ಇತಿಹಾಸ ಪುಟ ಸೇರಿದ 6 ವಿಧಾನಸಭಾ ಕ್ಷೇತ್ರ

By Kannadaprabha NewsFirst Published Apr 24, 2023, 5:07 AM IST
Highlights

ಜಿಲ್ಲೆಯಲ್ಲಿ 1952ರಿಂದ 2008ರ ತನಕ ಕ್ಷೇತ್ರ ಪುನರ್‌ ವಿಂಗಡಣೆಯಾಗುವವರೆಗೂ ಹಲವಾರು ಕ್ಷೇತ್ರಗಳನ್ನು ತೆಗೆದು ಹಾಕಿ ಹೊಸ ಕ್ಷೇತ್ರಗಳನ್ನು ಸೇರಿಸಲಾಯಿತು. ಹೀಗೆ ಇತಿಹಾಸ ಪುಟ ಸೇರಿರುವ ಕ್ಷೇತ್ರಗಳು 6ಕ್ಕೂ ಹೆಚ್ಚು.

 ಉಗಮ ಶ್ರೀನಿವಾಸ್‌

 ತುಮಕೂರು :  ಜಿಲ್ಲೆಯಲ್ಲಿ 1952ರಿಂದ 2008ರ ತನಕ ಕ್ಷೇತ್ರ ಪುನರ್‌ ವಿಂಗಡಣೆಯಾಗುವವರೆಗೂ ಹಲವಾರು ಕ್ಷೇತ್ರಗಳನ್ನು ತೆಗೆದು ಹಾಕಿ ಹೊಸ ಕ್ಷೇತ್ರಗಳನ್ನು ಸೇರಿಸಲಾಯಿತು. ಹೀಗೆ ಇತಿಹಾಸ ಪುಟ ಸೇರಿರುವ ಕ್ಷೇತ್ರಗಳು 6ಕ್ಕೂ ಹೆಚ್ಚು.

Latest Videos

ಹೆಬ್ಬೂರು, ಗೂಳೂರು, ಚಂದ್ರಶೇಖರಪುರ, ಹುಲಿಯೂರುದುರ್ಗ, ಬೆಳ್ಳಾವಿ ಹಾಗೂ ಕಳ್ಳಂಬೆಳ್ಳ ಕ್ಷೇತ್ರಗಳು ಈಗ ಇಲ್ಲ. ಆದರೆ ಚರಿತ್ರೆ ಪುಟ ಸೇರಿರುವ ಈ ಕ್ಷೇತ್ರದಲ್ಲಿ ಘಟನಾಘಟಿಗಳು ಆಯ್ಕೆಯಾಗಿ ಬಂದಿದ್ದರು.

ಸದ್ಯ ಇಲ್ಲವಾಗಿರುವ ಕ್ಷೇತ್ರಗಳ ಪೈಕಿ ಕುಣಿಗಲ್‌ ತಾಲೂಕು ಹುಲಿಯೂರುದುರ್ಗ ಕ್ಷೇತ್ರದಲ್ಲಿ 1952ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹುಚ್ಚಮಾಸ್ತಿಗೌಡ ಅವರು 14863 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಹುಚ್ಚಮಾಸ್ತಿಗೌಡರು ಕಿಸಾನ್‌ ಮಜ್ದೂರ್‌ ಪ್ರಜಾಪಕ್ಷದ ರೇವಣ್ಣಗೌಡರನ್ನು ಪರಾಭವಗೊಳಿಸಿದ್ದರು. 1957ರ ಚುನಾವಣೆಯಲ್ಲಿ ಹುಲಿಯೂರುದುರ್ಗ ಕ್ಷೇತ್ರ ಇಲ್ಲವಾಗಿ ಹೊಸದಾಗಿ ಚಂದ್ರಶೇಖರಪುರ ಹಾಗೂ ಹೆಬ್ಬೂರು ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು. ಆಗ ನಡೆದ ಚುನಾವಣೆಯಲ್ಲಿ ಚಂದ್ರಶೇಖರಪುರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹುಚ್ಚಮಾಸ್ತಿಗೌಡ ಅವರು 9478 ಮತಗಳನ್ನು ಪಡೆದು ಸ್ವತಂತ್ರ ಅಭ್ಯರ್ಥಿ ಜಿ. ತಮ್ಮಣ್ಣ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಹಾಗೆಯೇ ಹೆಬ್ಬೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎಲ್‌. ನರಸಿಂಹಯ್ಯ ಅವರು 17882 ಮತಗಳನ್ನು ಪಡೆದು ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಕೆ. ಲಕ್ಕಪ್ಪ ಅವರನ್ನು ಪರಾಭವಗೊಳಿಸಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಶೇಖರಪುರದಿಂದ ಹುಚ್ಚಮಾಸ್ತಿಗೌಡರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 14012 ಮತಗಳನ್ನು ಪಡೆದು ಸ್ವತಂತ್ರ ಅಭ್ಯರ್ಥಿ ತಮ್ಮಣ್ಣ ಅವರನ್ನು ಪರಾಭವಗೊಳಿಸಿ ಸತತ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಹಾಗೆಯೇ ಪ್ರಜಾಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು 21 ಸಾವಿರÜದ 822 ಮತಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನರಸಿಂಹಯ್ಯ ಅವರನ್ನು ಸೋಲಿಸಿದ್ದರು. 1967ರ ಚುನಾವಣೆಯಲ್ಲಿ ಮತ್ತೆ ಚಂದ್ರಶೇಖರಪುರ ಹಾಗೂ ಹೆಬ್ಬೂರು ಕ್ಷೇತ್ರಗಳು ಇಲ್ಲವಾಗಿ ಹೊಸದಾಗಿ ಕಳ್ಳಂಬೆಳ್ಳ, ಹುಲಿಯೂರುದುರ್ಗ ಹಾಗೂ ಗೂಳೂರು ಮೀಸಲು ಕ್ಷೇತ್ರವು ಅಸ್ತಿತ್ವಕ್ಕೆ ಬಂದವು. ಆಗ ನಡೆದ ಚುನಾವಣೆಯಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ. ಗಂಗಣ್ಣ ಅವರು 16176 ಮತಗಳನ್ನು ಪಡೆದು ಶಾಸನಸಭೆಗೆ ಆಯ್ಕೆಯಾಗಿದ್ದರು. ಹುಲಿಯೂರು ದುರ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚಮಾಸ್ತಿಗೌಡರು 15126 ಮತಗಳನ್ನು ಪಡೆದು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇನ್ನು ಗೂಳೂರು ಮೀಸಲು ಕ್ಷೇತ್ರದಿಂದ ಪ್ರಜಾಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ಗಂಗಾಭೋವಿ ಅವರು 11903 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.

1972ರಲ್ಲಿ ನಡೆದ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ. ತಾರೇಗೌಡರು 17862 ಮತಗಳನ್ನು ಪಡೆದು ಶಾಸಕರಾಗಿದ್ದರು. ಹಾಗೆಯೇ ಹುಲಿಯೂರುದುರ್ಗದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹುಚ್ಚಮಾಸ್ತಿಗೌಡರು 27 ಸಾವಿರದ 519 ಮತಗಳನ್ನು ಪಡೆದು ಸತತ 5ನೇ ಬಾರಿಗೆ ಶಾಸಕರಾಗಿದ್ದರು. ಗೂಳೂರು ಮೀಸಲು ಕ್ಷೇತ್ರದಿಂದ ದೊಡ್ಡತಿಮ್ಮಯ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 18 ಸಾವಿರದ 307 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.

1978ರ ಚುನಾವಣೆಯಲ್ಲಿ ಗೂಳೂರು ಮೀಸಲು ಕ್ಷೇತ್ರ ಇಲ್ಲವಾಗಿ ಕಳ್ಳಂಬೆಳ್ಳ, ಹುಲಿಯೂರುದುರ್ಗ ಜೊತೆಗೆ ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಆಗ ಕಳ್ಳಂಬೆಳ್ಳದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಬಿ. ಜಯಚಂದ್ರ ಅವರು 27 ಸಾವಿರದ 645 ಮತಗಳನ್ನು ಪಡೆದು ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ. ಗಂಗಣ್ಣ ಅವರನ್ನು ಪರಾಭವಗೊಳಿಸಿದ್ದರು.

ಬೆಳ್ಳಾವಿ ಕ್ಷೇತ್ರದಿಂದ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಎಸ್‌. ಶಿವನಂಜಪ್ಪ ಅವರು 27 ಸಾವಿರದ 736 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಹಾಗೆಯೇ ಹುಲಿಯೂರುದುರ್ಗದಿಂದ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಯಣ್ಣ ಡಿ.ಟಿ. ಅವರು ಕಾಂಗೈನ ಬೋರೇಗೌಡರನ್ನು ಪರಾಭವಗೊಳಿಸಿದ್ದರು.

1983ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಜೆಜ್‌ಪಿಯ ಸ್ಪರ್ಧಿಸಿದ್ದ ಬಿ. ಗಂಗಣ್ಣ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಚಂದ್ರ ಅವರನ್ನು ಪರಾಭವಗೊಳಿಸಿ ಶಾಸಕರಾಗಿದ್ದರು. ಹಾಗೆಯೇ ಬೆಳ್ಳಾವಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹನುಮಂತರಾಯಪ್ಪ ಅವರು 29418 ಮತಗಳನ್ನು ಪಡೆದು ಜೆಎನ್‌ಪಿಯಿಂದ ಸ್ಪರ್ಧಿಸಿದ್ದ ಭಾಸ್ಕರಪ್ಪ ಅವರನ್ನು ಪರಾಭವಗೊಳಿಸಿದ್ದರು.

ಹಾಗೆಯೇ ಹುಲಿಯೂರು ದುರ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚಮಾಸ್ತಿಗೌಡರು 6ನೇ ಬಾರಿಗೆ ಜಯಗಳಿಸಿದ್ದರು. 1985ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಲ್‌. ಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌. ಲಿಂಗಯ್ಯ ಅವರನ್ನು ಸೋಲಿಸಿದ್ದರು. ಬೆಳ್ಳಾವಿಯಿಂದ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಸಿ.ಎನ್‌. ಭಾಸ್ಕರಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವಮೂರ್ತಿ ಅವರನ್ನು ಪರಾಭವಗೊಳಿಸಿದ್ದರು. ಇನ್ನು ಹುಲಿಯೂರುದುರ್ಗದಿಂದ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಡಿ. ನಾಗರಾಜಯ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹುಚ್ಚಮಾಸ್ತಿಗೌಡರನ್ನು ಪರಾಭವಗೊಳಿಸಿದ್ದರು.

1989ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ ಆಯ್ಕೆಯಾಗಿದ್ದರು. ಬೆಳ್ಳಾವಿಯಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌. ನಾರಾಯಣ್‌ ಗೆಲುವು ಸಾಧಿಸಿದ್ದರು. ಹುಲಿಯೂರುದುರ್ಗದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹುಚ್ಚಮಾಸ್ತಿಗೌಡ ಅವರು 7ನೇ ಬಾರಿಗೆ ಜಯ ದಾಖಲಿಸಿದ್ದರು.

1994ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಜಯಚಂದ್ರ ಆಯ್ಕೆಯಾಗಿದ್ದರು. ಬೆಳ್ಳಾವಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆರ್‌. ನಾರಾಯಣ್‌ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಹುಲಿಯೂರು ದುರ್ಗದಿಂದ ಜನತಾದಳದಿಂದ ಸ್ಪರ್ಧಿಸಿದ್ದ ಡಿ. ನಾಗರಾಜಯ್ಯ ಗೆಲುವು ಸಾಧಿಸಿದ್ದರು.

1999ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಟಿ.ಬಿ. ಜಯಚಂದ್ರ ಅವರು 44 ಸಾವಿರದ 480 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಿರಣಕುಮಾರ್‌ ಅವರನ್ನು ಸೋಲಿಸಿದ್ದರು. ಬೆಳ್ಳಾವಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌. ನಾರಾಯಣ್‌ 43803 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಹುಲಿಯೂರುದುರ್ಗದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೈ.ಕೆ. ರಾಮಯ್ಯ ಅವರು 47 ಸಾವಿರದ 824 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಿ. ನಾಗರಾಜಯ್ಯ ಅವರನ್ನು ಸೋಲಿಸಿದ್ದರು.

2004 ರ ಚುನಾವಣೆಯಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಿರಣಕುಮಾರ್‌ ಅವರು 50 ಸಾವಿರದ 108 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಚಂದ್ರ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಬೆಳ್ಳಾವಿಯಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಎನ್‌. ರಾಜಣ್ಣ ಅವರು 47 ಸಾವಿರದ 39 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿವಿ.ಮಹದೇವಯ್ಯ ಅವರನ್ನು ಸೋಲಿಸಿದ್ದರು. ಹಾಗೆಯೇ ಹುಲಿಯೂರುದುರ್ಗದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಿ. ನಾಗರಾಜಯ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ಅನುಸೂಯಮ್ಮ ಅವರನ್ನು ಸೋಲಿಸಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಹೊಸದಾಗಿ ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂತು. ಆಗ ತುಮಕೂರು ನಗರದಿಂದ ಸೊಗಡು ಶಿವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಿ 39 ಸಾವಿರದ 435 ಮತಗಳನ್ನು ಪಡೆದು ಶಾಸಕರಾದರು. ಹಾಗೆಯೇ ತುಮಕೂರು ಗ್ರಾಮಾಂತರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುರೇಶಗೌಡರು 60 ಸಾವಿರದ 904 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌. ನಿಂಗಪ್ಪ ಅವರನ್ನು ಪರಾಭವಗೊಳಿಸಿದ್ದರು.

click me!