ಬಾಗಲಕೋಟೆ ಜಿಲ್ಲೆಯಲ್ಲಿ ನಷ್ಟವಾಗಿದ್ದು 2543 ಕೋಟಿ, ಕೇಳಿದ್ದು 420 ಕೋಟಿ!

By Web DeskFirst Published Oct 6, 2019, 11:53 AM IST
Highlights

ಜಿಲ್ಲೆಯಲ್ಲಿ ಪ್ರವಾಹದಿಂದ ಒಟ್ಟು 2543 ಕೋಟಿ ಹಣದಷ್ಟು ವಿವಿಧ ಬಗೆಯ ಹಾನಿ ಸಂಭವಿಸಿದೆ. ಅದಕ್ಕೆ ಜಿಲ್ಲಾಡಳಿತ ಪರಿಹಾರದ ಬೇಡಿಕೆ ಇಟ್ಟಿದ್ದು, ಕೇವಲ 420 ಕೋಟಿ ಮಾತ್ರ| ಇದಕ್ಕೆ ಪ್ರಮುಖ ಕಾರಣ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿನ ಕನಿಷ್ಠ ಪರಿಹಾರದ ಸೂತ್ರಗಳು| ಇದರಿಂದ ಸಂತ್ರಸ್ತರಲ್ಲಿ ಪರಿಹಾರ ದೊರೆಯುತ್ತದೆಯೋ ಇಲ್ಲ ಎಂಬ ಆತಂಕ ಮನೆ ಮಾಡಿದೆ|

ಈಶ್ವರ ಶೆಟ್ಟರ 

ಬಾಗಲಕೋಟೆ(ಅ.5): ಜಿಲ್ಲೆಯ ನೆರೆ ಪರಿಹಾರಕ್ಕೆ ಸಿಕ್ಕ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರವಾಹದಿಂದ ಒಟ್ಟು 2543 ಕೋಟಿ ಹಣದಷ್ಟು ವಿವಿಧ ಬಗೆಯ ಹಾನಿ ಸಂಭವಿಸಿದೆ. ಅದಕ್ಕೆ ಜಿಲ್ಲಾಡಳಿತ ಪರಿಹಾರದ ಬೇಡಿಕೆ ಇಟ್ಟಿದ್ದು, ಕೇವಲ 420 ಕೋಟಿ ಮಾತ್ರ. ಇದಕ್ಕೆ ಪ್ರಮುಖ ಕಾರಣ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿನ ಕನಿಷ್ಠ ಪರಿಹಾರದ ಸೂತ್ರಗಳು. ಇದರಿಂದ ಸಂತ್ರಸ್ತರಲ್ಲಿ ನಮಗೆ ಪರಿಹಾರ ದೊರೆಯುತ್ತದೆಯೋ ಇಲ್ಲ ಎಂಬ ಆತಂಕ ಮನೆ ಮಾಡಿದೆ.

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಗಲಕೋಟೆ ಜಿಲ್ಲೆಯ ಪ್ರವಾಹದಲ್ಲಿ ವಿವಿಧ ಹಂತದ 7531 ಮನೆಗಳು ಹಾನಿಗೊಳಗಾಗಿದ್ದರೆ ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ 71750 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ವಿದ್ಯುತ್‌ ಕಂಬಗಳು 7770 ಹಾನಿಗೀಡಾಗಿದ್ದರೆ, 2899 ಟ್ರಾನ್ಸಫಾರ್ಮರ್‌, 355 ಕಂಡಕ್ಟರ್‌ ಹಾನಿಗೀಡಾಗಿವೆ. ಇವುಗಳ ಹಾನಿ ಕುರಿತು ಜಿಲ್ಲಾಡಳಿತ ನಡೆಸಿದ ಸಮೀಕ್ಷೆ ಸಾವಿರಾರು ಕೋಟಿ ದಾಟಿದರೆ, ಕೇಂದ್ರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ನೀಡುವ ಪರಿಹಾರ ಏತಕ್ಕೂ ಸಾಲದು ಎಂಬ ಸ್ಥಿತಿಯಲ್ಲಿದೆ. ಹೀಗಾಗಿ ಸಂತ್ರಸ್ತನ ಬದುಕು ಮತ್ತಷ್ಟು ಅತಂತ್ರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ರೈತನಿಗೆ ಅನ್ಯಾಯ:

ಪ್ರವಾಹದಿಂದ ಪ್ರಮುಖವಾಗಿ ಆರ್ಥಿಕ ಹೊರೆ ಅನುಭವಿಸುತ್ತಿರುವವರು ರೈತರು, ಅದರಲ್ಲೂ ವಿಶೇಷವಾಗಿ ಕಬ್ಬು ಬೆಳೆಗಾರರ ಕ್ಷೇತ್ರವಾಗಿರುವ ಜಮಖಂಡಿ, ಮುಧೋಳ, ಬೀಳಗಿ, ಬಾದಾಮಿ, ಹುನಗುಂದ ಕ್ಷೇತ್ರದಲ್ಲಿ 41,568 ಹೆಕ್ಟೇರ್‌ ಪ್ರದೇಶದಲ್ಲಿನ ಕಬ್ಬು ಸಂಪೂರ್ಣವಾಗಿ ನಾಶವಾಗಿದ್ದರೆ, ಇನ್ನೂ 2968 ಹೆಕ್ಟೇರ್‌ ಹೆಸರು, 3351 ಹೆಕ್ಟೇರ್‌ ಸೂರ್ಯಕಾಂತಿ, 3195 ಹೆಕ್ಟೇರ್‌ ಸಜ್ಜಿ, 2520 ಹೆಕ್ಟೇರ್‌ ತೊಗರಿ ಸೇರಿದಂತೆ ವಿವಿಧ ಧಾನ್ಯಗಳು ಬೆಳೆದಿದ್ದ ಒಟ್ಟು 66159 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಇದರಿಂದ ಕಂಗಾಲಾಗಿರುವ ರೈತ ಸಮುದಾಯದ ಒಟ್ಟು ಹಾನಿ 1313 ಕೋಟಿ ಎಂದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ.

ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಬಾಳೆ ಬೆಳೆದ ಕ್ಷೇತ್ರ ಸಂಪೂರ್ಣವಾಗಿ ನಾಶವಾಗಿದೆ. ಈರುಳ್ಳಿ ಕ್ಷೇತ್ರ ಅಂದಾಜು 3000 ಹೆಕ್ಟೇರ್‌ ಹಾನಿಗೀಡಾಗಿದ್ದರೆ, ಇನ್ನಿತರ ಬೆಳೆಗಳಾದ ಅರಿಷಿಣ, ಕೆಂಪು ಮೆಣಸಿನಕಾಯಿ, ಹಾನಿಗೀಡಾದ ಪ್ರದೇಶ ಹೆಚ್ಚಾಗಿದೆ, ಅದರಲ್ಲೂ ಬಹುವಾರ್ಷಿಕ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಮಾವು, ಚಿಕ್ಕು, ಪೇರಲ, ತೆಂಗು, ನಿಂಬೆ, ಪಪ್ಪಾಯಿ, ವಿಳ್ಯದೆಲೆ, ನುಗ್ಗೆ ಸೇರಿದಂತೆ ಇತರೆ ಬೆಳೆಗಳ 5528 ಹೆಕ್ಟೇರ್‌ ಪ್ರದೇಶ ನೆರೆ ಹಾವಳಿಗೆ ತುತ್ತಾಗಿದ್ದರಿಂದ ಸಹಜವಾಗಿ ರೈತ ತಲ್ಲಣಗೊಂಡಿದ್ದಾನೆ.

ಕಳೆದುಕೊಂಡಷ್ಟೇ ಪರಿಹಾರ ಸಿಗುತ್ತಾ?:

7531 ಮನೆಗಳ ಹಾನಿಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 54 ಕೋಟಿ ಹಣ ಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರ ಪೂರ್ಣಪ್ರಮಾಣದಲ್ಲಿ ಬಿದ್ದ ಮನೆಗಳಿಗೆ ತಲಾ .5 ಲಕ್ಷ ನೀಡುವುದಾಗಿ ಘೋಷಿಸಿದೆ. ಆದರೆ ಅರ್ಹ ಫಲಾನುಭವಿಗಳಿಗೆ ಅದು ತಲುಪಿದಾಗಲೇ ಸಂತ್ರಸ್ತರು ಸಮಾಧಾನಗೊಳ್ಳಬಹುದು. ಪ್ರವಾಹದಲ್ಲಿ 750 ಕಿಮೀ ಗ್ರಾಮೀಣ ರಸ್ತೆ, 302 ಕುಡಿಯುವ ನೀರಿನ ಯೋಜನೆಗಳು, 295 ಶಾಲೆಗಳು, ಲೋಕೊಪಯೋಗಿ ಇಲಾಖೆಯ ಹಲವಾರು ಸೇತುವೆಗಳು, ರಾಜ್ಯ ಹೆದ್ದಾರಿಗಳು ಹಾನಿಗೀಡಾಗಿ 150 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ. ಆದರೆ ಬರುವ ಪರಿಹಾರ ಧನದಲ್ಲಿ ಪೂರ್ಣಪ್ರಮಾಣದ ಕಾವåಗಾರಿಗಳನ್ನು ಮುಗಿಸಲು ಸಾಧ್ಯವೆ ಎಂಬ ಪ್ರಶ್ನೆ ಅಧಿಕಾರ ವಲಯದಲ್ಲಿ ಕಾಡುತ್ತಿದೆ.

195 ನೆರೆ ಪೀಡಿತ ಗ್ರಾಮಗಳ ಬಾಗಲಕೋಟೆ ಜಿಲ್ಲೆಯ ಒಂದು ಲಕ್ಷ ಎರಡು ಸಾವಿರ ನೆರೆ ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿ ಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಜೀವ ಹಾನಿ, ಪ್ರಾಣಹಾನಿ, ಮಾಡಿಕೊಂಡು ತಿಂಗಳುಗಟ್ಟಲೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ಈದೀಗ ತಾನೆ ಚೇತರಿಸಿಕೊಳ್ಳುತ್ತಿರುವ ಸಂತ್ರಸ್ತನ ಬದುಕಿಗೆ ನೆಪ ಮಾತ್ರದ ಪರಿಹಾರ ಯಾವ ನೆಮ್ಮದಿಯನ್ನು ನೀಡಲು ಸಾಧ್ಯವೇ?

ದೊಡ್ಡ ಸವಾಲು

ಜಿಲ್ಲಾಡಳಿತ ಇನ್ನೂ ಸಮೀಕ್ಷೆಯನ್ನು ಪೂರ್ಣಗೊಳಿಸಿಲ್ಲ. ಆದರೂ, ಹಾನಿಯ ಕುರಿತಾಗಿ ನೀಡಲಾದ ವರದಿಯಲ್ಲಿ ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಬೆಳೆಯ 71750 ಹೆಕ್ಟೇರ್‌ ಪ್ರದೇಶದ ಅಂದಾಜು ಹಾನಿ 1675 ಕೋಟಿ ಮಾಡಿದೆ. ಆದರೆ ಇದಕ್ಕೆ ಸರ್ಕಾರದಿಂದ ಬರುವುದು ಮಾತ್ರ ಕೇವಲ 91 ಕೋಟಿ ಮಾತ್ರ. ಹೀಗಾಗಿ ಹಾನಿಗೀಡಾದ ರೈತರಿಗೆ ಯಾವ ಮಾನ ದಂಡದಲ್ಲಿ ಪರಿಹಾರ ವಿತರಿಸಲಾಗುತ್ತಿದೆ ಎಂಬುದೆ ಬಹುದೊಡ್ಡ ಸವಾಲಾಗಿದೆ.
 

click me!