* ಎರಡು ಅಲೆಯಲ್ಲಿ 63 ನೌಕರರು ಕೋವಿಡ್‌ಗೆ ಬಲಿ
* ನೌಕರರ ಮನೋಬಲ ಹೆಚ್ಚಿಸಲು ಹಲವು ಕ್ರಮ
* ಶೇ.78ಕ್ಕೂ ಹೆಚ್ಚು ಸಿಬ್ಬಂದಿಗೆ ವ್ಯಾಕ್ಸಿನೇಷನ್
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜೂ.19): ಕೊರೋನಾ ನಿಯಂತ್ರಣದ ಹೋರಾಟದಲ್ಲಿ ಪಾಲ್ಗೊಂಡ ಯ ನಾಲ್ಕು ಸಾವಿರ ಸಿಬ್ಬಂದಿಗೆ ಈ ವರೆಗೂ ಕೊರೋನಾ ಸೋಂಕು ವಕ್ಕರಿಸಿದ್ದರೂ ಸೋಂಕು ನಿಯಂತ್ರಣಕ್ಕೆ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಕೊರೋನಾ ವಕ್ಕರಿಸಿದಾಗ ನಿಯಂತ್ರಣಕ್ಕೆ ಇಡೀ ಆಡಳಿತ ವ್ಯವಸ್ಥೆಯ ಮೇಲೆಯೇ ಆತಂಕದ ಛಾಯೆ ಸೃಷ್ಟಿಯಾಗಿತ್ತು. ಆಗ ಸರ್ಕಾರದೊಂದಿಗೆ ರೈಲ್ವೆ ಇಲಾಖೆಯೂ ಕೈ ಜೋಡಿಸಿತ್ತು. ಮುಂಜಾಗ್ರತಾ ಕ್ರಮವಾಗಿ 272 ಐಸೋಲೇಷನ್ ಬೋಗಿ, ಲಕ್ಷಗಟ್ಟಲೇ ಸಿದ್ಧಪಡಿಸುವ ಜತೆಗೆ ತಮ್ಮ ಸಿಬ್ಬಂದಿಗಳ ಬಳಕೆಗಾಗಿ ಪಿಪಿಇ ಕಿಟ್ ಸಹ ತಯಾರಿಸಿತ್ತು. ಇವುಗಳ ಮಧ್ಯೆಯೇ ಬೇರೆ ಬೇರೆಡೆ ಸಿಲುಕಿದ್ದ ಅನ್ಯ ರಾಜ್ಯಗಳ ಕಾರ್ಮಿಕರು ತಮ್ಮೂರಿಗೆ ಹೋಗಲು ವಿಶೇಷ ರೈಲು ಓಡಿಸಿತ್ತು. ಬೇರೆ ಬೇರೆ ರಾಜ್ಯಗಳಿಗೆ ದವಸ-ಧಾನ್ಯ ಕಳುಹಿಸಿದ್ದುಂಟು. ಇದು ಮೊದಲ ಅಲೆಯಲ್ಲಿ ಇಲಾಖೆ ನೀಡಿದ ನೆರವು. ಇನ್ನೂ 2ನೇ ಅಲೆಯಲ್ಲಿ ಆಕ್ಸಿಜನ್ ಸರಬರಾಜಿಗೆ ದೊಡ್ಡ ಕೊಡುಗೆ ರೈಲ್ವೆ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಕೊರೋನಾ ತೀವ್ರಗತಿಯಲ್ಲಿದ್ದಾಗ ಆಕ್ಸಿಜನ್ ಕೊರತೆಯಾಗಿ ಸೋಂಕಿತರೆಲ್ಲರೂ ಸಾವನ್ನಪ್ಪುತ್ತಿದ್ದರು. ಆಗ ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಿಂದ ಆಕ್ಸಿಜನ್ ಸರಬರಾಜುವಿಗೆ ಅವಲಂಬಿಸಿದ್ದು ರೈಲ್ವೆ ಇಲಾಖೆಯನ್ನೇ. ಓಡಿಶಾ, ಗುಜರಾತ್, ಜಾರ್ಖಂಡ್‌ನಿಂದ ಆಕ್ಸಿಜನ್‌ನ್ನು ರಾಜ್ಯಕ್ಕೆ ತರುವಲ್ಲಿ ರೈಲ್ವೆ ಇಲಾಖೆ ಹಗಲಿರುಳು ಸೇವೆ ಸಲ್ಲಿಸಿದೆ. ಈ ಮೂರು ರಾಜ್ಯಗಳಿಂದ ಈ ವರೆಗೆ ಬರೋಬ್ಬರಿ 33 ಬಾರಿ ಆಕ್ಸಿಜನ್ ರಾಜ್ಯಕ್ಕೆ ಬಂದಿದೆ. 3563 ಮೆಟ್ರಿಕ್ ಟನ್ ಆಕ್ಸಿಜನ್ ತಂದಿರುವುದು ರೈಲ್ವೆ ಇಲಾಖೆಯ ಹೆಮ್ಮೆ.
ಎಷ್ಟು ನೌಕರರಿಗೆ ಕೊರೋನಾ:
ಹೀಗೆ ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ನೈಋುತ್ಯ ರೈಲ್ವೆ ವಲಯದ (ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗ) ವ್ಯಾಪ್ತಿಯಲ್ಲಿ 1ನೇ ಹಾಗೂ 2ನೇ ಅಲೆ ಸೇರಿ ಬರೋಬ್ಬರಿ 3972 ಜನ ನೌಕರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು 63 ನೌಕರರು ಉಸಿರು ಚೆಲ್ಲಿದ್ದಾರೆ. ಪಾಸಿಟಿವ್ ಆದವರಲ್ಲಿ ಅಧಿಕಾರಿ ವರ್ಗವೂ ಇತ್ತು. ಇನ್ನೂ ನೌಕರರಿಂದ ಕೆಲ ಕುಟುಂಬ ವರ್ಗಕ್ಕೂ ಈ ಸೋಂಕು ಹಬ್ಬಿತ್ತು. 1914 ನೌಕರರ ಕುಟುಂಬ ವರ್ಗದವರಿಗೆ ಕೊರೋನಾ ಹಬ್ಬಿತ್ತು. ಇವರಲ್ಲಿ ಕೆಲವರು ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೆ, ಕೆಲವರು ಹೋಂ ಐಸೋಲೇಷನ್‌ನಲ್ಲಿದ್ದುಕೊಂಡೆ ಗುಣಮುಖರಾಗಿದ್ದಾರೆ.
ಸರಕು ಸಾಗಾಟದಿಂದ ನೈಋುತ್ಯ ರೈಲ್ವೆಗೆ 2.03 ಕೋಟಿ ಆದಾಯ
ಆತ್ಮ ವಿಶ್ವಾಸ ಹೆಚ್ಚಳ:
ನೌಕರರಿಗೆ ಹೀಗೆ ಕೊರೋನಾ ಹಬ್ಬಲು ಪ್ರಾರಂಭವಾದಾಗ ನೌಕರರು, ಅಧಿಕಾರಿ ವರ್ಗದಲ್ಲೂ ಆತಂಕ ಮೂಡಿತ್ತು. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲಿ ಚಾಲುಕ್ಯ ಸಮುದಾಯ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶೇ. 50ರಷ್ಟುಸಿಬ್ಬಂದಿ ಇಟ್ಟುಕೊಂಡು ಕೆಲಸ ನಿರ್ವಹಿಸಿತು. ಥರ್ಮಲ್ ಸ್ಕ್ರೀನಿಂಗ್, ಕಚೇರಿಯಲ್ಲಿ ಸ್ಯಾನಿಟೈಸಿಂಗ್ ನಿರಂತರ ಮಾಡಲಾಯಿತು. ಕೊರೋನಾ ಭಯ ಕಳೆಯಲು ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ ಮನೋಬಲ ಹೆಚ್ಚಿಸಿತು. ಈ ಎಲ್ಲ ಕಾರಣಗಳಿಂದ ನೌಕರರಲ್ಲಿ ಆತಂಕ ದೂರವಾಗಿ ಆತ್ಮವಿಶ್ವಾಸದಿಂದ ಕೆಲಸ ಮಾಡಿದರು. ಇದರೊಂದಿಗೆ ಕೊರೋನಾ ನಿಯಂತ್ರಣದ ಹೋರಾಟದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಶೇ. 78.86ರಷ್ಟು ವ್ಯಾಕ್ಸಿನೇಷನ್
ರೈಲ್ವೆ ಇಲಾಖೆಯ ಶೇ.78.86ರಷ್ಟು ನೌಕರರಿಗೆ ಇಲಾಖೆ ವ್ಯಾಕ್ಸಿನೇಷನ್ ಮಾಡಿಸಿದೆ. ಹುಬ್ಬಳ್ಳಿ ವಿಭಾಗದ 12,434 ಸಿಬ್ಬಂದಿ ಪೈಕಿ 7,923, ಬೆಂಗಳೂರು ವಿಭಾಗದಲ್ಲಿ 10,201 ಸಿಬ್ಬಂದಿ ಪೈಕಿ 9075 ಹಾಗೂ ಮೈಸೂರು ವಿಭಾಗದ 8392 ನೌಕರರ ಪೈಕಿ 7021 ಜನರಿಗೆ ವ್ಯಾಕ್ಸಿನೇಷನ್ ಮಾಡಿಸಿದ್ದು ಶೇ. 78.86ರಷ್ಟಾಗಿದೆ. 45 ವರ್ಷದ ಮೇಲ್ಪಟ್ಟಬಹುತೇಕ ಎಲ್ಲ ಸಿಬ್ಬಂದಿಗೆ ಹಾಗೂ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮುಂಚೂಣಿ ನೌಕರರಿಗೆ ಲಸಿಕೆ ಹಾಕಲಾಗಿದೆ. ಕೆಲವೇ ದಿನಗಳಲ್ಲಿ ಶೇ. 100ರಷ್ಟುಸಾಧನೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ 3 ವಿಭಾಗ ಸೇರಿ 3,972 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿತ್ತು. ನೌಕರರ ಕುಟುಂಬ ವರ್ಗಕ್ಕೂ ಹಬ್ಬಿತ್ತು. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಿದೇವು. ನೌಕರರೊಂದಿಗೆ ನಿರಂತರ ಸಂವಾದ ನಡೆಸಿ ಮನೋಬಲ ಹೆಚ್ಚಿಸುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ಶೇ.78ಕ್ಕೂ ಹೆಚ್ಚು ಸಿಬ್ಬಂದಿಗೆ ವ್ಯಾಕ್ಸಿನೇಷನ್ ಮಾಡಿಸಲಾಗಿದೆ ಎಂದು ನೈಋುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.