ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಚಿತಾಗಾರ ಸಿಬ್ಬಂದಿ| ಬೆಂಗಳೂರು ನಗರದ ಎಲ್ಲ ಚಿತಾಗಾರಗಳ ಮುಂದೆ ಸಾಮಾನ್ಯವಾಗಿ ಕಂಡು ಬರುತ್ತಿರುವ ದೃಶ್ಯ| ಪ್ರತಿ ದಿನ ಬೆಳಗ್ಗೆ 7ರಿಂದ ತಡರಾತ್ರಿ 2ರವರೆಗೂ ನಿರಂತರವಾಗಿ ಉರಿಯುತ್ತಿರುವ ವಿದ್ಯುತ್ ಚಿತೆಗಳು|
ಬೆಂಗಳೂರು(ಏ.22): ನಗರದಲ್ಲಿ ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ಮುಂದುವರೆದಿದೆ. ಇಡೀ ದಿನ ಶವ ಸಂಸ್ಕಾರ ನಡೆಸುತ್ತಿದ್ದರೂ ವಿದ್ಯುತ್ ಚಿತಾಗಾರಗಳಲ್ಲಿ ಮುಂದೆ ಶವ ಹೊತ್ತು 20ರಿಂದ 30 ಆ್ಯಂಬುಲೆನ್ಸ್‌ಗಳು ಸರತಿ ಸಾಲಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದ ದೃಶ್ಯ ಮನಕರಗಿಸುವಂತಿತ್ತು.
ಯಲಹಂಕ ವಲಯದ ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ರಾತ್ರಿ 10ರ ಸುಮಾರಿಗೆ 14 ಶವಗಳನ್ನು ದಹಿಸಲಾಗಿತ್ತು. ಇನ್ನೂ 15 ಶವಗಳ ಅಂತ್ಯಕ್ರಿಯೆ ಬಾಕಿ ಇತ್ತು. ಬುಧವಾರ ಸಂಜೆ ಹೊತ್ತಿಗೆ ಕೂಡ್ಲುಗೇಟ್ ವಿದ್ಯುತ್ ಚಿತಾಗಾರದಲ್ಲಿ ಬರೋಬ್ಬರಿ 30 ಆ್ಯಂಬುಲೆನ್ಸ್‌ಗಳು ನಿಂತಿದ್ದವು. ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಪೀಣ್ಯ ಚಿತಾಗಾರದಲ್ಲಿ 14 ಶವ ಸಂಸ್ಕಾರವಾಗಿದ್ದು, 14 ಆಂಬುಲೆನ್ಸ್‌ಗಳಲ್ಲಿದ್ದ ಶವಗಳು ತಮ್ಮ ಸರದಿಗೆ ಕಾದಿದ್ದವು.
ಕೆಂಗೇರಿಯಲ್ಲಿ 19 ಶವಗಳ ಅಂತ್ಯಕ್ರಿಯೆ ಪೂರ್ಣಗೊಂಡಿದ್ದರೆ 12 ಶವಗಳ ಅಂತ್ಯಸಂಸ್ಕಾರ ಬಾಕಿ ಇತ್ತು. ಅದೇ ರೀತಿ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದ ಮುಂದೆ 23 ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿನಿಂತಿದ್ದವು. 14 ಶವಗಳ ಅಂತ್ಯ ಸಂಸ್ಕಾರ ಮಾತ್ರ ನೆರವೇರಿತ್ತು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶವ ಸಾಗಿಸಲು 60 ಸಾವಿರ ಕೇಳಿದ ಆ್ಯಂಬುಲೆನ್ಸ್ ಚಾಲಕ: ದುಡ್ಡಿಲ್ಲದೆ ಮೃತರ ಪುತ್ರಿ ಗೋಳಾಟ..!
ಕೊರೋನಾ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾದ ಬಳಿಕ ಚಿತಾಗಾರದ ಸಿಬ್ಬಂದಿ ಹಗಲು-ರಾತ್ರಿ ಲೆಕ್ಕಿಸದೆ ಮೃತದೇಹಗಳ ಸುಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸತತ ಕಾರ್ಯ ನಿರ್ವಹಣೆಯಿಂದ ಪೀಣ್ಯ ವಿದ್ಯುತ್ ಚಿತಾಗಾರದ ಯಂತ್ರವೊಂದು ಮಧ್ಯಾಹ್ನ ಕೈಕೊಟ್ಟಿತ್ತು. ಹೀಗಾಗಿ ಮೆಕ್ಯಾನಿಕ್‌ಗಳು ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಪುನಃ ಶವಗಳ ದಹನ ಮುಂದುವರೆಯಿತು.
ಕಳೆದ ಆರು ದಿನಗಳಲ್ಲಿ 500ಕ್ಕೂ ಹೆಚ್ಚು ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದಲ್ಲಿ ದಿನಕ್ಕೆ 12ರಿಂದ 15 ಶವ ದಹಿಸಬಹುದು. ಸುಮ್ಮನಹಳ್ಳಿಯಲ್ಲಿ 13ರಿಂದ 16 ಶವಗಳ ಅಂತ್ಯಕ್ರಿಯೆ ನಡೆಸಬಹುದು. ಹೀಗೆ ಕೋವಿಡ್ ಶವಗಳ ಅಂತ್ಯಕ್ರಿಯೆಗೆಂದು ಮೀಸಲಿಟ್ಟಿರುವ 7 ವಿದ್ಯುತ್ ಚಿತಾಗಾರಗಳಲ್ಲಿ ದಿನಕ್ಕೆ 60ರಿಂದ 70 ಶವಗಳನ್ನು ಮಾತ್ರ ದಹಿಸಬಹುದಾಗಿದೆ.
ಆದರೆ, ಕಳೆದ ಆರು ದಿನಗಳಲ್ಲಿ 500ಕ್ಕೂ ಹೆಚ್ಚು ಕೋವಿಡ್ ಸೋಂಕಿತ ಶವಗಳು ಮತ್ತು ನಾನ್‌ಕೋವಿಡ್‌ನಿಂದ ಮೃತಪಟ್ಟ ಶವಗಳು ಸೇರಿ 600ಕ್ಕೂ ಹೆಚ್ಚು ಶವಗಳು ವಿದ್ಯುತ್ ಚಿತಾಗಾರಗಳಿಗೆ ಬಂದಿದ್ದು, ಪ್ರತಿ ದಿನ ಬೆಳಗ್ಗೆ 7ರಿಂದ ತಡರಾತ್ರಿ 2ರವರೆಗೂ ನಿರಂತರವಾಗಿ ವಿದ್ಯುತ್ ಚಿತೆಗಳು ಉರಿಯುತ್ತಲೇ ಇವೆ. ಆದರೂ, ಶವಗಳನ್ನು ಹೊತ್ತು ಕಾಯುತ್ತಿರುವ ಆ್ಯಂಬುಲೆನ್ಸ್‌ಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಸೋಂಕಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ವಿಧಿ-ಬದ್ಧವಾಗಿ ಅಂತ್ಯಸಂಸ್ಕಾರ ನಡೆಸಲು ಕೂಡ ತಾಸುಗಟ್ಟಲೆ ಕಣ್ಣೀರು ಸುರಿಸುತ್ತಾ ಕಾದು ನಿಂತಿರುವ ದೃಶ್ಯ ಎಂಥಹ ಕಲ್ಲು ಹೃದಯವನ್ನೂ ಕರಿಸುವಂತಿದೆ. ಇದು ಎಲ್ಲ ಚಿತಾಗಾರಗಳ ಮುಂದೆ ಸಾಮಾನ್ಯವಾಗಿ ಕಂಡು ಬರುತ್ತಿರುವ ದೃಶ್ಯವಾಗಿತ್ತು.