ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ನೀಡಿ; ಕಾರ್ಮಿಕರು ಪ್ರತಿಭಟನೆ

By Kannadaprabha News  |  First Published Sep 22, 2022, 8:57 AM IST

ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ 200 ದಿನ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯು ಕುಷ್ಟಗಿ ತಾಪಂ ಮುಂದೆ ಪ್ರತಿಭಟನೆ ನಡೆಸಿತು.


ಕುಷ್ಟಗಿ (ಸೆ.22) : ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ 200 ದಿನ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯು ಕುಷ್ಟಗಿ ತಾಪಂ ಮುಂದೆ ಪ್ರತಿಭಟನೆ ನಡೆಸಿತು. ಈ ವೇಳೆ ಜಿಲ್ಲಾ ಕಾರ್ಯಕರ್ತೆ ವೀರುಪಮ್ಮ ದೊಡ್ಡಮನಿ ಮಾತನಾಡಿ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಾದ ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಸ್ವಾಭಿಮಾನ ಹಾಗೂ ಘನತೆಯಿಂದ ಬದುಕುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹೊಸ ತಂತ್ರಜ್ಞಾನ ಹಾಗೂ ನೀತಿಗಳಿಂದ ಕಾರ್ಮಿಕರು ಸಂಕಷ್ಟಅನುಭವಿಸುವಂತಾಗಿದೆ ಎಂದೂ ಆರೋಪಿಸಿದರು.

 

Tap to resize

Latest Videos

undefined

ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ ಖಾತ್ರಿ ಯೋಜನೆಯ ಕೆಲಸ!

ಬೇಡಿಕೆಗಳು: ಒಂದು ಕುಟುಂಬಕ್ಕೆ 200 ದಿನಗಳ ಕೆಲಸ ನೀಡಬೇಕು. ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಇದೆ. ಅಧಿಕಾರಿಗಳು ಕೆಲಸ ನೀಡುವಲ್ಲಿ ವಿಳಂಬ ಧೋರಣೆ ನಿಲ್ಲಿಸಿ, ಜನರು ಕೆಲಸಕ್ಕೆ ಅರ್ಜಿ ಹಾಕಿದ ತಕ್ಷಣ ಕೆಲಸ ಒದಗಿಸಬೇಕು. ಕೆಲಸ ನಿರ್ವಹಿಸಲು ಸಾಮಗ್ರಿಗಳ ಬಳಕೆ ಹಾಗೂ ರಿಪೇರಿಗಾಗಿ ಪ್ರತಿದಿನ .10 ಕೂಲಿ ಹಣದ ಜತೆ ಸೇರಿಸಿ ನೀಡಲಾಗುತ್ತಿತ್ತು. ಅದನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ನಮಗೆ ಗ್ರಾಮ ಪಂಚಾಯಿತಿಯಿಂದ ಸಾಮಗ್ರಿಗಳು ಪೂರೈಸಿ, ಇಲ್ಲವಾದಲ್ಲಿ ಕೂಲಿ ಕಾರ್ಮಿಕರಿಗೆ .20 ಹೆಚ್ಚಿಸಿ ಖಾತೆಗೆ ಜಮಾ ಮಾಡಬೇಕು.

ಕಾರ್ಮಿಕರಿಗೆ ಸ್ಥಳಿಯವಾಗಿ ಕೆಲಸ ಲಭ್ಯವಿಲ್ಲ ಎಂದಾದಲ್ಲಿ 5 ಕಿಮೀಗಿಂತಲೂ ಹೆಚ್ಚಿನ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಹಣದ ಶೇ. 10ರಷ್ಟುಹಣ ನೀಡಲಾಗುತ್ತಿತ್ತು. ಅದು ಸಾಕಾಗುತ್ತಿಲ್ಲ. ಅದನ್ನು .20ಕ್ಕೆ ಹೆಚ್ಚಿಸಬೇಕು. ಕಾರ್ಮಿಕರಿಗೆ ಕಾನೂನಿನಂತೆ ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ಪಾವತಿ ಆಗಬೇಕು. ಹಲವು ಬಾರಿ 1- 2 ತಿಂಗಳು ಕಳೆದರೂ ಕೂಲಿ ಪಾವತಿ ಆಗಿಲ್ಲ. ಅದಕ್ಕೆ ಕಾನೂನಿನಲ್ಲಿ ವಿಳಂಬ ಭತ್ಯೆ(ಶೇ. 0.5) ನೀಡುವ ಅವಕಾಶವಿದ್ದರೂ ಇಲ್ಲಿವರೆಗೆ ಯಾವುದೇ ಕಾರ್ಮಿಕರ ಖಾತೆಗೆ ಜಮಾ ಮಾಡಿಲ್ಲ. ಕಾರ್ಮಿಕರಿಗೆ, ವಿಳಂಬ, ಭತ್ಯೆ ಸಿಗುವಂತಾಗಬೇಕು.

ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸಲು ಮೇಸ್ತ್ರಿಗಳನ್ನು ನೇಮಿಸಲಾಗಿದೆ. ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ನಿಗದಿ ಆಗಿರುವ ಹಣ ನೀಡುತ್ತಿಲ್ಲ. ಮಹಿಳೆಯರಿಗೆ ಪ್ರತಿ ಕಾರ್ಮಿಕರಂತೆ .5 ಪುರುಷರಿಗೆ .4 ನೀಡಬೇಕೆಂದು ಆದೇಶವಿದ್ದರೂ ನೀಡುತ್ತಿಲ್ಲ. ಈ ಬೇಡಿಕೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ನೇತ್ರಾ ಎಂ. ಕ್ಯಾದುಗುಂಪಿ, ಬಸವರಾಜ, ಎನ್‌.ಎಸ್‌. ಅಂಗಡಿ, ಭೀಮವ್ವ ನಾಗರತ್ನ, ಹನುಮವ್ವ, ಬಸಪ್ಪ ಸೇರಿದಂತೆ ಇತರರು ಇದ್ದರು.

ಕೃಷಿ ಕೂಲಿಕಾರರ ಸ್ಥಿತಿ ಗತಿ ಶೋಚನೀಯ

ಕೃಷಿ ಕೂಲಿಕಾರರ ಸ್ಥಿತಿ ಗತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ನಂತರದ ಸರ್ಕಾರಗಳು ಮಾಡಿದ ತಪ್ಪಿನ ನೀತಿಗಳಿಂದ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕುಗ್ಗಿ ಹೋಗಿವೆ ಎಂದು ಕೇರಳದ ಪ್ಲಾನಿಂಗ್‌ ಕಮಿಷನರ್‌ ಪ್ರೊ. ರಾಮಕುಮಾರ ಅವರು ಕಳವಳ ವ್ಯಕ್ತಪಡಿಸಿದರು. ರಾಜ್ಯಮಟ್ಟದ ಕೃಷಿ ಕೂಲಿಕಾರರ ನಾಲ್ಕು ದಿನದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಸರ್ಕಾರವು ಭೂಮಿಯನ್ನು ಹಂಚುವುದರಲ್ಲಿ ಎಡವಿದೆ. ಇವತ್ತಿಗೂ ಭೂರಹಿತರೆ ಹೆಚ್ಚಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗವನ್ನು ಗುರುತಿಸುವಲ್ಲಿ ವಿಫಲವಾಗಿವೆ. ಆರ್ಥಿಕ ಚೈತನ್ಯ ಇಲ್ಲದ ಬಡವ ಬಲ್ಲಿದ ಕೆಳಜಾತಿಯವರ ಮೇಲೆ ದೌರ್ಜನ್ಯ ನಿರಾತಂಕವಾಗಿ ನಡೆದಿವೆ.

ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನ್ಯಾಯ ಮಾಡಲಾಗುತ್ತದೆ. ನೂರು ದಿನಗಳ ಕೆಲಸ ನೀಡದೆ ಕೇವಲ ವರ್ಷದಲ್ಲಿ ನಲವತ್ತು ದಿನಗಳ ಮಾತ್ರ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಿದ್ದು, ಕನಿಷ್ಠ ಕೂಲಿ ನೀಡದೆ ಇರುವುದು ಲಿಂಗ ತಾರತಮ್ಯ ಮಾಡುವುದು ನಾಚಿಕೆ ಗೇಡಿನ ವಿಷಯ ಎಂದು ಜರಿದರು.

ಕೃಷಿ ಕೂಲಿಕಾರರ ವಾಸದ ಮನೆಗಳಿರುವ ಪ್ರದೇಶದ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಘನತೆಯಿಂದ ಬದುಕಬೇಕಾದ ಕಾರ್ಮಿಕರ ಕುಟುಂಬಕ್ಕೆ ಯಾವುದೇ ರೀತಿಯ ಭರವಸೆ ಸರ್ಕಾರದಲ್ಲಿ ಇಲ್ಲ. ಕೃಷಿ ಕೂಲಿಕಾರರನ್ನು ಕಾರ್ಮಿಕ ಕಾರ್ಡ್‌ ನೀಡುವ ಮೂಲಕ ಅವರಿಗೂ ಕಾರ್ಮಿಕರಿಗೆ ಸಿಗಬಹುದಾದ ಸೌಲಭ್ಯಗಳನ್ನು ವಿಸ್ತರಿಸುವ ಅವಶ್ಯಕತೆ ಇದೆ ಎಂದರು. 

MGNREGA ನರೇಗಾ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯ

ನಂತರ ಮಾತನಾಡಿದ ರಾಜ್ಯ ಕೃಷಿ ಕೂಲಿಕಾರರ ಸಂಘಟನೆಯ ಉಪಾಧ್ಯಕ್ಷ ಜಿ.ಎನ್‌. ನಾಗರಾಜ, ಮೋದಿಯವರ ಮೋಡಿಯ ಮಾತುಗಳಿಗೆ ಜನರು ತತ್ತರಿಸಿದ್ದಾರೆ. ನಿರ್ಗತಿಕರು ನಿರ್ವಸತಿಗರ ಸಂಖ್ಯೆ ದೇಶದಲ್ಲಿ ದೊಡ್ಡದಿದೆ ಎಂದು ಛೇಡಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕೃಷ್ಣ ಗೌಡಾ, ಚಂದ್ರಪ್ಪ ಹೊಸಕೇರಾ, ಆರ್‌.ಕೆ. ದೇಸಾಯಿ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ಮರಕುಂಬಿ, ಕರಿಯಪ್ಪ ಉಪಸ್ಥಿತರಿದ್ದರು.

click me!