆದಾಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನದ ಫಲವಾಗಿ ಜಿಪಂ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
ದುರ್ಬಲ ವರ್ಗದ ಕುಟುಂಬಗಳು ಆರೋಗ್ಯವಾಗಿರಲು ಕೇಂದ್ರ ಸರ್ಕಾರ 2022-23ರ ಅಂತ್ಯಕ್ಕೆ ಅಪೌಷ್ಟಿಕ ಮುಕ್ತ ಭಾರತವೆಂದು ಘೋಷಿಸುವ ಪೂರಕವಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ ಜಾರಿಗೊಳಿಸಿದ್ದು, ಅದರಡಿ ಕಾರ್ಯಕ್ರಮ ನಡೆಯುತ್ತಿದೆ.
ಗ್ರಾಪಂಗೆ ಗುರಿ ನಿಗದಿ:
ಮನೆ, ಮನೆಗೆ ಪೌಷ್ಟಿಕ ತೋಟ ಅಭಿವೃದ್ಧಿಪಡಿಸುವ ಸಲುವಾಗಿ ಪ್ರತಿ ಗ್ರಾಪಂಗಳಿಗೆ ಸಂಜೀವಿನಿ ಮಹಿಳಾ ಒಕ್ಕೂಟಗಳಿಂದ ಕನಿಷ್ಠ 101 ಗುರಿ ನಿಗದಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯ ಈಗಾಗಲೇ ಮುಕ್ತಾಯ ಹಂತದಲ್ಲಿದ್ದು, ಸಮೀಕ್ಷಾ ತಂಡದಲ್ಲಿ ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಗ್ರಾಪಂ ಸದಸ್ಯರು, ಕಾಯಕಮಿತ್ರರ ಮೂವರ ತಂಡ ಜಿಲ್ಲೆಯಲ್ಲಿ ಮನೆ-ಮನೆಗೆ ತೆರಳಿ ಸಮೀಕ್ಷೆ ಕೈಗೊಳ್ಳುತ್ತಿದೆ.
ಸಸಿಗಳ ವಿತರಣೆ:
ಸಮೀಕ್ಷೆ ಕಾರ್ಯ ಮುಗಿದ ಆನಂತರ ಕ್ರಿಯಾ ಯೋಜನೆ ಸಿದ್ಧಪಡಿಸಿ ಸ್ಥಳೀಯವಾಗಿ ಅನುಮೋದನೆ ಪಡೆದುಕೊಂಡು ಅನುಷ್ಠಾನ ಮಾಡಲಾಗುತ್ತದೆ. ಮನೆಯ ಅಂಗಳದಲ್ಲಿ ಮಾಡುವ ಪೌಷ್ಟಿಕ ತೋಟದಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ನೆಡಲಾಗುತ್ತದೆ.
ತೋಟದಲ್ಲಿ ನುಗ್ಗೆ, ಕರಿಬೇವು, ನಿಂಬೆ, ಸೀಬೆ, ನೆಲ್ಲಿ, ತೆಂಗು, ಪಪ್ಪಾಯಿ ಗಿಡಗಳನ್ನು ನೆಡಲು ಒಂದು ಕುಟುಂಬಕ್ಕೆ ಎರಡು ಗಿಡ ಸೇರಿ ಒಟ್ಟು 14 ಗಿಡಗಳನ್ನು ನೀಡಲಾಗುತ್ತದೆ. ಜಿಲ್ಲೆಗೆ ಒಟ್ಟು 13,837 ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ಹೊಸಪೇಟೆ: ಧಾರಾಕಾರ ಮಳೆಗೆ ಧರೆಗುರುಳಿದ ಹಂಪಿ ಶಿವಾಲಯ ಮಂಟಪ
ವಿಜಯನಗರ ಜಿಲ್ಲೆಯಲ್ಲಿ ಮನೆಗೊಂದು ಪೌಷ್ಟಿಕ ಕೈತೋಟ ಮಾಡುವ ಗುರಿ ಹೊಂದಲಾಗಿದೆ. ಪ್ರತಿ ಗ್ರಾಪಂಗಳಲ್ಲಿ 101 ಪೌಷ್ಟಿಕ ತೋಟ ಅಭಿವೃದ್ಧಿಪಡಿಸುವ ಗುರಿ ಸದ್ಯ ಹೊಂದಲಾಗಿದೆ. ಮುಂದೆ ಇದನ್ನು ಹೆಚ್ಚಿಸಲಾಗುವುದು. ಈ ಮೂಲಕ ಪೌಷ್ಟಿಕತೆಗೆ ಆದ್ಯತೆ ನೀಡಲಾಗುವುದು ಅಂತ ವಿಜಯನಗರ ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣ್ ರಾವ್ ತಿಳಿಸಿದ್ದಾರೆ.
ಪೌಷ್ಟಿಕಾಂಶ ಹೆಚ್ಚಳಕ್ಕೆ ವಿಜಯನಗರ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಪೌಷ್ಟಿಕ ತೋಟ ನಿರ್ಮಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಅಂತ ಹೊಸಪೇಟೆ ಅಲೆಮಾರಿ ಸಮಾಜದ ಮುಖಂಡ ಸಣ್ಣಮಾರೆಪ್ಪ ತಿಳಿಸಿದ್ದಾರೆ.