ಡಿ ಗ್ರೂಪ್‌ ಪೊಲೀಸರಿಗೆ 60 ವರ್ಷದಿಂದ ಬಡ್ತಿ ಇಲ್ಲ!

By Web DeskFirst Published Jun 13, 2019, 10:18 AM IST
Highlights

ಡಿ ಗ್ರೂಪ್‌ ಪೊಲೀಸರಿಗೆ 60 ವರ್ಷದಿಂದ ಬಡ್ತಿ ಇಲ್ಲ!| ಸರ್ಕಾರವೇ ಸೂಚಿಸಿದ್ದರೂ ಪೊಲೀಸ್‌ ಇಲಾಖೆ ಉದಾಸೀನ| ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತಿಲ್ಲ

ಎನ್‌. ಲಕ್ಷ್ಮಣ್‌, ಕನ್ನಡಪ್ರಭ

ಬೆಂಗಳೂರು[ಜೂ.13]: ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ಪೊಲೀಸ್‌ ಇಲಾಖೆ ತನ್ನಲ್ಲೇ ಕೆಲಸ ನಿರ್ವಹಿಸುತ್ತಿರುವ ‘ಡಿ ಗ್ರೂಪ್‌’ ನೌಕರರಿಗೆ (ಅನುಯಾಯಿ) 59 ವರ್ಷಗಳಿಂದ ಅನ್ಯಾಯ ಎಸಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಪೊಲೀಸ್‌ ಅಕಾಡೆಮಿ ಮತ್ತು ಬೆಟಾಲಿಯನ್‌ಗಳಲ್ಲಿ ಅಲ್ಲಿನ ಸಿಬ್ಬಂದಿಯ ಸೇವೆ ಮಾಡುತ್ತಿರುವ ಸಾವಿರಾರು ಸಿಬ್ಬಂದಿ ಸುಮಾರು ಆರು ದಶಕಗಳಿಂದ ಮುಂಬಡ್ತಿಯೇ ಸಿಗದೆ ದಿನದೂಡುತ್ತಿದ್ದಾರೆ. ‘ಡಿ’ ಗ್ರೂಪ್‌ ನೌಕರರ ಪೈಕಿ ಕೆಲವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದು ಏಕಲವ್ಯ, ರಾಜ್ಯ ಒಲಿಂಪಿಕ್‌, ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾಗಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದು ಮುಂಬಡ್ತಿ ನೀಡುವಂತೆ ಸೂಚಿಸಿದರೂ ರಾಜ್ಯ ಪೊಲೀಸ್‌ ನಿರ್ದೇಶಕರು ಮಾತ್ರ ಮುಂಬಡ್ತಿ ಪಟ್ಟಿನೀಡುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಇಲಾಖೆಯ 2 ಪಡೆ, 2 ಐಆರ್‌ಬಿ, ರಿಸವ್‌ರ್‍ ಬೆಟಾಲಿಯನ್‌ನ 1161 ಮಂದಿಗೆ ಹಾಗೂ ಕೆಎಸ್‌ಆರ್‌ಪಿ ತರಬೇತಿ ಶಾಲೆ ಹಾಗೂ ಪೊಲೀಸ್‌ ಅಕಾಡೆಮಿಗಳಲ್ಲಿ ‘ಡಿ’ ಗ್ರೂಪ್‌ ನೌಕರರಾಗಿರುವ 300 ಮಂದಿಗೆ ಮುಂಬಡ್ತಿ ಭಾಗ್ಯ ಸಿಕ್ಕಿಲ್ಲ. ಅಷ್ಟುವರ್ಷಗಳಿಂದ ಈ ಸಿಬ್ಬಂದಿ ‘ಡಿ’ ಗ್ರೂಪ್‌ ನೌಕರರಾಗಿ ನೇಮಕಗೊಂಡು ‘ಡಿ’ ಗ್ರೂಪ್‌ ನೌಕರರಾಗಿಯೇ ನಿವೃತ್ತಿ ಪಡೆಯುತ್ತಿದ್ದಾರೆ.

ಆದೇಶಕ್ಕಿಲ್ಲ ಕಿಮ್ಮತ್ತು:

ಪೊಲೀಸ್‌ ಇಲಾಖೆಯಲ್ಲಿ ಆಗುತ್ತಿರುವ ಅನ್ಯಾಯ ಪ್ರಶ್ನಿಸಿ ಸಿಬ್ಬಂದಿ 2009ರಲ್ಲಿ ಕೆಎಟಿ ಮೆಟ್ಟಿಲೇರಿದ್ದರು. 2011ರ ಜುಲೈ 18 ರಂದು ಕೆಎಟಿ ಆರು ತಿಂಗಳಲ್ಲಿ ಮುಂಬಡ್ತಿ ನೀಡುವಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೂ ಗೃಹ ಇಲಾಖೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಇನ್ನು ಅಂದಿನ ಸರ್ಕಾರದಲ್ಲಿ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ವಿಜಯ ಭಾಸ್ಕರ್‌ ಅವರು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸದೇ ಇರುವ ಇಲಾಖೆಗಳು ಸಮಗ್ರ ಪರಿಷ್ಕರಣೆ ಮಾಡಿ ಕರಡು ಪಟ್ಟಿಕೊಡುವಂತೆ 2017ರಲ್ಲಿ ಎಲ್ಲಾ ಇಲಾಖೆಗೂ ಸುತ್ತೋಲೆ ಹೊರಡಿಸಿದ್ದರು.

ಈ ಸುತ್ತೋಲೆ ಅನ್ವಯ ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿ ಇತರೆ ಇಲಾಖೆಗಳಲ್ಲಿ ‘ಡಿ’ ಗ್ರೂಪ್‌ ನೌಕರರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಆದರೆ ಪೊಲೀಸ್‌ ಇಲಾಖೆಯಲ್ಲಿನ ಡಿ ಗ್ರೂಪ್‌ ನೌಕರರಿಗೆ ‘ಡಿ’ ಗ್ರೂಪ್‌ನಲ್ಲಿಯೇ ‘ಡಿ’ ಗ್ರೂಪ್‌ ಸಹಾಯಕರು ಎಂದು 4 ಹುದ್ದೆಗಳನ್ನು (ಸಹಾಯಕ ದರ್ಜೆ-1, ಸಹಾಯಕ ದರ್ಜೆ-2, ಸಹಾಯಕ ದರ್ಜೆ- 3, ಹಿರಿಯ ಸಹಾಯಕರು) ಸೃಜನೆ ಮಾಡಿ ಮುಂಬಡ್ತಿ ಅವಕಾಶ ಕಲ್ಪಿಸಿ ಸರ್ಕಾರಕ್ಕೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಕಳುಹಿಸಿದ್ದರು.

‘ಡಿ’ ಗ್ರೂಪ್‌ ಅನುಯಾಯಿ ಹುದ್ದೆಗಳನ್ನು ‘ಡಿ’ ಗ್ರೂಪ್‌ ಸಹಾಯಕರು ಎಂದು ಮರುನಾಮಕರಣಗೊಳಿಸಲು ಪ್ರಸ್ತಾಪಿಸಿರುವುದಕ್ಕೆ ಕಾರಣವನ್ನು ಡಿಪಿಎಆರ್‌ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕೇಳಿತ್ತು. ಬಳಿಕ ಹಿಂದಿನ ಪ್ರಸ್ತಾವನೆ ಕೈ ಬಿಟ್ಟು ಟ್ರೇಡ್‌ ಮೆನ್‌, ಟ್ರೇಡ್‌ ಮೆನ್‌ ಜಮೇದರ, ಟ್ರೇಡ್‌ ಮೆನ್‌ ಮೇಜರ್‌, ಟ್ರೇಡ್‌ ಮೆನ್‌ ಸೂಪರ್‌ ವೈಸರ್‌ ಎಂದು ಮರು ನಾಮಕರಣಗೊಳಿಸುವಂತೆ ಡಿಪಿಎಆರ್‌ಗೆ ಡಿಜಿಪಿ ಪ್ರಸ್ತಾವನೆ ಸಲ್ಲಿಸಿದ್ದರು.

ಪೊಲೀಸ್‌ ಮಹಾನಿರ್ದೇಶಕರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಡಿಪಿಎಆರ್‌, ಮೂರು ಹುದ್ದೆಗಳನ್ನು ಒಂದೇ ಹೆಸರಿನಿಂದ ಮೇಲ್ದರ್ಜೆಗೇರಿಸಿ, ಎಲ್ಲಾ ಹುದ್ದೆಗಳಿಗೆ ಒಂದೇ ರೀತಿ ಮೂಲ ವೇತನ . 11 ಸಾವಿರದಿಂದ . 21 ಸಾವಿರದವರೆಗೆ ನಿಗದಿಪಡಿಸಿ ಪ್ರಸ್ತಾಪಿಸಿರುವುದಕ್ಕೆ ಸಮರ್ಥನೀಯ ಕಾರಣ ನೀಡುವಂತೆ ಪ್ರಸ್ತಾವನೆ ಹಿಂದಿರುಗಿಸಿದೆ. ಆದರೆ ಇಲ್ಲಿ ತನಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಸಿಬ್ಬಂದಿ ಮುಂಬಡ್ತಿ ಇಲ್ಲದೆ, ಬಸವಳಿದಿದ್ದಾರೆ.

ಈ ನೌಕರರ ಕೆಲಸ ಏನು?

‘ಡಿ’ ಗ್ರೂಪ್‌ ನೌಕರರಿಗೆ ಪೊಲೀಸರಂತೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಲಾಗಿದೆ. ಇಲಾಖೆಯಲ್ಲಿ ಬೆಟಾಲಿಯನ್‌, ಪೊಲೀಸ್‌ ಅಕಾಡೆಮಿ ಹಾಗೂ ತರಬೇತಿ ಶಾಲೆಗಳಲ್ಲಿ ಪೊಲೀಸರಿಗೆ ಈ ಸಿಬ್ಬಂದಿ ಕ್ಷೌರ, ದೋಬಿ, ನೀರು ತರುವ, ಕಸಗುಡಿಸುವ, ಟೈಲರ್‌, ಚಮ್ಮಾರ, ಬಡಗಿ, ಅಡುಗೆ ಮಾಡುವ ಕೆಲಸ ಮಾಡುತ್ತಾರೆ. ಬೆಟಾಲಿಯನ್‌ಗಳು ರಾಜ್ಯದ ಹೊರಗೆ ಹೋದರೆ ಅವರೊಂದಿಗೆ ಈ ಸಿಬ್ಬಂದಿ ತೆರಳುತ್ತಾರೆ.

ಡಿಪಿಎಆರ್‌ ಇಲಾಖೆ ವಿರುದ್ಧವಾಗಿ ಮುಂಬಡ್ತಿ

ಇನ್ನು 400 ಮಂದಿ ‘ಡಿ’ ಗ್ರೂಪ್‌ ನೌಕರರಿಗೆ 2016ರಲ್ಲಿ ‘ಫಾಲೋಯರ್‌ ಜಮೇದಾರ್‌’ ಎಂದು ಮುಂಬಡ್ತಿ ನೀಡಲಾಗಿದೆ. ಈ ಮುಂಬಡ್ತಿ ವೃಂದ ಮತ್ತು ನೇಮಕಾತಿ 32ರ ನಿಯಮದಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಅನ್ವಯವಾಗಲಿದೆ. ಕಾಯಂ ನೌಕರನಿಗೆ ಅನ್ವಯವಾಗುವುದಿಲ್ಲ. ಕಾಯಂ ನೌಕರರಿಗೆ ವೃಂದ ಮತ್ತು ನೇಮಕಾತಿ 42ರ ನಿಯಮದಡಿ ಮುಂಬಡ್ತಿ ನೀಡಬೇಕು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ವಿಧಾನಸಭೆಯಲ್ಲಿ ಅಂಗೀಕಾರವಾದರೆ ಆಗ ಮಾತ್ರ ಬಡ್ತಿ ಕಾಯಂ ಆಗುತ್ತದೆ. ಪ್ರಸ್ತುತ ನೀಡಲಾಗಿರುವ 32ರ ನಿಯಮದಡಿ ಮುಂಬಡ್ತಿ ಆರು ತಿಂಗಳಿಗೆ ಮಾತ್ರ ಸೀಮಿತ. ಆರು ತಿಂಗಳ ಬಳಿಕ ಸರ್ಕಾರದ ಅನುಮತಿ ಪಡೆದು ತಿದ್ದುಪಡಿಗೆ ಪೊಲೀಸ್‌ ಇಲಾಖೆ ಮುಂದಾಗಬೇಕಿತ್ತು. ಆದರೆ ಡಿಪಿಎಆರ್‌ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ವಿರುದ್ಧವಾಗಿ ಯಾವುದೇ ಮುಂಬಡ್ತಿ ನೀಡದೆ ನಡೆಸಿಕೊಳ್ಳಲಾಗುತ್ತಿದೆ.

click me!