ಕದ್ದು ಮುಚ್ಚಿ ನಡೆಯುತ್ತೆ ಇಲ್ಲಿ ಮಕ್ಕಳ ಮದುವೆ : ಇನ್ನೂ ಜೀವಂತವಾಗಿದೆ ಅನಿಷ್ಟ ಪದ್ಧತಿ

By Kannadaprabha News  |  First Published Jan 23, 2020, 10:07 AM IST

ಪ್ರಕೃತಿ ಸೌಂದರ್ಯದ ಸುಂದರ ನಾಡಾದ ಚಿಕ್ಕಮಗಳೂರಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಇನ್ನೂ ಕೂಡ ಜೀವಂತವಾಗಿವೆ. ಈ ವರ್ಷ 34 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. 


ಆರ್‌.ತಾರಾನಾಥ್‌

ಚಿಕ್ಕಮಗಳೂರು [ಜ.23]: ಬಾಲ್ಯವಿವಾಹ ತಡೆಗೆ ದೇಶದ ಸಂವಿಧಾನದಲ್ಲಿ ಕಠಿಣ ಕಾನೂನುಗಳು ಇವೆ. ಆದರೆ, ಅವುಗಳ ಸಮರ್ಪಕ ಜಾರಿ ಹಾಗೂ ಪೋಷಕರಲ್ಲಿ ಮಕ್ಕಳ ಮೇಲಿನ ಕಾಳಜಿಯ ಕೊರತೆಯಿಂದಾಗಿ ಬಾಲ್ಯವಿವಾಹ ಪ್ರಕರಣಗಳು ಇನ್ನೂ ಜೀವಂತವಾಗಿವೆ. ಈ ಸಾಮಾಜಿಕ ಪಿಡುಗಿನಿಂದ ಜಿಲ್ಲೆಯೂ ಹೊರತಾಗಿಲ್ಲ ಅನ್ನೋದು ಇನ್ನೂ ದುರಂತ.

Tap to resize

Latest Videos

ಕಳೆದ ವರ್ಷ ಅಂದರೆ, 2018-19ನೇ ಸಾಲಿನಲ್ಲಿ 23 ಬಾಲ್ಯ ವಿವಾಹ ತಡೆಯಲಾಗಿತ್ತು. 2019-20ರ ಸಾಲಿನಲ್ಲಿ ಈ ಸಂಖ್ಯೆ 34ಕ್ಕೆ ಏರಿದೆ. ಈ ವರ್ಷದಲ್ಲೇ ಜಿಲ್ಲೆಯಲ್ಲಿ 34 ಪ್ರಕರಣಗಳನ್ನು ತಡೆಯಲಾಗಿದ್ದು, ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಕೊಂಚ ಚುರುಕುತನ ಪ್ರದರ್ಶಿಸಿರುವುದು ಗೋಚರಿಸುತ್ತದೆ.

ಬಾಲ್ಯ ವಿವಾಹಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ ಎಂಬುದು ಇಲ್ಲಿನ ಅಂಕಿ ಅಂಶಗಳು ಹೇಳುತ್ತಿವೆ. ಜಲ್ಲೆಯ 7 ತಾಲೂಕುಗಳ ಪೈಕಿ ಮಲೆನಾಡಿನ ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಒಂದೂ ಬಾಲ್ಯವಿವಾಹ ಆಗಿಲ್ಲ ಅನ್ನೋದು ಅಂಕಿಅಂಶಗಳು ಹೇಳುತ್ತಿವೆ. ಇದು ನಿಜಕ್ಕೂ ನೆಮ್ಮದಿಯ ವಿಚಾರವೇ ಸರಿ. ಅಂಕಿಅಂಶಗಳ ಪ್ರಕಾರ ಚಿಕ್ಕಮಗಳೂರು ತಾಲೂಕಿನಲ್ಲಿ 13, ತರೀಕೆರೆಯಲ್ಲಿ 8, ಕಡೂರು ತಾಲೂಕಿನಲ್ಲಿ 12 ಹಾಗೂ ಮೂಡಿಗೆರೆ ತಾಲೂಕಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.

ಕದ್ದುಮುಚ್ಚಿ ವಿವಾಹ:

ಮದುವೆ ವಯಸ್ಸಿಗೆ ಇನ್ನೂ ಕಾಲಿಡದ ಬಾಲಕ, ಬಾಲಕಿಯರಿಗೆ ಪೋಷಕರು ವಿವಾಹ ಮಾಡಿಸಿರುವುದು ಖಾತ್ರಿಯಾದರೆ ಪೋಷಕರಿಗೆ 2 ವರ್ಷ ಜೈಲುಶಿಕ್ಷೆ ಅಥವಾ .1 ಲಕ್ಷವರೆಗೆ ದಂಡ ಅಥವಾ ಈ ಎರಡು ಶಿಕ್ಷೆಗಳನ್ನು ವಿಧಿಸಲು ಅವಕಾಶ ಇದೆ. ಪ್ರಸಕ್ತ ಸಾಲಿನಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ. ಅಂದರೆ, ಬಾಲ್ಯ ವಿವಾಹವನ್ನು ತಡೆಯಬೇಕೆಂಬುದು ಜನರ ಅರಿವಿಗೆ ಬಂದಿದೆ. ಈ ಕಾರಣದಿಂದಲೇ ಹಲವು ಮಂದಿ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಈ ಧೈರ್ಯ, ಕಾಳಜಿ ಶ್ಲಾಘನೀಯ. ಆದರೆ, ಇನ್ನು ಕೆಲವೆಡೆ ಪೊಲೀಸರ ಕಣ್ಣು ತಪ್ಪಿಸಿ ರಾತ್ರಿವೇಳೆಯಲ್ಲಿ ಯಾರಿಗೂ ತಿಳಿಯದ ಹಾಗೆ ಬಾಲ್ಯವಿವಾಹಗಳನ್ನು ನೆರವೇರಿಸಲಾಗುತ್ತಿದೆ. ಈ ರೀತಿಯ ಪ್ರಕರಣಗಳು ಗ್ರಾಮಾಂತರ, ಅದರಲ್ಲೂ ಅತ್ಯಂತ ಬಡಕುಟುಂಬಗಳಲ್ಲಿ ಕಂಡುಬರುತ್ತಿವೆ.

ಹಲ್ಲಿಲ್ಲದ ಹಾವು:

ಅಪ್ರಾಪ್ತ ಬಾಲಕ ಹಾಗೂ ಬಾಲಕಿಯರ ವಿವಾಹಗಳನ್ನು ತಡೆಯುವ ಕೆಲಸ ನಡೆಯುತ್ತಿದೆ. ಆದರೆ, ದಾಖಲಾಗುವ ಪ್ರಕರಣಗಳಲ್ಲಿ ಪೋಷಕರಿಗೆ ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ. ಕಾರಣ, ಈ ರೀತಿಯ ವಿವಾಹಗಳನ್ನು ಸಾಕ್ಷಿಸಹಿತ ದೃಢಪಡಿಸಲು ಪೊಲೀಸರಿಗೆ ಆಗುತ್ತಿಲ್ಲ. 2018- 19ರಲ್ಲಿ 23 ಪ್ರಕರಣಗಳು ಪತ್ತೆ ಹಚ್ಚಲಾಗಿದೆ. ಈ ಪೈಕಿ 3 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ ಸಲ್ಲಿಸಲಾಗಿದೆ. 2019- 20ನೇ ಸಾಲಿನಲ್ಲಿ 34 ಪ್ರಕರಣಗಳು ಬೆಳಕಿಗೆ ಬಂದಿದೆ. ಆದರೆ, ಎಫ್‌ಐಆರ್‌ ದಾಖಲಿಸಿದ್ದು, ಕೇವಲ 3 ಪ್ರಕರಣಗಳಲ್ಲಿ ಮಾತ್ರ. ಆದರೆ, ಮಕ್ಕಳ ವಿಶೇಷ ನ್ಯಾಯಾಲಯಕ್ಕೆ ಪೂರ್ಣ ಮಾಹಿತಿಯೊಂದಿಗೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಪೊಲೀಸರಿಗೆ ಆಗುತ್ತಿಲ್ಲ. ಆದ್ದರಿಂದ ಹಲವು ಪ್ರಕರಣಗಳಲ್ಲಿ ಬಾಲಕ ಮತ್ತು ಬಾಲಕಿಯರ ಪೋಷಕರು ಒಂದಾಗಿರುವ ಸಂದರ್ಭಗಳೇ ಹೆಚ್ಚು. ಇದರಿಂದ ಸಾಕ್ಷಿಸಹಿತ ದೃಢಪಡಿಸುವುದು ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬಾಲ್ಯ ವಿವಾಹ ತಡೆಯಲು ಪ್ರೌಢ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿಕೊಡಲಾಗು ತಿ ್ತದೆ. ಈ ರೀತಿಯ ಅರಿವು ಕಾರ್ಯಕ್ರಮದಿಂದಾಗಿ ಹೆಚ್ಚು ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದು ಬಾಲ್ಯ ವಿವಾಹವನ್ನು ತಡೆಯುವ ಕೆಲಸ ಮಾಡಲಾಗಿದೆ.

- ಶಿವಪ್ರಕಾಶ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

click me!