ವಿಜಯಪುರ: ಆಲಮಟ್ಟಿ ಜಲಾಶಯ ತುಂಬೋಕೆ 2 ಮೀ. ಬಾಕಿ

By Kannadaprabha News  |  First Published Jul 27, 2023, 1:04 PM IST

ಪ್ರವಾಹ ನಿಯಂತ್ರಣದ ಕ್ರಮವಾಗಿ, ಒಳಹರಿವು ಹೆಚ್ಚುತ್ತಿರುವ ಕಾರಣ, ಮುಂಜಾಗ್ರತೆ ಕ್ರಮವಾಗಿ ಹೊರಹರಿವು ಹೆಚ್ಚಿಸಲಾಗಿದೆ. 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಪ್ರತಿ ಬಾರಿ 518.6 ಮೀ.ವರೆಗೆ ಸಂಗ್ರಹಿಸಿ ನಂತರ ನೀರು ಬಿಡಲಾಗುತಿತ್ತು. ಆದರೆ, ಈ ಬಾರಿ ಜಲಾಶಯದ ಮಟ್ಟ 517 ಮೀ. ಗೆ ತಲುಪಿದಾಗಲೇ ನೀರು ಬಿಡಲು ಆರಂಭಿಸಲಾಗಿದೆ.


ಆಲಮಟ್ಟಿ(ಜು.27):  ಆಲಮಟ್ಟಿ ಜಲಾಶಯದ ಒಳಹರಿವು 1.75 ಲಕ್ಷ ಕ್ಯುಸೆಕ್‌ ದಾಟಿದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯ ಭರ್ತಿಗೂ ಮುನ್ನವೇ ಜಲಾಶಯದ 26 ಗೇಟ್‌ ಗಳ ಪೈಕಿ 20 ಗೇಟ್‌ಗಳು ಹಾಗೂ ಆಲಮಟ್ಟಿ ವಿದ್ಯುತ್‌ ಉತ್ಪಾದನಾ ಕೇಂದ್ರ ಸೇರಿ 1.25 ಲಕ್ಷ ಕ್ಯುಸೆಕ್‌ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಈ ವರ್ಷದಲ್ಲಿ ಮೊದಲ ಬಾರಿ ಗೇಟ್‌ ಮೂಲಕ ಬುಧವಾರ ಸಂಜೆ 4 ಗಂಟೆಯಿಂದ ನೀರು ಹರಿಸಲು ಆರಂಭಿಸಲಾಯಿತು.

ಪ್ರವಾಹ ನಿಯಂತ್ರಣದ ಕ್ರಮವಾಗಿ, ಒಳಹರಿವು ಹೆಚ್ಚುತ್ತಿರುವ ಕಾರಣ, ಮುಂಜಾಗ್ರತೆ ಕ್ರಮವಾಗಿ ಹೊರಹರಿವು ಹೆಚ್ಚಿಸಲಾಗಿದೆ. 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಪ್ರತಿ ಬಾರಿ 518.6 ಮೀ.ವರೆಗೆ ಸಂಗ್ರಹಿಸಿ ನಂತರ ನೀರು ಬಿಡಲಾಗುತಿತ್ತು. ಆದರೆ, ಈ ಬಾರಿ ಜಲಾಶಯದ ಮಟ್ಟ 517 ಮೀ. ಗೆ ತಲುಪಿದಾಗಲೇ ನೀರು ಬಿಡಲು ಆರಂಭಿಸಲಾಗಿದೆ.

Tap to resize

Latest Videos

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಡ್ಯಾಂ

ಜಲಾಶಯದ ಗೇಟ್‌ಗಳ ಮೂಲಕ 85,000 ಕ್ಯುಸೆಕ್‌ ಹಾಗೂ ವಿದ್ಯುತ್‌ ಉತ್ಪಾದನಾ ಘಟಕದ ಮೂಲಕ 45,000 ಕ್ಯುಸೆಕ್‌ ಸೇರಿ 1.25 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸಂಜೆ 4 ಗಂಟೆಯಿಂದ ಒಂದೊಂದೇ ಗೇಟ್‌ಗಳನ್ನು ತೆರೆಯಲಾಯಿತು. ಜುಲೈ 21ರಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ವಿದ್ಯುತ್‌ ಘಟಕದ ಮೂಲಕ ನೀರು ಬಿಡಲಾಗಿತ್ತು. 45000 ಕ್ಯುಸೆಕ್‌ ನೀರು ವಿದ್ಯುತ್‌ ಘಟಕಕ್ಕೆ ಬಿಟ್ಟಕಾರಣ ಆರು ಘಟಕಗಳು ಕಾರ್ಯಾರಂಭ ಮಾಡಿದ್ದು, 250 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯಾಗಿದೆ ಎಂದು ಕೆಪಿಸಿಎಲ್‌ ಅ​ಧಿಕಾರಿಗಳು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಬುಧವಾರ ಸಂಜೆ 6ಕ್ಕೆ 1,75,711 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟವೂ ಏರಿಕೆಯಾಗಿದ್ದು, 517.23 ಮೀ. ಇದೆ. ಸದ್ಯ ಜಲಾಶಯದಲ್ಲಿ 87 ಟಿಎಂಸಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೊಯ್ನಾ 149 ಮಿ.ಮೀ, ನವಜಾ 215 ಮಿ.ಮೀ, ಮಹಾಬಳೇಶ್ವರ 163 ಮಿ.ಮೀ, ತರಳಿ 40 ಮಿ.ಮೀ, ರಾಧಾನಗರಿ 106 ಮಿ.ಮೀ ಮಳೆಯಾಗಿದೆ.

ರಾಜಾಪುರ ಬ್ಯಾರೇಜ್‌ ಮೂಲಕ 1,01,708 ಕ್ಯುಸೆಕ್‌, ದೂಧಗಂಗಾ ನದಿ ಮೂಲಕ 29,216 ಕ್ಯುಸೆಕ್‌ ಸೇರಿ 1,30,924 ಕ್ಯುಸೆಕ್‌ ನೀರು ಕಲ್ಲೋಲ ಬ್ಯಾರೇಜ್‌ ಮೂಲಕ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ನೀರು ಬರುತ್ತಿದೆ.
ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 1.25 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಯಿಂದ ಹರಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್‌ ಪ್ರಭಾರ ಮುಖ್ಯ ಎಂಜಿನಿಯರ್‌ ಡಿ. ಬಸವರಾಜು ತಿಳಿಸಿದ್ದಾರೆ.

click me!