ತಜ್ಞರ ವರದಿ ಪ್ರಕಾರ ಜುಲೈನಲ್ಲಿ 3307 ಪ್ರಕರಣ ಬರುವ ಸಾಧ್ಯತೆ| ಹಾವೇರಿ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ| ವಿಆರ್‌ಡಿಎಲ್ ಪ್ರಯೋಗಾಲಯ ಸ್ಥಾಪನೆ| ಮಾಸ್ಕ್ ಧರಿಸುವುದನ್ನೇ ಮರೆತ ಅರ್ಧದಷ್ಟು ಜನರು|
ನಾರಾಯಣ ಹೆಗಡೆ
ಹಾವೇರಿ(ಜೂ.15): ಲಾಕ್‌ಡೌನ್ ಸಡಿಲಿಕೆ ಬಳಿಕ ಜಿಲ್ಲೆಯ ಜನ ಕೊರೋನಾ ಆತಂಕ ಬಿಟ್ಟು ಕನಿಷ್ಠ ಸುರಕ್ಷತಾ ಕ್ರಮವನ್ನೂ ಅನುಸರಿಸುವುದನ್ನು ಮರೆತಿದ್ದಾರೆ. ಇದೇ ರೀತಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 3307 ಕೊರೋನಾ ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆಯಿದೆ.
undefined
ಹೌದು, ಇದು ಯಾರೋ ಹೇಳುತ್ತಿರುವ ಎಚ್ಚರಿಕೆ ಸಂದೇಶವಲ್ಲ. ತಜ್ಞರ ವರದಿ ಪ್ರಕಾರ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತವೇ ನೀಡಿದ ಅಂಕಿ-ಸಂಖ್ಯೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಲಿವೆ ಎಂದು ಈಗಾಗಲೇ ಸರ್ಕಾರ, ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ. ಸದ್ಯ ಕೊರೋನಾ ಸೋಂಕು ಹರಡುತ್ತಿರುವ ವೇಗ, ಮುಂದೆ ಯಾವ ರೀತಿಯಲ್ಲಿ ಪ್ರಸರಣವಾಗಬಹುದು ಎಂಬುದರ ಆಧಾರದ ಮೇಲೆ ತಜ್ಞರು ನೀಡಿದ ವರದಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟು ಜನಸಂಖ್ಯೆ ಆಧಾರದಲ್ಲಿ 3,307 ಜನರಿಗೆ ಕೊರೋನಾ ಸೋಂಕು ತಗಲಬಹುದು ಎಂದು ಹೇಳಲಾಗಿದೆ. ಆದ್ದರಿಂದ ಮುಂದಿನ ಕೆಲವು ತಿಂಗಳು ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 23 ಕೊರೋನಾ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಆ ಪೈಕಿ 21 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಇನ್ನು ಇಬ್ಬರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಅಭಿವೃದ್ಧಿಗೆ ಮುನ್ನುಡಿ '
ಸಿದ್ಧತೆಯಲ್ಲಿ ಜಿಲ್ಲಾಡಳಿತ
ಜುಲೈ ತಿಂಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾಗಲಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. 3307 ಕೊರೋನಾ ಕೇಸ್ ಕಾಣಿಸಿದರೂ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಈಗಾಗಲೇ 20 ಕೇಂದ್ರೀಕೃತ ಐಸಿಯು ವಾರ್ಡ್‌ಗಳಿವೆ, 14 ವೆಂಟಿಲೇಟರ್ ವ್ಯವಸ್ಥೆ ಇದೆ. ಇದಲ್ಲದೇ ಮತ್ತೆ 6 ವೆಂಟಿಲೇಟರ್ ಪೂರೈಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೋವಿಡ್ ಪ್ರಕರಣದಲ್ಲಿ ವೆಂಟಿಲೇಟರ್ ಬಳಕೆ ಕೊನೆಯ ಹಂತದ್ದಾಗಿದ್ದು, ಈ ವರೆಗೆ ಗಂಭೀರ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಈ ವರೆಗೆ ವೆಂಟಿಲೇಟರ್ ಬಳಸುವ ಪ್ರಮೇಯ ಉದ್ಭವಿಸಿಲ್ಲ. 50 ಹಾಸಿಗೆ ಸಾಮರ್ಥ್ಯದ ಸುವ್ಯವಸ್ಥಿತ ಕೋವಿಡ್ ಆಸ್ಪತ್ರೆ ಇದೆ. ಅಲ್ಲದೇ ಹಿರೇಕೆರೂರು, ಸವಣೂರು, ಶಿಗ್ಗಾಂವಿ ತಾಲೂಕು ಕೇಂದ್ರಗಳಲ್ಲಿ 30 ಹಾಸಿಗೆ ಸಾಮರ್ಥ್ಯದ ಆಕ್ಸಿಜನ್ ವ್ಯವಸ್ಥೆ ಇರುವ ವಾರ್ಡ್‌ಗಳು ಸಿದ್ಧವಾಗಿವೆ.
ಜಿಲ್ಲೆಯಲ್ಲಿ ಒಟ್ಟಾರೆ 150 ಹಾಸಿಗೆ ಉತ್ತಮ ಸೌಲಭ್ಯವಿದೆ. ದಿನಕ್ಕೆ 250ರಿಂದ 500 ಕೇಸ್‌ಗಳು ಬಂದರೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಕೋವಿಡ್ ಸಂದರ್ಭದಲ್ಲಿ ಈ ವರೆಗೆ ಜಿಲ್ಲೆಯ ವೈದ್ಯಕೀಯ ಸೌಕರ್ಯಗಳು ಉತ್ತಮಗೊಂಡಿವೆ. ಇದುವರೆಗೆ ಕ್ವಾರಂಟೈನ್ ಕೇಂದ್ರವಾಗಿದ್ದ ಹಾಸ್ಟೆಲ್‌ಗಳನ್ನು ಇನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಡಬೇಕಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಹೋಟೆಲ್, ಸರ್ಕಾರಿ ಸಮುದಾಯ ಭವನವನ್ನು ಕ್ವಾರಂಟೈನ್‌ಗೆ ಗುರುತಿಸಿ ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.
ನಿಯಮ ಲೆಕ್ಕಕ್ಕಿಲ್ಲ
ಲಾಕ್‌ಡೌನ್ ನಿಯಮ ಸಡಿಲಿಕೆಯಾದರೂ ಕೊರೋನಾ ಹರಡುವಿಕೆ ತಡೆಯಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಜಿಲ್ಲೆಯಲ್ಲಿ ಬರುಬರುತ್ತ ಯಾವ ಕೊರೋನಾ ಆತಂಕ ದೂರವಾಗುತ್ತ ಬಂದಿದ್ದು, ಅರ್ಧದಷ್ಟು ಜನರು ಮಾಸ್ಕ್ ಧರಿಸುವುದನ್ನೇ ಮರೆತಿದ್ದಾರೆ. ಸಾಮಾಜಿಕ ಅಂತರದ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮಾರುಕಟ್ಟೆಪ್ರದೇಶದಲ್ಲಿ ಗುಂಪಾಗಿ ಜನ ಸೇರುತ್ತಿದ್ದಾರೆ. ಮದುವೆ ಇನ್ನಿತರ ಸಮಾರಂಭಗಳಲ್ಲೂ ನಿಯಮ ಪಾಲನೆಯಾಗುತ್ತಿಲ್ಲ. ನಿಷೇಧವಿದ್ದರೂ ಸಾವಿರಾರು ಜನ ಸೇರಿ ಜಾತ್ರೆ ಆಚರಿಸುತ್ತಿದ್ದಾರೆ. ಇದೇ ರೀತಿ ಜನ ವರ್ತಿಸಿದರೆ ಜುಲೈ ವೇಳೆಗೆ ತಜ್ಞರ ವರದಿಯಂತೆಯೇ ಸಾವಿರಾರು ಜನರಿಗೆ ಕೊರೋನಾ ಹರಡುವ ಸಾಧ್ಯತೆಯಿದೆ. ಅದಕ್ಕಾಗಿ ಜನ ಮುಂಜಾಗರೂಕತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.
ಇಂದು ಲ್ಯಾಬ್ ಉದ್ಘಾಟನೆ
ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್)ಅನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯ ಉನ್ನತಿಗೊಂಡಂತಾಗಲಿದೆ. 1.3 ಕೋಟಿ ವೆಚ್ಚದಲ್ಲಿ ಈ ಲ್ಯಾಬ್ ಸ್ಥಾಪಿಸಲಾಗಿದ್ದು, ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಲ್ಯಾಬೋರೇಟರಿ ಉಪಕರಣಗಳು ಜೋಡಣೆ ಕಾರ್ಯ ಈ ವಾರದಲ್ಲಿ ಪೂರ್ಣಗೊಳ್ಳಲಿದೆ. ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಅರೇವೈದ್ಯಕೀಯ ಟೆಕ್ನಿಷಿಯನ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ಕೊರೋನಾ ಕೇಸ್ ಹೆಚ್ಚುವ ಸಾಧ್ಯತೆಯಿದೆ ಎಂಬ ವರದಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಿದೆ. ಆದರೆ, ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆಯಿಲ್ಲದ್ದರಿಂದ ಅಷ್ಟೊಂದು ಸಂಖ್ಯೆಯಲ್ಲಿ ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಕಡಿಮೆ. ಆದರೂ ನಾವು ಎಲ್ಲ ರೀತಿಯ ತಯಾರಿ ನಡೆಸಿದ್ದೇವೆ. ದಿನಕ್ಕೆ ನೂರಿನ್ನೂರು ಕೇಸ್ ಬಂದರೂ ನಿರ್ವಹಿಸಲು ವೈದ್ಯಕೀಯ ಸೌಲಭ್ಯವಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದ್ದಾರೆ.