ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 10 ವರ್ಷ ಜೈಲು

By Kannadaprabha News  |  First Published Jul 30, 2021, 7:41 AM IST

*  2017ರ ಏಪ್ರಿಲ್‌ 22ರಂದು ನಡೆದಿದ್ದ ಘಟನೆ
*  ಅಪ್ರಾಪ್ತ ಬಾಲಕಿಗೆ ಅವಳ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದ ಕಾಮಕ
*  ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದ ಪೊಲೀಸರು


ಕೊಪ್ಪಳ(ಜು.30):  ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಿಹಾರ ಮೂಲದ ವಿಕ್ಕಿಗುಪ್ತಾ ರಾಮಶ್ರೀಪ್ರಸಾದ ಎಂಬ ವ್ಯಕ್ತಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ (ಪೋಕ್ಸೋ) ಶಂಕರ ಎಂ. ಜಾಲವಾದಿ 10 ವರ್ಷಗಳ ಜೈಲು ಶಿಕ್ಷೆ, 56 ಸಾವಿರಗಳ ದಂಡ ವಿಧಿಸಿ ಪ್ರಕಟಿಸಿದ್ದಾರೆ.

ಆರೋಪಿತನು ಕಲ್ಯಾಣಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬಾಧಿತಳ ಸಹೋದರನಿಗೆ ಪರಿಚಯವಾಗಿ, ಮನೆಗೆ ಬಂದು ಹೋಗಿ ಮಾಡುತ್ತಿದ್ದರಿಂದ ಬಾಧಿತಳಿಗೆ ಪರಿಚಯವಾಗಿ ಸಲುಗೆಯಿಂದ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೀತಿ ಬೆಳೆದು, 2017ರ ಏಪ್ರಿಲ್‌ 22ರಂದು ಕಾರಟಗಿ ಠಾಣೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಮದುವೆಯಾಗುವುದಾಗಿ ನಂಬಿಸಿ, ಪುಸಲಾಯಿಸಿ, ನೀನು ಬರದಿದ್ದರೆ ಸಾಯುತ್ತೇನೆ ಎಂದು ಹೆದರಿಸಿ ಒತ್ತಾಯದಿಂದ ಅಪಹರಿಸಿಕೊಂಡು ಬೆಂಗಳೂರಿನ ಹೆಬ್ಬುಗೋಡೆಯ ವ್ಯಾಪ್ತಿಯಲ್ಲಿ ಶಿವರಾಜ ಎನ್ನುವವರ ಒಂದು ಕೊಠಡಿಯನ್ನು ಬಾಡಿಗೆ ಪಡೆದು ವಾಸವಾಗಿದ್ದನು. ಅಲ್ಲಿ ಅಪ್ರಾಪ್ತ ಬಾಲಕಿಗೆ ಅವಳ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದು ಅಲ್ಲದೇ, ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

Tap to resize

Latest Videos

ಅತ್ಯಾಚಾರದ ದೂರು ಕೊಡಲು ಬಂದ ಬಾಲಕಿಗೆ ಪೊಲೀಸ್ ಠಾಣೆಯಲ್ಲೇ ಹೆರಿಗೆ

ಪ್ರಕರಣದ ಬಗ್ಗೆ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ದೀಪಕ್‌ ಆರ್‌. ಬೂಸರೆಡ್ಡಿ ಅವರು ತನಿಖೆ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 56 ಸಾವಿರಗಳ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
 

click me!