ದಾವಣಗೆರೆ (ಅ.3) : ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊ ರಡಿಸಿದ್ದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ದ್ವಿತೀಯ ದರ್ಜೆ ಸಹಾಯಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ವಜಾಗೊಳಿಸಿದೆ ಎಂದು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ ತಿಳಿಸಿದರು.
ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ
undefined
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರ ಮುಂದಿನ ಪದೋನ್ನತಿ ಕುರಿತಂತೆ ಸರ್ಕಾರವು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಿತ್ತು. ತಿದ್ದುಪಡಿ ವಿರುದ್ಧ ಎಸ್‌ಡಿಎಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೆಎಟಿ ವಜಾ ಮಾಡಿದೆ ಎಂದರು.ಕೆಎಟಿಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಮೇಲ್ಮನವಿ ವಜಾ ಮಾಡಿದ್ದು, ಸರ್ಕಾರವು ಗ್ರಾಮ ಲೆಕ್ಕಾಧಿಕಾರಿಗಳಿಗೆ ಪದೋನ್ನತಿಯಲ್ಲಿ ಆಗುತ್ತಿದ್ದ ಅನ್ಯಾಯವನ್ನು ಗುರುತಿಸಿ, ತಿದ್ದುಪಡಿ ಮಾಡಿದ್ದನ್ನು ಕೆಎಟಿ ಕ್ರಮ ಎತ್ತಿ ಹಿಡಿದಂತಾಗಿದೆ. ನಮ್ಮ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿದ್ದ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಆದೇಶವನ್ನು ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.
ವಿಎಗಳಿಗೆ ತೊಂದರೆ:
ಗ್ರಾಮ ಲೆಕ್ಕಾಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಸಮಾನ ಹುದ್ದೆಗಳು. ಆದರೆ, ನಮಗಿಂತಲೂ ಹೆಚ್ಚು ಪದೋನ್ನತಿಗಳು ಸಿಕ್ಕು, ತಹಸೀಲ್ದಾರ್ ಹುದ್ದೆವರೆಗೂ ಪದೋ ನ್ನತಿಯನ್ನು ಎಸ್‌ಡಿಎಗಳು ಪಡೆಯುತ್ತಿದ್ದರು. ಇದರಿಂದ ರಾಜ್ಯದ ಸುಮಾರು 10 ಸಾವಿರಕ್ಕೂ ಅಧಿಕ ವಿಎಗಳಿಗೆ ತೊಂದರೆಯಾಗುತ್ತಿತ್ತು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಶೇ.40 ಪದೋನ್ನತಿ, ಎಸ್‌ಡಿಎಗಳಿಗೆ ಶೇ.30 ಪದೋನ್ನತಿ ನೀಡಲಾಗುತ್ತಿತ್ತು. ಎರಡೂ ಹುದ್ದೆಗಳ ಕೇಡರ್ ಸಂಖ್ಯೆ, ಹುದ್ದೆ ಸ್ಥಾನಮಾನ ಸಮಾನವಾಗಿದ್ದರೂ ಎಸ್‌ಡಿಎಗಳಿಗೆ ಹೆಚ್ಚು ಪದೋನ್ನತಿ ಸಿಕ್ಕರೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಿಗುತ್ತಿರಲಿಲ್ಲ ಎಂದು ತಿಳಿಸಿದರು.
Davanagere: ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಡ್ರಿಲ್!
ಸಂಘದ ಮನವಿ ಮೇರೆಗೆ ವಿಎ ಹಾಗೂ ಎಸ್‌ಡಿಎಗಳು ಸೇವೆಗೆ ಸೇರ್ಪಡೆಯಾದ ದಿನ ಆಧರಿಸಿ, ಸಂಯುಕ್ತ ಜ್ಯೇಷ್ಠತಾ ಪಟ್ಟಿಆಧರಿಸಿ, ಪದೋನ್ನತಿ ನೀಡುವಲ್ಲಿ ಸರ್ಕಾರವು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ದ್ವಿತೀಯ ದರ್ಜೆ ಸಹಾಯಕ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು, ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ವಿರುದ್ಧ ಗ್ರಾಮ ಲೆಕ್ಕಾಧಿಕಾರಿಗಳು ಕೆಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಎಟಿಯಲ್ಲಿ ಮೇಲ್ಮನವಿ ವಜಾ ಆಗಿದ್ದು, ನಮಗೆ ನ್ಯಾಯ ಸಿಕ್ಕಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ, ಇಲಾಖೆ ಅಪರ ಕಾರ್ಯದರ್ಶಿ ಕಪಿಲ್ ಮೋಹನ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಈ ಆದೇಶಕ್ಕೆ ಪ್ರತ್ಯಕ್ಷ-ಪರೋಕ್ಷ ಕಾರಣರಾದ ಎಲ್ಲರಿಗೂ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಬಿ.ದೊಡ್ಡಬಸಪ್ಪ ರೆಡ್ಡಿ ಹೇಳಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಲೋಹಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಇತರರು ಇದ್ದರು.