ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯ 30 ಕೋಟಿಯಲ್ಲೇ ಹಳೆ ಬಸ್‌ ನಿಲ್ದಾಣ ಪುನರ್‌ ನಿರ್ಮಾಣ

By Kannadaprabha NewsFirst Published Jun 14, 2020, 7:31 AM IST
Highlights

70 ಕೋಟಿ ಯೋಜನೆ 30 ಕೋಟಿಗೆ ಇಳಿಕೆ| 40 ಕೋಟಿ ನೀಡಲು ವಾಕರಸಾಸಂ ನಿರಾಕರಣೆ ಎರಡು ಹಂತದಲ್ಲಿ ಕಾಮಗಾರಿ| ಪ್ರಾಥಮಿಕ ಮಾಹಿತಿಯಂತೆ, 30 ಕೋಟಿ ವೆಚ್ಚದಲ್ಲಿ ಜಿ+1 ಕಟ್ಟಡ ಇರಲಿದೆ. ಬಸ್‌ ಸಂಚಾರಕ್ಕೆ, ಪಾರ್ಕಿಂಗ್‌ ವ್ಯವಸ್ಥೆ, ಮಳಿಗೆಗಳು ಕಟ್ಟಡದಲ್ಲಿ ಇರಲಿವೆ|

ಮಯೂರ ಹೆಗಡೆ

ಹುಬ್ಬಳ್ಳಿ(ಜೂ.14): ಇಲ್ಲಿನ ಹಳೆಬಸ್‌ ನಿಲ್ದಾಣದ ಪುನರ್‌ ನಿರ್ಮಾಣದ ರೂಪುರೇಷೆ ಬದಲಾಗಿದೆ. ಹಿಂದೆ ನಿರ್ಧರಿಸಲಾಗಿದ್ದ 70 ಕೋಟಿ ಯೋಜನೆ ಕೈಬಿಟ್ಟು, ಸ್ಮಾರ್ಟ್‌ಸಿಟಿಯಡಿ ಮೊದಲ ಹಂತದಲ್ಲಿ 30 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದ್ದು, ಶುಕ್ರವಾರ ಇದಕ್ಕೆ ವಾಕರಸಾಸಂ ಎನ್‌ಒಸಿ ನೀಡಿದೆ.

ಇಲ್ಲಿನ ಚೆನ್ನಮ್ಮ ವೃತ್ತದ ಬಳಿಯ ಈಗಿನ ಹಳೆ ಬಸ್‌ ನಿಲ್ದಾಣವನ್ನು ನೆಲಸಮಗೊಳಿಸಿ ಪುನರ್‌ನಿರ್ಮಾಣ ಮಾಡಲು 2019ರಲ್ಲಿ ಯೋಜನೆ ಸಿದ್ಧವಾಗಿತ್ತು. ಸ್ಮಾರ್ಟ್‌ಸಿಟಿಯಡಿ 30 ಕೋಟಿ ಹಾಗೂ ವಾಕರಸಾಸಂ 40 ಕೋಟಿ ಸೇರಿ 70 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣವನ್ನು ನಿರ್ಮಿಸಲು ಒಪ್ಪಂದವಾಗಿತ್ತು. ಜಿ+2 ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಡಿಪಿಆರ್‌ ಕೂಡ ಸಿದ್ಧವಾಗಿತ್ತು. ಆದರೆ ಇದೀಗ ಆ ಯೋಜನೆ ಕೈ ಬಿಡಲಾಗಿದೆ. ಮೊದಲ ಹಂತದಲ್ಲಿ ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ಬಸ್‌ ನಿಲ್ದಾಣ ತಲೆ ಎತ್ತಿದರೆ ಬಳಿಕ ಎರಡನೇ ಹಂತದಲ್ಲಿ ಫ್ಲೈ ಓವರ್‌ಗೆ ಸಂಪರ್ಕಿಸುವ ಕಾಮಗಾರಿ ನಡೆಯಲಿದೆ.

'BSY ಸರ್ಕಾರ ಕೊರೋನಾ ಸ್ಥಿತಿಯನ್ನು ಅವೈಜ್ಞಾನಿಕವಾಗಿ ನಿಭಾಯಿಸಿದೆ'

ಕಾರಣವೇನು?

ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಅದರಿಂದ ಪ್ರತ್ಯೇಕವಾಗಿ ಹಳೆಬಸ್‌ ನಿಲ್ದಾಣ ಮರುನಿರ್ಮಾಣ ಆಗುವುದು ಬೇಡ. ಫ್ಲೈ ಓವರ್‌ಗೆ ಸಂಪರ್ಕಿಸುವ ಕಟ್ಟಡ ನಿರ್ಮಿಸುವಂತೆ ಸಚಿವ ಜಗದೀಶ ಶೆಟ್ಟರ್‌ ಸೂಚಿಸಿದ್ದಾರೆ. ಇದಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಕಳೆದ ಸಭೆಯಲ್ಲಿ ಸಮ್ಮತಿಸಿದ್ದಾರೆ. ಆದರೆ ಈ ಯೋಜನೆ 70 ಕೋಟಿಯಲ್ಲಿ ಮುಗಿಯುವಂಥದ್ದಲ್ಲ. ಇದಕ್ಕೆ  140-150 ಕೋಟಿ ಅಂದಾಜಿಸಲಾಗಿದೆ. ಆದರೆ, ಸದ್ಯಕ್ಕೆ ಅಷ್ಟುಮೊತ್ತವನ್ನು ನೀಡುವ ಪರಿಸ್ಥಿತಿಯಲ್ಲಿ ವಾಕರಸಾಸಂ ಇಲ್ಲ. ಹೀಗಾಗಿ ಮೊದಲ ಹಂತದಲ್ಲಿ ಸ್ಮಾರ್ಟ್‌ಸಿಟಿ ಲಿ. ಪಾಲುದಾರಿಕೆ ಇದ್ದ ಮೊತ್ತದಲ್ಲಿ ಬಸ್‌ ನಿಲ್ದಾಣ ಪುನರ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

30 ಕೋಟಿಯಲ್ಲಿ ಏನೇನು?

ಪ್ರಸ್ತುತ ಹಳೆ ಬಸ್‌ ನಿಲ್ದಾಣ ಮರು ನಿರ್ಮಾಣಕ್ಕೆ ಶುಕ್ರವಾರ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕರು ಎನ್‌ಒಸಿ ನೀಡಿದ್ದಾರೆ. ಡಿಪಿಆರ್‌ ಪ್ರಕ್ರಿಯೆ ನಡೆದಿದ್ದು, ಪೂರ್ಣಗೊಂಡ ಬಳಿಕ ಅದನ್ನು ಕೆಯುಐಡಿಎಫ್‌ಸಿಗೆ ಕಳಿಸಿ ಒಪ್ಪಿಗೆ ಪಡೆಯುತ್ತೇವೆ. ಬಳಿಕ ಟೆಂಡರ್‌ ಕರೆಯಲಾಗುವುದು. ಇದಕ್ಕೆ ಒಂದೂವರೆ ತಿಂಗಳು ತಗುಲಬಹುದು ಎಂದು ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌ ತಿಳಿಸಿದರು. ಪ್ರಾಥಮಿಕ ಮಾಹಿತಿಯಂತೆ, 30 ಕೋಟಿ ವೆಚ್ಚದಲ್ಲಿ ಜಿ+1 ಕಟ್ಟಡ ಇರಲಿದೆ. ಬಸ್‌ ಸಂಚಾರಕ್ಕೆ, ಪಾರ್ಕಿಂಗ್‌ ವ್ಯವಸ್ಥೆ, ಮಳಿಗೆಗಳು ಕಟ್ಟಡದಲ್ಲಿ ಇರಲಿವೆ ಎಂದರು.

2ನೇ ಹಂತದಲ್ಲಿ ವಾಕರಸಾಸಂ ಹಣ

ಈ ಕುರಿತು ಮಾತನಾಡಿದ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಫ್ಲೈ ಓವರ್‌ಗೆ ಸಂಪರ್ಕಿಸುವಂತೆ ಸಚಿವರು ಸೂಚಿಸಿದ ಕಾರಣ ಮೊದಲ ಹಂತದಲ್ಲಿ ಸ್ಮಾರ್ಟ್‌ಸಿಟಿ ಅನುದಾನದಲ್ಲೇ ಬಸ್‌ ನಿಲ್ದಾಣ ರೂಪಿಸಲು ನಿರ್ಧಾರವಾಗಿದೆ. ಫ್ಲೈಓವರ್‌ ನಿರ್ಮಾಣವಾಗುವ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣಕ್ಕೆ ಫ್ಲೈ ಓವರ್‌ ಸಂಪರ್ಕಿಸಲು ನಡೆಸಬೇಕಾದ ಬಸ್‌ ನಿಲ್ದಾಣದ 2ನೇ ಹಂತದ ಕಾಮಗಾರಿಗೆ ವಾಕರಸಾಸಂ ಹಣ ಒದಗಿಸಲಿದೆ ಎಂದರು.

ವಾಕರಸಾಸಂ 40 ಕೋಟಿ ನೀಡಲು ನಿರಾಕರಿಸಿದೆ. ಹೀಗಾಗಿ ಸದ್ಯಕ್ಕೆ ಬಸ್‌ ನಿಲ್ದಾಣ ಕಾಮಗಾರಿಗಾಗಿ 30 ಕೋಟಿ ವೆಚ್ಚದಲ್ಲಿ ನಾವು ಡಿಪಿಆರ್‌ ಸಿದ್ಧಪಡಿಸಿ ಟೆಂಡರ್‌ ಕರೆಯಲಿದ್ದೇವೆ ಎಂದು ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌ ಅವರು ಹೇಳಿದ್ದಾರೆ. 

40 ಕೋಟಿಗಾದರೂ ವಾಕರಸಾಸಂ ಸರ್ಕಾರದಿಂದ ಸಾಲ ಪಡೆದು ಯೋಜನೆಗೆ ನೀಡಬೇಕಿತ್ತು. ಫ್ಲೈಓವರ್‌ಗೆ ಸಂಪರ್ಕಿಸಲು ತಗಲುವ 140-150 ಕೋಟಿಯಷ್ಟು ಮೊತ್ತ ನೀಡಲು ವಾಕರಸಾಸಂ ಶಕ್ತವಿಲ್ಲ. ಹೀಗಾಗಿ ಬಸ್‌ ನಿಲ್ದಾಣ ಸ್ಮಾರ್ಟ್‌ಸಿಟಿಯಡಿ ನಿರ್ಮಾಣವಾಗಲಿದೆ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಅವರು ತಿಳಿಸಿದ್ದಾರೆ. 
 

click me!