‘ವರುಣ ರಹಸ್ಯ’ ಬಿಚ್ಚಿಟ್ಟಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ

First Published Apr 28, 2018, 7:47 AM IST
Highlights

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್‌ ತಪ್ಪಿರುವುದು ಈ ಬಾರಿಯ ವಿಧಾನಸಭಾ ಚುನಾವಣೆಯ ಹೈಲೈಟ್‌ಗಳಲ್ಲಿ ಒಂದು. ಒಂದು ವೇಳೆ, ವಿಜಯೇಂದ್ರ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದರೆ ಚಾಮುಂಡೇಶ್ವರಿ, ಬಾದಾಮಿ ಜತೆಗೆ ವರುಣಾ ಕೂಡ ಈ ಚುನಾವಣೆಯ ಕುತೂಹಲದ ಕದನ ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಒಂದಾಗುತ್ತಿತ್ತು.

ವಿಜಯ್‌ ಮಲಗಿಹಾಳ

 ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್‌ ತಪ್ಪಿರುವುದು ಈ ಬಾರಿಯ ವಿಧಾನಸಭಾ ಚುನಾವಣೆಯ ಹೈಲೈಟ್‌ಗಳಲ್ಲಿ ಒಂದು. ಒಂದು ವೇಳೆ, ವಿಜಯೇಂದ್ರ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದರೆ ಚಾಮುಂಡೇಶ್ವರಿ, ಬಾದಾಮಿ ಜತೆಗೆ ವರುಣಾ ಕೂಡ ಈ ಚುನಾವಣೆಯ ಕುತೂಹಲದ ಕದನ ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಒಂದಾಗುತ್ತಿತ್ತು. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ವರುಣಾ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನಕ್ಕೆ ಕಾರಣರಾದ ವಿಜಯೇಂದ್ರ ಅವರಿಗೆ ಟಿಕೆಟ್‌ ತಪ್ಪಿದ್ದರ ಬಗ್ಗೆ ಬೇಸರವಾಗಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಪ್ರಚಾರದಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಟಿಕೆಟ್‌ ತಪ್ಪಿದ ನಂತರ ಮತ್ತೆ ವರುಣಾಕ್ಕೆ ವಾಪಸಾಗುವ ಮೊದಲು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ವಿಜಯೇಂದ್ರ ಅವರು ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.


ವರುಣ ಕ್ಷೇತ್ರವೇ ನಿಮ್ಮನ್ನು ಸೆಳೆದದ್ದೇಕೆ?

ಏಳೆಂಟು ತಿಂಗಳಿನಿಂದ ಸಿದ್ದರಾಮಯ್ಯ ಅವರು ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಬಗ್ಗೆ ನೀಡುತ್ತಿದ್ದ ಹೇಳಿಕೆ ಗಮನಿಸುತ್ತಿದ್ದೆ. ಜತೆಗೆ, ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ಎಸಿಬಿ ಬಳಸಿ ಯಡಿಯೂರಪ್ಪ ಮೇಲೆ 2 ಹೊಸ ಕೇಸು ದಾಖಲಿಸಿದರು. ವಿಪಕ್ಷದವರ ಮೇಲೆ ಕೇಸು ಹಾಕುವುದು, ಬಾಯಿಗೆ ಬಂದಂತೆ ಮಾತಾಡುವುದು... ಮುಖ್ಯಮಂತ್ರಿಯಾಗಿ ಹೀಗೂ ಮಾಡಬೇಕಾ? ಇದೆಲ್ಲ ನೋಡಿ ಒಳಗೊಳಗೇ ಕುದಿಯುತ್ತಿದ್ದೆ. ಇದೇ ವೇಳೆ, ನಾನು ಅಭ್ಯರ್ಥಿ ಆಗಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಹೀಗಾಗಿ, ಮುಖ್ಯಮಂತ್ರಿಗಳನ್ನು ಅವರ ಕ್ಷೇತ್ರದಲ್ಲೇ ಎದುರಿಸೋಣ ಎಂಬ ನಿಲುವಿಗೆ ಬಂದೆ.

* ಚುನಾವಣೆ ಹೊತ್ತಿನಲ್ಲಿ ಏಕಾಏಕಿ ನಿಮಗೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಹುಟ್ಟಿದ್ದು ಯಾಕೆ?

ರಾಜಕೀಯದಲ್ಲಿ ಆಸಕ್ತಿ ಎನ್ನುವುದಕ್ಕಿಂತ ವರುಣಾ ಕ್ಷೇತ್ರದ ಮುಖಂಡರು ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಅನೇಕ ಹಿರಿಯ ನಾಯಕರಿಗೆ ಮನವಿ ಕೊಟ್ಟರು. ಇಂಥ ಸಂದರ್ಭ ನಾನು ಒಮ್ಮೆ ವರುಣಾ ಕ್ಷೇತ್ರಕ್ಕೆ ಭೇಟಿ ಕೊಟ್ಟೆ. ಅದು ಮುಖ್ಯಮಂತ್ರಿಗಳ ಕ್ಷೇತ್ರ. ಹುಡುಗಾಟವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆ ಗಳಿಗೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬದಲು ವರುಣಾದಿಂದಲೇ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ, ಹೇಗಪ್ಪ ಎಂದುಕೊಂಡೇ ಕ್ಷೇತ್ರಕ್ಕೆ ಹೋದೆ. ಆದರೆ, ಅಲ್ಲಿ ಹೋಗಿ ನೋಡಿದ ಮೇಲೆ ಕ್ಷೇತ್ರದಲ್ಲಿನ ಸಮಸ್ಯೆಗಳು, ಕಾಂಗ್ರೆಸ್ಸಿನವರ ದಬ್ಬಾಳಿಕೆ, ಮರಳು ಮಾಫಿಯಾ, ರೈತರ ಸಮಸ್ಯೆಗಳು ಕಣ್ಣಿಗೆ ರಾಚಿದವು. ಇದೆಲ್ಲ ನನಗೆ ಒಂದು ಚಾಲೆಂಜ್‌ ರೀತಿ ಅನಿಸಿತು. ಪಕ್ಷ ಆಶೀರ್ವಾದ ಮಾಡಿದರೆ ಈ ಕ್ಷೇತ್ರವನ್ನು ಯಾಕೆ ಒಂದು ಸವಾಲಾಗಿ ಸ್ವೀಕರಿಸಬಾರದು ಎಂಬ ಭಾವನೆ ಕೂಡ ಬಂತು. ಮುಖಂಡರು ಅಪೇಕ್ಷೆ ಪಟ್ಟಿರುವುದರಿಂದ ಪಕ್ಷ ಒಪ್ಪಿದರೆ ಅಭ್ಯರ್ಥಿಯಾಗಿ ಕಣಕ್ಕಿಳಿಯೋಣ ಎಂಬ ನಿರ್ಧಾರಕ್ಕೆ ಬಂದೆನೇ ಹೊರತು ರಾಜಕೀಯಕ್ಕೆ ಬರಬೇಕು ಎಂಬ ಕಾರಣಕ್ಕಾಗಿ ಅಲ್ಲ.

* ಹಿಂದೆ ಯಾವತ್ತಾದರೂ ಸಕ್ರಿಯ ರಾಜಕಾರಣ ಪ್ರವೇಶಿಸಲು ಆಲೋಚನೆ ಮಾಡಿದ್ದಿರಾ?

ಖಂಡಿತ ಇಲ್ಲ. ನಾನು ಯಾವತ್ತೂ ರಾಜಕೀಯಕ್ಕೆ ಬರಬೇಕು ಎಂದುಕೊಂಡಿರಲಿಲ್ಲ. ನಮ್ಮದು ಒಂದು ರಾಷ್ಟ್ರೀಯ ಪಕ್ಷ. ತಂದೆಯವರು ರಾಜ್ಯದಲ್ಲಿ ಪಕ್ಷ ಮುನ್ನಡೆಸುತ್ತಿದ್ದಾರೆ. ನನ್ನ ಸಹೋದರ ರಾಘಣ್ಣ ರಾಜಕೀಯದಲ್ಲಿದ್ದಾನೆ. ಹೀಗಾಗಿ ಆ ಬಗ್ಗೆ ಯೋಚನೆ ಮಾಡುವ ಗೋಜಿಗೆ ಹೋಗಿರಲಿಲ್ಲ.

* ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವೇ ನಿಮ್ಮನ್ನು ಸೆಳೆದಿದ್ದು ಯಾಕೆ?

ನಿಜ ಹೇಳಬೇಕು ಎಂದರೆ ಕಳೆದ ಏಳೆಂಟು ತಿಂಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಗ್ಗೆ ನೀಡುತ್ತಿದ್ದ ಹೇಳಿಕೆಗಳನ್ನು ಗಮನಿಸುತ್ತಿದ್ದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಚುನಾವಣೆ ಸಮೀಪಿಸುತ್ತಿರುವ ವೇಳೆ ಯಡಿಯೂರಪ್ಪ ವಿರುದ್ಧ ಹೊಸದಾಗಿ ಎಸಿಬಿಯಲ್ಲಿ ಎರಡು ಪ್ರಕರಣ ದಾಖಲಿಸಿದರು. ಮುಖ್ಯಮಂತ್ರಿಯಾಗಿ ಹೀಗೂ ಮಾಡಬೇಕಾ? ತಾಕತ್ತಿದ್ದರೆ ಚುನಾವಣೆಯನ್ನು ನೇರವಾಗಿ ಎದುರಿಸಬೇಕು. ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅದನ್ನು ಮುಂದಿಟ್ಟುಕೊಂಡು ಮತ ಕೇಳಲಿ. ಅದನ್ನು ಬಿಟ್ಟು ವಿಪಕ್ಷದ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು, ಕೇಸ್‌ ಹಾಕಿಸುವುದು ಯಾವ ತಾಕತ್ತು? ಪ್ರಧಾನಿ ಮೋದಿ ಎಲ್ಲಿ, ಸಿಎಂ ಸಿದ್ದರಾಮಯ್ಯ ಎಲ್ಲಿ? ಇಬ್ಬರಿಗೂ ಹೋಲಿಕೆಯೇ ಇಲ್ಲ ಅನಿಸಿತು. ಇದೆಲ್ಲ ನೋಡಿ ನಾನು ಒಳಗೊಳಗೇ ಕುದಿಯುತ್ತಿದ್ದೆ. ಇದೇ ವೇಳೆ ನಾನು ಅಭ್ಯರ್ಥಿಯಾಗಬೇಕು ಎಂಬ ಅಪೇಕ್ಷೆ ಪಕ್ಷದ ಸ್ಥಳೀಯ ಮುಖಂಡರಿಂದ ಕೇಳಿಬಂತು. ಹೀಗಾಗಿ, ಮುಖ್ಯಮಂತ್ರಿ ಕ್ಷೇತ್ರದಲ್ಲೇ ಅವರನ್ನು ಎದುರಿಸೋಣ ಎಂಬ ನಿಲುವಿಗೆ ಬಂದೆ.

* ಟಿಕೆಟ್‌ ಖಚಿತವಾಗದೆ ನೀವು ವರುಣಾದಲ್ಲಿ ಮನೆ ಮಾಡಿದ್ದಿರಾ ಅಥವಾ ಮೊದಲೇ ಹಸಿರು ನಿಶಾನೆ ಸಿಕ್ಕಿತ್ತೆ?

ಇಲ್ಲ. ಪಕ್ಷದ ಸ್ಥಳೀಯ ಮುಖಂಡರು ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ ವೇಳೆ ಅವರಿಂದ ಸಕಾರಾತ್ಮಕ ಭರವಸೆ ದೊರೆತಿತ್ತು. ಅದರ ಆಧಾರದ ಮೇಲೆ ನಾನು ಅಲ್ಲಿ ಮನೆ ಮಾಡಿದೆ. ವರುಣಾಕ್ಕೆ ಹೊರಡುವ ವೇಳೆ ತಂದೆ ಯಡಿಯೂರಪ್ಪ ಅವರು ನೀನೇ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಈಗಲೇ ಬರಬೇಡ. ಪಕ್ಷದ ತೀರ್ಮಾನವೇ ಅಂತಿಮ ಎಂದಿದ್ದರು. ನೀನು ಹೋಗಿ ಕೆಲಸ ಮಾಡು ಎಂದರು. ಹಾಗೆ ನಾನು ಕೆಲಸ ಆರಂಭಿಸಿದೆ. ಅಪ್ಪಿತಪ್ಪಿಯೂ ನಾನು ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೊಟ್ಟಿದ್ದರೆ ಸವಾಲಾಗಿ ಸ್ವೀಕರಿಸಿ ಸಂತೋಷದಿಂದ ಕೆಲಸ ಮಾಡುತ್ತಿದ್ದೆ.

* ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬ ಕಾರಣಕ್ಕಾಗಿ ನೀವು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಿರಾ?

ಪ್ರಾಮಾಣಿಕವಾಗಿ ಹೇಳುತ್ತೇನೆ- ಸಿದ್ದರಾಮಯ್ಯ ಅವರು ಕೊನೆಯ ಹಂತದಲ್ಲಾದರೂ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಇದ್ದುದರಿಂದಲೇ ನಾನು ಅವರನ್ನು ಎದುರಿಸುವ ಉದ್ದೇಶದಿಂದ ಕಣಕ್ಕಿಳಿಯಲು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಸೆಯಿಂದ ಸಿದ್ಧನಾದೆ. ಯತೀಂದ್ರ ಅಂತಿಮ ಎಂಬುದು ಮೊದಲೇ ಸ್ಪಷ್ಟತೆ ಇದ್ದಿದ್ದರೆ ನಾನು ಸ್ಪರ್ಧೆ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ‘ಗೋಲ್ಡನ್‌ ಅಪಾರ್ಚುನಿಟಿ’ ಬಿಡಬಾರದು ಎಂದುಕೊಂಡಿದ್ದೆ.

* ಹಾಗಿದ್ದರೆ ನಾಮಮತ್ರ ಸಲ್ಲಿಸುವ ಕೊನೆಯ ಕ್ಷಣದಲ್ಲಿ ನಿಮಗೆ ಟಿಕೆಟ್‌ ತಪ್ಪಿದ್ದು ಯಾಕೆ?

ಯಾಕೆ ತಪ್ಪಿದ್ದು ಎಂಬ ಕಾರಣ ಹುಡುವುದಕ್ಕಿಂತ ಪಕ್ಷ ನಮ್ಮದು. ಪಕ್ಷದ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ. ವರುಣಾ ಕ್ಷೇತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಜವಾಬ್ದಾರಿ ಹೊತ್ತು ಓಡಾಡಲು ಅವಕಾಶ ಕೊಟ್ಟಿದ್ದಾರೆ. ನಾನು ಅದನ್ನು ಸಂತೋಷವಾಗಿ ಸ್ವೀಕರಿಸಿದ್ದೇನೆ. ಇವತ್ತು ಪಕ್ಷ ಅಧಿಕಾರಕ್ಕೆ ಬರಬೇಕು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಮತ್ತು ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕು ಎಂಬ ಪ್ರಧಾನಿ ಮೋದಿ ಅವರ ಕನಸು ನನಸಾಗಬೇಕು ಎನ್ನುವುದಷ್ಟೇ ಮುಖ್ಯ.

* ಟಿಕೆಟ್‌ ತಪ್ಪುವುದರಲ್ಲಿ ಆರ್‌ಎಸ್‌ಎಸ್‌ ಮತ್ತು ನಿಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಕೈವಾಡ ಇದೆಯಂತೆ?

ಆರ್‌ಎಸ್‌ಎಸ್‌ ಬಗ್ಗೆ ಆರೋಪಿಸುವುದು ಸರಿಯಲ್ಲ. ಕಷ್ಟಕಾಲದಲ್ಲೂ ಆರ್‌ಎಸ್‌ಎಸ್‌ ದೇಶ ಕಟ್ಟುವ ಕೆಲಸ ಮಾಡಿಕೊಂಡು ಬಂದಿದೆ. ಅದನ್ನು ಈ ವಿಷಯದಲ್ಲಿ ಎಳೆದು ತರುವುದು ತಪ್ಪು. ಅದು ಸತ್ಯಕ್ಕೆ ದೂರವಾದದ್ದು.

* ಕುಟುಂಬ ರಾಜಕಾರಣದ ಟೀಕೆಗಳಿಂದ ತಪ್ಪಿಸಿಕೊಳ್ಳಲು ಪಕ್ಷದ ವರಿಷ್ಠರು ನಿಮಗೆ ಟಿಕೆಟ್‌ ನಿರಾಕರಿಸಿದರು ಎನ್ನಲಾಗುತ್ತಿದೆ?

ನೋಡಿ, ವರುಣಾ ನಾನು ಹುಡುಕಿಕೊಂಡ ಕ್ಷೇತ್ರ ಅಲ್ಲ. ಮೇಲಾಗಿ ಯಡಿಯೂರಪ್ಪ ಅವರು ತಮ್ಮ ಮಗ ರಾಜಕೀಯವಾಗಿ ಬೆಳೆಯಲಿ ಎಂದು ವರುಣಾಕ್ಕೆ ಕಳುಹಿಸಿದ್ದಲ್ಲ. ಕುಟುಂಬ ರಾಜಕಾರಣಕ್ಕೆ ನನ್ನನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ.

* ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಉದ್ದೇಶದಿಂದಲೇ ವರುಣಾ ಕ್ಷೇತ್ರದ ಮೇಲೆ ಮೊದಲಿನಿಂದಲೂ ಕಣ್ಣಿರಿಸಿದ್ದಿರಾ?

ಇಲ್ಲ. ನನಗೆ ಹಾಗೆ ರಾಜಕಾರಣ ಪ್ರವೇಶಿಸುವ ಅದಮ್ಯ ಆಸೆ ಇದ್ದಿದ್ದರೆ ಅಪಾಯ ಇರುವ ವರುಣಾ ಕ್ಷೇತ್ರ ಬಿಟ್ಟು ಸುರಕ್ಷಿತವಾಗಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ನಾನು ರಾಜ್ಯಾಧ್ಯಕ್ಷರ ಮಗ. ಒಂದು ವೇಳೆ ಸ್ಪರ್ಧಿಸಿ ಸೋತಿದ್ದರೆ ಏನು ಪರಿಣಾಮ ಉಂಟಾಗುತ್ತಿತ್ತು ಎಂಬುದು ನನಗೆ ಗೊತ್ತಿತ್ತು. ಮುಖ್ಯಮಂತ್ರಿ ಇರಲಿ ಅಥವಾ ಅವರ ಮಗ ಇರಲಿ, ವರುಣಾ ಸುಲಭದ ಕ್ಷೇತ್ರವಾಗಿರಲಿಲ್ಲ. ಆದರೆ, ನಾನು ಸವಾಲಾಗಿ ಸ್ವೀಕರಿಸಲು ಸಿದ್ಧನಾಗಿದ್ದೆ.

* ಟಿಕೆಟ್‌ ತಪ್ಪಿಹೋಯಿತು ಎಂಬ ಕಾರಣಕ್ಕೆ ನಿಮಗೆ ಬೇಸರ ಆಗಿಲ್ಲವೇ?

ನನಗೆ ಟಿಕೆಟ್‌ ಸಿಗಲಿಲ್ಲ ಎಂಬುದು ಬೇಸರ ತರಿಸಿಲ್ಲ. ನಾನು ಸ್ಪರ್ಧಿಸುತ್ತೇನೆ ಎಂಬ ನಿರೀಕ್ಷೆಯಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ವರುಣಾ ಕ್ಷೇತ್ರದ ಅನೇಕ ಸ್ಥಳೀಯ ಮುಖಂಡರು ಅವರ ಪಕ್ಷ ತೊರೆದು ಬಂದರು. ಅದು ಮುಖ್ಯಮಂತ್ರಿಗಳ ಕ್ಷೇತ್ರ. ಈ ಕಾರಣಕ್ಕಾಗಿಯೇ ನಾನು ಅವರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ವರುಣಾ ಕ್ಷೇತ್ರಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಕೆಲಸ ಮಾಡಲು ಶಾಸಕನೇ ಆಗಬೇಕಾಗಿಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗ ಆ ಕ್ಷೇತ್ರದ ಅಭಿವೃದ್ಧಿಗಾಗಿಯೂ ಶ್ರಮಿಸುತ್ತೇನೆ. ಎಲ್ಲ ವಿಷಯಗಳಲ್ಲಿಯೂ ಕ್ಷೇತ್ರದ ಜನರ ಜೊತೆ ನಿಲ್ಲುತ್ತೇನೆ.

* ಬಿಜೆಪಿ ಅನ್ಯಾಯವಾಗಿ ಒಂದು ಗೆಲ್ಲುವ ಕ್ಷೇತ್ರ ಕಳೆದುಕೊಂಡಿತು ಎಂಬ ಭಾವನೆ ಪಕ್ಷಾತೀತವಾಗಿ ವ್ಯಕ್ತವಾಗುತ್ತಿದೆ?

ವರುಣಾ ಕ್ಷೇತ್ರ ಸಿ ಕೆಟಗರಿ ಕ್ಷೇತ್ರವಾಗಿತ್ತು. ಬಿಜೆಪಿಯಲ್ಲಿ ಅದನ್ನು ಎಂದಿಗೂ ಗಣನೆಗೆ ತೆಗೆದುಕೊಂಡಿರಲಿಲ್ಲ. ನಾನು 15 ದಿನಗಳ ಕಾಲ ಕೆಲಸ ಮಾಡಿ ಎಲ್ಲರನ್ನೂ ಒಗ್ಗೂಡಿಸಿದ್ದರಿಂದ ಆನೆಬಲ ಬಂದಂತಾಗಿತ್ತು. ಒಂದು ರೀತಿಯಲ್ಲಿ ಗೆದ್ದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಯತೀಂದ್ರ ಕಣ್ಣೀರು ಹಾಕತೊಡಗಿದ್ದರು. ಸಿದ್ದರಾಮಯ್ಯ ಅವರು ವಾಗ್ದಾಳಿ ಆರಂಭಿಸಿದ್ದರು. ಹೀಗಾಗಿ, ಈಗ ಬೇರೊಬ್ಬರು ಅಭ್ಯರ್ಥಿಯಾಗಿರುವುದರಿಂದ ಹೆಚ್ಚು ಪ್ರಯತ್ನ ಮಾಡಬೇಕಾಗಿ ಬರಬಹುದು.

* ಟಿಕೆಟ್‌ ತಪ್ಪಿಸಿದ್ದಕ್ಕೆ ಪ್ರತಿಯಾಗಿ ಪಕ್ಷದ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ ಸಮಾಧಾನ ಮಾಡಲಾಗಿದೆಯೇ?

ಪಕ್ಷದ ಜವಾಬ್ದಾರಿ ಟಿಕೆಟ್‌ಗಿಂತ ದೊಡ್ಡದು. ನನಗೆ ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಸಮಯ ಕಡಮೆ ಇರುವುದರಿಂದ ಯಡಿಯೂರಪ್ಪ ಅವರು ಎಲ್ಲ ಕ್ಷೇತ್ರಗಳಲ್ಲೂ ಓಡಾಡಲು ಆಗುವುದಿಲ್ಲ. ನಾನು ಈ ಜಿಲ್ಲೆಗಳಲ್ಲಿ ಸಂಚರಿಸಿ ಚುನಾವಣೆಗೆ ಪಕ್ಷ ಸಂಘಟಿಸುತ್ತೇನೆ.

* ಭವಿಷ್ಯದಲ್ಲಿ ಮೈಸೂರು ಜಿಲ್ಲೆ ಮತ್ತು ವರುಣಾ ಕ್ಷೇತ್ರ ವಿಜಯೇಂದ್ರ ಅವರ ಕಾರ್ಯಕ್ಷೇತ್ರವಾಗಲಿದೆ?

ಮೊನ್ನೆ ನನಗೆ ಟಿಕೆಟ್‌ ಇಲ್ಲ ಎಂದಾಗ ಆ ಭಾಗದ ಅನೇಕ ಮುಖಂಡರು ಬಂದು ನನ್ನ ಪರವಾಗಿ ಪ್ರೀತಿ ವಿಶ್ವಾಸ ತೋರಿದ್ದನ್ನು ನೋಡಿದ ಮೇಲೆ ನಾನು ಚುನಾವಣೆ ನಂತರವೂ ಅದೇ ಭಾಗದಲ್ಲಿ ಇದ್ದಕೊಂಡು ಕೆಲಸ ಮಾಡಲು ನಿರ್ಧರಿಸಿದ್ದೇನೆ. ಅಲ್ಲೇ ಹೆಚ್ಚಿನ ಸಮಯ ಕಳೆಯುತ್ತೇನೆ. ಇದರಲ್ಲಿ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಆ ಭಾಗದ ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಪ್ರಯತ್ನಿಸುತ್ತೇನೆ. ನಾನು ಕೇವಲ ಚುನಾವಣೆಗಾಗಿ ವರುಣಾ ಕ್ಷೇತ್ರಕ್ಕೆ ಹೋಗಿಲ್ಲ.

click me!